ಈ ದಿವಸ ಕನ್ನಡ ದಿನ ಪತ್ರಿಕೆ ವರಿದಿ
ಇನ್ನೂ ತಾಲೂಕು ಆಗಿರದ ಅವಿಭಜಿತ ಜಿಲ್ಲೆಯಾದ ವಿಜಯಪುರದ ಬೀಳಗಿಯಲ್ಲಿ ಜೋಡಿ ಕೊಲೆ ಸಂಭವಿಸಿದ್ದವು.! ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದೊಂದು ಕಲ್ಲು ಎಂಬಂತೆ ಹೇಗಾದರೂ ಮಾಡಿ ಸೋಮನಗೌಡರನ್ನು ಮಖಾಡೆ ಮಲಗಿಸಲೇಬೇಕೆಂದು ಒಂದು ಗುಂಪು ತಯ್ಯಾರಾಗಿತ್ತು.!! ಆ ಕಾಲದ ವಿಜಯಪುರದ ಕ್ರಿಮಿನಲ್ ನ್ಯಾಯವಾದಿ
ಅಂದಾನೆಪ್ಪ ಸಿ ಅಂಗಡಿಯವರುನ್ನೂ ಭೇಟಾಯಾದರೂ ಅವರು ಕೈ ಚೆಲ್ಲಿ ಕೂತುಬಿಟ್ಟರು! ಇಡೀ ಜಿಲ್ಲೆ ಆ ಡಬಲ್ ಮರ್ಡರ್ ಸುದ್ದಿ ಕೇಳಿ ಬೆಚ್ಚಿ ಬಿದ್ದಿತ್ತು..! ಪ್ರಖ್ಯಾತ ಬ್ಯಾರಿಸ್ಟರ್ ವಕೀಲರೊಬ್ಬರನ್ನು ತಂದು ವಾದಿಸಿ ಈ ಕೇಸ್ ನ ಗೆಲ್ಲಿಸಿಕೊಡಲೇಬೇಕೆಂದು ಪ್ರತಿಷ್ಟೆಯಿಂದ ಮತ್ತೊಂದು ಗುಂಪೂ ಸಹ ತಯ್ಯಾರಾಗಿ ವಿಜಯಪುರದ ಹೆಸರಾಂತ ಕ್ರಿಮಿನಲ್ ಲಾಯರ್ ಎ.ಸಿ ಅಂಗಡಿಯವರಿಗೆ ಒತ್ತಾಯ ಮಾಡಿದ್ದರು. ಆಗ ಇಡೀ ವಿಜಯಪುರ ಜಿಲ್ಲೆಯ ವಕೀಲರಿಗೆ ನೆನಪಾದದ್ದು ಭಾರತದ ಹಿರಿಯ ರಾಜನೀತಜ್ಞ , ಭಾರತದ ದಲಿತ ಜನಾಂಗದ ದಾಶ್ಯ ವಿಮೋಚನೆಯ ಹರಿಕಾರ, ಸ್ವ ಸಾಮರ್ಥ್ಯದಿಂದ ಪ್ರವರ್ಧಮಾನಕ್ಕೆ ಬಂದ ಮಹಾನುಭಾವ ಬಾಬಾ ಸಾಹೇಬ್ ಡಾ// ಬಿ.ಆರ್. ಅಂಬೇಡ್ಕರ್..! ವಿಜಯಪುರಕ್ಕೆ 1939 ರ ಸುಮಾರಿಗೆ ಬೀಳಗಿಯ ಜೋಡಿ ಕೊಲೆಯೊಂದರ ಕೇಸಿನ ನಿಮಿತ್ಯ ಸೋಮನಗೌಡ ಪಾಟೀಲರನ್ನು ತಮ್ಮ ಪ್ರಖಾಂಡ ಪಾಂಡಿತ್ಯದಿಂದ ರಕ್ಷಿಸಿ ಕೇಸು ಗೆಲ್ಲಿಸಿಕೊಟ್ಟಿರುವುದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕಾಗುತ್ತದೆ. ಸ್ವತಹ ಎ.ಸಿ ಅಂಗಡಿಯವರೇ ಬಾಂಬೆಗೆ ಹೋಗಿ ಅಂಬೇಡ್ಕರ್ ರನ್ನು ಸಂಪರ್ಕಿಸಿ ವಿನಂತಿ ಮಾಡಿಕೊಂಡು ನೀವು ಬರಲೇಬೇಕು ಅದೆಷ್ಟು ಖರ್ಚಾದರೂ ಸರಿ ಎಂದು ಹೇಳಿ ನಿಗದಿತ ದಿನಾಂಕವನ್ನು ಬರೆದುಕೊಂಡು ವಿಜಯಪುರಕ್ಕೆ ಮರಳುತ್ತಾರೆ.
ಅಂಗಡಿ ವಕೀಲರಿಗೆ ಬಾಬಾ ಸಾಹೇಬರು ಕರಾರು ಮಾಡಿದ್ದು ಒಂದೇ ..ನಾನು ಬರುತ್ತೇನೆ ಆದರೆ ಕೇಸು ಗೆಲ್ಲಿಸಿ ಕೊಟ್ಟ ಮೇಲೆ ನನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎಲ್ಲಾ ಜನರನ್ನು ನೀವು ಒಂದೆಡೆ ಸೇರಿಸಬೇಕು ನಾನು ಮಾತನಾಡಬೇಕಿದೆ ಎಂದು ಕರಾರು ಹಾಕುತ್ತಾರೆ ಇದಕ್ಕೆ ಅಂಗಡಿ ವಕೀಲರು ಯಾಕಾಗಲೊಲ್ಲದು ಸಾಹೇಬರೆ ಎಂದ್ಹೇಳಿ ತುಂಬಾ ಖುಷಿಯಿಂದಲೇ ಹಿಂದಿರುಗುತ್ತಾರೆ.
ವಿಜಯಪುರಕ್ಕೆ ಬಾಬಾ ಸಾಹೇಬ್ ಡಾ// ಬಿ ಆರ್ ಅಂಬೇಡ್ಕರರು ಆಗಮಿಸುತ್ತಾರೆ ಎಂದಾಗ... ಅಲ್ಲಿನ ಜನ ಸಂದಿಗೊಂದಿಗಳಿಂದ ದೂರದ ಊರುಗಳಿಂದ ಭಾವಾಪರವಶರಾಗಿ ಬಂದದ್ದನ್ನು ನೋಡಿದಾಗ ನನಗೆ ದಲಿತ ಕವಿ ಸಿದ್ದಲಿಂಗಯ್ಯನವರ ಕವಿತೆಯೊಂದು ನೆನಪಾಗುತ್ತದೆ.....
"ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನು ಒದ್ದರು
ಲಕ್ಷಾಂತರ ನಾಗರುಗಳು ಹುತ್ತ ಬಿಟ್ಟು ಬಂದಂತೆ ಊರ ತುಂಬ ಹರಿದರು
ಪಾತಾಳಕೆ ಇಳಿದರು ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮಳೆಯ ಮರೆಗಳಲ್ಲಿ ಯಜಮಾನರ ಹಟ್ಟೆಯಲ್ಲಿ ದನಿ ಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು."
ಕವಿತೆಯ ಸಾಲುಗಳನ್ನು ಓದುತ್ತಿದ್ದರೆ ಮೈ ಜುಮ್ ಎನಿಸುತ್ತದೆ.! ಇದು ನಿಜವಾಗಲೂಬಹುದು ಎಂಬುದನ್ನು ಶ್ರೀಮಂತರು,ರಾಜಕಾರಣಿಗಳು,ಶೋಷಕರು,ಆಳುವ ವರ್ಗ ನೆನಪಿನಲ್ಲಿಟ್ಟುಕೊಂಡರೆ ಸಾಕು.!
ದಿನಾಂಕ 12.02.1939 ಬಿಜಾಪುರದಲ್ಲಿ ಹರಿಜನರ ಬೃಹತ್ ಸಮ್ಮೇಳನ ಜರುಗಿದ್ದು ಚರಿತ್ರೆ ನಿರ್ಮಿಸಿದೆ. ಬಾಬಾಸಾಹೇಬರು ಬಂದ ದಿವಸದಿಂದ ಹಿಡಿದು ಮರುದಿನ ಕೋರ್ಟ್ ವ್ಯವಹಾರವು ಮುಗಿಯುವ ಪರ್ಯಂತ ಇಡೀ ಜಿಲ್ಲೆಯಿಂದ ಮೂಲೆ ಮೂಲೆಯಿಂದ ಗ್ರಾಮೀಣ ಪ್ರದೇಶದಿಂದ ಜನರು ಹರಿದು ಬಂದರು. ಹರಿದ ರುಮಾಲು ಹರಿದ ಅಂಗಿ, ದೋತರ
ಉಟ್ಟುಕೊಂಡು, ಪ್ರತಿಯೊಬ್ಬರೂ ಬಗಲಲ್ಲಿ ಬುತ್ತಿಗಂಟು ಕಟ್ಟಿಕೊಂಡು ವಿಜಯಪುರದ ಐಬಿ ಸುತ ಮುತ್ತಲೂ ಊರ ತುಂಬೆಲ್ಲ ಜನ ನೆರೆದಿದ್ದನ್ನು ಕೇಳಿದರೂ ಸಾಕು ಪಾವನವಾದೆವೆಂದಿನಿಸುತ್ತದೆ.
ಮುಂದೆ ಅವರೆಲ್ಲರಿಗೂ ಸಮ್ಮೇಳನದ ಸ್ಥಳಕ್ಕೆ ಹೋಗುವ ನಿರ್ದೇಶನ ನೀಡಲಾಗುತ್ತದೆ ಡಾ// ಬಿ.ಆರ್. ಅಂಬೇಡ್ಕರ್ ಅವರು ವಿಜಯಪುರ ನಗರಕ್ಕೆ ಭೇಟಿ ನೀಡಿದ್ದು ಅವರು ಈ ನೆಲದಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದನ್ನು ಕಂಡು, ಕೇಳಿ, ನೋಡಿದ ಹಿರಿಯರ ಮಾತು ಕೇಳಿ ಬಾಬಾ ಸಾಹೇಬರು ನಡೆದುಹೋದ ಪಾದದ ಕೆಳಗಿನ ಧೂಳನ್ನು ಜನ ಹಣೆಗೆ ಹಚ್ಚಿಕೊಳ್ಳಲು ದಲಿತ ಜನ ಈಗಲೂ ಸಿದ್ಧರಿದ್ದಾರೆ.!ಇದೇ ಮೊದಲು ಇದೇ ಕೊನೆಯ ಭೇಟಿ 1939 ರ ಕಾಲಘಟ್ಟದಲ್ಲಿ ಡಾಕ್ಟರ್ ಅಂಬೇಡ್ಕರ್ ರವರು ವಿಜಯಪುರಕ್ಕೆ ಸಹಜ ರೀತಿಯಲ್ಲಿ ಬಂದು ಹೋದದ್ದೇನಲ್ಲ ಅದೊಂದು ವಿಶೇಷ ಪ್ರಸಂಗವೆ ಎಂದು ಬಣ್ಣಿಸಬೇಕಾಗುತ್ತದೆ.ಆದರೆ ಅದು ಕೈಗೂಡಬೇಕಾದಲ್ಲಿ ಕನಿಷ್ಠ ಪಕ್ಷ 40 ರಿಂದ 50 ವರ್ಷ ಸಮಯ ಹಿಡಿಯಿತು. "ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು, ಬಯಕೆ ಬರುವುದರ ಕಣ್ ಸನ್ನೆ ಕಾಣೋ" ಎಂಬ ಹಲಸಂಗಿ ಮಧುರಚೆನ್ನರ ಮಾತು ನೆನಪಿಗೆ ಬರುತ್ತದೆ. ಬೀಳಗಿ ಸೋಮನಗೌಡರ ಕೇಸಿನ ಸಲುವಾಗಿ ಖ್ಯಾತ ಅಂದಾನೆಪ್ಪ ಅಂಗಡಿಯಂತಹ ವಕೀಲರಂಥವರೆಲ್ಲರೂ ಕೈ ಚೆಲ್ಲಿ ಕೂತು ಅಂಬೇಡ್ಕರ್ ಅವರಿಗೆ ಸಂದರ್ಶಿಸಿದಾಗ
ಬಾಬಾ ಸಾಹೇಬರು ತಮ್ಮ ಕಾರ್ಯಕ್ರಮ ಕುರಿತು ಕ್ಯಾಲೆಂಡರ್ ನೋಡಿ ಫೆಬ್ರವರಿ 12. 1939 ದಿನಾಂಕ ಬರೆದುಕೊಳ್ಳಿ . ನಾನು 11.2.1939 ರಂದು ಟ್ರೈನ್ ಮೂಲಕ ಸಂಜೆ ಅಲ್ಲಿಗೆ ಬರುವೆ ಮರುದಿನ ಪೂರ್ತಿ ಕೋರ್ಟನಲ್ಲಿ ವಾದ ಮಾಡುವುದು ಅಂದೇ ಸಾಯಂಕಾಲ ಹರಿಜನರ ಸಮ್ಮೇಳನದಲ್ಲಿ ಭಾಗವಹಿಸುವುದು.ಅಂದು ಬಾಬಾಸಾಹೇಬರು ನಿಂತು ಭಾಷಣ ಮಾಡಿದ ಸ್ಥಳವೆ.. ಇಂದಿನ ವಿಜಯಪುರದ ಅಂಬೇಡ್ಕರ್ ಮೂರ್ತಿ ಇದ್ದ ಸ್ಥಳ.!!
ಹಾವಿನಾಳದ ಶಿವಪ್ಪ ಕಾಂಬಳೆ ಎಂಬ ಗಟ್ಟಿಗನಿಗೆ ಜನತಾವಾಣಿ ಪತ್ರಿಕೆಯನ್ನು ಅಂಬೇಡ್ಕರರು ತಪ್ಪದೇ ಕಳಿಸುತ್ತಿದ್ದರು ಎಂಬುದು ಉಲ್ಲೇಖನಾರ್ಹ ಒಂದು ಚಿಕ್ಕ ಘಟನೆಯಲ್ಲಾದ ಪರಿವರ್ತನೆ ಅದು ಎಂತಹ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಬಾಬಾ ಸಾಹೇಬರು ವಿಜಯಪುರಕ್ಕೆ ಭೇಟಿ ಕೊಟ್ಟ ಘಟನೆಯೇ ಸಾಕ್ಷಿ.ಡಾ// ಅಂಬೇಡ್ಕರ್ ಅವರಿಗೆ ಈ ಶಿವಪ್ಪ ಕಾಂಬಳೆಯವರ ಮೇಲೆ ಎಂತಹ ವಿಶ್ವಾಸ ಇತ್ತು ಎಂದರೆ ಅಂಬೇಡ್ಕರರು ಮುಂಬೈಯಿಂದ ಬರುವಾಗ ಅರಳಿಮರದ ಸಸಿಯನ್ನು ವಿಜಯಪುರಕ್ಕೆ ತಂದಿದ್ದರಂತೆ ಹೋಗುವಾಗ ಅಲ್ಲಪ್ಪ ಅವಧಿ ಮತ್ತು ಶಿವಪ್ಪ ಕಾಂಬಳೆ ಇವರಿಬ್ಬರನ್ನೇ ಕರೆದು ಅವರು ತಂದ ಸಸಿ ಇವರಿಗೆ ನೀಡಿ ಇದನ್ನು ಬೆಳೆಸಬೇಕೆಂದು ಹೇಳಿದ್ದರಂತೆ ಶಿವಪ್ಪ ಕಾಂಬಳೆ ಒಂದೆಡೆ ಹೀಗೆ ತಮ್ಮ ಅನುಭವ ಹಂಚಿಕೊಂಡಂತೆ ಅಂಬೇಡ್ಕರ್ ಅವರ ಪಿ.ಡಬ್ಲು.ಡಿ ಯ ಐ. ಬಿ ಯಲ್ಲಿ ಇಳಿದುಕೊಂಡಾಗ ಇಡೀ ರಾತ್ರಿ ಒಂದಿನಿತೂ ನಿದ್ದೆ ಮಾಡದೆ ಐಬಿ ಯ ಸುತ್ತಲೂ ಗಸ್ತು ತಿರುಗಿ ಅಂಬೇಡ್ಕರ್ ರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದು ಅದೆಂತಹ ಅಭಿಮಾನ ಎಂಬುದು ಸಾಬೀತಾಗುತ್ತದೆ.ಇನ್ನು ಎರಡನೆಯದಾಗಿ ಬರಡೋಲಕ್ಕೆ ಅವರನ್ನು ಕರೆ ತಂದಾಗ ಬರಡೋಲದ ಹಳ್ಳ ತುಂಬಿ ಬಂದು ಪ್ರವಾಹ ಉಂಟಾಗಿರುತ್ತದೆ ಅಂಬೇಡ್ಕರ್ ರನ್ನು ಸ್ವತಃ ತಮ್ಮ ಹೆಗಲ ಮೇಲೆ ಕೂಡಿಸಿಕೊಂಡು ಎದೆ ಮಟ್ಟಕ್ಕೆ ಹರಿಯುವ ಹಳ್ಳದ ನೀರಿನಲ್ಲೂ ಬಾಬಾ ಸಾಹೇಬರನ್ನು ಆ ಕಡೆಗೆ ದಾಟಿಸುತ್ತಾರೆಂಬ ಈ ಎರಡು ಪ್ರಸಂಗಗಳು ನಿಜವಾಗಲೂ ರೋಮಾಂಚನಕಾರಿ.
ಅಂಬೇಡ್ಕರ್ ಅವರು ಒಂದೊಮ್ಮೆ ಇಂಡಿಗೂ ಬಂದು ಹರಿಜನರ ಕಾಲನೆಯ ಸಮೀಪದಲ್ಲಿ ನಿಂತು ಭಾಷಣ ಮಾಡಿದ್ದಾರೆಂದು ಕೆಲವರು ತಮ್ಮ ಅನುಭವವನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ.ಮುಂದೆ ಹಾವಿನಾಳಕ್ಕೆ ಹೋಗಬೇಕಾದರೂ ಕೂಡ ಅದು ಸಾಧ್ಯವಾಗುವುದಿಲ್ಲ ಏಕೆಂದರೆ ಗುಜರಾತಿಗೆ ಅರ್ಜಂಟಾಗಿ ಹೋಗಬೇಕಾದ ಪ್ರಸಂಗ ಉಂಟಾಗಿ ರೇವಪ್ಪ ಕಾಂಬಳೆ ಇವರ ಜೊತೆ ಮಾತಾಡಿ ಇಂಡಿಗೆ ಹೋಗಿ ರೈಲ್ವೆ ಮೂಲಕ ಅಂದೆ ಅಂದರೆ 13.2. 1939 ರಂದು ಮುಂಬೈಗೆ ಪ್ರಯಾಣ ಬೆಳೆಸುತ್ತಾರೆ.ಅಂಬೇಡ್ಕರ್ ಅವರು ಬಂದು ಹೋದ ಸಲವಾಗಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂಬೇಡ್ಕರ್ ರನ್ನು ಹಾವಿನಾಳಕ್ಕೆ ಕರೆದುಕೊಂಡು ಹೋಗಲಾಗಲಿಲ್ಲವಲ್ಲ ಎಂಬ ನೋವು ಶಿವಪ್ಪ ಕಾಂಬಳೆ ಅವರಿಗೆ ಉಂಟಾಗುತ್ತದೆ ಮುಂದೆ ಬಾಬಾ ಸಾಹೇಬರ ಹಿರಿಯ ಮಗ ಯಶವಂತರನ್ನು ಅಂಬೇಡ್ಕರ್ ಮಹಾಪರಿನಿರ್ವಾಣವಾದ ಎರಡು ವರ್ಷಗಳ ನಂತರ ಅಂದರೆ 1958 ರಲ್ಲಿ ಅವರನ್ನು ಕರೆತಂದು ತಮ್ಮ ಆಶಯ ಪೂರೈಸಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ.
ಇದೇ ಸಂದರ್ಭದಲ್ಲಿ ಅಂಬೇಡ್ಕರರು ಬೆಳಗಾವಿಯ ಕೆ. ಎಲ್. ಇ ಸೊಸೈಟಿಗೆ ಆಗಮಿಸಿದ ದಾಖಲೆಗಳಿವೆ , ಮುಂದೆ ದಿನಾಂಕ 8.8.1954 ರಂದು ಅಂಬೇಡ್ಕರರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪ್ರಬಲವಾಗಿದ್ದ ಕೆ. ಜಿ.ಎಫ್. ಗೆ ಹೋದರು . ಅಲ್ಲಿ ಜನ ಅವರ ಕಾಲಿಗೆ ಬೀಳಲು ಸಾಲುಗಟ್ಟಿ ನಿಂತಿದ್ದರು.! ಗಟ್ಟಿಯಾಗಿ ಕಾಲು ಹಿಡಿದುಕೊಂಡರೂ ಕೂಡ. ಅದನ್ನು ಸಹಿಸದ ಅಂಬೇಡ್ಕರ್ ಅವರು ಯಾವ ಮೂಢನಂಬಿಕೆಯ ವಿರುದ್ಧ ನಾನು ಜೀವನಪೂರ್ತಿ ಮಾತನಾಡಿಕೊಂಡು ಬಂದಿದ್ದೇನೆಯೋ ನೀವು ಅದನ್ನೇ ಮುಂದುವರಿಸುತ್ತಿದ್ದೀರಿ ಎಂಬ ಸಾತ್ವಿಕ ಕೋಪದೊಂದಿಗೆ ಕಾಲಿಗೆ ಬಿದ್ದವರನ್ನು ತರಾಟೆಗೆ ತೆಗೆದುಕೊಂಡು ಬೇಸರಗೊಂಡ ಬಾಬಾಸಾಹೇಬರು ಅಲ್ಲಿಂದ ಹೊರಟು ಬೆಂಗಳೂರಿಗೆ ಬಂದ ದಾಖಲೆಗಳು ಹೇಳುತ್ತವೆ.
ಲೇಖಕರು; ಪ್ರೊ.ಬಸವರಾಜ ಜಾಲವಾದಿ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
