Tuesday, June 30, 2020

ಕಣ್ಣಿಗೆ ಕಾಣುವ ಪರಮಾತ್ಮನೇ ವೈದ್ಯ



ರೋಗಿಯ ಪಾಲಿನ ದೇವನಿವನು
ಮನುಜನ ಶರೀರಕೆ ಪ್ರೇರಣೆಯ ನೀಡುವನು
ದೀರ್ಘ ಆಯುಷ್ಯ ಕರುಣಿಸಿ
ಮರುಜನ್ಮ ನೀಡಿ ಬದುಕುಳಿಸುವ ವೈದ್ಯನಾರಾಯಣನಿವನೇ ನೋಡಾ!                                                
                "ಜಯಶಾಂತಲಿಂಗೇಶ್ವರ"

 ಈ ವಚನದಂತೆ ವೈದ್ಯ  ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ವೈದ್ಯರನ್ನು ಸಾಕ್ಷಾತ್ ನಾರಾಯಣ ನೆಂದು, ರಕ್ಷಕರೆಂದು, ದೇವರ ಸಮಾನವೆಂದು ಅರ್ಥ. ವೈದ್ಯನು ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಕಾಪಾಡುತ್ತಾನೆ ಆದ್ದರಿಂದ ಅವರಿಗೆ ದೇವರ ಸ್ಥಾನ ಕೊಡಲಾಗಿದೆ. 

ನಮ್ಮ ಸಾಮಾನ್ಯ ಜನರ ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ತಾಯಿ ತಂದೆ ಗುರುವಿನ ಪಾತ್ರವನ್ನು ವಹಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಒಬ್ಬ ರೋಗಿ ತನ್ನ ಸಮಸ್ಯೆಯನ್ನು ಒಬ್ಬ ವೈದ್ಯನಿಗೆ ಹೇಳಿಕೊಳ್ಳಬೇಕಾದರೆ ಮುಂಚಿತವಾಗಿ ವೈದ್ಯನ ವ್ಯಕ್ತಿತ್ವ  ಮಹೊನ್ನತವಾಗಿರಬೇಕು. ಹಾಗೆ ಇದ್ದಾಗಲೇ ರೋಗಿಗೆ ವೈದ್ಯನ ಮೇಲೆ ವಿಶ್ವಾಸ ರೂಪಗೊಂಡು ಆಗ ತನ್ನ ಸಮಸ್ಯೆಗಳನ್ನು ವಿವರಿಸುತ್ತಾರೆ.

ಹೀಗಿದ್ದ ಮೇಲೆ ವೈದ್ಯನಾದವನು ನಮಗೆ ದೇವದೂತನಾಗಿರಲು ಯೋಗ್ಯವಾಗಿರುವನು.
ರೋಗಿಯ ರೋಗ ಅರಿತು ಸಾಂತ್ವನದಿಂದ ಚಿಕಿತ್ಸೆ ನೀಡಿದರೆ ಆ ರೋಗಿಯ ರೋಗದಿಂದ ವಿಮುಕ್ತನಾಗಿ  ಬೇಗನೆ ಗುಣಮುಖನಾಗುವ ಚೇತರಿಕೆ ಕಂಡುಕೋಳ್ಳುವನು.

 ನಿಜಕ್ಕೂ ವೈದ್ಯರ ಸಾಹಸಕ್ಕೆ ಮೆಚ್ಚಲೇ ಬೇಕು ಎಷ್ಟೋ ಜನ ಬಂಜೆತನದ ಅಪಮಾನ ಹೊತ್ತು ದುಃಖ ಪಡುತ್ತಿದ್ದ ಮಹಿಳೆಯರಿಗೆ ಅವರ ಬಂಜೆತನದ ನಿವಾರಣೆ ಮಾಡಿ ತಾಯಿಯಾಗುವ ಸದ್ಭಾಗ್ಯವ  ಕರುಣಿಸಿ ಬಂಜೆತನಕೆ ಮುಕ್ತಿನೀಡಿದ  ವೈದ್ಯರಿಗೆ ದೊಡ್ಡ ಸಲಾಂ ಸಲ್ಲಿಸಲೇಬೇಕು.  ನಿಜಕ್ಕೂ ದೇವರ ಸಮಾನರೇ ಈ ನಮ್ಮ ವೈದ್ಯರ ತಂಡವು.  ಜೀವನವೇ ಬರಡಾಯಿತು ಎಂದು ತಲೆ ಮೇಲೆ ಕೈ ಹೊತ್ತು ಚಿಂತೆಗೀಡಾದ ರೋಗಿಗಳಿಗೆ ಚಿಂತೆಯ ಬಯ ದೂರ ಮಾಡಿ ದೈರ್ಯ ತುಂಬಿ ಹೊಸ ಬದುಕು ಕಟ್ಟಿಕೊಡುವವನೇ ಈ ನಮ್ಮ ಡಾಕ್ಟರ್.

ನಯ ವಿನಯ ನಾಜೂಕಿನಿಂದ ರೋಗಿಯ ಸಮಸ್ಯೆ ತಿಳಿದು ತಾಯಿಯಂತೆ ಮಮತೆ ತೋರಿ ಗುರುವಿನಂತೆ ಬುದ್ಧಿ ತಿಳಿ ಹೇಳಿ ರೋಗಿಯ ರೋಗವನ್ನು ವಿಮುಕ್ತಿ ಗೊಳಿಸುವುದೇ ಈ ವೈದ್ಯನು.  ಈ ವೈದ್ಯನ ವೃತ್ತಿ  ಇದು ಮಹಾನ್ ಪವಿತ್ರವಾದ ವೃತ್ತಿ .
ಮನುಜ ಕುಲಕ್ಕೆ ಸಂಜೀವಿನಿಯು ಈ ವೈದ್ಯರುಗಳು. 
ಇವರ ದಿನವನ್ನು ಆಚರಿಸುವುದು ನಮ್ಮ ಕರ್ತವ್ಯವೆಂದೇ ಭಾವಿಸೋಣ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿ ಆಚರಿಸುತ್ತಾ ಗೌರವಿಸಲೇಬೇಕು.

ಭಗವಂತನ ಇನ್ನೊಂದು ರೂಪವೀ ವೈದ್ಯ
ಬೇಗನೆ ಯಮನ ಬಳಿ ಬಿಡದೆ ನಮ್ಮ ಕಾಪಾಡುವ
ಮಹಾನ್ ವೈದ್ಯ ನಾರಾಯಣನೇ ಇತ

 ಈ ವೈದ್ಯರ ದಿನಾಚರಣೆಯನ್ನು ಹೇಗೆ ಆಚರಿಸಲಾಯಿತು ಎಂಬುದು ಸ್ವಲ್ಪ ಹಿನ್ನೆಲೆ ಮಾಹಿತಿ ತಿಳಿಯೋಣವೇ*
 ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ 2 ನೇ ಮುಖ್ಯಮಂತ್ರಿಯಾದ 
ಡಾ॥ ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ನಡೆಯುತ್ತದೆ. ಜುಲೈ 1 1882 ರಂದು ಜನನ,ಅದೆ ದಿನಾಂಕದಂದು 1962 ರಲ್ಲಿ ಮರಣ ಹೊಂದಿದರು ಅದಕ್ಕಾಗಿ ಅವರ ಸ್ಮರಣಾರ್ಥವಾಗಿ ಹಾಗೂ ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
 ಈ ದಿನ ಇಡೀ ವೈದ್ಯಕೀಯ ವೃತ್ತಿಗೆ ಗೌರವ ಸೂಚಿಸುವಂತ ದಿನವಾಗಿದೆ. 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು  ಕೇಂದ್ರ ಸರ್ಕಾರದ  ಮಾನ್ಯತೆ  ಮತ್ತು ಪ್ರತಿ ವರ್ಷ ಜುಲೈ  1 ರಂದು ಆಚರಿಸಲಾಗುತ್ತದೆ.

ಬನ್ನಿ ನಾಡಿನ ಜನರೇ ಇಂದು ವೈದ್ಯಕೀಯ ವೃತ್ತಿಗೆ ಮತ್ತು ವೈದ್ಯರಿಗೆ ಗೌರವ ಸೂಚಿಸಿ ನಮ್ಮ ಬದುಕಿನ ಮೌಲ್ಯ ಆಧಾರಗಳೇ ಇವರೆಂದು ಅರಿತು ಇವರ ದಿನ ಅತ್ಯಂತ ಭವ್ಯತೆಯಲ್ಲಿ ಆಚರಿಸೋಣ.


