Monday, June 3, 2024

04-06-2024 EE DIVASA KANNADA DAILY NEWS PAPER

ಮತ ಎಣಿಕೆಯ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಲೋಕಸಭಾ ಚುನಾವಣೆಯ ಮತ ಎಣಿಕೆಯು ಮಂಗಳವಾರ(ಜೂ.4) ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ. ಭೂಬಾಲನ್  ಹೇಳಿದರು.

ವಿಜಯಪುರ ಮೀಸಲು(ಪ ಜಾ) ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ವಿಜಯಪುರ ನಗರದ  ಸೈನಿಕ ಶಾಲೆಯ ಆವರಣದಲ್ಲಿ ಸೋಮವಾರದಂದು ಚುನಾವಣ ವೀಕ್ಷಕರೊಂದಿಗೆ ಅಂತಿಮ ಹಂತದ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ  ಅವರು ಮಾತನಾಡಿದರು.

ಮತ ಎಣಿಕೆ ಆರಂಭಕ್ಕೆ ಮುನ್ನ  ಬೆಳಿಗ್ಗೆ 7 ಗಂಟೆಗೆ ಮತಯಂತ್ರಳನ್ನು ಇರಿಸಿದ ಭಧ್ರತಾ ಕೋಟಡಿಗಳನ್ನು ಚುನಾವಣಾ ವೀಕ್ಷಕರು, ಉಮೇದುವಾರರು ಹಾಗೂ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.



ಬೆಳಿಗ್ಗೆ 8 ಗಂಟೆಯಿಂದ  ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತಗಳ ಎಣಿಕೆಗೆ  ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಯ ದಿನವಾದ ಮಂಗಳವಾರದ  ಬೆಳಿಗ್ಗೆ 8 ಗಂಟೆಯವರೆಗೂ ಪೋಸ್ಟಲ್ ಬ್ಯಾಲೆಟ್ ಗಳನ್ನು ಸ್ವೀಕರಿಸಲಾಗುತ್ತದೆ ಎಂದರು

ಸೈನಿಕ್‌ ಶಾಲೆಯ ಒಡೆಯರ ಸದನದಲ್ಲಿ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಆದಿಲ್‌ಶಾಹಿ ಸದನದಲ್ಲಿ ಬಸವನ ಬಾಗೇವಾಡಿ ಮತ್ತು ಬಬಲೇಶ್ವರ ಕ್ಷೇತ್ರ, ಹೊಯ್ಸಳ ಸದನದಲ್ಲಿ ವಿಜಯಪುರ ನಗರ ಮತ್ತು ನಾಗಠಾಣ ಕ್ಷೇತ್ರ,  ವಿಜಯಪುರ ಸದನದಲ್ಲಿ ಇಂಡಿ ಮತ್ತು ಸಿಂದಗಿ ಕ್ಷೇತ್ರ ಹಾಗೂ ಹೊಯ್ಸಳ ಸದನದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಿದರು.

 ಆಯಾ ವಿಧಾನಸಭೆ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ ಕಾರ್ಯವನ್ನು ಕೈಗೊಳ್ಳಲು ಪ್ರತಿ ವಿಧಾನಸಭೆ ಮತಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 8 ಮತಕ್ಷೇತ್ರಗಳಿಗೆ 112 ಟೇಬಲ್‌ಗಳಲ್ಲಿ ಹಾಗೂ ಅಂಚೆ ಮತಪತ್ರಗಳ ಎಣಿಕೆ ಕಾರ್ಯಕ್ಕಾಗಿ 12 ಟೇಬಲ್‌ಗಳಲ್ಲಿ ಹಾಗೂ ಇಟಿಪಿಬಿಎಸ್‌ ಮತಪತ್ರಗಳ ಸ್ಕ್ಯಾನಿಂಗ್‌ ಕಾರ್ಯವನ್ನು 6 ಟೇಬಲ್‌ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಒಟ್ಟು 124 ಟೇಬಲ್ ಗಳಿಗೆ 12ಜನ ಸಹಾಯಕ ಚುನಾವಣಾ ಅಧಿಕಾರಿಗಳು, 124 ಸೂಪರ್ ವೈಸರ್, 136 ಅಸಿಸ್ಟೆಂಟ್ ಸೂಪರ್ ವೈಸರ್, 124 ಮೈಕ್ರೋ ಅಬ್ಸ್ ರವರ್, 87 ಜನ ರಿಸರ್ವ್ ಸಿಬ್ಬಂದಿ ಸೇರಿದಂತೆ ಒಟ್ಟು 483 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು

ಮತ‌ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಇದಲ್ಲದೇ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸಿ.ಆರ್.ಪಿ.ಸಿ. ಕಲಂ 144 ರ ಅನ್ವಯ ನಿಷೇಧಾಜ್ಞೆ ಕೂಡ‌ ಜಾರಿ ಮಾಡಲಾಗಿದೆ ಎಂದರು.

 ಈ ಮೊದಲು ಮತ ಎಣಿಕೆ ಕೊಠಡಿ, ಪಾರ್ಕಿಂಗ್, ಭದ್ರತಾ ಸಿಬ್ಬಂದಿ ನಿಯೋಜನೆ, ಊಟೋಪಹಾರ ವ್ಯವಸ್ಥೆ, ಮಾಧ್ಯಮ ಕೇಂದ್ರ ಮತ್ತಿತರ ಸೌಕರ್ಯಗಳ ಕುರಿತು ಚುನಾವಣಾ ವೀಕ್ಷಕರಾದ ಡಾ.ರತನಕನ್ವರ ಗಂದವಿಚರಣ,  ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ಹಾಗೂ ಜಿಲ್ಲಾ  ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ  ಮಹಾದೇವ ಮುರಗಿ, ತಹಶೀಲ್ದಾರ  ಕವಿತಾ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.