Monday, September 1, 2025

ಮನುಷ್ಯ ಜಾತಿ ತಾನೊಂದೇ ವಲಂ ಎಂದು ಹೇಳಿ ಜಾತ್ಯತೀತ ತತ್ವವನ್ನು ಸಾರಿದ ಪಂಪ ಮತ್ತು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯದ ಉನ್ನತ ಪರಂಪರೆಯ ಕುರುಹುಗಳು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ

ವಿಜಯಪುರ: ಮನುಷ್ಯ ಜಾತಿ ತಾನೊಂದೇ ವಲಂ ಎಂದು ಹೇಳಿ ಜಾತ್ಯತೀತ ತತ್ವವನ್ನು ಸಾರಿದ ಪಂಪ ಮತ್ತು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯದ ಉನ್ನತ ಪರಂಪರೆಯ ಕುರುಹುಗಳು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ ಅವರು ಹೇಳಿದರು.

ನಗರದ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಪರಂಪರೆ - ಅವಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತದ ಯಾವುದೇ ಭಾಷೆಗೆ ಬರದಷ್ಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬಂದಿವೆ. ಇದಕ್ಕೆ ಮುಕುಟಪ್ರಾಯವೆಂಬAತೆ ಇತ್ತೀಚೆಗೆ ಭಾನು ಮುಸ್ತಾಕ್ ಅವರ ‘ಹೃದಯದ ಹಣತೆ’ ಕೃತಿಗೆ ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಪರಂಪರೆಯ ಶ್ರೀಮಂತಿಕೆಯ ದ್ಯೋತಕವಾಗಿದೆ ಎಂದು ವಿಶ್ಲೇಷಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನವು ಜನತೆಗೆ ನೆಮ್ಮದಿಯ ಬದುಕನ್ನು ನೀಡಿದ್ದು, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ ಎಂದ ಅವರು, ಭಾರತ ಸಂವಿಧಾನ ಈ ದೇಶದ ಹೆಣ್ಣು ಮಕ್ಕಳು ವಿಶ್ವವಿದ್ಯಾಲಯದ ಕುಲಪತಿಗಳು, ರಾಜ್ಯದ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಆಗಬಹುದಾದ ಅವಕಾಶಗಳನ್ನು ಸೃಷ್ಟಿಸಿದ್ದು ಈ ಅವಕಾಶಗಳನ್ನು ಈಗಾಗಲೇ ಹಲವು ಮಹಿಳೆಯರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆ ಮೂಲಕ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದರು.

ಪ್ರಾಚೀನ ಕಾಲದಲ್ಲಿಯೇ ಕನ್ನಡ ನಾಡಿನ ಜನರು ಯೋಧರು, ಕವಿಗಳು, ಒಳ್ಳೆಯ ಪ್ರಭುಗಳು, ಸುಂದರರು, ವಿನಯವಂತರು, ಗುಣವಂತರು ಅಭಿಮಾನಿಗಳು, ಉಗ್ರ ಪ್ರತಾಪಿಗಳು, ಗಂಭೀರ ಸ್ವಭಾವದವರು, ವಿವೇಕವಂತರು ಆಗಿದ್ದರು ಎಂಬುದಕ್ಕೆ ಕನ್ನಡ ಸಾಹಿತ್ಯದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ ಎಂದು ಡಾ.ಮುಕುಂದರಾಜ್ ಹೇಳಿದರು.  

ಪತ್ರಕರ್ತ ಡಾ.ಗಣೇಶ್ ಅಮೀನಗಡ ಮಾತನಾಡಿ, ಹೆಣ್ಣು ಮಕ್ಕಳು ಇನ್‌ಸ್ಟಾಗ್ರಾಂ ಪ್ರೀತಿಗೆ ಮರುಳಾಗದೆ ಎಚ್ಚರಿಕೆಯಿಂದ ಬದುಕಬೇಕು. ಸಾಮಾಜಿಕ ಜಾಲತಾಣದ ದಾಸರಾಗದೆ ಬುದ್ಧಿವಂತಿಕೆಯಿAದ ಮುಂದುವರಿಯಬೇಕು. ಉನ್ನತ ಹುದ್ದೆಗಳನ್ನು ಪಡೆಯಲು ಶಿಸ್ತುಬದ್ಧ ಅಧ್ಯಯನ ಅತ್ಯಾವಶ್ಯಕವೆಂದು ತಿಳಿಸಿದರು. 

 ಕುಲಸಚಿವ  ಶಂಕರಗೌಡ ಎಸ್ ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡದೆ, ಪುಸ್ತಕಗಳನ್ನು ಹಿಡಿದು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಅಧ್ಯಯನವೇ ಭವಿಷ್ಯ ಕಟ್ಟುವ ನಿಜವಾದ ಬಂಡವಾಳ. ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳ ಯಶಸ್ಸಿಗೆ ದಾರಿ ದೀಪವಾಗಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ,  ಹೆಣ್ಣು ಮಕ್ಕಳು ಮೊಬೈಲ್ ಪ್ರೇಮಪ್ರಕರಣದಿಂದ ಬಲಿಪಶುವಾಗುತ್ತಿರುವುದು ಚಿಂತಾಜನಕವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮದ ಅತಿ ಹೆಚ್ಚು ಬಳಕೆಯಿಂದ ದೂರವಿದ್ದು, ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳ ಬಗ್ಗೆ ಜಾಗರೂಕತೆಯೊಂದಿಗೆ ಹೆಣ್ಣು ಮಕ್ಕಳು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು. 

ಕಾರ್ಯಕ್ರಮದಲ್ಲಿ ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿಗಳಾದ ಪ್ರೊ.ಸಕ್ಪಾಲ್ ಹೂವಣ್ಣ, ಸಂಯೋಜಕರಾದ ಡಾ.ಸೌಭಾಗ್ಯ, ಉಪಸ್ಥಿತರಿದ್ದರು. ಸ್ನಾತಕ ವಿದ್ಯಾರ್ಥಿನಿಯರಾದ ಗೌತಮಿ ನಾಟೇಕರ್, ಶೃತಿ ಕುಲಕರ್ಣಿ, ಅನಿತಾ ಪಾಟೀಲ್ ಪ್ರಾರ್ಥಿಸಿದರು. ಪ್ರೊ.ಎಂ.ನಾಗರಾಜು ಸ್ವಾಗತಿಸಿದರು.  ಡಾ. ರೂಪಾ ಇಂಗಳೆ ಅತಿಥಿಗಳನ್ನು ಪರಿಚಯಿಸಿದರು. ಡಾ.ಚಲುವರಾಜು ವಂದಿಸಿದರು. ಡಾ.ಚೇತನಾ ಸಂಕೊAಡ ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.