Tuesday, December 12, 2023

ಪ್ರತ್ಯೇಕ ಬೈಕ್ ಅಪಘಾತ: ಇಬ್ಬರು ಮಕ್ಕಳು ಸೇರಿ ಏಳು ಜನರಿಗೆ ಗಾಯ


ಮುದ್ದೇಬಿಹಾಳ: ಪಟ್ಟಣದಿಂದ ಢವಳಗಿ ಮಾರ್ಗವಾಗಿ ವಿಜಯಪುರದತ್ತ ತೆರಳುವ ಶಿರಾಡೋಣ-ಲಿಂಗಸುಗೂರ ರಾಜ್ಯ ಹೆದ್ದಾರಿಯ ಬಸರಕೋಡ ಕ್ರಾಸ್, ಮಡಿಕೇಶ್ವರ ಕ್ರಾಸ್ ಹತ್ತಿರ ಮಂಗಳವಾರ ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಬೈಕ್ ಅಪಘಾತಗಳಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು, ಮಾವ ಮತ್ತು ಅಳಿಯ ಸೇರಿ ಏಳು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಬಸರಕೋಡ ಕ್ರಾಸ್ ಹತ್ತಿರ ಢವಳಗಿಯ ತೋಟವೊಂದರಲ್ಲಿ ಕೆಲಸಕ್ಕೆ ಹೊರಟಿದ್ದ ಕುಂಚಗನೂರ ಗ್ರಾಮದ ನೀಲಪ್ಪ ಪೂಜಾರಿ ಎಂಬಾತ ಮದ್ಯದ ಅಮಲಿನಲ್ಲಿ ತಾನು ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮುಳ್ಳುಕಂಟಿಗಳಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ಇನ್ನೊಂದು ಘಟನೆಯಲ್ಲಿ ಮಡಿಕೇಶ್ವರ ಕ್ರಾಸ್ ಹತ್ತಿರ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಮುದ್ದೇಬಿಹಾಳ ತಾಲೂಕು ಸರೂರು ಗ್ರಾಮದಲ್ಲಿ ದೇವರಿಗೆ ಕಾಯಿ ಒಡೆಸಿಕೊಂಡು ಬಸವನ ಬಾಗೇವಾಡಿ ತಾಲೂಕು ವಡವಡಗಿ ಗ್ರಾಮಕ್ಕೆ ಹೊರಟಿದ್ದ ಸರೂರು ಗ್ರಾಮದ ಪತಿ ಸಂಗಪ್ಪ ಕಟಗೂರ, ಪತ್ನಿ ಪ್ರಿಯಾಂಕ, 5 ವರ್ಷದ ಪುತ್ರಿ ಚೈತ್ರಾ (ಸನ್ನಿಧಿ), 2 ವರ್ಷದ ಪುತ್ರ ಹಣಮಂತ ಗಂಭೀರ ಗಾಯಗೊಂಡಿದ್ದಾರೆ. ಎದುರಿನಿಂದ ಡಿಕ್ಕಿ ಹೊಡೆದ ಇನ್ನೊಂದು ಬೈಕ್‌ನಲ್ಲಿದ್ದ ಅಳಿಯ ಮುದ್ದೇಬಿಹಾಳದ ಸಂಗಮೇಶ ಕುಂಟೋಜಿ, ಮಾವ ನಾಗರಾಳ ಗ್ರಾಮದ ಮಲ್ಲಿಕಾರ್ಜುನ ಪಲಗಲದಿನ್ನಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸೈ ಸಂಜಯ್ ತಿಪ್ಪರಡ್ಡಿ, ಕಾನ್ಸಟೇಬಲ್ ಪರಶುರಾಮ ದೊಡಮನಿ ಅವರು ಭೇಟಿ ನೀಡಿ ಸ್ಥಳ ಪಂಚನಾಮೆ ನಡೆಸಿ ಕಾನೂನು ಕ್ರಮ ಕೈಕೊಂಡರು. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎರಡು ಅಪಘಾತ ಸಂಭವಿಸಿ 7 ಜನರು ಗಾಯಗೊಂಡ ಘಟನೆ ಸ್ವಲ್ಪ ಸಮಯದ ಅಂತರದಲ್ಲಿ ನಡೆದ ಕಾರಣ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲು ಉಚಿತ ಆರೋಗ್ಯ ಕವಚ ಅಂಬ್ಯೂಲೆನ್ಸ್ ಕೊರತೆ ಎದ್ದು ಕಂಡಿತು. ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಮತ್ತು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಉಚಿತ ಆರೋಗ್ಯ ಕವಚ ಅಂಬ್ಯೂಲೆನ್ಸ್ಗಳು ಮೊದಲು ದಾಖಲಾದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದವು. ಹೀಗಾಗಿ ನಂತರ ದಾಖಲಾದ ಕಟಗೂರ ಕುಟುಂಬ ಆರೋಗ್ಯ ಕವಚ ದೊರೆಯದೆ ಪರದಾಡುವಂತಾಯಿತು. ಆಸ್ಪತ್ರೆಯಲ್ಲಿದ್ದ ಇನ್ನೊಂದು ಅಂಬ್ಯೂಲೆನ್ಸ್ ಹೆರಿಗೆಯಲ್ಲಿ ತೊಂದರೆಯಾಗಿದ್ದ ತುಂಬು ಗರ್ಭಿಣಿಯನ್ನು ಕರೆದೊಯ್ದಿತ್ತು. ಆಸ್ಪತ್ರೆಯ ಇನ್ನುಳಿದ ಒಂದು ಅಂಬ್ಯೂಲೆನ್ಸ್ಗೆ ಡೀಜೈಲ್ ಹಾಕಿಸಿಕೊಂಡು ಹೋಗಬೇಕಿತ್ತು. ಕಟಗೂರ ಅವರು ಬಡವರಾಗಿದ್ದರಿಂದ ಡೀಜೈಲ್ ಹಾಕಿಸಲು ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಸ್ಥಳದಲ್ಲಿದ್ದ ಸರೂರ ಗ್ರಾಮದವರೇ ಆಗಿರುವ ಸಮಾಜ ಸೇವಕ ಶ್ರೀ ಸಾಯಿ ಮಾರ್ಟ ಮಾಲಿಕ ಬಸನಗೌಡ ಪಾಟೀಲ (ಸರೂರ) ಅವರು ತಮ್ಮ ಸ್ವಂತ ಹಣದಲ್ಲಿ ಡೀಜೈಲ್ ಹಾಕಿಸಲು ನೆರವಿಗೆ ಬಂದರು. ಇನ್ನೇನು ಡೀಜೈಲ್ ಹಾಕಿಸಬೇಕು ಎನ್ನುವಷ್ಟರಲ್ಲಿ ಆರೋಗ್ಯ ಕವಚ ಬರುತ್ತಿರುವ ಮಾಹಿತಿ ಆಸ್ಪತ್ರೆಯವರಿಗೆ ಲಭ್ಯವಾಗಿ ಡೀಜೈಲ್ ಹಾಕಿಸುವುದನ್ನು ತಡೆದು ಆರೋಗ್ಯ ಕವಚದಲ್ಲಿಯೇ ಕಟಗೂರ ಕುಟುಂಬದವರನ್ನು ಜಿಲ್ಲಾಸ್ಪತ್ರೆಗೆ ಕಳಿಸಿದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

13-12-2023 EE DIVASA KANNADA DAILY NEWS PAPER