ಹೂವುಗಳ ರಾಜ ಗುಲಾಬಿ, ಹಣ್ಣುಗಳ ರಾಜ ಮಾವು, ಪ್ರಾಣಿಗಳ ರಾಜ ಸಿಂಹ, ಪಕ್ಷಿಗಳ ರಾಜ ಜುಜುರಾಣ ಹಾಗೂ ಋತುಗಳ ರಾಜ ವಸಂತ ಋತು. ಈ ಋತುವೇ ನಮ್ಮ ದೇಶದ ಹೊಸ ವರ್ಷ. ಹೌದು ಪ್ರಂಪಚಾದ್ಯಂತ ಜನವರಿ 1ರಂದು ಹೊಸ ವರ್ಷಾಚರಣೆ ಮಾಡಿದರೇ ನಮ್ಮ ಭಾರತೀಯರ ಪಾಲಿಗೆ ಯುಗಾದಿಯೇ ಹೊಸ ವರ್ಷಾಚರಣೆ. ಯುಗ ಎಂದರೆ ಅವಧಿ, ಆದಿ ಅಂದರೆ ಆರಂಭ ಹೊಸ ಯುಗದ ಆರಂಭವೇ ಯುಗಾದಿ. ಚಳಿಗಾಲದ ತರುವಾಯ ವಸಂತ ಋತುವಿನ ಪ್ರಾರಂಭವು ಗಿಡ-ಮರಗಳಲ್ಲಿ ಹೊಸತನದ ಚಿಗುರನ್ನು ನೀಡುತ್ತದೆ. ಜೀವನದಲ್ಲಿ ಬರುವಂತಹ ಸಿಹಿ-ಕಹಿ ಘಟನೆಗಳನ್ನು ಸರಿ ಸಮಾನವಾಗಿ ಎದುರಿಸುವ ಸಂದೇಶ ಸಾರುವ ಆಚರಣೆ, ಹಳೆಯ ಕೆಟ್ಟ ಘಟನೆಗಳಿಂದ ಹೊಸತನದಲ್ಲಿ ಹೆಜ್ಜೆಯಿಡುವುದರ ಸಂಕೇತವಾಗಿ ಈ ಹಬ್ಬವನ್ನು ದಿನ ಬೇವು-ಬೆಲ್ಲ ಸೇವಿಸಲಾಗುವುದು.
ಪುರಾಣಗಳ ಪ್ರಕಾರ ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭ ಮಾಡಿದ್ದು ಈ ಯುಗಾದಿ ದಿನ ದಿಂದ ಎಂದು ಹೇಳಲಾಗುತ್ತದೆ. ಆದ್ದರಿಂದ ಯುಗಾದಿಯ ದಿನವನ್ನು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂದು ನಂಬಲಾಗಿದೆ.
ಹೊಸ ವರ್ಷಾಚರಣೆಯ ಒಂದು ಹಬ್ಬ ನಾಮ ಹಲವು: ಯುಗಾದಿ ಹಬ್ಬವನ್ನು ದೇಶಾದ್ಯಂತ ಹೊಸ ವರ್ಷಾಚರಣೆಯ ಸಂಕೇತವಾಗಿ ಆಚರಿಸಿದರೂ ಸಹ ಎಲ್ಲ ಕಡೆ ಆಚರಣೆ ಯುಗಾದಿ ಎಂಬ ನಾಮದ ಬದಲು ವಿಭಿನ್ನ ನಾಮಗಳಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಗುಡಿ ಪಾಡ್ವಾ' ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸಿದರೆ, ಪಂಜಾಬ್‍ನಲ್ಲಿ ‘ಬೈಸಾಖಿ', ತಮಿಳುನಾಡಿನಲ್ಲಿ ‘ಪುತಾಂಡು', ರಾಜಸ್ಥಾನದಲ್ಲಿ ‘ಥಾಪನಾ' ಮತ್ತು ಕರ್ನಾಟಕದಲ್ಲಿ ‘ಯುಗಾದಿ’ ಎಂಬ ಹೆಸರಿನಿಂದ ಈ ಹಬ್ಬವನು ಆಚರಿಸಲಾಗುತ್ತದೆ.
ವಸಂತ ಋತುವಿನಲ್ಲಿ ಗಿಡಮರಗಳ ಮೇಲೆ ಹಸಿರು ಹೊದಿಕೆ, ಹೂವು, ಹಣ್ಣು ಕಾಯಿಗಳ ಸಂಪತ್ತು, ಹೂದೋಟಗಳಲ್ಲಿ ಉದ್ಯಾನವನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬರುವ ವಲಸೆ ಪಕ್ಷಿಗಳ ಕಲರವ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಶೋಬೆಯನ್ನು ಇಮ್ಮಡಿಗೊಳಿಸುವ ಈ ಋತುವನ್ನು “ಋತುಗಳ ರಾಜ”ಎಂದು ಕರೆಯಲಾಗುತ್ತದೆ.
ಕವಿಗಳಾದ ಬಿ.ಎಂ.ಶ್ರೀಕಂಠಯ್ಯ ನವರು ತಮ್ಮ ಕವಿತೆಯೊಂದರಲ್ಲಿ 'ವಸಂತ ಬಂದ ಋತುಗಳ ರಾಜ ತಾ ಬಂದ....' ಉಲ್ಲೇಖಿಸಿದಂತೆ ಕವಿಗಳಿಗೆ ಕವಿತೆ ಬರೆಯಲು ಸ್ಫೂರ್ತಿದಾಯಕವಾದ ಋತು ಈ ವಸಂತ ಋತು ಎನ್ನುವುರಲ್ಲಿ ಎರಡು ಮಾತಿಲ್ಲ.
-ವಿದ್ಯಾಶ್ರೀ ಹೊಸಮನಿ
ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ
ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
