Monday, June 1, 2020

02-06-2020 EE DIVASA KANNADA DAILY NEWS PAPER

ಶಿಕಾರಖಾನೆ ಏರಿಯಾದಲ್ಲಿ ಪೆಟ್ರೋಲ್, ಡಿಸೇಲ್ ಕಳ್ಳರ ಹಾವಳಿ..!



ವರದಿ: ಕಲ್ಲಪ್ಪ ಶಿವಶರಣ
ವಿಜಯಪುರ: ಬೈಕ್, ಅಟೋ ಪ್ಯಾಜ್ಯೋ ವಾಹನವನ್ನು ಮನೆಯಾಚೆ ರಸ್ತೆ ಬದಿಯಲ್ಲಿ ನಿಲ್ಲಿಸಿ ರಾತ್ರಿ ನೆಮ್ಮದಿ ಯಿಂದ ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡದೆ ತಮ್ಮ ವಾಹನದ ಕುರಿತು ಸಾರ್ವಜನಿಕರು  ಪ್ರತಿದಿನ ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೌದು.. ನಗರದ ಶಿಕಾರಖಾನೆ ಸ್ಟೇಶನ್ ಬ್ಯಾಕ್ ರೋಡ್ ರಸ್ತೆಯಲ್ಲಿ ಇಂತಹದೊಂದು ಘಟನೆ 
ನಾಲ್ಕೈದು ದಿನಗಳಿಂದ ಪೆಟ್ರೋಲ್ ಕಳ್ಳತನ ಮಾಡುವುದರ ಜೊತೆ ವಾಹನ ಜಖಂ ಮಾಡಿ ಸಾರ್ವಜನಿಕರ ನೆಮ್ಮದಿಯನ್ನು ಖದೀಮರು ಹಾಳುಮಾಡುತ್ತಿದ್ದಾರೆ.
ಪೆಟ್ರೋಲ್ ಹಾಗೂ ಡಿಸೇಲ್ ರೇಟ್ ಹೆಚ್ಚಳವಾಗಿದ್ದರಿಂದ ವಾಹನ ಸವಾರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಕೆಲ ಖದೀಮ ಕಳ್ಳರು ವಾಹನಗಳಲ್ಲಿನ ಪೆಟ್ರೋಲ್‍ಗಳನ್ನು ಕಳ್ಳತನಮಾಡಿ ಇದನ್ನೇ ತಮ್ಮ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಶಿಕಾರಖಾನೆ ಬಡಾವಣೆಯ ಸ್ಟೇಶನ್ ಬ್ಯಾಕ್ ರೋಡ್ ರಸ್ತೆಯ ಪಕ್ಕದಲ್ಲಿ ರಾತ್ರಿವೇಳೆ ಮನೆಯ ರಸ್ತೆಯ ಬದಿ ಹಚ್ಚಿದ ಆಟೋ, ಪ್ಯಾಜೋ, ಬೈಕ್ ಗಳಲ್ಲಿನ ಪೆಟ್ರೋಲ್ ಬೆಳಗಾಗುತ್ತಿದ್ದಂತೆ ಮಂಗಮಾಯವಾಗುತ್ತಿದೆ.
ಶಿಕಾರಖಾನೆ ಸ್ಟೇಶನ್ ಬ್ಯಾಕ್ ರೋಡ್ ಹಳೆಯ ಇಂಡಸ್ಟ್ರಿ ಏರಿಯಾಗೆ ಹೊಂದಿಕೊಂಡಿದ್ದರಿಂದ ಈ ಭಾಗದಲ್ಲಿ ಕೆಲ ಜನ ಕಾರ್ಮಿಕರಾಗಿದ್ದು, ಈ ಕಾರ್ಖಾನೆ ಯಲ್ಲಿ ಕೆಲಸಮಾಡುವವರು, ಕಟ್ಟಡ ಕಾರ್ಮಿಕರು ಹಾಗೂ ಅಟೋ, ಪ್ಯಾಜೋ ಚಾಲಕರು ಹಾಗೂ  ಮೋಟಾರ್, ಬೈಕ್, ಮೆಕ್ಯಾನಿಕ್ ಕೆಲಸ ಮಾಡುವವರು ಸೇರಿದಂತೆ ಇನ್ನಿತರೆ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಅಂದಿನ ದುಡಿಮೆ ಅಂದೇ ದುಡಿಯುವ ಇಂತಹ ಕಾರ್ಮಿಕರ ಬದುಕು ಸದ್ಯ ಕೊರೋನಾ ಹಾವಳಿಗೆ ಸಿಲುಕಿ ನುಚ್ಚು ನೂರಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಕೊರೋನಾ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಲಾಕ್‍ಡೌನ್ ಜಾರಿ ಮಾಡಿದ್ದರಿಂದ  ಈ ಪ್ರದೇಶದ ಕಾರ್ಮಿಕರು, ಜನರು ಮನೆಯಲ್ಲಿಯೇ ಕೂಡುವಂತಾಗಿತ್ತು. 
ಸದ್ಯ 5 ನೇ ಹಂತದ ಲಾಕ್‍ಡೌನ್ ಸಂದರ್ಭ ಹಲವು ವಿಭಾಗಕ್ಕೆ ವಿನಾಯಿತಿ ನೀಡಿದ್ದರಿಂದ ಕಾರ್ಮಿಕರ ಬದುಕಿನ ಬಂಡಿ ಮತ್ತೆ ಆಮೆಗತಿಯಲ್ಲಿ ಸಾಗುತ್ತಿದೆ. ಆದರೆ ಆರ್ಥಿಕ ಹೊಡೆತ ಬಿದ್ದಿದ್ದರಿಂದ ಕಾರ್ಮಿಕರ ಬದುಕು ಇನ್ನು ಸಹಜ ಸ್ಥಿತಿಗೆ ಬಂದಿಲ್ಲ.  ಒಂದೆಡೆ ಕೆಲಸ ಇಲ್ಲದ ಪರಿಸ್ಥಿತಿ  ಇನ್ನೊಂದೆಡೆ ಆರ್ಥಿಕ ಹೊಡೆತಕ್ಕೆ ಸಿಲುಕಿ ಬದುಕು ಅನಾನೂಕೂಲತೆಯಿಂದ ಕೂಡಿದೆ. ಇಂತಹ ಸಂದರ್ಭ ಇತರೆ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ಇಂತಹ ಸಂದರ್ಭ ವಾಹನಗಳಲ್ಲಿನ ಪೆಟ್ರೋಲ್ ಕಳ್ಳರ ಹಾವಳಿ ಸಾರ್ವಜನಿಕರ ನೆಮ್ಮದಿಗೆ ಕೊಳ್ಳಿ ಇಟ್ಟಂತಾಗಿದೆ. 
ಖದೀಮರ ಬಂಧಿಸಿ ; ಪೆಟ್ರೋಲ್ ಕಳ್ಳರ ಹಾವಳಿ ತಪ್ಪಿಸಿ : ಕಳೆದ ನಾಲ್ಕೈದು ದಿನಗಳಿಂದ ಶಿಕಾರಖಾನೆ ಬಡವಾಣೆಯಲ್ಲಿನ ವಾಹನಗಳ ಪೆಟ್ರೋಲ್ ಕಳ್ಳತನ ನಡೆಯುತ್ತಿದ್ದು ಈ ಖದೀಮ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಬೇಕು. 
ಈ ಭಾಗದಲ್ಲಿ ರಾತ್ರಿವೇಳೆ ಪೊಲೀಸರು ಇನ್ನಷ್ಟು ಹೆಚ್ಚಿನ ಗಂಟೆಯಲ್ಲಿ ಗಸ್ತು ತಿರುಗಿ ಈ ಪೆಟ್ರೋಲ್ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕು. ಕಾರ್ಮಿಕರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಈ ಪೆಟ್ರೋಲ್  ಕಳ್ಳರ ಹಾವಳಿಯ ಹಿಂದಿರುವ ಖದೀಮರ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸುತ್ತಾರೆ.