ಈ ದಿವಸ ವಾರ್ತೆ
ವಿಜಯಪುರ : ಕನ್ನಡನೆಟ್ ಡಾಟ್ ಕಾಂ, ಬಹುತ್ವ ಭಾರತ ಪತ್ರಿಕೆ ಹಾಗೂ ಬಹುತ್ವ ಭಾರತ ಬಳಗ ಕೊಪ್ಪಳ ಇವರಿಂದ ನೀಡಲಾಗುವ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಬಹುಸಂಸ್ಕೃತಿಯ ಭಾರತದ ಬಹುತ್ವವನ್ನು ಎತ್ತಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಕ್ಷೇತ್ರಗಳ ಮಹನೀಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪತ್ರಿಕೋದ್ಯಮ, ಹೋರಾಟ ಮತ್ತು ಸಂಘಟನೆಯ ಗಣನೀಯ ಸೇವೆಗಾಗಿ ಬೆಂಗಳೂರಿನ ಹಿರಿಯ ಪತ್ರಕರ್ತರಾದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ, ಮಾನವ ಹಕ್ಕುಗಳ ಹೋರಾಟಗಾರರು, ಚಿಂತಕರಾದ ದಾವಣಗೆರೆಯ ಹಿರಿಯ ವಕೀಲರಾದ ಅನೀಸ್ ಪಾಷಾ, ಧಾರವಾಡದ ಲಡಾಯಿ ಪ್ರಕಾಶನದ ಮೂಲಕ ಇಡೀ ನಾಡಿನಾದ್ಯಂತ ಹೆಸರಾಗಿರುವ ಜನಪರ ಹೋರಾಟಗಾರರು,ಚಿಂತಕರಾದ ಬಸವರಾಜ್ ಸೂಳಿಬಾವಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಬರಹಗಾರ್ತಿಯಾಗಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ದು.ಸರಸ್ವತಿ ಬೆಂಗಳೂರ, ಶಿಕ್ಷಣ ಸಂಸ್ಥೆಗಳ ಮೂಲಕ ಇಡೀ ನಾಡಿನಾದ್ಯಂತ ಮನೆ ಮಾತಾಗಿರುವ, ಸಮಾಜಮುಖಿ ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು ಗಂಗಾವತಿ ಹಾಗೂ ದಲಿತ ಚಿಂತಕರು,ಬರಹಗಾರರು,ಹಿರಿಯ ಪತ್ರಕರ್ತರಾದ ವಿಜಯಪುರದ ಅನಿಲ್ ಹೊಸಮನಿಯವರಿಗೆ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಡಿ.೨೪ರಂದು ಸಾಹಿತ್ಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.