ಮಮತಾ ಗುಮಶೆಟ್ಟಿ
ವಿಜಯಪುರ

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ



ವಿಶ್ವಾದ್ಯಂತದ ಮಾಹಿತಿ ಕಲೆ ಹಾಕಿ
ಸಮಾಜದ ಹಿತ ದೃಷ್ಟಿಯ ಬಯಸಿ
ದಿನ ಬೆಳಗಾದರೆ ಸಾಕು
ನಮ್ಮ ಮನೆಯ ಅಂಗಳದಲ್ಲಿಹುದು
ದಿನದಸುದ್ದಿ ತಿಳಿಸುವ  ಅತಿಥಿಯಾಗಿ
ಈ ದಿನ ಪತ್ರಿಕೆಯು
ಆಚರಿಸುವ ಬನ್ನಿ ಪತ್ರಿಕೆಯ ದಿನಾಚರಣೆ ನಾವೆಲ್ಲರೂ ಸೇರಿ ಇಂದು

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ ,ದೇಶದ ಅಭಿವೃದ್ಧಿ ಏಕತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾದದ್ದು ಬಂಡವಾಳ ಶಾಹಿಗಳ ಕಪಿ ಮುಷ್ಟಿಗೆ ಒಳಗಾಗದೆ ಸತ್ಯವನ್ನು ಸಮಾಜಕ್ಕೆ ತೋರಿಸುವಂತದ್ದು. ಪತ್ರಕರ್ತರು ಪ್ರಾಮಾಣಿಕ ನಿಷ್ಠೆ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಸಮಾಜದಲ್ಲಿ ನೊಂದವರ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪತ್ರಕರ್ತರಿಗೆ ನಮ್ಮದೊಂದು ಹೃದಯಪೂರ್ವಕ ಧನ್ಯವಾದಗಳನ್ನು & ಅಭಿನಂದನೆಗಳನ್ನು  ಅರ್ಪಿಸಲೇಬೇಕು. 

ಹೃದಯಗಳ ಪಿಸು ಮಾತಿಗೂ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಒಗ್ಗೂಡಿಸಲು ಮತ್ತು ದಾಖಲಿಸಲು ಇರುವ ವೇದಿಕೆಯೇ ಈ ಪತ್ರಿಕೆಯು.
 ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ವಿಶಿಷ್ಟವಾಗಿ ಸುದ್ದಿ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ಸ್ಥಳೀಯ ಸುದ್ದಿ ಪ್ರಕರಣಗಳು ರಾಜಕೀಯ ಘಟನೆಗಳು ವ್ಯಾಪಾರ ಮತ್ತು ಹಣಕಾಸು ಅಪರಾಧ ತೀವ್ರ ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳು ಒಳಗೊಂಡಂತೆ ಆರೋಗ್ಯ ಔಷಧ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರೀಡೆ ಮತ್ತು ಮನರಂಜನೆ ಸಮಾಜ ಆಹಾರ ಮತ್ತು ಅಡುಗೆ ಬಟ್ಟೆ ಮತ್ತು ಮನೆ ಸಾಮಾನ್ಯವಾಗಿ ಕಾಗದದ ಆ ಪ್ರಮುಖ ಗುಂಪುಗಳನ್ನು ಪ್ರತಿಯೊಂದು ಭಾಗಗಳಾಗಿ ವಿಂಗಡಿಸಿ ಪ್ರಕಟಿಸುವುದೇ ಈ ಪತ್ರಿಕೆಯು.

1843 ನೇ ಜುಲೈ 1 ರಂದು ಪ್ರಾರಂಭವಾದ *ಮಂಗಳೂರು ಸಮಾಚಾರ* ವೆಂಬ ಪತ್ರಿಕೆಯ ಕರ್ನಾಟಕದ ಪ್ರಥಮ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದದ್ದು ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣ ಯಂತ್ರವನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲೇ ಪತ್ರಿಕೆಗಳು ಪ್ರಾರಂಭವಾದವು. 

ಸಮೃದ್ಧ ಪತ್ರಿಕೆಗಳು ಆ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯ ಸಮೃದ್ಧಿಯ ಪತ್ರಿಕೆ ಒಂದು ನಾಡಿನ ಸಮೃದ್ಧತೆ ಕೇವಲ ಭೌತಿಕ ವಸ್ತುಗಳಲ್ಲಿರುವುದಿಲ್ಲ ಅದು ನಾಡಿನ ಸಮೃದ್ಧತೆಯನ್ನು  ಒಳಗೊಂಡಿರುತ್ತದೆ ಪತ್ರಿಕೆಗಳು ಒಂದು ವೇಳೆ ನಿಂತು ಹೋದರೆ ನಿಜಕ್ಕೂ ಸಾಂಸ್ಕೃತಿಕದ ಆತ್ಮಹತ್ಯೆ ಆಗುವುದು. 

ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೆಗಳ ಓದುಗರೂ ಹೆಚ್ಚು ಪತ್ರಿಕೆಗಳು ಹೆಚ್ಚಾಗಿರುವುದನ್ನು ಕಾಣುವೆವು.ಪತ್ರಿಕೆಯಲ್ಲಿ ಸುದ್ದಿಯನ್ನು ಹರಿಸಬೇಕಾದರೆ ಪತ್ರಕರ್ತರ ಶ್ರಮ ಬಹಳಷ್ಟು ಇರುವುದು ಗಮನಿಸಬೇಕಾಗುತ್ತದೆ. ಏಕೆಂದರೆ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯ ನಿಶ್ಚಿತವಾಗಿ ನೇರವಾಗಿ ಇರುವಂತಹ ವಿಷಯಗಳಾಗಿರುತ್ತವೆ ಹಾಗಾಗಿ ಸುಳ್ಳು ಕಲ್ಲುಗಳ ಸುದ್ದಿ ಪ್ರಕಟಿಸಲಾಗಿದೆ ಅಂತಹ ಪತ್ರಿಕೆಗಳು ಜನಮನ್ನಣೆ ಪಡೆಯಲಾಗದು. ಜನಮನ್ನಣೆಗೆ ಪಾತ್ರವಾಗಬೇಕಾದರೆ ಆ ಪತ್ರಿಕೆಯಲ್ಲಿ ತುಂಬಾ ಅಗತ್ಯ ಮತ್ತು ಮುಖ್ಯ  ಸುದ್ದಿಗಳನ್ನು ಪ್ರಕಟಿಸಬೇಕು. ವಿಶ್ವಾದ್ಯಂತದ ಸುದ್ದಿಗಳನ್ನು ಒಗ್ಗೂಡಿಸಿ ಸತ್ಯನಿಷ್ಠೆ ಆದ ವಿಷಯವನ್ನು ಪ್ರಕಟಣೆ ಮಾಡಿ ಓದುಗರಿಗೆ ಜ್ಞಾನ ತುಂಬುವ ಕಾರ್ಯ ಪತ್ರಕರ್ತರದ್ದಾಗಿದೆ. ಒಂದು ವಿಷಯವನ್ನು ಸಂಗ್ರಹಣೆ ಮಾಡಬೇಕಾದರೆ ಅದಕ್ಕೆ ಅಲೆದಾಟ ಓಡಾಟ ತುಂಬಾ ಶ್ರಮದ ಕಾರ್ಯವಾಗಿರುವುದು. ದಿನ ಬೆಳಗಾದರೆ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯ ಪತ್ರಿಕೆಯದ್ದಾಗಿದೆ.ಪತ್ರಿಕೆಯ ಮಹತ್ವ ಅಪಾರವಾದದ್ದು ಎಂಬುದು ಜನರಿಗೆ ಈಗಾಗಲೇ ಅರಿವಾಗಿದೆ. ಸಮಾಜದ ಒಡಕು ತೊಡಕುಗಳ ನಿರ್ಮೂಲನೆಗೆ ಧ್ವನಿ ಎತ್ತಿ ನಿಲ್ಲುವುದೇ  ಈ ಪತ್ರಿಕೆ. ಅದರಲ್ಲೂ ಜನರ ಕಷ್ಟಗಳಿಗೆ ಅವರ  ಭಾವಮಿಡಿತಕ್ಕೆ  ಅವರ ಸ್ಪಂದನೆಗೆ ಮೊದಲು ಓ ಗೊಡುವ  ಕಾರ್ಯ ಈ ಪತ್ರಿಕೆಯದ್ದೆ. ಹಾಗಾಗಿ ಈ ಪತ್ರಿಕೆಯ ಪತ್ರಕರ್ತರಿಗೆ  ನಾವು ಬಹು ದೊಡ್ಡ ಸಲಾಂ ನ್ನು ಹೇಳಲೇಬೇಕು. ತಮ್ಮ ಮನೆಯ ಚಿಂತೆಯನ್ನು ಬದಿಗೊತ್ತಿ ಸಮಾಜದ ಚಿಂತೆಯನ್ನು ಮಾಡುವ ಪತ್ರಕರ್ತರಿಗೆ ಧನ್ಯವಾದಗಳು ತಿಳಿಸುತ್ತಾ .
ಹಲವಾರು ಪತ್ರಿಕೋದ್ಯಮಿಗಳಿಗೆ ಪತ್ರಿಕೆಗಳಿಗೆ ಜುಲೈ 1 ಪತ್ರಿಕಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲೇಬೇಕು ನಾವೆಲ್ಲ ಒಗ್ಗೂಡಿ.

ಮಮತಾ ಗುಮಶೆಟ್ಟಿ
ವಿಜಯಪುರ

ವಿಜಯಪುರ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆ




ಈ ದಿವಸ ವಾರ್ತೆ
ವಿಜಯಪುರ  : ವಿಜಯಪುರ ಜಿಲ್ಲಾ ಪಂಚಾಯತನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಚುನಾಯಿತರಾಗಿದ್ದಾರೆ.

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಒಟ್ಟು 22 ಸದಸ್ಯರು ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಚುನಾಯಿತಗೊಳಿಸಿದರು. ಇವರ ವಿರುದ್ಧವಾಗಿ ಯಾವುದೇ ಮತಗಳು ಚಲಾಯಿಸಲ್ಪಡಲಿಲ್ಲ.


ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಪಕ್ಷದ ಶ್ರೀ ಭೀಮಾಶಂಕರ ಮಹಾದೇವಪ್ಪ ಬಿರಾದಾರ ಅವರ ಪರವಾಗಿ ಒಟ್ಟು 20 ಮತಗಳು ಮಾತ್ರ ಚಲಾವಣೆಗೊಂಡು ವಿರುದ್ಧವಾಗಿ 22 ಮತಗಳು ಚಲಾವಣೆಗೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಪರಭಾವಗೊಂಡರು.

ಚುನಾವಣಾ ಪ್ರಕ್ರಿಯೆಯನ್ನು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಈ ಇಬ್ಬರು ಮಾತ್ರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದರು. ಶ್ರೀ ಭೀಮಾಶಂಕರ ಬಿರಾದಾರ ಅವರ ಎರಡು ನಾಮಪತ್ರಗಳು ಮತ್ತು ಸುಜಾತಾ ಕಳ್ಳಿಮನಿ ಅವರ ಒಂದು ನಾಮಪತ್ರ ಸಿಂಧುವಾಗಿದ್ದವು. ಒಟ್ಟು 42 ಸದಸ್ಯ ಬಲದ ಜಿಲ್ಲಾ ಪಂಚಾಯತನ ಚುಕ್ಕಾಣಿಯೂ ಕಾಂಗ್ರೇಸ್ ಕೈಗೆ ದಕ್ಕಿದ್ದು, ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ.

ಚುನಾವಣಾ ಸಭೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಭೀಮಾಶಂಕರ ಪರವಾಗಿ ಮತ ಚಲಾವಣೆ ಸಂದರ್ಭದಲ್ಲಿ ಸ್ವಲ್ಪ ಸಮಯ ಗೊಂದಲವಾಗಿದ್ದರೂ ಪ್ರಾದೇಶಿಕ ಆಯುಕ್ತರ ಎಚ್ಚರಿಕೆ ಅನ್ವಯ ಚುನಾವಣಾ ಪ್ರಕ್ರಿಯೆ ಮುಂದುವೆರಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರ ಪರವಾಗಿ ಮತ ಚಲಾವಣೆ ನಂತರ ಪರವಾಗಿದ್ದ ಅಭ್ಯರ್ಥಿಗಳು ಹೊರ ನಡೆದರು.
 
ಚುನಾವಣಾ ಸಮಯ ನಿಗದಿಪಡಿಸಿದ್ದ ಹಿನ್ನೆಲೆಯಲ್ಲಿ ಮತ್ತು ಮತದಾನಕ್ಕೆ ಅವಧಿ ನಿಗದಿ ಪಡಿಸಿದ್ದರ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಿಲ್ಲಿಸಲು ಅಸಾಧ್ಯ ಎಂದು ಪರಿಗಣಿಸಿ ಪ್ರಾದೇಶಿಕ ಆಯುಕ್ತರು ಮತ್ತು ಅಧ್ಯಕ್ಷಾಧಿಕಾರಿಗಳು ನಂತರದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು. ನಂತರ ನಡೆದ ಮತದಾನದಲ್ಲಿ ಸಾರವಾಡದ ಜಿಲ್ಲಾ ಪಂಚಾಯತ ಸದಸ್ಯರು ಆಗಿರುವ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು 22 ಮತಗಳನ್ನು ಪಡೆಯುವ ಮೂಲಕ ವಿಜಯಭವಿಯಾದರು.

ಜಿಲ್ಲಾ ಪಂಚಾಯತ ಅಧ್ಯಕ್ಷರ ಸ್ಥಾನವನ್ನು “ಹಿಂದುಳಿದ ವರ್ಗ – ಅ” ಗೆ ಮೀಸಲಿಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಉಪಸ್ಥಿತರಿದ್ದರು.