Wednesday, May 1, 2024

02-05-2024 EE DIVASA KANNADA DAILY NEWS PAPER

ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸುವಂತೆ ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಸೂಚನೆ



ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸುವಂತೆ ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಸೂಚಿಸಿದರು. 

ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲಾ ಸ್ವೀಪ್ ಸಮಿತಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಚುನಾವಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಈಗಾಗಲೇ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇನ್ನಷ್ಟು ಪರಿಣಾಮಕಾರಿಯಾಗಿ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು. ಮತದಾನ ಜಾಗೃತಿ ಕಾರ್ಯವನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದರು.


ಮತದಾರ ಜಾಗೃತಿ ಕಾರ್ಯವನ್ನು ಚಾಲೇಂಜ್ ಆಗಿ ಸ್ವೀಕರಿಸಿ, ಮತ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಕೈಗೊಂಡಿರುವ ಕಾರ್ಯಗಳ ಫಲಿತಾಂಶ ಮತದಾನ ದಿನದಂದು ತಿಳಿಯಲಿದೆ. ನೀವು ಮಾಡಿದ ಪ್ರಯತ್ನಕ್ಕೆ ಮತದಾನ ದಿನದಂದು ಫಲ ಸಿಗಲಿದೆ. ಚುನಾವಣಾ ಆಯೋಗದಿಂದ ಮುದ್ರಿಸಲಾದ ವೋಟರ್ ಗೈಡ್‍ನಲ್ಲಿ ಸಂಪೂರ್ಣವಾದ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಬಿಎಲ್‍ಓಗಳು, ಸೂಪರ್‍ವೈಸರ್‍ಗಳು ಸೇರಿದಂತೆ ನಿಯೋಜಿತ ಎಲ್ಲ ಅಧಿಕಾರಿಗಳು ತಿಳಿದುಕೊಂಡು ಪ್ರತಿ ಮನೆ-ಮನೆಗೆ ಭೇಟಿ ಮತದಾರರಲ್ಲಿ ತಿಳುವಳಿಕೆ ಮೂಡಿಸಬೇಕು. ಮತಗಟ್ಟೆಗಳಲ್ಲಿ ಮತದಾರರರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳ ಕುರಿತು ಮನವರಿಕೆ ಮಾಡಬೇಕು. ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ತಂಪು ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ, ನಿರೀಕ್ಷಣಾ ಕೊಠಡಿ ವ್ಯವಸ್ಥೆ, ನೆರಳು ವ್ಯವಸ್ಥೆ, ತುರ್ತು ಸಂದರ್ಭಕ್ಕೆ ಅಂಬ್ಯೂಲೆನ್ಸ್ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ, ಓ.ಆರ್.ಎಸ್. ಪೊಟ್ಟಣಗಳು, ಶೌಚಾಲಯ ಸೇರಿದಂತೆ ಮತಗಟ್ಟೆಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳ ಕುರಿತು ಪ್ರತಿ ಮತದಾರರಿಗೆ ಮಾಹಿತಿ ಒದಗಿಸುವ ಮೂಲಕ ಅವರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಪ್ರೇರೆಪಿಸಬೇಕು. ಬಿಎಲ್‍ಓ, ಸೂಪರ್‍ವೈಸರ್, ಆಶಾ ಕಾರ್ಯಕರ್ತೆರು ಮನೆಗಳಿಗೆ ಭೇಟಿ ನೀಡಿ ಪ್ರತಿ ಮನೆಯಲ್ಲಿ  ಕನಿಷ್ಠ 5 ನಿಮಿಷ ತಿಳಿ ಹೇಳುವ ಮೂಲಕ ಜಾಗೃತಿ ಮೂಡಿಸಬೇಕು  ಎಂದು ಅವರು ಹೇಳಿದರು. 

ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಸಹ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಇದರಿಂದ ಬಿಎಲ್‍ಗಳಿಗೆ ಪ್ರೊತ್ಸಾಹ ದೊರೆಯಲಿದೆ. ಯುವ ಜನಾಂಗ, ಅಂಗವಿಕಲ ಮತದಾರ, ಹಿರಿಯ ನಾಗರೀಕ ಮತದಾರರಲ್ಲಿ ಹೆಚ್ಚಾಗಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯತಿಯ ಎ.ಬಿ.ಅಲ್ಲಾಪುರ ಅವರು ಮಾಹಿತಿ ನೀಡಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿವಿಧೆಡೆ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು  ಜಾಗೃತಿ ಮೂಡಿಸಲಾಗಿದೆ. ಮಾನವ ಸರಪಳಿ, ಕ್ಯಾಂಡಲ್ ಮಾರ್ಚ್, ಪ್ರಯಾಣಿಕರ ಜಾಗೃತಿಗಾಗಿ ವಿವಿಧ ಬಸ್ ನಿಲ್ದಾಣಗಳಲ್ಲಿ ಅನೌನ್ಸ್ಮೆಂಟ್ ಮೂಲಕ ಜಾಗೃತಿ, ವಿವಿಧ ನಿಲ್ದಾಣಗಳಲ್ಲಿ ಸೆಲ್ಫಿ ಸ್ಟ್ಯಾಂಡ್ ಅಳವಡಿಕೆ, ಬಸ್‍ಗಳಿಗೆ ಪೋಸ್ಟರ್ ಅಂಟಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಸತಿ ನಿಲಯದ ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರ ಅಭಿಯಾನ ಹಮ್ಮಿಕೊಂಡ ಜಾಗೃತಿ ಮೂಡಿಸುವುದು, ಜಿಲ್ಲೆಯ ಕಾರ್ಮಿಕರಿರುವ ಸ್ಥಳಗಳಿಗೆ ಭೇಟಿ ನೀಡಿ ಕಾರ್ಮಿಕರಲ್ಲಿ ಜಾಗೃತಿ, ವಿವಿಧ ಮಾಲ್, ಶೋರೂಂಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ 1528 ಸ್ಥಳಗಳಲ್ಲಿ ಚುನಾವಣಾ ಧ್ವಜಾರೋಹಣ, ಮಹಾನಗರ ಪಾಲಿಕೆ ವತಿಯಿಂದ 10 ಅಡಿ ಬಲೂನ್ ಅಳವಡಿಸಿ ಮತದಾನ ಜಾಗೃತಿ, ಸೇರಿದಂತೆ ಹತ್ತು ಹಲವಾರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಯ ಟಿ-ಶರ್ಟ್ ಹಾಗೂ ಕ್ಯಾಪ್‍ಗಳನ್ನು ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ಬಿಡುಗಡೆಗೊಳಿಸಿದರು. 

ಸಭೆಯಲ್ಲಿ    ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ,  ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸಿ.ಆರ್. ಮುಂಡರಗಿ, ಮಹಾನಗರ ಪಾಲಿಕೆ ಆಯುಕ್ತ ಆರ್ಶದ ರೆಹಮಾನ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Sunday, April 28, 2024

ಅವಳಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ನಮೋ ಮೆರುಗು : ಏ.29 ರಂದು ಬಾಗಲಕೋಟೆಗೆ ಪ್ರಧಾನಿ ಮೋದಿ ಆಗಮನ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಾರ್ಥ ವಿಶ್ವನಾಯಕ, ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಏ. 29 ರಂದು ಬಾಗಲಕೋಟೆಗೆ ಆಗಮಿಸಲಿದ್ದು, ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಪ್ರಚಾರಕ್ಕೆ ಮೆರುಗು ನೀಡಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಮಾಹಿತಿ ನೀಡಿದರು.

ಏ.29 ರಂದು ಬೆಳಿಗ್ಗೆ 11 ಗಂಟೆಗೆ ಬಾಗಲಕೋಟೆ ನವನಗರದ ತೋಟಗಾರಿಕಾ ವಿವಿ ಆವರಣದಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ‌ ಮೋದಿಯವರು ಅವಳಿ ಜಿಲ್ಲೆಯ ಜನತೆಯನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಬಲ ತುಂಬಲಿದ್ದಾರೆ. ಅವಳಿ ಜಿಲ್ಲೆಯ ಬಿಜೆಪಿ‌ ಅಭ್ಯರ್ಥಿಗಳಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ.ಗದ್ದಿಗೌಡರ ಸೇರಿದಂತೆ ಅನೇಕ ಭಾಜಪ ಹಾಗೂ ಜೆಡಿಎಸ್ ಪ್ರಮುಖರು, ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. 

ಇನ್ನೂ ಎಲ್ಲೆಡೆ ಚುನಾವಣಾ ಕಾವು ಜೋರಾಗಿದ್ದು, ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಜನರಿಂದ ಬಿಜೆಪಿ ಪರ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ. ವಿಕಸಿತ ಭಾರತ ಸಂಕಲ್ಪ ಸಾಕಾರಗೊಳಿಸಲು ಮೋದಿಯವರು ಮತ್ತೊಮ್ಮೆ ಪ್ರಧಾನಿಯಗಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ. ಈ ಸಭೆಗೆ ವಿಜಯಪುರ ಜಿಲ್ಲೆಯಿಂದ ಸುಮಾರು 25-30 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಜಿಲ್ಲೆ ಎಲ್ಲಾ ಕಾರ್ಯಕರ್ತರು, ಬಿಜೆಪಿ ಬೆಂಬಲಿಗರು, ಮೋದಿಯವರ ಹಿತೈಸಿಗಳು ಅಭಿಮಾನಿಗಳು ಅತಿ‌ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆರ್.ಎಸ್.ಪಾಟೀಲ್ ಕುಚಬಾಳ ಮನವಿ ಮಾಡಿಕೊಂಡರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಸಂಜಯ ಪಾಟೀಲ ಕನಮಡಿ, ಜಿಲ್ಲಾ ಕೋಶಾಧ್ಯಕ್ಷ ಭೀಮಾಶಂಕರ ಹದನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬೂ ಮಾಶ್ಯಾಳ, ಮಹಿಳಾ ಮುಖಂಡರಾದ ಮಲ್ಲಮ್ಮ ಜೋಗೂರ, ಮಾಧ್ಯಮ ಪ್ರಮುಖ ವಿಜಯ್ ಜೋಶಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಲೋಕಸಭಾ ಚುನಾವಣೆ - 2024 : ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಚಾಲನೆ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಸುಭದ್ರ ರಾಷ್ಟ್ರ ನಿರ್ಮಾಣ ಹಾಗೂ ಪ್ರಜಾಪ್ರಭುತ್ವದ ಭದ್ರ ಬುನಾದಿಗಾಗಿ ಭವಿಷ್ಯದ ಆಲೋಚನೆಯೊಂದಿಗೆ  ಪ್ರತಿಯೊಬ್ಬರು ಮೇ.7 ರಂದು ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು. 

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ, ಸಂಯುಕ್ತಾಶ್ರಯದಲ್ಲಿ  ಭಾನುವಾರ ನಗರದ ದರಬಾರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ “ನಮ್ಮ ನಡೆ ಮತಗಟ್ಟೆ ಕಡೆ” ಕಾರ್ಯಕ್ರಮದಲ್ಲಿ ಚುನಾವಣಾ ಧ್ವಜಾರೋಹಣ ನೆರವೇರಿಸಿ, ಮತದಾನದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಹಾಗೂ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ ಇಂತಹ ಅವಕಾಶ ಸಂವಿಧಾನ ಕಲ್ಪಿಸಿದೆ. ಸಂವಿಧಾನ ನೀಡಿದ ಅಧಿಕಾರವನ್ನು ಕಳೆದುಕೊಳ್ಳಬಾರದು. ಮತದಾನ ಮಾಡುವ ಮುಲಕ ಪ್ರಜಾಪ್ರಭುತ್ವ ಹಬ್ಬ ಆಚರಿಸಬೇಕು. 18 ವರ್ಷ ತುಂಬಿದ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಹೇಳಿದರು.

ನಮ್ಮ ದೇಶವನ್ನು 5 ವರ್ಷಗಳ ಕಾಲ ಆಡಳಿತ ನಡೆಸುವ ಸರ್ಕಾರದ ಆಯ್ಕೆ ನಮ್ಮ ಕೈಯಲ್ಲಿದೆ. ಸಂವಿಧಾನ ನೀಡಿದ ಮತದಾನದ ಹಕ್ಕಿನಿಂದ ಯಾರೂ ಕೂಡ ವಂಚಿತರಾಗದೇ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ದಿನ ಮತಗಟ್ಟೆಗಳಿಗೆ ತೆರಳಿ ಮುಂದಿನ ಭವಿಷ್ಯದ ಆಲೋಚನೆಯೊಂದಿಗೆ ಯೋಗ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರು ಹೇಳಿದರು.



ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕಾಗಿ  ಎಲ್ಲ ಮತಗಟ್ಟೆಗಳಲ್ಲಿ ಬಿಸಿಲಿನ ರಕ್ಷಣೆಗಾಗಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿಕಲಚೇತನರಿಗಾಗಿ ರ್ಯಾಂಪ್, ಅಶಕ್ತರಿಗೆ ವ್ಹೀಲ್ ಚೇರ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಶೇಕಡಾ ನೂರರಷ್ಟು ಮತದಾನ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಗ್ರಾಮಿಣ ಹಾಗೂ ನಗರ ಪ್ರದೇಶದಲ್ಲಿ ಕಳೆದ ಚುನಾವಣೆಳಲ್ಲಿ ಅತಿ  ಕಡಿಮೆ ಮತದಾನವಾದ  ಪ್ರದೇಶಗಳನ್ನು ಗುರುತಿಸಿ, ಈ ಸ್ಥಳಗಳಲ್ಲಿ ಸ್ವೀಪ್ ಕಾರ್ಯಚಟುವಟಿಕೆಗಳನ್ನು  ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಿ ಹೆಚ್ಚಿನ ಮತದಾನಕ್ಕೆ ಕ್ರಮ ವಹಿಸಲಾಗುತ್ತಿದೆ. ನೋಟಾ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಮೇ 07ರಂದು ಮತದಾನ  ನಡೆಯಲಿದೆ. ಎಲ್ಲ ಕುಟುಂಬದವರು ಅರ್ಹ ಮತದಾರರೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡ ಅವರು, ಮತದಾನದ ಹಕ್ಕು ಅತ್ಯಂತ ಪವಿತ್ರ ಹಾಗೂ ಅಮೂಲ್ಯವಾದದ್ದು ಹಾಗೂ ಪವಿತ್ರವಾದದ್ದು, ಉತ್ತಮ ಸಮಾಜ, ಸುಭದ್ರ ದೇಶ ನಿರ್ಮಾಣದಲ್ಲಿ ಪ್ರತಿಯೊಬ್ಬರ ಮತ ಅತ್ಯಅಮೂಲ್ಯ ಹಾಗಾಗಿ ಯಾರೂ ಕೂಡ ನಿರ್ಲಕ್ಷ್ಯ ಭಾವನೆ ತೋರದೆ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಮೌಲ್ಯವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. 

ಚುನಾವಣಾ ಆಯೊಗದ ನಿರ್ದೇಶನದಂತೆ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗ್ರಾಮ ಪಂಚಾಯತ್ ಸೇರಿದಂತೆ ನಗರ ಮಟ್ಟದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಹೊಂದಿದ ದೇಶ ನಮ್ಮದು. ಇಂತಹ ದೇಶದದಲ್ಲಿ ಜನಿಸಿದ ಪ್ರತಿಯೊಬ್ಬ ನಾಗರಿಕನೂ ಪುಣ್ಯವಂತ. ಉತ್ತಮ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿಭಾಯಿಸಲು  ಮತದಾನ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಮತದಾನ ಹಬ್ಬದಲ್ಲಿ ಸಕ್ರೀಯವಾಗಿ ಭಾಗವಹಿಸಿ, ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದ ಅವರು, ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ  ಯೋಗ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಕಡ್ಡಾಯವಾಗಿ ಮತ ಚಲಾಯಿಸುವಂತೆ  ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ರಚಿಸಿದ ಮತದಾರರ ಜಾಗೃತಿ ಗೀತೆಯನ್ನು ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ ಹಾಡಿದರು. ಎಲ್ಲರೂ ಮತದಾನ ಜಾಗೃತಿ ಕುರಿತು ಘೋಷಣೆಗಳನ್ನು ಕೂಗಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಇದಕ್ಕೂ ಮೊದಲು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಿಂದ ಆರಂಭಗೊಂಡ ಮತದಾನ ಜಾಗೃತಿ ಜಾಥಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಆಶಾದ ಉರ್ ರೆಹಮಾನ ಶರೀಫ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.  

ಜಾಗೃತಿ ಜಾಥಾ ಅಭಿಯಾನವು ದರಬಾರ ಶಿಕ್ಷಣ ಸಂಸ್ಥೆ ಆವರಣದರೆಗೆ ಸಾಗಿತು.

ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ಡಾ. ರತನ್ ಕನ್ವರ್ ಹೆಚ್. ಗಧವಿಚರಣ, ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ ಆರ್ ಮುಂಡರಗಿ, ಉಪಕಾರ್ಯದರ್ಶಿ ಬಿ ಎಸ್ ಮೂಗನೂರಮಠ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರೀತಮ್ ನಸಲಾಪುರ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿಗಳಾದ ರಾಜೇಶ್ ಪವಾರ, ಸಹನಾ ಕುಡಿಗನೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜ್ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಇತರರು. ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.