Monday, July 28, 2025

ಭೀಮಶಿ ಅಗಲಿಕೆಯಿಂದ ರೈತಪರ ಧ್ವನಿ ಕ್ಷೀಣ : ಶಿವಾನಂದ




ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಚಪ್ಪಲಿ ಹಾಕದೇ ಬದ್ಧತೆಯ  ಹೋರಾಟ ನಡೆಸಿದ್ದ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಅವರಿಲ್ಲದ ವಿಜಯಪುರ ಜಿಲ್ಲೆಯಲ್ಲಿ ರೈತ-ಕಾರ್ಮಿಕ ಧ್ವನಿ ಕ್ಷೀಣಿಸಿದಂತಾಗಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ಭೀಮಶಿ ಕಲಾದಗಿ ಎಂಬಂತಾಗಿದ್ದು ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

ಸೋಮವಾರ ಇಂಡಿ ತಾಲೂಕಿನ ಹಂಜಗಿ ಗ್ರಾಮದ ತೋಟದ ವಸ್ತಿಯಲ್ಲಿ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಪುಣ್ಯಸ್ಮರಣೆ ಸಂದರ್ಭದಲ್ಲಿ ಭೀಮಶಿ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು, ನನ್ನೊಂದಿಗೆ ಸುದೀರ್ಘ 35 ವರ್ಷಗಳ ಒಡನಾಡ ಹೊಂದಿದ್ದ ಭೀಮಶಿ ಕಲಾದಗಿ ಅವರು, ಹಲವು ಸಮಸ್ಯೆಗಳ ಪರಿಹಾರದ ವಿಷಯವಾಗಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ಜಿಲ್ಲೆಯ ಸಮಗ್ರ ನೀರಾವರಿ ವಿಷಯಗಾಗಿ ಅವರು ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯುವ ಶಪಥ ಮಾಡಿದ್ದರು. ನೀರಾವರಿ ಯೋಜನೆ ಅನುಷ್ಠಾನದ ಬಳಿಕ ನಾನೇ ಅವರಿಗೆ ಚಪ್ಪಲಿ ಹಾಕುವ ಕುರಿತು ಮಾತನಾಡಿದ್ದೆ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಷಯವಾಗಿ ಸಮಾಜಮುಖಿ ಹೋರಾಟದಲ್ಲೇ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದ ಭೀಮಶಿ ಅವರು, ಸಮಾಜದ ಕುರಿತು ಹೊಂದಿದ್ದ ಕಾಳಜಿ ಅನುಕರಣೀಯ. ತಮ್ಮ ಹೋರಾಟದ ಹಾದಿಯಲ್ಲಿ ಕುಟುಂಬವನ್ನೂ ಲೆಕ್ಕಿಸದೇ ಹೋದಾಗ ಅವರ ಪತ್ನಿ, ಮಕ್ಕಳು ಸಂಘರ್ಷದ ಮೂಲಕವೇ ಬದುಕು ಕಟ್ಟಿಕೊಂಡ ಬಗೆಯೂ ಬಹುದೊಡ್ಡ ಹೋರಾಟದ ಹಾದಿ ಎಂದು ಬಣ್ಣಿಸಿದರು.

ಭೀಮಶಿ ಅವರು ನಡೆಸಿದ ಪ್ರಜಾ ಸತ್ತಾತ್ಮಕ ಹೋರಾಟಗಳು ಇಂದಿನ ಹೋರಾಟಗಾರರಿಗೆ ಮಾದರಿಯಾಗಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ನ್ಯಾಯದ ಪರ ಧ್ವನಿಯಾಗುತ್ತಿದ್ದ ಭೀಮಶಿ ಅವರು, ಎಲ್ಲರೊಂದಿಗೆ ಸೌಹಾರ್ದಯುತ ಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಿದರು.

ಭೀಮಶಿ ಅವರು ಅಗಲಿದಾಗ ಸರ್ಕಾರದ ಮೂಲಕ ಅವರಿಗೆ ಗೌರವ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ನಾನೇ ಮನವಿ ಮಾಡಿದ್ದೆ ಎಂದು ನೆನಪು ಮಾಡಿಕೊಂಡ ಸಚಿವರು, ಭೀಮಸಿ ಅವರು ಕುರಿತು ಹಲವರು ಅಪಪ್ರಚಾರವನ್ನೂ ಮಾಡಿದರೂ, ತಲೆ ಕೆಡಿಸಿಕೊಳ್ಳದ ಅವರು ತಮ್ಮ ಹೋರಾಟ ಮುಂದುವರೆಸಿದ್ದರು. ಭೀಮಶಿ ಅವರ ಕುಟುಂಬಕ್ಕೆ ಸರ್ಕಾರದಿಂದ ಸಾಧ್ಯ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ರೈತ ಮುಖಂಡ ಪಂಚಪ್ಪ ಕಲಬುರ್ಗಿ ಮಾತನಾಡಿ, ಭೀಮಶಿ ಕಲಾದಗಿ ಅವರೊಂದಿಗೆ ಸೇರಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದೆ. ಹೋರಾಟಗಾರರು ಸಮಾಜಕ್ಕೆ ಬಹಳಷ್ಟು ಕೊಟ್ಟಿದ್ದಾರೆ. ಆದರೆ, ಕುಟುಂಬಕ್ಕೆ ಏನು ಕೊಟ್ಟಿಲ್ಲ, ಅವರ ವೈಯಕ್ತಿಕ ಜೀವನ ಮೇಣದ ಬತ್ತಿಯಂತೆ ಇತ್ತು.

ಕಾವೇರಿ ಹೋರಾಟದ ನಂತರ ನಡೆದ ರಾಜ್ಯದ ದೊಡ್ಡ ಹೋರಾಟ ಭೀಮಾ ಹೋರಾಟವಾಗಿದೆ ಎಂದು ಸ್ಮರಿಸಿದರು. ಔಜ್ ಬ್ಯಾರೇಜ್ ಗೇಟ್ ಕೀಳಲು ಸಚಿವ ಕಾಶಪ್ಪನವರ ಕರೆ ಮೇರೆಗೆ ಕಿತ್ತು ಒಗೆದೆವು. ಗೇಟ್ ಕೀಳಿಸಿ ಸಚಿವರು ಕಾರಿನಲ್ಲಿ ಹೋದರು. ಆಗ ಕಾರು ತಡೆದು, ವಾಗ್ವಾದ ನಡೆಯಿತು. ನಮ್ಮ ಮೇಲೆ ದೂರು ದಾಖಲಾಯಿತು. 

ಸಿಐಟಿಯು ಮುಖಂಡ ವಿ.ಜಿ.ಕೆ.ನಾಯರ್, ಜೆಡಿಎಸ್ ಮುಖಂಡರಾದ ರಿಯಾಜ್ ಫಾರೂಕಿ,  ಬಿ.ಡಿ.ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಮಲ್ಲಿಕಾರ್ಜುನ ಭೃಂಗಿಮಠ, ರೈತ ಸಂಘದ ಅಧ್ಯಕ್ಷ ಅಣ್ಣಾರಾಯ ಈಳಗೇರ, ಶ್ರೀಧರ ಕುಲಕರ್ಣಿ, ಲಕ್ಷ್ಮಣ ಹಂದ್ರಾಳ, ಭೀಮರಾಯ ಪೂಜಾರಿ, ಅಪ್ಪಸಾಬ್ ಯರನಾಳ, ಟಿ.ಯಶವಂತ, ಸುರೇಖಾ ರಜಪೂತ, ಭಾರತಿ ವಾಲಿ, ಮಧು ಕಲಾದಗಿ, ಅಶ್ವಿನಿ ತಳವಾರ, ಸುನಂದಾ ನಾಯಕ,  ಸುರೇಶ ಕಲಾದಗಿ, ಗಂಗಾಬಾಯಿ ಭೀಮಶಿ ಕಲಾದಗಿ, ಮಾಳಪ್ಪ ಕಲಾದಗಿ, ಹನಮಂತಪ್ಪ ಕಲಾದಗಿ, ಸತೀಶ ಅಡವಿ, ಹನುಮಂತ ಚಿಂಚಲಿ, ಸೋಮನಾಥ ಕಳ್ಳಿಮನಿ, ಅನಿಲ ಹೊಸಮನಿ, ಲಾಯಪ್ಪ ಇಂಗಳೆ, ದಯಾನಂದ ಸಾವಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆಗೆ ಮಾರ್ಗಸೂಚಿ ಅಪಘಾನಿಸ್ತಾನದ ತಳಿ ಆಮದಿಗೆ ಚಿಂತನೆ


ವಿಜಯಪುರ : ರಾಸಾಯನಿಕ ಬಳಕೆಗೆ ಬದಲಾಗಿ ವಿಷಮುಕ್ತವಾಗಿ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಿಸಲು ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಬೆಳೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಜೊತೆಗೆ ಅಧಿಕ ಇಳುವರಿ, ವಿಶಿಷ್ಟ ಸ್ವಾದ ಹೊಂದಿರುವ ಅಪಘಾನಿಸ್ತಾನ ರಾಷ್ಟ್ರದ 5-6 ದ್ರಾಕ್ಷಿ ತಳಿಗಳನ್ನು ಪರಿಚಯಿಸಲು ಯೋಜಿಸುವ ಕುರಿತು ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ದಕ್ಷಿಣ ಭಾರತದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ನಿರ್ಧರಿಸಲಾಯಿತು.

ಭಾನುವಾರ ಸಂಜೆ ನಗರದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ದ್ರಾಕ್ಷಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಒಣದ್ರಾಕ್ಷಿ ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಪನ್ ಕಾಂಚನ್ ನೇತೃತ್ವದಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ದ್ರಾಕ್ಷಿ ಬೆಳೆಗಾರರು, ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ದ್ರಾಕ್ಷಿ ಉತ್ಪಾದನೆಯ ಕಣಜ ಎನಿಸಿದೆ. ಆದರೆ ಇಲ್ಲಿ ಉತ್ಪಾದನೆಯಾಗುವ ಒಣದ್ರಾಕ್ಷಿಗೆ ವೈಜ್ಞಾನಿಕ ಮಿತಿ ಮಿತಿಯನ್ನು ಮೀರಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ, ಅಧಿಕ ಉತ್ಪಾದನೆ ಮಾಡಿದರೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ ಎಂಬ ಗಂಭೀರ ವಿಷಯದ ಕುರಿತು ದ್ರಾಕ್ಷಿ ಬೆಳೆಗಾರರು ಮುಕ್ತಮನಸ್ಸಿನಿಂದ ಚರ್ಚೆ ನಡೆಸಿದರು.

ಪ್ರಸಕ್ತ ಸಂದರ್ಭದಲ್ಲಿ ಆಫ್ರಿಕನ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರೂ ತಾಂತ್ರಿಕತೆ ಇಲ್ಲದ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆಯಲು ಭಾರತೀಯ ದ್ರಾಕ್ಷಿ ಬೆಳೆಗಾರರಿಗೆ ಸುವರ್ಣಾವಕಾಶವಿದ್ದು, ಈ ನಿಟ್ಟಿನಲ್ಲಿ ಗಂಂಭೀರ ಚಿಂತನೆ ನಡೆಸಿ, ಸದೃಢ ಹೆಜ್ಜೆ ಇರಿಸಬೇಕಿದೆ ಒಣದ್ರಾಕ್ಷಿ ಉದ್ಯಮಿ ಎ.ಎಸ್.ಬಿರಾದಾರ ಸಲಹೆ ನೀಡಿದರು. 


ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಪೂರಕ ಆಹಾರದ ಕುರಿತು ಹೆಚ್ಚು ಕಾಳಜಿ ಹೆಚ್ಚುತ್ತಿದೆ. ಕೃತಕ ಸಕ್ಕರೆ ಅಂಶ ಸೇರಿಸುವ ರಾಸಾಯನಿಕ ಹೊಂದಿರುವ ಒಣದ್ರಾಕ್ಷಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವೀಕೃತವಾಗುತ್ತಿಲ್ಲ. ಹೀಗಾಗಿ ವಿಷಮುಕ್ತವಾಗಿ ಸಾವಯವದಲ್ಲಿ ನೈಸಗಿರ್ಕ ಸಕ್ಕರೆ ಅಂಶ ಇರುವಂತೆ ಬೆಳೆಯುವ ಕುರಿತು ದ್ರಾಕ್ಷಿ ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಮಾರುತಿ ಚವ್ಹಾಣ ಹೇಳಿದರು.

ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಮುಕ್ತ ದ್ರಾಕ್ಷಿ ಬೆಳೆಯುವುದಕ್ಕಾಗಿ ನಿರ್ಧಿಷ್ಟವಾಗಿ ಮಾರ್ಗಸೂಚಿ ರೂಪಿಸಬೇಕಿದೆ. ಮಹಾರಾಷ್ಟ್ರ ಸರ್ಕಾರದ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹದಾಯಕ ಆಗಿಲ್ಲ. ಕರ್ನಾಟಕದಲ್ಲಿ ಇಲ್ಲಿನ ಸರ್ಕಾರದ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪ್ರೇರಣಾದಾಯಕವಾಗಿವೆ. ಹೀಗಾಗಿ ಎರಡೂ ರಾಜ್ಯಗಳ ದ್ರಾಕ್ಷಿ ಬೆಳೆಗಾರರ ಶ್ರೇಯಕ್ಕಾಗಿ ವಿಜಯಪುರ ಭಾಗದಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು. ರಾಷ್ಟ್ರೀಯ ಸಂಶೋಧನಾ ಕೇಂದ್ರದ ಮಾರ್ಗದರ್ಶನದಲ್ಲಿ ಮಾರ್ಗಸೂಚಿ ರೂಪಿಸಬೇಕು. ಕೃಷಿ ವಿಷಯದಲ್ಲಿ ಪರಿಣಿತಿ ಹೊಂದಿರುವ ನಿವೃತ್ತ ಐಎಎಸ್ ಅಧಿಕಾರಿಯನ್ನು ಸಮನ್ವಯಕ್ಕಾಗಿ ನೇಮಿಸಿಕೊಂಡು, ದ್ರಾಕ್ಷಿ ಬೆಳೆಗಾರರಿಗೆ ಆದಾಯ ಹೆಚ್ಚಿಸುವ ಕುರಿತು ಯೋಜನೆ ರೂಪಿಸಬೇಕು ಎಂದು ಐಐಎಚ್‍ಆರ್ ರೈತ ಪ್ರತಿನಿಧಿ ಡಾ.ಎಸ್.ಡಿ.ಶಿಖಾಮಣಿ, ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಅನಿಲ ಮೆಹರೆ ಇತರರು ಸಲಹೆ ನೀಡಿದರು.

ರೈತರಿಗೆ ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ಮಾಡುವ ಕುರಿತು ಪ್ರಸಕ್ತ ವರ್ಷದಿಂದಲೇ ಸೂಕ್ತ ಅರಿವು ಮೂಡಿಸಬೇಕು. ಮಾರುಕಟ್ಟೆ ಅವಕಾಶಗಳು, ವಿಷಮುಕ್ತ ಉತ್ಪಾದನೆಗೆ ಪ್ರೋತ್ಸಾಹಿಸಲು ರಿಯಾಯ್ತಿ, ಸರ್ಕಾರದ ತೋಟಗಾರಿಕೆ ಇಲಾಖೆ ಮೂಲಕ ಸಾವಯವ ಒಣದ್ರಾಕ್ಷಿ ಉತ್ಪಾದಕ ರೈತರ ನೋಂದಣಿಯಂಥ ಕೆಲಸಗಳು ನಡೆಸಬೇಕು. ಕೃಷಿ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯದ ದ್ರಾಕ್ಷಿ ಬೆಳೆಗಾರರ ಸಂಘದ ಬಿ.ಎಂ.ಕೋಕರೆ ಸಚಿವರಿಗೆ ಮನವಿ ಮಾಡಿದರು.

ದ್ರಾಕ್ಷಿ ಬೆಳೆಗಾರರ ಮನವಿ ಆಲಿಸಿದ ಸಚಿವ ಶಿವಾನಂದ ಪಾಟೀಲ, ನಮ್ಮ ಸರ್ಕಾರ ದ್ರಾಕ್ಷಿ ಬೆಳೆಗಾರರ ಹಿತ ರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿರ. ಒಣದ್ರಾಕ್ಷಿ ಮಾರುಕಟ್ಟೆಗೆ ವಿಶೇಷ ಆದ್ಯತೆ ನೀಡುತ್ತಿದೆ. ದ್ರಾಕ್ಷಿ ಬೆಳೆಗಾರರಿಗೆ ಕಡಿಮೆ ಬಡ್ಡಿದರದ ಸಾಲದ ಸೌಲಭ್ಯ ಸೇರಿದಂತೆ ಇತರೆ ಅನುಕೂಲ ಕಲ್ಪಿಸಿದೆ. ಭವಿಷ್ಯದಲ್ಲಿ ದ್ರಾಕ್ಷಿ ಬೆಳೆಗಾರರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ನಮ್ಮ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ದ್ರಾಕ್ಷಿ ಬೆಳೆಗಾರರಾದ ಪ್ರಕಾಶ ಗಣಿ, ಮಲ್ಲಿಕಾರ್ಜುನ ತುಂಗಳ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ದ್ರಾಕ್ಷಿ ಬೆಳೆಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.