Monday, January 30, 2023

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆ

 


ಈ ದಿವಸ ವಾರ್ತೆ

ವಿಜಯಪುರ: ನಗರದಲ್ಲಿ ಇದೇ ಮೊದಲ ಬಾರಿಗೆ ೩೭ನೇ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದ್ದು, ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವುದು ಖಚಿತವಾಗಿದ್ದು, ಹಾಗಾಗಿ ಸಮ್ಮೇಳನ ಯಶಸ್ಸಿಗೆ ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವ ಮೂಲಕ ಜಿಲ್ಲಾಡಳಿತ ಸಂಪೂರ್ಣ ಕೈಜೋಡಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸಮ್ಮೇಳನ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಸಮ್ಮೇಳನದ ನಾನಾ ಸಮಿತಿಗಳ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮ್ಮೇಳನಕ್ಕೆ ರಾಜ್ಯಾದ್ಯಂತ ಆಗಮಿಸುವ ಪತ್ರಕರ್ತರ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವಂತೆ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷರಿಗೆ ಹಾಗೂ ಆಯಾ ಸರಕಾರಿ ವಸತಿ ಗೃಹಗಳ ಮುಖ್ಯಸ್ಥರಿಗೆ ಸಲಹೆ ಮಾಡಿದರು.

ಸಮ್ಮೇಳನ ನಡೆಯಲಿರುವ ರಂಗಮಂದಿರದ ಆವರಣದಲ್ಲಿರುವ ರಸ್ತೆಯನ್ನು ಡಾಂಬರೀಕರಣ ಮಾಡಿ ಮುಗಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಜೊತೆಗೆ ರಂಗಮಂದಿರದಲ್ಲಿ ಫೋಕಸ್ ವಿದ್ಯುತ್ ದೀಪ ಅಳವಡಿಸುವಂತೆಯೂ ಸಲಹೆ ಮಾಡಿದರು.

ನಗರದ ಹೃದಯ ಭಾಗ ಸೇರಿದಂತೆ ನಗರ ಸಂಪರ್ಕಿಸುವ ರಸ್ತೆಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರವಿರುವ ಬೃಹದಾಕಾರದ ಸ್ವಾಗತ ಕಮಾನುಗಳನ್ನು ಅಳವಡಿಸಲು ಪಾಲಿಕೆ ಹಾಗೂ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಗಾಂಧಿವೃತ್ತದಲ್ಲಿರುವ ಫ್ಲೈ ಓವರ್‌ಗೆ ಬೃಹತ್ ಬ್ಯಾನರ್ ಅಳವಡಿಸುವಂತೆ ಸೂಚಿಸಿದರು.

ವಾಹನ ಪೂರೈಸಲು ಸೂಚನೆ : ಜೊತೆಗೆ ನಗರಕ್ಕೆ ಆಗಮಿಸುವ ಪತ್ರಕರ್ತರ ಸಂಚಾರಕ್ಕೆ ನಗರದ ನಾನಾ ಶಿಕ್ಷಣ ಸಂಸ್ಥೆಗಳಿಂದ ಬಸ್ ಒದಗಿಸಿಕೊಡಲು ಜಿಲ್ಲಾಧಿಕಾರಿ ಆರ್‌ಟಿಓ ಅಧಿಕಾರಿಗೆ ಸೂಚಿಸಿದರಲ್ಲದೇ, ನಗರಕ್ಕೆ ಆಗಮಿಸಿದ ಪತ್ರಕರ್ತರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತೆರಳಲು ಸಾರಿಗೆ ಸಂಸ್ಥೆ ಬಸ್‌ಗಳನ್ನು ಪೂರೈಸಲು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನದಾರ, ನಾಮನಿರ್ದೇಶಿತ ಸದಸ್ಯರಾದ ಕೆ.ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗುರು ಲೋಕುರೆ, ಸುರೇಶ ತೇರದಾಳ, ಸಮೀರ ಇನಾಂದಾರ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಸಂಘದ ಸದಸ್ಯರಾದ ಅಶೋಕ ಯಡಳ್ಳಿ, ಗುರು ಗದ್ದನಕೇರಿ, ರಶ್ಮಿ ಪಾಟೀಲ, ಆಹಾರ ಸಮಿತಿಯ ಪ್ರದೀಪ ಕುಲಕರ್ಣಿ, ವಸತಿ ಸಮಿತಿಯ ಶರಣು ಸಬರದ, ಸೀತಾರಾಮ ಕುಲಕರ್ಣಿ, ಚಿದಂಬರ ಕುಲಕರ್ಣಿ, ಶಿವಾನಂದ ಭುಂಯ್ಯಾರ, ನಿಂಗಪ್ಪ ನಾವಿ,  ದೇವೇಂದ್ರ ಹೆಳವರ, ಸಾರಿಗೆ ಸಮಿತಿಯ ಇರ್ಫಾನ್ ಶೇಖ್, ವಿಠ್ಠಲ ಲಂಗೋಟಿ, ಇಸ್ಮಾಯಿಲ್ ಮುಲ್ಲಾ, ಎಸ್.ಬಿ. ಪಾಟೀಲ, ಗೋಪಾಲ ಕನ್ನಿಮನಿ, ಆರೋಗ್ಯ ಸಮಿತಿಯ ರವಿ ಜಹಾಗೀರದ, ರವಿ ಕಿತ್ತೂರ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಬಾಲಪ್ಪ ಸಾರವಾಡ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳಿದ್ದರು.