ವಿಜಯಪುರ : ರಾಜ್ಯದ ಇತಿಹಾದಲ್ಲೇ ಮೊದಲ ಬಾರಿಗೆ ಇಡೀ ರಾಜ್ಯಾದ್ಯಂತ ಏಕ ಕಾಲಕ್ಕೆ ಜನತಾ ದರ್ಶನಕ್ಕೆ ನಾಡಿಗೆ ನಾಡೇ ಸಾಕ್ಷಿಯಾಗಿದೆ.ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಸದಾಶಯದೊಂದಿಗೆ ಜಿಲ್ಲಾಮಟ್ಟದಲ್ಲಿ ಜನತಾದರ್ಶನ ನಡೆಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಜಯಪುರ ನಗರದಲ್ಲಿ ಸೆ. 25 ರಂದು ನಗರ ಕಂದಗಲ್ ಶ್ರೀ ಹನಮಂತರಾಯ ರಂಗಮಂದಿರ ವೇದಿಕೆಯಲ್ಲಿ ಹಮ್ಮಿಕೊಂಡ ಜನತಾ ದರ್ಶನ ಕಾರ್ಯಕ್ರಮಕ್ಕೆ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ್ ಕಟಕದೊಂಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಎಸ್ಪಿ ಋಷಿಕೇಶ ಸೋನಾವನೆ ಅವರು ಚಾಲನೆ ನೀಡಿ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನ ಸ್ವೀಕರಿಸಿ ತಾಂತ್ರಿಕ ಹಾಗೂ ಕಾನೂನಾತ್ಮಕ ಅಡಚಣೆಗಳಿಲ್ಲದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗಿದ್ದು, ಗಂಭೀರ ಸ್ವರೂಪದ ಅಡಚಣೆಗಳಿರುವ ಅರ್ಜಿಗಳನ್ನು ಸ್ವೀಕರಿಸಿ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ (ಐಪಿಜಿಆರ್‍ಎಸ್) ತಂತ್ರಾಂಶದಲ್ಲಿ ದಾಖಲಿಸಿ, ಸದರಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಕಾಲಮಿತಿಯಲ್ಲಿ ಇತ್ಯರ್ಥಕ್ಕೆ ಸೂಚನೆ ನೀಡಲಾಯಿತು.
ಸೆ. 25 ರಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 17 ಕೌಂಟರ್‍ಗಳನ್ನು ಸ್ಥಾಪಿಸಲಾಗಿದ್ದು, 651 ಅರ್ಜಿಗಳು ಸ್ವೀಕೃತಗೊಂಡಿವೆ.
ಅನುಕ್ರಮವಾಗಿ ಕಂದಾಯ ಇಲಾಖೆ 193, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ 55, ಪೊಲೀಸ್ ಇಲಾಖೆ 31, ಪುನರ್ ವಸತಿ ಮತ್ತು ಪುನರ್ ನಿರ್ಮಾಣ (ಯಕೆಪಿ) 27, ನಗರಾಭಿವೃದ್ಧಿ ಮತ್ತು ಮಹಾನಗರ ಪಾಲಿಕೆ 113, ಹೆಸ್ಕಾಂ 35, ಕೃಷಿ ಇಲಾಖೆ 07, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ 07, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 21, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 04, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 54, ಅರಣ್ಯ ಇಲಾಖೆ 03, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 13, ಸಹಕಾರಿ ಸಂಘಗಳ ಇಲಾಖೆ 12, ನೋಂದಣಿ ಮತ್ತು ಮುದ್ರಾಂಕ ಇಲಾಖೆ 33, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 35 ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 08 ಅರ್ಜಿಗಳು ಸೇರಿದಂತೆ ಒಟ್ಟು 651 ಅರ್ಜಿಗಳು ಸ್ವೀಕೃತಗೊಂಡಿವೆ.
ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾದ ಜನತಾ ದರ್ಶನ: ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಿದ ಮರಣ ಪತ್ರಾನುಸಾರ ಹೆಸರು ದಾಖಲು, ಜಮೀನಿನ ಸರ್ವೇ, ತಂದೆಯ ವಿಲ್ಲಾ ಪ್ರಕಾರ ದಾಖಲಾತಿ, ವೃದ್ಧಾಪ್ಯ ವೇತನ ಸೌಲಭ್ಯ, ಮಾಜಿ ಯೋಧರಿಗೆ ನಿವೇಶನ, ನ್ಯಾಯಬೆಲೆ ಅಂಗಡಿ ಮಂಜೂರಾತಿ, ಗೃಹಲಕ್ಷ್ಮೀ ಯೋಜನೆ ಸೌಲಭ್ಯ, ರಸ್ತೆ ನಿರ್ಮಾಣ, ಕಟ್ಟಡ ಕಾರ್ಮಿಕರಿಗೆ ಪಿಂಚಣಿ, ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಅವರ ಮನದಾಳದ ಮಾತುಗಳ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಅದಕ್ಕೆ ಪ್ರತಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು.
ಸಾರ್ವಜನಿಕರ ನೂರಾರು ಪ್ರಶ್ನೆಗಳ ಸರಮಾಲೆಗೆ ಪ್ರತ್ಯುತ್ತರ ನೀಡಿದ ಜನತಾ ದರ್ಶನ ವೇದಿಕೆ.
ಅದೆಷ್ಟೋ ಕಷ್ಟ ನೋವುಗಳನ್ನು ಹೊತ್ತು ಬಂದ ಮನಸ್ಸುಗಳಿಗೆ ಎಲ್ಲ ಅಧಿಕಾರಿಗಳ ಸಹಕಾರ, ಸ್ಪಂದನೆ, ಪರಿಹಾರ ದೊರಕಿಸುವ ಹಣಾಹಣಿಯ ಮಹತ್ವಪೂರ್ಣ ಕಾರ್ಯ ನಿಜಕ್ಕೂ ಶ್ಲಾಘನೀಯ, ಸ್ಫೂರ್ತಿದಾಯಕವಾಗಿತ್ತು.