Monday, August 21, 2023

22-08-2023 EE DIVASA KANNADA DAILY NEWS PAPER

ಸುಳ್ಳು ಸುದ್ದಿ ಪತ್ತೆ-ನಿಯಂತ್ರಣ-ಕಠಿಣ ಶಿಕ್ಷೆಗೆ ತುರ್ತು ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು, ಆಗಸ್ಟ್ 21 : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ  ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು   ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ನೀಡಿದರು. 

ಗೃಹ ಕಚೇರಿ  ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ  ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಅವರು ಈ ತೀರ್ಮಾನ ಮಾಡಿದರು. 

ಸುಳ್ಳು ಸುದ್ದಿಗಳ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಅನುಮೋದನೆ ನೀಡಿದರು. 

ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆ :

ಪ್ಯಾಕ್ಟ್ ಚೆಕ್ ಘಟಕವು ಮೇಲುಸ್ತುವಾರಿ ಸಮಿತಿ, SOPC ಪರಿಶೀಲನೆ, ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಸತ್ಯ ತಪಾಸಣೆ ತಂಡ ವಿಶ್ಲೇಷಣ ತಂಡವನ್ನು ಒಳಗೊಳ್ಳಲಿದೆ. ಹಾಗೂ ಸಾಮರ್ಥ್ಯ ವರ್ಧನೆ ತಂಡ ರಚನೆ ಮಾಡಿ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡಬಹುದು ಎಂದು ಸಭೆಯಲ್ಲಿ  ವಿವರಿಸಲಾಯಿತು. 

ಬೆಂಗಳೂರು ಪೊಲೀಸ್ ಕೂಡ  ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದರೂ, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಅಗತ್ಯವಿದೆ. ಎಐ ಬಳಕೆ ಮಾಡಿ ಡೀಪ್ ಫೇಕ್ ಕೂಡ ಉಪಯೋಗ ಮಾಡಲಾಗುತ್ತಿದೆ. ಇದು ಸುಳ್ಳು ಸುದ್ದಿ ಹರಡುವವರಿಗೆ ಅನುಕೂಲ ವಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಫೇಕ್ ಸುದ್ದಿ ಜಾಲ ಜಾಗತಿಕವಾಗಿ ಬಾಲ್ಯಾವಸ್ಥೆಯಲ್ಲಿದ್ದರೂ ಕಾಲಾಂತರದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಯೂ ಇದೆ. ಸುಳ್ಳು ಸುದ್ದಿ ಬಳಕೆ ಮಾಡುವವರಿಗೆ ಶಿಕ್ಷೆ ಕೂಡ ಆಗಬೇಕು. ಈ ಸಮಿತಿ ಕೂಡಲೇ ರಚಿಸಿ  ಸಾಮರ್ಥ್ಯ ಹೆಚ್ಚಿಸುವ ಕೆಲಸ  ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಭಿಪ್ರಾಯಪಟ್ಟರು. 

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅತ್ಯಗತ್ಯ. ಆರಂಭಿಕ ಹಂತದಲ್ಲಿ ಐ.ಟಿ ಬಿಟಿ ಇಲಾಖೆ ಸಹಕರಿಸುತ್ತದೆ. ಕಾನೂನಿನ  ವ್ಯಾಪ್ತಿಯಲ್ಲಿ ತರಲು ಕ್ರಮ ವಹಿಸಬೇಕು ನಂತರ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ  ಎಂದು ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ಪಟ್ಟರು.

 ಸಚಿವರಾದ ಕೃಷ್ಣಬೈರೇಗೌಡ ಅವರು ಮಾತನಾಡಿ  ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಯಿಂದ ಸುಳ್ಳುಸುದ್ದಿ ಹರಡುವುದನ್ನು ನಿಯಂತ್ರಿಸಿ ಇದು ಶಿಕ್ಷಾರ್ಹ ಅಪರಾಧ ಎಂದು ಜನರಿಗೆ ಮನವರಿಕೆಯಾಗಬೇಕು ಎಂದರು. 

 ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್ , ಪೊಲೀಸ್ ಮಹಾ ನಿರ್ದೇಶಕ  ಅಲೋಕ್ ಮೋಹನ್ ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕ ರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾ ವೃತ್ತಿ ಸಂಬಂಧಿತ ನಾನಾ ಪದಾಧಿಕಾರಿಗಳ ಜತೆ ಸಭೆ ನಡೆಸಿ ಎಲ್ಲರ ಅಹವಾಲು ಮತ್ತು ಬೇಡಿಕೆಗಳನ್ನು ಆಲಿಸಿದರು. 

ಪತ್ರಿಕಾ ವಿತರಕರ ಸಂಘ ಸೇರಿ ಕಾರ್ಯನಿರತ ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಒಟ್ಟು ಒಂಬತ್ತು ಸಂಘಟನೆಗಳ 12 ಮಂದಿ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಮಂಡಿಸಿದರು. 

ಎಲ್ಲರ ಬೇಡಿಕೆಗಳನ್ನೂ ಸಮಗ್ರವಾಗಿ ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

 

 ಈ ದಿವಸ ವಾರ್ತೆ

ಬೆಂಗಳೂರು : ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅವರು ಇಂದು ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟಾಕುತ್ತಿವೆ. ಕೇರಳ, ತಮಿಳು ನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಪುರಸ್ಕೃತ ಯೋಜನೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಾರದು ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಇದರಿಂದ ಬಡವರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತಿ ವರ್ಷ ಪ್ರಮಾಣ ಪತ್ರ ನೀಡಿದರೂ, ಒಂದು ವರ್ಷ, ಎರಡು ವರ್ಷ ಓದಿದವರಿಗೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಉದ್ಯೋಗವಕಾಶ ದೊರೆತು ಹೋದ ಬಡವರ ಮಕ್ಕಳು ಮತ್ತೆ ಓದಲು ಎಷ್ಟು ಅವಕಾಶ ದೊರೆಯುವುದು? ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧ್ಯಯನ ಮತ್ತು ಸಂಶೋಧನೆಗಳು ಗ್ರಂಥಾಲಯಗಳಲ್ಲಿ ಕೊಳೆಯಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿವಿಗಳು ಉನ್ನತ ಶಿಕ್ಷಣವನ್ನು, ಜ್ಞಾನವನ್ನು ಯುವಕ-ಯುವತಿಯರಿಗೆ ಒದಗಿಸುವ ಜೊತೆಗೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಮೂಡಿಸಬೇಕು

ಶಿಕ್ಷಣ ಅಂದರೆ ಕೇವಲ ಓದುಬರಹ ಕಲಿಯುವುದಲ್ಲ. ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಒಬ್ಬ ವ್ಯಕ್ತಿ ವಿವಿಯಿಂದ ಹೊರಗೆ ಬಂದ ಮೇಲೆ ಸಮಾಜದ ಜವಾಬ್ದಾರಿ ಹೊರುವ ಶಕ್ತಿ ಇರಬೇಕು. ಅಂತಹ ಜ್ಞಾನ ಬರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಂಡು ಹೋಗುವುದಾದರೆ ಅದು ಶಿಕ್ಷಣವೇ ಅಲ್ಲ



ಬೆಂಗಳೂರು : ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು. ಅದಕ್ಕೆ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನರ್‌ ವಿಮರ್ಶೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕುಲಪತಿಗಳ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

 ಬೇರೆ ಬೇರೆ ಭಾಷೆ, ಸಂಸ್ಕೃತಿ ಮತ್ತಿತರ ಅಂಶಗಳ ಕಾರಣದಿಂದ ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ಧತಿ ಸಾಧ್ಯವಿಲ್ಲ. ಕುಲಪತಿಗಳು ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ.

 ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿದ್ದಾಗ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ಈ ಸಮ ಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ನಾವು ವಿವಿಗಳ ಮೂಲಕ ಕೊಡಬೇಕು ಎಂದರು. 

ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆ ಮತ್ತು ಕ್ರಮಗಳು ವಿವಿಗಳಲ್ಲಿ ನಡೆಯಬಾರದು. ವಿವಿಗಳಿಂದ ಬಂದವರು ಮತ್ತೆ ಮೌಢ್ಯಗಳು, ಜಾತಿಯ ಜೊತೆಯಲ್ಲಿದ್ದರೆ ಅವರು ಪಡೆದಿರುವುದು ಶಿಕ್ಷಣ ಎಂದು ಕರೆಯಲಾಗದು. ವಿವಿಗಳಲ್ಲಿ ಧರ್ಮ ನಿರಪೇಕ್ಷತೆ, ಮೌಢ್ಯ ರಹಿತ, ಕಂದಾಚಾರ ರಹಿತ ಹಾಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು.  ಕೆಲವೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳನ್ನು ನಡೆಸಿರುವುದನ್ನು ಕೆಲವು ವಿವಿಗಳಲ್ಲಿ ನೋಡಿದ್ದೇನೆ. ಜಾತ್ಯತೀತ ವಿರೋಧಿ ಮನೋಭಾವವನ್ನು ಪುರಸ್ಕರಿಸಬಾರದು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾರಣಕ್ಕೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಇಲ್ಲವಾದರೆ ಉನ್ನತ ಶಿಕ್ಷಣ ಸರಿದಾರಿಯಲ್ಲಿ ಸಾಗದೆ ಹೋದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದರು. 

 ಅತಿಥಿ ಉಪನ್ಯಾಸಕರ ನೇಮಕದ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳನ್ನು ನೇಮಕ ಮಾಡಕೂಡದು. 

ವಿವಿಯ ವಿದ್ಯಾರ್ಥಿಗಳು ಮನುಷ್ಯತ್ವ ಇರುವ ವ್ಯಕ್ತಿಗಳಾಗಿ ಬೆಳೆಯಬೇಕು. ಹುಟ್ಟುವಾಗ ಎಲ್ಲರೂ ವಿಶ್ವಮಾನವರು, ಬೆಳೆಯುತ್ತಾ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದಂತೆ ಆಗಬಾರದು ಎಂದರು. 

ಸಾಕಷ್ಟು ಕೊರತೆಗಳನ್ನು ಇಟ್ಟುಕೊಂಡು ಜಿಲ್ಲೆಗೊಂದು ವಿವಿ ಮಾಡುವ ತೀರ್ಮಾನ ಸರಿಯಲ್ಲ.  ಮೂಲಸೌಲಭ್ಯ ಒದಗಿಸಲಾಗದಿದ್ದರೆ ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಶೇ. 3 ಕ್ಕಿಂತ ಹೆಚ್ಚು ಅನುದಾನ ಒದಗಿಸಲಾಗಿತ್ತು. ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು.

 ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಯಾವುದೇ ಲೋಪವಾಗಬಾರದು. ಒಂದೇ ಬಾರಿ ಎಲ್ಲ ಪರಿಹಾರ ಒದಗಿಸಲಾಗದು. ಆದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದರು. 

ಸಂಶೋಧನೆಯ ಫಲ ಗ್ರಂಥಾಲಯಗಳಲ್ಲಿ ಉಳಿಯಬಾರದು. ಸಮಾಜವನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆ ಫಲಪ್ರದವಾಗುವುದು ಎಂದರು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್,  ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ , ಆರ್ಥಿಕ ಇಲಾಖೆ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರ ಹಿರಿಯ ಅಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳ ಹಬ್ಬ ಪಂಚಮಿ ಹಬ್ಬ

ಈ ದಿವಸ ವಿಶೇಷ ವರದಿ

ಹಬ್ಬವೆಂದರೆ ಎಲ್ಲರಿಗೂ ಇಷ್ಟ ಅದರ ಸಡಗರ ಮನೆಯಲ್ಲಿ ತುಂಬಾ ಜೋರಾಗಿರುತ್ತದೆ ಇದು ಪಂಚಮಿ ಎಂದರೆ ಹೆಣ್ಣು ಮಕ್ಕಳಾಚರಿಸುವ ಒಂದು ಪ್ರಮುಖವಾದ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದೆ. ಒಂದು ವಾರಕ್ಕೆ ಮೊದಲೇ ಮನೆಯಲ್ಲಿ  ಸಿಹಿ ತಯಾರಿಸಲು ಪ್ರಾರಂಭ ಮಾಡಿರುತ್ತಾರೆ ಎಲ್ಲಾ ತರಹದ ಉಂಡೆಗಳು ನಾಗರ ಪಂಚಮಿ ಪೂಜೆ ಸಲುವಾಗಿ ಮಾಡುತ್ತಾರೆ.

ಮುಂಗಾರಿನ ಮಳೆಯ ಆದನಂತರ ಬರುವ ಮೊದಲ ಹಬ್ಬ ಇದಾಗಿದೆ ಸುಂದರವಾಗಿ ಅಲಂಕಾರವನ್ನು ಮಾಡಿಕೊಂಡು ಮನೆಯ ತುಂಬಾ ಓಡಾಡುವುದು ಹೆಣ್ಣು ಮಕ್ಕಳು ಅವರಿಂದಲೇ ಒಂದು ಕಳೆ ಬರುತ್ತದೆ ಈ ಹಬ್ಬಕ್ಕೆ ನಾಗದೇವನಿಗೆ ಹಾಲೆರೆಯುವುದು  ನೈವಿದ್ಯ ಸಹ ತೆಗೆದುಕೊಂಡು ಹೋಗುತ್ತಾರೆ ಹಳ್ಳಿಯ ಕಡೆ ಗೆಳತಿಯರು ಎಲ್ಲಾ ಸೇರಿಕೊಂಡು ಯಾರ ಮನೆಯ ಮುಂದೆ ಜೋಕಾಲಿ ಇದ್ದ ಕಡೆ ಅಲ್ಲಿ ಹೋಗಿ ಆಟವನ್ನು ಆಡುತ್ತಾ ಯಾವುದೇ ಭೇದ ಭಾವ ಇಲ್ಲದೆ ಎರಡು ದಿನಗಳ ಕಾಲ ಆಚರಿಸುತ್ತಾರೆ.

ಹಿಟ್ಟು ಅಥವಾ ಉಂಡಿ ತಿನ್ನುವ ದಿನವೆಂದು ಹಳ್ಳಿ ಕಡೆ ಆಚರಣೆಯನ್ನು ಮಾಡುತ್ತಾರೆ ಎಲ್ಲರೂ ತಮ್ಮ ತಮ್ಮ ಮನೆ ಪಕ್ಕದವರ ಮನೆಗೆ ಹೋಗಿ ತುಂಟಾಟ ಮಾಡುತ್ತಾ ಉಂಡಿ‌ತಿಂದು ಹೋಗುತ್ತಾರೆ ನಾಗಗಳನ್ನು ಪೂಜಿಸುವ ಹಬ್ಬ ಇದಾಗಿದೆ ಏಕೆಂದರೆ ಅವುಗಳ ಮೇಲೆ ಅಪಾರವಾದ ನಂಬಿಕೆ ಭಕ್ತಿಯನ್ನು ಇಟ್ಟುಕೊಂಡ ಜನರು ಯಾವುದೇ ರೀತಿಯಲ್ಲಿ ತೊಂದರೆ ಸಮಸ್ಯೆ ಕುಟುಂಬದಲ್ಲಿ ಬರಬಾರದೆಂದು ಬೇಡಿಕೊಳ್ಳುತ್ತಾರೆ  ಪೂಜಿಸುತ್ತಾರೆ ಹಾಲು ಎರೆಯುವ ಮೂಲಕ ಮೂಲಕ ಭಕ್ತಿಯಿಂದ ಪೂಜಿಸುತ್ತಾರೆ ಇದರಲ್ಲೇ ಪ್ರಮುಖ ಪಾತ್ರ ಮಹಿಳೆಯರು   ಮನೆಯ ಒಳತಿನ ಸಲವಾಗಿ ಉಪವಾಸವನ್ನು ಸಹಿತ ಮಾಡುತ್ತಾರೆ.

ತಮ್ಮ ಎಲ್ಲಾ ಕಷ್ಟಗಳು ನಾಗದೇವರು ದೂರವಾಗುತ್ತದೆ  ಎಂದು ಖುಷಿಯಿಂದ ಗೆಳತಿಯರ ಜೊತೆ ಹರಟೆಯನ್ನು ಹೊಡೆಯುತ್ತಾರೆ ಮತ್ತು ಗಂಡು ಮಕ್ಕಳು ಸಹಿತ  ಈ ಹಬ್ಬವನ್ನು ಆಚರಿಸುತ್ತಾರೆ ಏಕೆಂದರೆ ಅವರು ನಿಂಬೆಕಾಯಿ ಎಸೆತ ದಷ್ಟು ದೂರ ಹೋಗಬೇಕು  ಪಂದ್ಯ ಎಷ್ಟು ಸಮಯದ ವರೆಗೆ ಜೋಕಾಲಿ‌ ಆಡುತ್ತಾರೆ ಗೆದ್ದು ತುಂಬಾ ಸಂಭ್ರಮಾಚರಣೆಯಿಂದ ಯಾವುದೇ ಬೇಧ ಭಾವವಿಲ್ಲದೆ ಜೋಕಾಲಿಯನ್ನು ಆಡುತ್ತಾರೆ. ಉಂಡೆಗಳನ್ನು ತಿನ್ನುತ್ತಾ ಮಜಾ ಮಾಡುವುದೇ ಈ ಹಬ್ಬ ಪ್ರಮುಖವಾಗಿ ಅನ್ನ ತಂಗಿಯ ಬಂಧ ಬೇಸೆಯುವ  ಹಬ್ಬದ ನಂತರ ಕೊಬ್ಬರಿ  ಕುಬಸ  ತಂಗಿಯ ಮನೆಗೆ ಕೊಟ್ಟು ಕಳುಹಿಸುತ್ತಾರೆ ತಮ್ಮ ಬಂದು ಮಿತ್ರರಿಗೆ ಎಲ್ಲರಿಗೂ ಕೊಡುತ್ತಾರೆ   ಎಲ್ಲಾರೂ  ಒಂದೇ ಎನ್ನುವ ಮನೋಭಾವದಿಂದ ಆಚರಿಸುವ ಪಂಚಮಿ ಹಬ್ಬ ಎಂದೆನಿಸಿಕೊಳ್ಳುತ್ತದೆ

ಚೇತನಾ‌ ಶ್ರೀ ಬೆಳ್ಳೆನವರ, ಕಲಬೀಳಗಿ