Saturday, February 18, 2023

ಕಾಯಕ ಶರಣರ ಆದರ್ಶಗಳು ಸಮಾಜಕ್ಕೆ ದಾರಿದೀಪ : ಕ್ಯಾಪ್ಟನ್ ಮಹೇಶ ಮಾಲಗಿತ್ತಿ

 


ಈ ದಿವಸ ವಾರ್ತೆ

ವಿಜಯಪುರ: 12ನೇ ಶತಮಾನದ ಶರಣರು ಮೌಲ್ಯಯುತ ಕಾಯಕ ಜೀವನ ನಡೆಸುವ ಮೂಲಕ ಸಮಾಜಕ್ಕೆ ಜ್ಞಾನದ, ಸುಜ್ಞಾನದ ಬೆಳಕು ತೋರಿದ ಕಾಯಕ ಶರಣರ ಆದರ್ಶ ವಿಚಾರಗಳು ಹಾಗೂ ಅವರು ನೀಡಿದ ವಚನಗಳೂ ಸಮಾಜಕ್ಕೆ ದಾರಿದೀಪವಾಗುವುದರೊಂದಿಗೆ ಇಂದಿಗೂ ಪ್ರಸ್ತುತವಾಗಿವೆ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಕಾಯಕ ಶರಣರ' ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಕ ಶರಣರು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ನೀಡಿದ್ದಾರೆ. ಇಂತಹ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಅವರು ಹೇಳಿದರು.

ಸಾಹಿತಿ ಜಂಬುನಾಥ ಕಂಚ್ಯಾಣಿ ಅವರು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿನ ಬಸವಾದಿ ಶರಣರ ಅನುಭವ ಮಂಟಪವೂ ಇಂದಿನ ಸಂಸತ್ತಿನ ಮಾದರಿ. ಅಲ್ಲಿ ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ ಹಲವು ಕ್ಷೇತ್ರದ ವಿಷಯಗಳ ಚರ್ಚೆ, ಚಿಂತನ ಮಂಥನ ನಡೆಯುತ್ತಿತ್ತು. ಸಮಾಜದಲ್ಲಿನ ಮೌಢ್ಯತೆಯನ್ನು ತೊಡೆದು ಹಾಕಲು ಬಸವಾದಿ ಶರಣರು ತಮ್ಮ ವಚನಗಳ ಮೂಲಕ ತಿಳಿಸಿದರು. ಎಲ್ಲ ಶರಣರು ತಮ್ಮ ಕಾಯಕ ನಿಷ್ಠೆಯೊಂದಿಗೆ ವಚನಗಳ ಮೂಲಕ ಜ್ಞಾನದ ದೀವಿಗೆಯಾಗಿದ್ದರು. ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಹಾಗೂ ಉರಿಲಿಂಗ ಪೆದ್ದಿ ಇವರ ಜೀವನ ಹಾಗೂ ಅವರ ವಚನಗಳ ಕುರಿತಾಗಿ ಉಪನ್ಯಾಸ ನೀಡಿದರು. 

ತಾಳಿಕೋಟೆಯ ಎಸ್ ಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.‌ಸುಜಾತ ಚಲವಾದಿ ಅವರು ಮಾತನಾಡಿ, ಸತ್ಯ, ಶುದ್ಧ, ಕಾಯಕದ ಮೂಲಕ ಜೀವನ ನಡೆಸಿದ ಶರಣರು ಕಾಯಕ, ಶಾಂತಿಮಂತ್ರ, ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಇಂದಿಗೂ ವಚನಗಳು ಪ್ರಸ್ತುತವಾಗಿವೆ. ಕಾಯಕ ಶರಣರಾದ ಮಾದರ ಚನ್ನಯ್ಯ ಹಾಗೂ ಮಾದರ ಧೂಳಯ್ಯ ಅವರ ವಚನಗಳು ಹಾಗೂ ಕಾಯಕದ ಮಹತ್ವದ ಕುರಿತಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯಪುರ  ತಹಶೀಲ್ದಾರ ಸುರೇಶ ಮುಂಜೆ,ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಅನುಸೂಯ ಕೆ.ಚಲವಾದಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ವಿವಿಧ ಸಮಾಜದ ಮುಖಂಡರಾದ ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಗಿರಿಶ ಕುಲಕರ್ಣಿ, ಅಶೋಕ ಸೌದಾಗರ,  ಆರ್.ವಾಯ್.ಕಟ್ಟಿಮನಿ, ಎಂ.ಆರ್.ಸೌದಾಗರ, ಹೊನ್ನಕಾಂಬಳೆ, ಮಹಾದೇವ ಬಿಜಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶ್ರಝಮತಿ ದಾನಮ್ಮ ಆಲ್ದ ಅವರು ವಚನ ಸಂಗೀತ ಪ್ರಸ್ತುತಪಡಿಸಿದರು. ಸುಭಾಸ ಕನ್ನೂರ ನಿರ್ವಹಿಸಿ, ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಊರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಭಾವಚಿತ್ರದ ಮೆರವಣಿಗೆಗೆ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿವೃತ್ತ, ಬಸವೇಶ್ವರ ವೃತ್ತದಿಂದ ಹಾಯ್ದು ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಜರುಗಿ, ಸಮಾವೇಶಗೊಂಡಿತು.