Sunday, October 12, 2025
ಶಾಂತಿ, ಸದ್ಭಾವದ ಭಾವನೆಯನ್ನು ಅರಳಿಸುವುದೇ ಬೌದ್ಧ ಧರ್ಮದ ದಿವ್ಯ ಸಂದೇಶ ಹಾಗೂ ಉದ್ದೇಶವಾಗಿದೆ,
ವಿಜಯಪುರ : ಶಾಂತಿ, ಸದ್ಭಾವದ ಭಾವನೆಯನ್ನು ಅರಳಿಸುವುದೇ ಬೌದ್ಧ ಧರ್ಮದ ದಿವ್ಯ ಸಂದೇಶ ಹಾಗೂ ಉದ್ದೇಶವಾಗಿದೆ, ಈ ಕಾರ್ಯವನ್ನಿರಿಸಿಕೊಂಡು ಇದೇ ದಿ.14 ರಂದು ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ದಿನ ಹಾಗೂ ವರ್ಷಾವಾಸ ಸಮಾರೋಪ ಕಾರ್ಯಕ್ರಮ, ಧಮ್ಮ ರಥಯಾತ್ರೆ ನಡೆಯಲಿದೆ ಎಂದು ಬೌದ್ಧ ವಿಹಾರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಝೆನ್ ಮಾಸ್ಟರ್ ಡಾ. ಶಾಕು ಬೋಧಿಧಮ್ಮ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಭಗವಾನ ಬುದ್ಧರು ಸಾರಾನಾಥದಲ್ಲಿ ಧರ್ಮೋಪದೇಶ ಮಾಡುವ ಮೂಲಕ ಧಮ್ಮಚಕ್ರವನ್ನು ಸ್ಥಾಪಿಸಿದರು, ಸಾಮ್ರಾಟ ಅಶೋಕನು ಸಹ ಧರ್ಮಚಕ್ರ ಸ್ಥಾಪನೆ ಮಾಡಿದರು, ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರು ಲಕ್ಷಾಂತರ ಅನುಯಾಯಿಗಳ ಸಮ್ಮುಖದಲ್ಲಿ ಅಶೋಕ ವಿಜಯದಶಮಿ ದಿವಸ ಬೌದ್ಧ ಧರ್ಮ ಸ್ವೀಕರಿಸಿ ಮೂರನೇಯ ಬಾರಿಗೆ ಧರ್ಮಚಕ್ರ ಸ್ಥಾಪಿಸಿದರು, ಶಾಂತಿ, ಸಹೋದರತೆ, ಸಮಾನತೆಯ ಚಿಂತನೆಗಳು ಎಲ್ಲೆಡೆ ಪಸರಿಸಬೇಕು ಎನ್ನುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದರು.
ವರ್ಷಾವಾಸ ಎಂದರೆ ಮಳೆಗಾಲ ವಾಸ, ಮಳೆಗಾಲದ ಮೂರು ತಿಂಗಳಲ್ಲಿ ಬೌದ್ಧ ಧರ್ಮ ಪ್ರಸಾರಕರು ಧ್ಯಾನ ಹಾಗೂ ಸಾಧನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು, ಅಧ್ಯಾತ್ಮಿಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು, ಆಂತರಿಕ ಶುದ್ಧೀಕರಣಕ್ಕೆ ಇದು ಒಂದು ದಿವ್ಯ ಭಾಗವಾಗಿ ಪರಿಗಣಿತವಾಗಿತ್ತು. ಮಳೆಗಾಲದಲ್ಲಿ ಪ್ರಯಾಣ ಕೈಗೊಂಡರೆ ಅರಿವಿಲ್ಲದೇ ಅನೇಕ ಸಣ್ಣ ಜೀವಿಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಬೌದ್ಧ ಧರ್ಮ ಪ್ರಸಾರಕರು ಈ ಅವಧಿಯಲ್ಲಿ ಪ್ರಯಾಣ ಮಾಡುತ್ತಿರಲಿಲ್ಲ ಎಂದು ವಿವರಿಸಿದರು. ಹೀಗಾಗಿ ವರ್ಷಾವಾಸ ಎನ್ನುವುದು ಬೌದ್ಧ ಧರ್ಮದ ಪ್ರಮುಖ ಆಚರಣೆಯಾಗಿದ್ದು, ಈ ಅವಧಿಯಲ್ಲಿ ಎಲ್ಲರೂ ಆತ್ಮಶುದ್ಧೀಕರಣದ ಪವಿತ್ರ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಧಮ್ಮ ರಥಯಾತ್ರೆ :
ವರ್ಷಾವಾಸ ಕಾರ್ಯಕ್ರಮದ ಪ್ರಯುಕ್ತ ಧಮ್ಮ ರಥಯಾತ್ರೆ ಅತ್ಯಂತ ವೈಭವದಿಂದ ನಡೆಯಲಿದ್ದು, ಜಿಲ್ಲಾ ಪಂಚಾಯತ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ ಭವನದ ಆವರಣದಿಂದ ಬೆಳಿಗ್ಗೆ 9.30 ಗಂಟೆಗೆ ಈ ರಥಯಾತ್ರೆ ಆರಂಭಗೊಳ್ಳಲಿದ್ದು, ಭಗವಾನ ಬುದ್ಧ ಹಾಗೂ ವಿಶ್ವ ರತ್ನ ಡಾ.ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರದ ಬೌದ್ಧ ಧಮ್ಮ ರಥ ಯಾತ್ರೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರಕ್ಕೆ ತಲುಪಲಿದೆ. ನಂತರ ಮಧ್ಯಾಹ್ನ 11.30 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕರಾದ ದಶವಂತ ಗುನ್ನಾಪೂರ, ಸಾಬು ಚಲವಾದಿ, ಸುರೇಶ ಗೊಣಸಗಿ, ಕಾನೂನು ಸಲಹೆಗಾರ ಕೆ.ಎಂ. ಕೂಡಲಗಿ ಸೇರಿದಂತೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು
