ಮಾನವನ ಕ್ರೂರತೇ ...
ಒಳ ಸಂಚಿನ ಆಟ ..
ವ್ಯಾಘ್ರತೆಯ ಅಟ್ಟಹಾಸ...
ಭೂಮಿಗೆ ಬರುವ ಮುನ್ನವೇ ಅರಿವಾಯಿತೇ ಕಂದಾ...
ನಾ ಕನಸುಗಳ ಮಾಲೆಯ ಹೆಣೆದಿದ್ದೆ ..
ನಿನ್ನ ಮುದ್ದಾಡಬೇಕು..
ನಿನ್ನೊಡನೆ ಕುಣಿದಾಡಬೇಕು..
ನೀ ಮಾಡೋ ತುಂಟಾಟದಲಿ ತಾಯಿತನದ ಖುಷಿಯ ಕಾಣಬೇಕು..
ನನ್ನೆಲ್ಲಾ ಕನಸುಗಳು ಕಮರಿಹೋಯಿತು..
ನನ್ನುಸಿರ ಜೊತೆಯಲಿ ನಿನ್ನುಸಿರ ಕೊನೆಯಾಗಿಸಿದ ಈ ಕ್ರೂರಿ ಮಾನವ..
ಅಂದು...
ನಮ್ಮ ಬಿಡಾರಕೆ ಕಣ್ಣು ಹಾಕಿದ..
ದಂತದ ಆಸೆಗಾಗಿ ಬಳಗದವರ ಉಸಿರ ನಿಲ್ಲಿಸಿದ..
ಹಸಿವ ತಣಿಸಲು ವನದೇವತೆ ನೀಡಿದ್ದ ತಟ್ಟೆಗೆ ಕಣ್ಣ ಹಾಕಿದ..
ಇಂದು...
ಹಸಿವಾ ತಣಿಸಲು ನಾ ಅಲೆದಾಡಿ ಊರ ಸೇರಿದೆ..
ದೂರದಲಿ ಕಂಡೆನಾ ಒಂದು ಹಣ್ಣಾ, ಅದ ಸವಿದು ನಿನ್ನ ಹಡೆಯಬೇಕೆಂಬ ಹಂಬಲದಲಿ...
ನಾ ಅರಿಯದೇ ಹೋದೆ ಪಾಪಿ ಮಾನವನ ಕುತಂತ್ರ, ಬಲಿಯಾದಿ ನೀ ಅದರಲಿ..
ಹಣ್ಣಲಿ ಅಡಗಿಸಿಟ್ಟ ಸಂಚಲಿ...
ಬೆಂದು ಹೋದೆಯಾ ನೀ ನನ್ನ ಗರ್ಭದಲಿ..
ನಿನ್ನ ಮೊಗವ ಕಾಣದೆ.. ನಾ ಉಸಿರ ಚೆಲ್ಲಿ..
ಜಗವ ಕಾಣದ ಪುಟ್ಟ ಕಂದನ ಜೋಪಾನ ಮಾಡೋ ನನ್ನ ಕನಸು ಬರಿದಾಯಿತು..
ಹಸಿವ ತಣಿಸುವ ಭರದಲಿ ಗರ್ಭದಲಿಯೇ ನನ್ನೀ ಕೂಸು ಕಮರಿಹೋಯಿತು...
ತಾಯ್ತನದ ಸುಖವಾ ಸವಿಯುವ ಮೊದಲೇ ಕಂದನಾ ಕಿತ್ತುಕೊಂಡ ಈ ಪಾಪಿಗಳ...
ಕ್ಷಮಿಸಿ ಬಿಡು ಓ ದೇವಾ......
ಕಂದಾ..
ನಿನ್ನ ಉಸಿರು ನನ್ನ ಒಡಲಲ್ಲೇ ಕರಗಿತು.. ಈ ಪಾಪಿ ಜಗವ ನೋಡದೇ...
ಮತ್ತೆ ಹುಟ್ಟಿ ಬಾ ನನ್ನ ಕಂದಾ.. ನಿನ್ನ ಅಮ್ಮನ ಆಸೆಯ ತೀರಿಸಲು...
ಮಾನವ ಜನುಮವೊಂದ ಕರುಣಿಸದಿರು ಓ ದೇವಾ...
ಸಮಿತ ಶೆಟ್ಟಿ ಸಿದ್ಧಕಟ್ಟೆ ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