Sunday, July 16, 2023

ಭಾನುವಾರ ರಜಾ - ಮಜಾದಲ್ಲಿ ಜನರ ಮನಸೆಳೆದ ಆಕರ್ಷಕ, ಮನಮೋಹಕ ತಾರೆಯ ನೋಡುವ ತವಕ....


ಈ ದಿವಸ ವಿಶೇಷ ಲೇಖನ: ಶುಭಲಕ್ಷ್ಮೀ ಹೊಸಮನಿ

ವಿಜಯಪುರ : ಹಸಿರು ಹಾಸಿಗೆಯ ಪ್ರಕೃತಿ ಮಡಿಲಲ್ಲಿ, ತಂಪು ಗಾಳಿಯ ಇಂಪಿನಲ್ಲಿ ಗರ್ವದಿಂದ ಮೆರೆಯುತ್ತ, ಎಲ್ಲೆಡೆ ಹೆಸರಾಗಿ, ನಾಡಿನ ನಗರ ಪ್ರಕೃತಿ ಸೌಂದರ್ಯ ಸವಿಯುವ ಬೃಹತ್ ಗಾತ್ರದ ನಲುಮೆಯ ಚಿಲುಮೆ.

ಈಕೆ ಅದ್ಭುತ ಮನಮೋಹಕ ತಾರೆ, ಇವಳ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ, ಜನರ ಮನಸೆಳೆದ ಆಕರ್ಷಕ ತಾರೆಯನೊಮ್ಮೆ ನೋಡಿದರೆ ಸಾಕು, ಅವಳ ಬಾಹ್ಯ ಸೌಂದರ್ಯಕ್ಕೆ ಮನಸೋತು ಬೆರಗಾಗದವರಿಲ್ಲ, ಇನ್ನು ಇವಳಿಗೆ ಯಾರು ಸರಿಸಾಟಿ ನೀವೇ ಹೇಳಿ ? ಇವಳ ಬಾಹ್ಯ ಸೌಂದರ್ಯವನ್ನು ನೀವು ಅನುಭವಿಸ ಬಲ್ಲಿರಾ?.......

ಇಷ್ಟಕ್ಕೂ ನಾನು ಹೇಳ ಹೊರಟಿರುವುದು ಏನು ಅಂತೀರಾ? ಇವಳನ್ನು ನೀವೆಲ್ಲರೂ ಕಂಡಿರುವಿರಿ, ಕಾಣದವರು ಆದಷ್ಟು ಬೇಗ ನೋಡುವ ಹಂಬಲ ಹುಮ್ಮಸ್ಸು ಮೂಡಿಸುವುದು ಮಾಯಗಾತಿ ಸೌಂದರ್ಯದಲ್ಲಿದೆ.

ಅವಳದು ಕಣ್ಣು ಕುಕ್ಕಿಸುವ ನೋಟ, ಇತಿಹಾಸಕ್ಕೆ ಮೆರಗು, ಬೆರಗು ಮೂಡಿಸಿದ ಐತಿಹಾಸಿಕ ತಾಣಗಾತಿ, ನಗರದ ಹತ್ತಾರು ಐತಿಹಾಸಿಕ ತಾಣಗಾತಿಯರಲ್ಲಿ ಇವಳೇ ರಾಣಿ, ತನ್ನ ಸುಂದರ ಮನಮೋಹಕ ವೈಯ್ಯಾರದಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಕಲೆಗಾರ್ತಿ, ಈಕೆಯನ್ನು ನೋಡಲು ಮನವೇಕೋ ಹಂಬಲಿಸುವುದು.

ಹಳೆಯ ಕಾಲದ ರಾಣಿಗೆ ಹೊಸ ಮೆರಗು ನೀಡಿದ ಕಲಾವಿದ ಕೈ ಚಳಕ ಸಾಮಾನ್ಯವಲ್ಲ. ಅಂದು ಶೃಂಗಾರ ಧರಿಸದ ಶೃಂಗಾರಗಿತ್ತಿಗೆ ಕಪ್ಪು ವರ್ಣದಿಂದ ಶೃಂಗಾರಗೊಳಿಸಿದರು.

ಅಷ್ಟಕ್ಕೂ ನಾನು ಹೇಳುತ್ತಿರುವುದು ನಮ್ಮ ಜಿಲ್ಲೆಯ ಬಹು ಪ್ರವಾಸಿ ತಾಣಗಳಲ್ಲಿ ಅತೀ ಹೆಮ್ಮೆಯ ಗರಿ, ಗುಮ್ಮಟ ನಗರಿ ಹೆಸರಿನ ಹಿನ್ನಲೆ ಒಡತಿ ಬಗ್ಗೆ ಅವಳು ಮತ್ತಾರಲ್ಲ, ನಮ್ಮ ನಗರದ ಸೌಂದರ್ಯವತಿ ಲೋಕ ದೃಷ್ಟಿಯ ತನ್ನ ಕಪಿಮುಷ್ಟಿಯಲ್ಲಿ ಸೆರೆ ಹಿಡಿದ ಗೋಳ ಗುಮ್ಮಟ ತಾರೆ.....

ರಾಜ್ಯದ ಮಹಿಳಾ ಮಣಿಗಳಿಗಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿರುವುದು ಸಂತಸದ ಸಂಗತಿ.

ಶಕ್ತಿ ಯೋಜನೆ ಸದುಪಯೋಗ ಪಡಿಸಿಕೊಳ್ಳುತ್ತಿರುವ ರಾಜ್ಯದ ಸುತ್ತ ಮುತ್ತಲಿನ ಮಹಿಳೆಯರ ದಂಡು ಇಂದು ಐತಿಹಾಸಿಕ ತಾಣ ಗೋಳ ಗುಮ್ಮಟದಲ್ಲಿತ್ತು ಎಂದು ಹೇಳಲು ಹೆಮ್ಮೆ ಎನಿಸುವುದು.

ತನ್ನ ಕುಟುಂಬಕ್ಕಾಗಿ ಹಗಲಿರುಳು ಕೊನೆವರೆಗೂ ದುಡಿಯುವ ಏಕೈಕ ಶ್ರಮಜೀವಿ ಮಹಿಳೆ. ಸುಖ- ದುಃಖ, ಆಸೆ - ಆಕಾಂಕ್ಷೆಗಳನ್ನು ಬದಿಗೊತ್ತಿ, ತನ್ನವರ ಸುಖದಲ್ಲಿಯೇ ತನ್ನ ಸುಖವನ್ನು ಕಾಣುವ ಶಕ್ತಿ, ತಾಳ್ಮೆ ಯನ್ನು ಹೊಂದಲು ಒಬ್ಬ ಹೆಣ್ಣಿನಿಂದ ಮಾತ್ರ ಸಾಧ್ಯ ಎಂದು ಹೇಳಬಹುದು.

ಮನೆಯ ಹಿರಿತನ ಸಿರಿತನವೆಲ್ಲ ಇವಳಿಂದಲೇ, ಹೆಣ್ಣು ಹೊರ ಜಗತ್ತನ್ನು ಕಾಣಬೇಕು, ನೂರಾರು ಮೈಲಿಗಳನ್ನು ಸುತ್ತಿ ಹೊಸ ಜಗತ್ತಿನಲ್ಲಿರುವ ಹೊಸ ಹೊಸ ವಿಚಾರಗಳನ್ನು ಅರಿತರೆ ಮುಂದಿನ ಪೀಳಿಗೆಗಳ ಬಾಳಿಗೆ ದಾರಿದೀಪವಾಗುವಳು ಎಂಬ ಮನೋಭಾವನೆ ಹೊಂದಿರುವ ಸರ್ಕಾರ ಅವರಿಗಾಗಿ ಹೊಸ ಯೋಜನೆ ನಿರ್ಮಿಸಿದೆ.

ಹಾಗಾಗಿ ಹೆಣ್ಣು ಮಕ್ಕಳು, ವೃದ್ಧರು, ವಿದ್ಯಾರ್ಥಿನಿಯರು ರಾಜ್ಯ, ಜಿಲ್ಲೆ, ನಗರಗಳಲ್ಲಿರುವ ಐತಿಹಾಸಿಕ ತಾಣಗಳಾದ ಪ್ರೇಕ್ಷಣಿಕ ಸ್ಥಳಗಳನ್ನು ನೋಡಲು ಪ್ರವಾಸ ಕೈಗೊಂಡಿದ್ದಾರೆ.

ಭಾನುವಾರ ರಜಾ- ಮಜಾ ಎನ್ನುವ ಹಾಗೇ ತಮ್ಮ ಸ್ವ ಕುಟುಂಬದೊಂದಿಗೆ ನಗದಲ್ಲಿರುವ ಗೋಳ ಗುಮ್ಮಟ, ಶಿವಗಿರಿ, ಇಬ್ರಾಹಿಂ ರೋಜಾ, ಬರಾಕಮಾನ್, ಜೋಡ ಗುಮ್ಮಟವನ್ನು ನೋಡಲು  ಕಿಕ್ಕಿರಿದು ಹರಿದು ಬಂದ ಜನ ಸಾಗರ ನೋಡಿ ಕಣ್ಣು ತಂಪಾಯಿತು.

ಗೋಳ ಗುಮ್ಮಟ : ರಾಜ್ಯದ ಐತಿಹಾಸಿಕ ತಾಣಗಳನ್ನು ಮೀರಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಈ ಪ್ರೇಕ್ಷಣೀಯ ಸ್ಥಳಕ್ಕೆ ಹರಿದು ಬಂದ ಜನಸಾಗರ.

ಟಿಕೆಟ್ ಕೌಂಟರ್ ಫುಲ್ ರೇಶ್: ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಗುಮ್ಮಟ ವೀಕ್ಷಣೆಗೆ 25 ರೂ. ಹಾಗೂ ಮ್ಯೂಜಿಯಂ ಗೆ 05 ರೂ. ಗಳಂತೆ ಟಿಕೆಟ್ ದರ ನಿಗದಿಪಡಿಸಿರುವುದು ಹಾಗಾಗಿ ಟಿಕೆಟ್ ಪಡೆದವರಿಗೆ ಮಾತ್ರ ಒಳಗಡೆ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗುವುದು.

ಗೋಳ ಗುಮ್ಮಟದ ಒಳಭಾಗದ ವೀಕ್ಷಣೆಯ ಮೇಲ್ ಮೆಟ್ಟಿಲುಗಳನ್ನು ಹತ್ತಿ ಗುಮ್ಮಟದ ತುದಿ ಮೇಲೆ ಹೋಗಲು ನಿಂತಿರುವ ಸರತಿ ಸಾಲು ಜನ ಸಾಗರದ ಮುಳುಗಿತ್ತು.

ಗುಮ್ಮಟ ವೀಕ್ಷಣೆಗೆ ಬಂದ ಜನರನ್ನು ನಿಯಂತ್ರಣದಲ್ಲಿರಿಸುವುದೇ ಸೆಕ್ಯೂರಿಟಿ ಗಾರ್ಡ್ ಗಳಿಗೆ ದೊಡ್ಡ ಸವಾಲಾಗಿತ್ತು.

ಆದರೂ ಸಹ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಮಾತನಾಡಿಸಿ ಐತಿಹಾಸಿಕ ತಾಣದ  ಬಗ್ಗೆ ಮಾರ್ಗದರ್ಶನ ನೀಡಿ ಮುಂದೆ ಸಾಗಿಸುತ್ತಿದ್ದರು.

ಒಟ್ಟು 45 ಜನ ಸೆಕ್ಯೂರಿಟಿ ಗಾರ್ಡ್ ಹಾಗೂ 4 ಜನ ಹೋಮ್ ಗಾರ್ಡ್ ಗಳು ಬಹಳ ಅಚ್ಚುಕಟ್ಟಾಗಿ ತಮ್ಮ ಕಾರ್ಯವೈಖರಿಯನ್ನು ಶಿಸ್ತುಬದ್ಧವಾಗಿ ಮಾಡುತ್ತಾರೆ.

ಶಿವಗಿರಿ : ವಿಜಯಪುರದ ಹೊರವಲಯದಲ್ಲಿರುವ 85 ಅಡಿ ಎತ್ತರದ ಶಿವನ ಮೂರ್ತಿ ನೋಡುವುದೇ ಕಣ್ಣಿಗೆ ಒಂದು ಅದ್ಭುತ ಆಕರ್ಷಕ ದೃಶ್ಯವೆಂದು ಅರಿಯಬಹುದು.

ಶಿವಗಿರಿಯಲ್ಲಿ ನಗರ ಪ್ರದೇಶದ ಜನರಷ್ಟೇ ಅಲ್ಲದೇ ಗ್ರಾಮೀಣ ಭಾಗದ ಸುತ್ತ ಮುತ್ತಲಿನ ಜನದಟ್ಟಣೆಯೇ ಶಿವನನ್ನು ನೋಡಲು ಮುಗಿ ಬಿದ್ದಿದೆ.

ಪ್ರತಿಯೊಬ್ಬರಿಗೆ 20 ರೂ. ನಂತೆ ಟಿಕೆಟ್ ಪಡೆದು ಒಳಗಿರುವ 85 ಅಡಿ ಎತ್ತರದ ಶಿವನ ಮೂರ್ತಿ, ಜೊತೆಗೆ ಇಲ್ಲಿನ ಸುಂದರ ಅದ್ಭುತ ಕಲಾ ಪ್ರದರ್ಶನ ಪ್ರತಿಮೆಗಳು, ಯಕ್ಷಗಾನ ವಿಗ್ರಹ, ರಾಧಾ ಕೃಷ್ಣರ ಗೋಕುಲ ಉದ್ಯಾನವನ, ಸಾಕ್ಷಾತ್ ದೇವಿ ವಿಗ್ರಹ, ಚಿಣ್ಣರ ಅಂಗಳದಲ್ಲಿ ಜೋಕಾಲಿ, ಜಾರು ಬಂಡಿ ಆಟೋಟಗಳ ಜೊತೆಗೆ ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ತಂದೆ ತಾಯಿಯರ ಸಂಭ್ರಮ ಮುಗಿಲು ಮುಟ್ಟಿರುವುದನ್ನು ಕಣ್ಣಾರೆ ಕಂಡು ಅದರ ಸವಿರುಚಿಯನ್ನು ಸವಿಯುವುದೇ ಮನಸ್ಸಿಗೆ ಆನಂದದ ಮುದ ನೀಡುವುದು ಎನ್ನುವ ಕಟು ಸತ್ಯವನ್ನು ಇಂದು ಅನುಭವಿಸಿದೆ.


ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ಪ್ರಭಾವದಿಂದ ಇಂದು ಗೋಳ ಗುಮ್ಮಟ ಐತಿಹಾಸಿಕ ತಾಣವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು, ಅದರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಸಾರ್ವಜನಿಕರಿಗೆ,  ಅನುಕೂಲವಾಗುವ ರೀತಿಯಲ್ಲಿ ಇಲ್ಲಿರುವ ಸುಮಾರು 45 ಜನ ಸೆಕ್ಯೂರಿಟಿಗಳು, ಮತ್ತು 4 ಜನ ಹೋಮ್ ಗಾರ್ಡ್ ಸಿಬ್ಬಂದಿಗಳು ಅಚ್ಚುಕಟ್ಟಿನಿಂದ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.

- ರಮಾ ಎಸ್. ರಾಠೋಡ್

ಸೆಕ್ಯೂರಿಟಿ ಗಾರ್ಡ್, ಗೋಳ ಗುಮ್ಮಟ ವಿಜಯಪುರ


ರಾಜ್ಯ ಸರ್ಕಾರದ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಮಾಡಿರುವುದು ಖುಷಿ ಸಂಗತಿ ಹೇಗೆಂದರೆ ಮಕ್ಕಳು ಅವರ ಸಹೋದರಿಯರೊಂದಿಗೆ ಶಾಲಾ ಕಾಲೇಜು ಪ್ರವಾಸಕ್ಕೆ  ಹೋದರೆ, ತಂದೆಯವರು, ಅಣ್ಣಂದಿರು ಕೆಲಸದ ನಿಮಿತ್ಯ ಯಾವುದೋ ಕಾರಣಕ್ಕೆ ಪ್ರವಾಸ ಮಾಡುವುದು ಸಹಜ. ಅಮ್ಮಂದಿರು ಅಪರೂಪಕ್ಕೆ ತಮ್ಮ ತವರು ಮನೆಗೆ ಹೋಗುವುದು ಆದರೆ ಉಚಿತ ಪ್ರಯಾಣದಿಂದ ಅಮ್ಮಂದಿರು ಕೂಡ ಪ್ರವಾಸಕ್ಕೆ ಸಜ್ಜಾಗಿರುವುದು ಹೆಮ್ಮೆಯ ವಿಷಯ. ರವಿವಾರ ಸರ್ಕಾರಿ ರಜೆ ಹಿನ್ನಲೆಯಲ್ಲಿ ನಮ್ಮ ತಾಯಿಯನ್ನು ವಿಜಯಪುರದಲ್ಲಿರುವ ಐತಿಹಾಸಿಕ ತಾಣಗಳ ದರ್ಶನಕ್ಕೆ ಕರೆದುಕೊಂಡು ಬಂದಿರುವೆ.

- ದ್ರೌಪದಿ ಹೊನಕಟ್ಟಿ, ಇಂಡಿ

ಗೋಳ ಗುಮ್ಮಟ ವೀಕ್ಷಣೆ ಪ್ರವಾಸಿಗರು


ವಿಶೇಷ ಸೂಚನೆ:

ಯುವ ಪ್ರತಿಬೆಗಳಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು 

ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ವ್ಯವಸ್ಥಾಪಕ ಸಂಪಾದಕ 

ಕಲ್ಲಪ್ಪ ಶಿವಶರಣ

 ಮೊ: 720427 9187/9900 37 8892

eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment