Thursday, August 17, 2023
ಮುರುಗೇಶ ನಿರಾಣಿ ದಲಿತ ವಿರೋಧಿ ಕೈಗಾರಿಕಾ ಮಾಜಿ ಸಚಿವ: ಶ್ರೀನಿವಾಸನ ಆರೋಪ
ವಿಜಯಪುರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸ ಮಾತನಾಡಿದರು.
ಈ ದಿವಸ ವಾರ್ತೆ
ವಿಜಯಪುರ: ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು, ದಲಿತ ವಿರೋಧಿ ಸಚಿವರಾಗಿದ್ದರು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸನ್ ಆರೋಪಿಸಿದರು.ನಗರದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿದ್ದ ಸಂದರ್ಭ, ದಲಿತರಿಗೆ ಬಹಳಷ್ಟು ವಂಚಿಸಿದ್ದು, ಕೆಐಎಡಿಬಿಯ ನಿವೇಶನ ಹಂಚಿಕೆಯ ಕಮಿಟಿಯಲ್ಲಿ ದಲಿತರಿಗೆ ಇಟ್ಟಿದ್ದ ಜಾಗವನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಇಟ್ಟಿದ್ದ 675 ಎಕರೆ ಜಮೀನನ್ನು ಬೇರೆಯವರಿಗೆ ನೀಡಿದ್ದಾರೆ. ಈ ಬಗ್ಗೆ ಮುರುಗೇಶ ನಿರಾಣಿಯವರ ಗಮನಕ್ಕೆ ತಂದರೂ ಅಂದು ಅವರು ಬಗೆಹರಿಸುವ ಪ್ರಯತ್ನವನ್ನು ಮಾಡಲಿಲ್ಲ. ಇದು ಅವರ ದಲಿತ ವಿರೋಧಿ ನೀತಿಯಾಗಿದೆ. ಈ ಅಕ್ರಮವನ್ನು ದಾಖಲೆ ಸಮೇತ ನಾನು ಸಾಬೀತು ಪಡಿಸುವೆ. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳು ಇವೆ ಎಂದರು.
ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿರುವ ಕುರಿತು ಸದ್ಯ ಸರ್ಕಾರದ ಗಮನಕ್ಕೆ ತಂದಿರುವೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.
ಇನ್ನು ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾ ಘಟಕಗಳ ಅಡಿಯಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರು ಸಮಾವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆದಾರರು ಹೆಚ್ಚಿದ್ದು, ಈ ನಿಟ್ಟಿನಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿಯೂ ಜವಳಿ ಕ್ಷೇತ್ರದ ದಲಿತ ಕೈಗಾರಿಕಾ ಉದ್ದಿಮಿಗಳ ಬೃಹತ್ ಸಮಾವೇಶ ಕೂಡಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೂ ಭೇಟಿ ಮಾಡಿ ಮನವಿ ಮಾಡಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಅಧಿಕಾರಿ ರಾಜಶೇಖರ ಯಡಿಹಳ್ಳಿ ಇದ್ದರು.
Subscribe to:
Posts (Atom)