ನಮ್ಮಉತ್ತರ ಕರ್ನಾಟಕದ ಸಂಸ್ಕೃತಿಯೇ ಹಾಗೆ, ಪ್ರತಿಯೊಂದು ಆಚರಣೆಯನ್ನು ನಾನಾವಿಧವಾದ ಪ್ರಯೋಜನಗಳ ದೃಷ್ಟಿಯಲ್ಲಿ ವಿಮರ್ಶಿಸಿ ವಿಧಿಸಿರುತ್ತದೆ. ಈ ಆಚರಣೆಗಳು ಏನೇನು, ಯಾಕೆ ಆಚರಿಸುತ್ತೇವೆ ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು , ಆದರೆ ಅದರ ಉಪಯೋಗವಿಲ್ಲ ಎಂದೇನಿಲ್ಲ. ಉದಾಹರಣೆಗೆ ಯುಗಾದಿಯ ಎಳ್ಳು-ಬೆಲ್ಲ , ಏಕಾದಶಿಯ ಉಪವಾಸ, ಧನುರ್ಮಾಸದ ಹುಗ್ಗಿ (ಪೊಂಗಲ್) ಹೀಗೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಅತ್ಯುತ್ತಮ ದೀಪಾವಳಿಯ ಗೋಪೂಜೆ, ನವರಾತ್ರಿಯ ಗಜಾಶ್ವಾದಿಗಳ ಪೂಜೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯವನ್ನು ಧೃಡಗೊಳಿಸಲು ಸಹಾಯಕ. ಹೀಗೆ ಎಲ್ಲ ಆಚರಣೆಗಳೂ ಒಂದು ವೈಶಿಷ್ಟ್ಯಪೂರ್ಣವಾದ ಗಂಭೀರವಾದ ಅರ್ಥವನ್ನು ಹೊಂದಿವೆ.
ಇದರಂತೆ ನಮ್ಮ ನವವರ್ಷವಾದ ಯುಗಾದಿಯೂ ಒಂದು ವಿಶಿಷ್ಟವಾದ ಆಚರಣೆ. ಜನವರಿ ಒಂದರಂದು ಹೊಸವರ್ಷವೆನ್ನಲು ಬದಲಾಗುವುದು ಕ್ಯಾಲೆಂಡರ್ ಒಂದೇ. ಆದರೆ ಯುಗಾದಿಯಂದು ಹಾಗಲ್ಲ. ಪೂರ್ಣಪ್ರಕೃತಿಯು ಮಾಗಿಯ ಚಳಿಗೆ ನಿರಾಭರಣೆಯಾಗಿ ನಂತರದ ವಸಂತಕ್ಕೆ ಹಸಿರ ಸಿರಿಯ ಹೊದ್ದು ಅಲಂಕೃತಳಾಗುವ ಸಮಯ. ಮಾವಿನ ಚಿಗುರಿನ ತೋರಣ, ಕೋಗಿಲೆಯ ಪಂಚಮದ ದನಿಯ ಸುಪ್ರಭಾತ ಒಂದು ಹೊಸಪ್ರಪಂಚವನ್ನೇ ಸ್ವಾಗತಿಸುತ್ತದೆ. ಅಂತಹ ಯುಗಾದಿಯ ಸಮಯವಲ್ಲವೇ ಹೊಸವರ್ಷ.
ನಿಜವಾಗಿಯೂ ನೈಸರ್ಗಿಕ ವಾತಾವರಣವನ್ನು ಅನುಭವಿಸುವವರು, ಆರಾಧಿಸುವವರು ಹೊಸ ಚೈತನ್ಯದೊಂದಿಗೆ ಈ ಯುಗಾದಿಯನ್ನೇ ಹೊಸವರ್ಷವೆಂದು ಸ್ವಾಗತಿಸಲು ಉತ್ಸುಕನಾಗಿರುತ್ತಾನೆ. ಒಂದು ಸಂವತ್ಸರ ಚಕ್ರವು ಮುಗಿದು ಹೊಸ ವರ್ಷಪ್ರಾರಂಭವಾಗುವ ಸಮಯವೇ ಯುಗಾದಿ. ಹಾಗಾಗಿ ಯುಗಾದಿ ಹಬ್ಬವು ಸಂವತ್ಸರಾರಂಭ, ನವವರ್ಷಪ್ರತಿಪದಾ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.
ಪ್ರತಿ ಮನೆಯನ್ನೂ ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರು ಅಭ್ಯಂಜನವನ್ನು ಮಾಡಿಕೊಳ್ಳಬೇಕು. ವಿಪ್ರರೊಡನೆ ಪೂಜೆಗಳನ್ನು ಉತ್ಸವಗಳನ್ಮು ಆಚರಿಸುತ್ತಾರೆ. ದೇವ- ಗುರುಗಳಿಗೆ ನೂತನ ವಸ್ತ್ರಾದಿಗಳನ್ನು ಸಮರ್ಪಿಸುವುದರ ಜೊತೆಗೆ ಸ್ತ್ರೀ-ಮಕ್ಕಳಾದಿಯಾಗಿ ಎಲ್ಲರೂ ಹೊಸ ವಸ್ತ್ರಗಳನ್ನು ಧರಿಸುತ್ತಾರೆ. ನಂತರ ತಿಥಿ ವಾರ ನಕ್ಷತ್ರ ಯೋಗ ಕರಣಗಳೆಂಬ ಪಂಚ ಅಂಶಗಳನ್ನೊಳಗೊಂಡ ಪಂಚಾಂಗವನ್ನು ಪೂಜಿಸಿ ವರ್ಷಫಲವನ್ನು ಶ್ರವಣ ಮಾಡಬೇಕು ಎನ್ನುವುದೇ ಇದರ ತಾತ್ಪರ್ಯ.
ಇದರ ಜೊತೆಗೆ ಬೇವುಬೆಲ್ಲದ ಸೇವನೆ ಎಲ್ಲರಿಗೂ ತಿಳಿದಿರುವ ಸಂಪ್ರದಾಯವೇ ಆಗಿದೆ. ಬೇವಿನ ಎಲೆಯು ನಮ್ಮ ದೇಹಕ್ಕೆ ಬಿಸಿಲಿನ ವೇಗವನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಲ್ಲವೂ ಆರೋಗ್ಯದಾಯಕ'. ಇಂತಹ ಅತ್ಯುತ್ತಮ ಬೇವು-ಬೆಲ್ಲ ನಮ್ಮ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಮಾನಸಿಕವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ. ಏರಿಳಿತದ ಜೀವನದಲ್ಲಿ "ಸುಖದುಃಖ" ಎಂಬ ಗೀತವಾಕ್ಯದಂತೆ ಬದುಕಬೇಕು ಎನ್ನುವುದರ ಮೂಲಕವೇ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ, ಹಾಗೂ ನಿಮ್ಮ ಬದುಕು ಬೇವು ಬೆಲ್ಲದಂತೆ ಸುಖ-ದುಃಖಗಳ ಆಗರ ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನ ನಡೆಸಿ ಈ ಯುಗಾದಿ ನಿಮ್ಮೆಲ್ಲಾ ಕಹಿ ನೋವುಗಳನೆಲ್ಲ ಮರೆಯಾಗಿಸಲಿ ಹೊಸವರ್ಷದ ಶುಭಾಶಯಗಳು.
ಶಿಲ್ಪಾ ಚವ್ಹಾಣ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment