Thursday, September 4, 2025

ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳು ಶಿಕ್ಷಕರು

ಕೈಹಿಡಿದು ಅಕ್ಷರ ತಿದ್ದಿ, ಓದು–ಬರಹ ಕಲಿಸುವುದಷ್ಟೇ ಅಲ್ಲದೇ ಬದುಕಿನ ಕೌಶಲ್ಯಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗಲು ಪ್ರೇರಣೆ ನೀಡುವರು ಶಿಕ್ಷಕರು.

ಮಕ್ಕಳಲ್ಲಿನ ಕೌಶಲ್ಯಗಳನ್ನು ಅರಿತು ಸೂಕ್ತ ಮಾರ್ಗದರ್ಶನ ನೀಡಿ, ಸಾಧನೆಗೆ ಸ್ಪೂರ್ತಿಯಾಗುವರು. ಸಾಧಿಸುವ ಭರವಸೆ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕಿ, ಕನಸನ್ನು ಸಾಕಾರಕ್ಕೆ ಶ್ರಮಿಸುವ ಸೂತ್ರಧಾರ, ಪ್ರತಿಯೊಬ್ಬರ ಬದುಕಿನ ನಂದಾ ದೀಪವಾಗಿರುವವರು ಈ ಶಿಕ್ಷಕರು. 

 ವಿದ್ಯೆಗಿಂತ ದೊಡ್ಡ ದೇವರಿಲ್ಲ, ವಿದ್ಯೆ ಕರುಣಿಸುವ ಶಿಕ್ಷಕರಿಗಿಂತ ದೊಡ್ಡ ಜ್ಞಾನಿಗಳಿಲ್ಲ. ವಿಷಯದ ಸಮಗ್ರ ಮಾಹಿತಿಗಳನ್ನು ಮಕ್ಕಳ ಮನ-ಮಸ್ತಕಕ್ಕೆ ಅರ್ಥವಾಗುವಂತೆ ತಿಳಿಸುವ ಕಲೆಯನ್ನು ಮೈಗೂಡಿಸಿಕೊಂಡು ಕಲಾಕಾರರು ಶಿಕ್ಷಕರು ಎಂದರೇ ತಪ್ಪಾಗಲಾರದು. ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ವೃತ್ತಿ ಕೇವಲ ಒಂದು ವೃತ್ತಿಯಲ್ಲ ಇದು ಒಂದು ಜವಾಬ್ದಾರಿ ಮಕ್ಕಳನ್ನು ಸಮಾಜ, ದೇಶದ ಆಸ್ತಿಯನ್ನಾಗಿ ಮಾರ್ಪಾಡಿಸುವ ಜವಾಬ್ದಾರಿ. 

ಮಾರ್ಗದರ್ಶನವಿಲ್ಲದೇ ಯಾವ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಮುಂದೆ ಗುರಿ ಹಿಂದೆ ಗುರು ಎಂಬ ನಾನುಡಿ ಸರ್ವಕಾಲಕ್ಕೂ ಸತ್ಯ. ಮುಗ್ದ ಮನಸ್ಸಿನ ಚಿನ್ನರು ತಪ್ಪು ಮಾಡಿದ್ದಾಗ ಶಿಕ್ಷಿಸಿ, ಒಳ್ಳೆ ಕಾರ್ಯ ಮಾಡಿದ್ದಾಗ ಪ್ರಶಂಸೆ ಮಾಡಿ, ಅವರಲ್ಲಿನ ಅಂಕು-ಡೊAಕುಗಳನ್ನು ತಿದ್ದಿ, ತೀಡಿ ವಿದ್ಯೆಯನ್ನು ಧಾರೆಯೆರೆಯುವ ಶಿಕ್ಷಕರು ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಾಗಿರುವರು. ಇಂತಹ ಶಿಲ್ಪಿಗಳನ್ನು ಸನ್ಮಾನಿಸುವ ದಿನವೇ ಶಿಕ್ಷಕರ ದಿನಾಚರಣೆ. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.


- ವಿದ್ಯಾಶ್ರೀ ಹೊಸಮನಿ

ಪ್ರಶಿಕ್ಷಣಾರ್ಥಿ, ವಾರ್ತಾ ಮತ್ತು 

ಸಾರ್ವಜನಿಕ ಸಂಪರ್ಕ ಇಲಾಖೆ

ವಿಜಯಪುರ