Thursday, June 26, 2025

ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಎನ್‌ಸಿಡಿಸಿ ನೆರವು ಸದ್ಯದ ಏಕೈಕ ಮಾರ್ಗ : ಸಚಿವ ಶಿವಾನಂದ

 


ಬೆಂಗಳೂರು: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಬೆಂಗಳೂರು: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಎನ್‌ಸಿಡಿಸಿ ನೆರವು ಪಡೆಯುವುದು ಸದ್ಯದ ಏಕೈಕ ಪರಿಹಾರ ಮಾರ್ಗ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುವ ಕುರಿತು ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಬೀದರ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ,  ಪೌರಾಡಳಿತ ಸಚಿವ ರಹೀಂಖಾನ್‌ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕಾರ್ಖಾನೆ ಅಧ್ಯಕ್ಷ ಸುಭಾಷ ಜಿ. ಕಲ್ಲೂರು ಕಾರ್ಖಾನೆ ಪರಿಸ್ಥಿತಿ ಕುರಿತು ಸಭೆಗೆ ವಿವರಿಸಿದರು.

ಸುದೀರ್ಘ ಚರ್ಚೆ ನಂತರ ಮಾತನಾಡಿದ ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವರು, ಈಗಾಗಲೇ ನಷ್ಟದಲ್ಲಿರುವ ಆರು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್‌ಸಿಡಿಸಿ ನೆರವು ಪಡೆಯಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ತೀರ್ಮಾನಿಸಲಾಗಿದೆ. ಈ ಆರು ಕಾರ್ಖಾನೆಗಳ  ಜೊತೆಗೆ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೂ ಎನ್‌ಸಿಡಿಸಿ ನೆರವು ಪಡೆಯುವುದು ಸದ್ಯದಲ್ಲಿ ಇರುವ ಏಕೈಕ ಪರಿಹಾರ ಮಾರ್ಗ. ಹೀಗಾಗಿ ಸಿಎಂ ಭೇಟಿ ಮಾಡಿ ಮನವಿ ಮಾಡುವುದೇ ಸೂಕ್ತವೆಂಬ ಸಚಿವರ ಸಲಹೆಗೆ ಸಭೆ ಸಮ್ಮತಿಸಿತು.


ಈಗ ಕಬ್ಬು ಬೆಳೆಯುವ ಕ್ಷೇತ್ರ ಅಧಿಕವಾಗಿದ್ದು, ಇಳುವರಿ ಕೂಡ ಉತ್ತಮವಾಗಿದೆ. ಕಾರ್ಖಾನೆಗೆ ಕಬ್ಬಿನ ಕೊರತೆ ಬೀಳುವುದಿಲ್ಲ. ಕಾರ್ಖಾನೆ ಪುನರಾರಂಭ ಮಾಡಬೇಕು ಎನ್ನುವುದೇ ಎಲ್ಲರ ಆಶಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ. ಎಲ್‌ಆರ್‌ಒಟಿ ಸೇರಿದಂತೆ ಯಾವುದೇ ಮಾರ್ಗಗಳಿಗಿಂತ ಎನ್‌ಸಿಡಿಸಿ ನೆರವು ಪಡೆಯುವುದು ಸೂಕ್ತ. ಹೀಗಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.


ಕಾರ್ಖಾನೆ ನಷ್ಟದ ಬಗ್ಗೆ ತನಿಖೆ ನಡೆಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಮಾಡೋಣ. ಈ ಸಭೆಯಲ್ಲಿ ಕಾರ್ಖಾನೆ ಪುನರಾರಂಭದ ಬಗ್ಗೆ ಮಾತ್ರ ಚರ್ಚಿಸಿ ನಿರ್ಣಯ ಕೈಗೊಳ್ಳುವುದಕ್ಕೆ ಸೀಮಿತವಾಗೋಣ ಎಂದು ಸಚಿವರು ಹೇಳಿದರು.


ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, 2022ನೇ ಸಾಲಿನಲ್ಲಿ ಕಾರ್ಖಾನೆಯನ್ನು ಎಲ್‌ಆರ್‌ ಒಟಿ ಆಧಾರದ ಮೇಲೆ ಪುನರಾರಂಭ ಮಾಡುವ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿತ್ತು,  ಎರಡು ಬಾರಿ ಟೆಂಡರ್‌ ಕರೆದರೂ ಯಾರೂ ಭಾಗವಹಿಸಲಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನೆರವಿನ ಭರವಸೆ ನೀಡಲಾಗಿತ್ತಾದರೂ ರಾಜಕೀಯ ಕಾರಣಕ್ಕೆ ನೆರವು ಸಿಗಲಿಲ್ಲ ಎಂದರು.


ಕಾರ್ಖಾನೆಯ ನಷ್ಟಕ್ಕೆ ಆಡಳಿತ ಮಂಡಳಿಯ ಲೋಪಗಳೂ ಕಾರಣವಾಗಿವೆ. ನಾರಂಜಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿದ್ದು, ಸಕ್ಕರೆಯನ್ನು ಬ್ಯಾಂಕಿನ ಗಮನಕ್ಕೆ ತಾರದೆ ಮಾರಾಟ ಮಾಡಲಾಯಿತು. ಆದರೆ ಸಾಲ ಮರುಪಾವತಿ ಮಾಡಿಲ್ಲ. ಇಂತಹ ಕ್ರಮಗಳು ಡಿಸಿಸಿ ಬ್ಯಾಂಕುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವಾಗುತ್ತವೆ. ಹೀಗಾಗಿ ನಷ್ಟಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.


ಈಶ್ವರ ಖಂಡ್ರೆ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ರಹೀಂಖಾನ್‌ ಅವರು, ನಷ್ಟಕ್ಕೆ ಏನು ಕಾರಣ ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾರ್ಖಾನೆ ಪುನರಾರಂಭ ಮಾಡುವ ಸಂದರ್ಭದಲ್ಲಿ ಮತ್ತೆ ಅಂಥವರು ಆಡಳಿತಕ್ಕೆ ಬರುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಹೇಳಿದರು. 


ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಅಪೆಕ್ಸ್‌ ಬ್ಯಾಂಕಿನಿಂದ ಏಕಕಾಲಕ್ಕೆ ಸಾಲ ತೀರುವಳಿ ಯೋಜನೆಯಲ್ಲಿ ಅಸಲು ಮಾತ್ರ ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುತ್ತದೆ. ಸಕ್ಕರೆ ಕಾರ್ಖಾನೆ ಸುಮಾರು 173 ಎಕರೆ ಭೂಮಿ ಹೊಂದಿದ್ದು, ಅದರಲ್ಲಿ ಕಾರ್ಖಾನೆಗೆ ಅಗತ್ಯ ಪ್ರಮಾಣದ ಭೂಮಿ ಉಳಿಸಿಕೊಂಡು ಇತರ ಭೂಮಿ ಮಾರಾಟ ಮಾಡಿ ಕಾರ್ಖಾನೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ಸಲಹೆ ನೀಡಿದರು.


ಅಪೆಕ್ಸ್‌ ಬ್ಯಾಂಕ್‌ ಬಡ್ಡಿಯನ್ನು ಮನ್ನಾ ಮಾಡಿದಂತೆ  ಒಟಿಎಸ್‌ ಆಧಾರದ ಮೇಲೆ ಸಾಲ ಮರುಪಾವತಿ ಬಗ್ಗೆ ಡಿಸಿಸಿ ಬ್ಯಾಂಕ್‌ ಕೂಡ ನಿರ್ದಾರ ಮಾಡಬಹುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. 


ಏಕಪಕ್ಷೀಯವಾಗಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ತಂದು ಸಭೆ ಏನು ನಿರ್ಣಯ ಮಾಡುತ್ತದೆ ಎಂಬ ಆಧಾರದ ಮೇಲೆ ನಿರ್ಣಯ ಮಾಡಬೇಕಾಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ ಖಂಡೆ ಹೇಳಿದರು.


