Monday, November 3, 2025

ಸಿದ್ಧರಾಮೇಶ್ವರ ಸ್ಮರಣೆಗಾಗಿ ಪ್ರತಿವರ್ಷ ಒಂದು ಕೆರೆ ನಿರ್ಮಾಣ : ಸಚಿವ ಶಿವಾನಂದ ಪಾಟೀಲ

 

ಚಿಕ್ಕಬಾಸೂರು : 12ನೇ ಶತಮಾನದ ಸಿದ್ಧರಾಮೇಶ್ವರ ಶರಣ ಸಾಮಾಜಿಕ ಕಾಳಜಿಯ ಪರಿಣಾಮ ಜೀವಜಲ ಸಂರಕ್ಷಣೆಯಿಂದಾಗಿ ನಾಡು ಜೀವಜಲ ಕಂಡಿದೆ. ಹೀಗಾಗಿ ಸಿದ್ಧರಾಮೇಶ್ವರ ಸ್ಮರಣೆಗಾಗಿ ರಾಜ್ಯದಲ್ಲಿ ಪ್ರತಿವರ್ಷ ಒಂದೊಂದು ಕೆರೆ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಹಾವೇರಿ ಜಿಲ್ಲಾ ಉಸ್ತುವಾರಿ ಹೊಂದಿರುವ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.

ಸೋಮವಾರ ನಗರದ ಚಿಕ್ಕಬಾಸೂರು ಗ್ರಾಮದಲ್ಲಿ ಶ್ರೀಗುರು ಸಿದ್ಧರಾಮೇಶ್ವರ ದೇವಸ್ಥಾನ ನಿರ್ಮಾಣ ಹಾಗೂ ಸರ್ಕಾರಿ ಪದವಿ ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿದ್ಧರಾಮೇಶ್ವರ ಶರಣರು ನಾಡಿನಾದ್ಯಂದ ಜಲ ಸಂರಕ್ಷಣೆಗಾಗಿ ಕೆರೆ, ಭಾವಿಗಳನ್ನು ನಿರ್ಮಿಸಿ ಸಮಾಜಕ್ಕೆ ಅನುಕರಣೀಯ ಸೇವಾ ಮಾರ್ಗ ಹಾಕಿ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಬಸವೇಶ್ವರರ ನೇತೃತ್ವದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಜಾತಿ, ಮತ‌, ಪಂಥಗಳಿಲ್ಲದೇ, ಲಿಂಗಭೇದ ಇಲ್ಲದೇ ಸೌಹಾರ್ದಯುತ ಸಮಾಜ ಕಟ್ಟಲಾಗಿತ್ತು. ಸಿದ್ಧರಾಮೇಶ್ವರರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸುತ್ತಿರುವ ಚಿಕ್ಕಬಾಸೂರು ಗ್ರಾಮಸ್ಥರು ಶರಣರ ಆಶಯದಂತೆ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಿದ್ಧರಾಮೇಶ್ವರ ಶರಣರ ಸ್ಮರಣೆಗಾಗಿ ಚಿಕ್ಕಬಾಸೂರು ಗ್ರಾಮಸ್ಥರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿದ್ದೀರಿ. ರಾಜ್ಯದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದ್ದು, ಜನರು ಕೂಡ ದೇಣಿಗೆ ಸಂಗ್ರಹಿಸಿ ದೇವಸ್ಥಾನ ಕಟ್ಟುತ್ತಿದ್ದಾರೆ ಎಂದರು.

ಈ ಹಿಂದೆ ಹಲವು ಬಾರಿ ಮಳೆ ಇಲ್ಲದೇ ಭೀಕರ ಬರ ಕಂಡಿರುವ  ನಾವು, ಇದೀಗ ಅತಿವೃಷ್ಟಿ ಕಾಡಿದೆ. ಪ್ರಸಕ್ತ ವರ್ಷ ನಿರೀಕ್ಷೆ ಮೀರಿ ಮಳೆಯಾಗಿದ್ದು, ಅಂತರ್ಜಲದ ಮಟ್ಟ ಮೇಲೇರಿದೆ. ರಾಜ್ಯದ ಎಲ್ಲ ಜಲಾಶಯಗಳು ಸಂಪೂರ್ಣ ಭರ್ತಿ ಆಗಿವೆ. ಆದರೆ ರೈತರು ಹಸಿಬರದಿಂದ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈಗಾಗಲೇ ನಮ್ಮ ಸರ್ಕಾರ ಬೆಳೆ ಹಾನಿ ಪರಿಹಾರ ನೀಡುತ್ತಿದ್ದು, ಶೀಘ್ರವೇ ಹಾವೇರಿ ಜಿಲ್ಲೆಯಲ್ಲೂ ಬೆಳೆಹಾನಿ ಪರಿಹಾರ ವಿತರಿಸುವುದಾಗಿ ಹೇಳಿದರು.

ಇದಲ್ಲದೇ ಚಿಕ್ಕಬಾಸೂರು ಗ್ರಾಮದಲ್ಲಿ ಸರಕಾರಿ ಪದವಿ ಕಾಲೇಜಿನಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸ್ಥಳೀಯ ಶಾಸಕರಾದ ಬಸವರಾಜ ಶಿವಣ್ಣವರ ಪರಿಶ್ರಮದಿಂದ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಚಿಕ್ಕಬಾಸೂರು ಗ್ರಾಮದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಕ್ಕೆ ಮನವಿ ಮಾಡಿದ್ದು, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಬ್ಯಾಡಗಿ ಶಾಸಕರಾದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ಶಿವಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಕೇರಿ, ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ,  ಸೋಮಶೇಖರ ಬಣಕಾರ, ಜಗದೀಶ್ವರಯ್ಯ ಮಠದ,  ಷಣ್ಮುಖಪ್ಪ ತಲ್ಲೂರು, ಜಯಣ್ಣ ಮಲ್ಲಿಗಾರ, ಸುರೇಶಗೌಡ ಪಾಟೀಲ ದಿಡಗೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು