Saturday, August 12, 2023

13-08-2023 EE DIVASA KANNADA DAILY NEWS PAPER

ಪರೀಕ್ಷೆ: ಡಿ.ಇಎಲ್‌ಇಡಿ ಕಾಲೇಜು ಶೇ.100ರಷ್ಟು ಫಲಿತಾಂಶ


ಈ ದಿವಸ ವಾರ್ತೆ

ಕೊಪ್ಪಳ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪಿಎಸ್.ಟಿ.ಇ ವಿಭಾಗ ಮುನಿರಾಬಾದ್, ಕೊಪ್ಪಳ ಇಲ್ಲಿನ 2022-23ನೇ ಸಾಲಿನ ಡಿ.ಇಎಲ್‌ಇಡಿ ಕಾಲೇಜಿನ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಟಿ.ಬಿ.ಪಿ ಮುನಿರಾಬಾದನ ಪ್ರಾಚಾರ್ಯರು ಹಾಗೂ ಪದ ನಿಮಿತ್ಯ ಉಪನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.

ಡಿ.ಇ.ಎಲ್.ಇ.ಡಿ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾದ 11 ಪ್ರಶಿಕ್ಷಣಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 10 ಪ್ರಶಿಕ್ಷಣಾರ್ಥಿಗಳು ಮತ್ತು ಪ್ರಥಮ ಶ್ರೇಣಿಯಲ್ಲಿ ಒಬ್ಬರು ಉತ್ತೀರ್ಣರಾಗಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ. ವಿಜಯಲಕ್ಷ್ಮೀ ಹೆಚ್ ವೀರೇಶ ಅವರು ಶೇ.95 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಅಂಜಲಿ ಗೊರವಲೆಕ್ಕಪ್ಪ ಶೇ.94.37 ಹಾಗೂ ಆಸೀಯಾ ಹುಸೇನಸಾಬ ಶೇ.94.25 ರಷ್ಟು ಅಂಕ ಪಡೆದಿದ್ದಾರೆ. ಡಿ.ಇಎಲ್‌.ಇಡಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಪೂಜಾ ಮಂಜುನಾಥ ಶೇ. 93.25 ಮತ್ತು ಅಜ್ಮೀರ ಹುಸೇನಸಾಬ ನದಾಫ್ ಶೇ. 92ರಷ್ಟು ಅಂಕ ಗಳಿಸಿದ್ದಾರೆ. 

ಪ್ರಶಿಕ್ಷಣಾರ್ಥಿಗಳ ಸಾಧನೆಗೆ ಡಯಟ್ ಸಂಸ್ಥೆಯ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು ಮತ್ತು ಪಿ.ಎಸ್.ಟಿ.ಇಯ ಮುಖ್ಯಸ್ಥರು ಮತ್ತು ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನವ ವಿವಾಹಿತೆ ಆತ್ಮ ಹತ್ಯೆಗೆ ಶರಣು


ಈ ದಿವಸ ವಾರ್ತೆ

ವಿಜಯಪುರ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದೆ. ಚಡಚಣ ತಾಲೂಕಿನ ನಾಕಿಮಂದಿ ಓಣಿಯ ಚೈತ್ರಾ ಮಲ್ಲಿಕಾರ್ಜುನ ನಾವಿ (23) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

 6 ತಿಂಗಳ ಹಿಂದೆ ಚಡಚಣ ತಾಲೂಕಿನ ನಿವಾಸಿ ಮಲ್ಲಿಕಾರ್ಜುನ  ಜೊತೆ ವಿವಾಹವಾಗಿತ್ತು.

ಮೃತ ಚೈತ್ರಾಳ ಪತಿ ಮಲ್ಲಿಕಾರ್ಜುನ ನಾವಿ, ಮಾವ ಶಿವಪ್ಪ ನಾವಿ ಹಾಗೂ ಅತ್ತೆ ಅಂಬವ್ವ ನಾವಿ ಮೂವರು ಸೇರಿ ವರದಕ್ಷಿಣೆ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು.

ಗಂಡನ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಾಳ ತಂದೆ ಅಶೋಕ ಹಡಪದ ನೀಡಿದ ದೂರಿನ ಮೇರೆಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ :ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ


ಈ ದಿವಸ‌ ವಾರ್ತೆ

ವಿಜಯಪುರ : ಇಂದಿನ ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್. ಆಯುರ್ವೇದ ಮಹಾವಿದ್ಯಾಲ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.

76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ವಿಜಯಪುರ ಅಂತರ್ ಕಾಲೇಜು ದೇಶಭಕ್ತಿ ಗೀತೆ ಸ್ಪರ್ಧೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆಯಿತು.  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  



ಸಂಗೀತಕ್ಕೆ ಮಾನಸಿಕ ಮತ್ತು ದೈಹಿಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.  ಹೀಗಾಗಿ ಸಂಗೀತದ ಕಡೆ ಗಮನ ಹರಿಸಬೇಕು ಎಂದು ಅವರು ಹೇಳಿದರು.  

ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಡಿ. ಎನ್. ಧರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸ್ಪರ್ಧೆಯಲ್ಲಿ ವೇದಾಂತ ಬಿಸಿಎ ಕಾಲೇಜಿನ ಸಾಕ್ಷಿ ಹಿರೇಮಠ ಪ್ರಥಮ, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಳವಿಕ ಜೋಶಿ, ದ್ವಿತೀಯ ಹಾಗೂ ಬಿ.ಎಲ್.ಡಿಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸುನಯನಾ ದೇಶಪಾಂಡೆ ತೃತೀಯ ಸ್ಥಾನ ಪಡೆದರು.  ವಿಜೇತರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 

ಸಂಗೀತ ವಿದ್ವಾಂಸರಾದ ಮುತ್ತುರಾಜ ಮದನಭಾವಿ ಮತ್ತು ಸುನಂದಾ ಘಾಟಗೆ ನಿರ್ಣಾಯಕರಾಗಿ ಪಾಲ್ಗೋಂಡರು.  ಸಹ ಕಾರ್ಯದರ್ಶಿ ಡಾ. ವಿಜಯಲಕ್ಷಿ, ವಿಧ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಸೀತಾ ಬಿರಾದಾರ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ. ಸುಮಾ ಮತ್ತು ಡಾ. ದಾಮೋದರ ಉಪಸ್ಥಿತರಿದ್ದರು. ಡಾ. ಸುಮಾ ಕಗ್ಗೋಡ ವಂದಿಸಿದರು. 

ಈ ಸ್ಪರ್ಧೆಯಲ್ಲಿ ನಗರದ 20ಕ್ಕೂ ಹೆಚ್ಚು ಮಹಾವಿದ್ಯಾಲಗಳ ಒಟ್ಟು 40 ಸ್ಪರ್ಧಾಳುಗಳು ಭಾಗವಹಿಸಿದ್ದರು.