ಸಕ್ಕರೆ ಕಾರ್ಖಾನೆ ಸ್ಥಿತಗತಿ ಬಗ್ಗೆ ಮಾಹಿತಿ ನೀಡಿದ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರು, 2021ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಐದು ವರ್ಷದಲ್ಲಿ 2 ಲಕ್ಷ ಟನ್‌ ಕಬ್ಬು ನುರಿಸಲು ಸಾಧ್ಯವಾಗಿಲ್ಲ. ಎರಡು ವರ್ಷದಿಂದ ಕಾರ್ಖಾನೆ ಬಂದ್‌ ಆಗಿದೆ. ಕಾರ್ಖಾನೆಯ 50 ವರ್ಷದ ಅವಧಿಯಲ್ಲಿ ಸುಮಾರು 25 ವರ್ಷ ಖಂಡ್ರೆ ಅವರ ಮನೆತನದವರೇ ಆಡಳಿತ ನಡೆಸಿದ್ದು, ಕಾರ್ಖಾನೆ ಸುಸ್ಥಿತಿಯಲ್ಲಿತ್ತು. ನಂತರದ ವರ್ಷಗಳಲ್ಲಿ ಎರಡು ವರ್ಷಗಳಿಗೊಮ್ಮೆ ಅಧ್ಯಕ್ಷರ ಬದಲಾವಣೆ ಆರಂಭವಾಯಿತು. ಇದೂ ಕೂಡ ಸಮಸ್ಯೆಗೆ ಕಾರಣ ಎಂದು ಹೇಳಿದರು.


ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ ಖಂಡ್ರೆ ಅವರು ಮಾತನಾಡಿ, ಬ್ಯಾಂಕಿನ ಶೇ. 49 ರಷ್ಟು ಅನುತ್ಪಾದಕ ಆಸ್ತಿ ಹೊಂದಿದ್ದು, ‍‍‍ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ನಬಾರ್ಡ್‌ನ ಪುನರ್ಧನ ಕೂಡಾ ಸ್ಥಗಿತಗೊಂಡಿದೆ. ಬ್ಯಾಂಕಿನ ಹಿತಾಸಕ್ತಿಯನ್ನೂ ಕೂಡ ಗಮನಕದಲ್ಲಿಟ್ಟುಕೊಂಡು ತೀರ್ಮಾನ ಮಾಡಬೇಕು ಎಂದು ಹೇಳಿದರು.


ಬೀದರ ಜಿಲ್ಲೆಯ ಶಾಸಕರಾದ ಭೀಮರಾವ ಪಾಟೀಲ, ಎಂ.ಜಿ.ಮೋಳೆ, ಡಾ. ಶೈಲೇಂದ್ರ ಬೆಲ್ದಾಳೆ ಸಹಕಾರ ಸಂಘಗಳ ನಿಬಂಧಕ ಟಿ.ಎಚ್‌. ಕುಮಾರ, ಸಕ್ಕರೆ ಇಲಾಖೆ ಆಯುಕ್ತ ರವಿಕುಮಾರ, ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಪೆಕ್ಸ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ದೇವರಾಜ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.



ಕಾರ್ಖಾನೆ ಹೊಣೆಗಾರಿಕೆ ಎಷ್ಟು?

1. ರಾಜ್ಯ ಸರ್ಕಾರದ ಸಾಲ 40.81 ಕೋಟಿ ರೂ.

2. ಎನ್‌ಸಿಡಿಸಿ/ಎಸ್‌ಡಿಎಫ್‌ ಸಾಲ 3.14 ಕೋಟಿ ರೂ.

3. ಭಾರತೀಯ ಸ್ಟೇಟ್‌ ಬ್ಯಾಂಕ್‌ ಕಲಬುರಗಿ 13.67 ಕೋಟಿ ರೂ.

4. ಅಪೆಕ್ಸ್ ಬ್ಯಾಂಕ್ 110.52 ಕೋಟಿ ರೂ.,

5. ವೈಯಕ್ತಿಕ ಖಾತರಿ ಮೇಲೆ ಸಾಲ 5.35 ಕೋಟಿ ರೂ.

6. ಕಾರ್ಮಿಕರ ವೇತನ ಬಾಕಿ 24.71 ಕೋಟಿ ರೂ.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.