Friday, August 11, 2023

ಗ್ರಾಮೀಣ ಕೂಲಿಕಾರ್ಮಿಕರ ಶಿಶು ಪೋಷಣೆ ಸರ್ಕಾರದ ಮಡಿಲಿಗೆ: ರಾಹುಲ್ ಶಿಂಧೆ




ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ  06 ತಿಂಗಳಿಂದ 03 ವರ್ಷದ ಶಿಶುಗಳನ್ನು ವ್ಯವಸ್ಥಿತ  ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು   ರಾಜ್ಯ ಸರ್ಕಾರವು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ರಾಜ್ಯ ಸರ್ಕಾರವು ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಜವಾಬ್ದಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದು ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದ್ದಾರೆ. 

ಜಿಲ್ಲೆಯ ಆಯ್ದ 163 ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ  ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಕಾರ್ಯಾರಂಭಗೊಳ್ಳಲಿವೆ.

ಕೂಸಿನ ಮನೆ ಸಿಬ್ಬಂದಿಗಳು: 

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ 22 ರಿಂದ 45 ವರ್ಷ ವಯಸ್ಸಿನೊಳಗಿನ ಕನಿಷ್ಠ 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿಕಾರ್ಮಿಕರೇ ಈ ಕೂಸಿನ ಮನೆಗೆ ಕೇರ್ ಟೆಕರ್ಸ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇವರಿಗೆ ಸರಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ಮನರೇಗಾ ಯೋಜನೆಯಡಿ ಎನ್.ಎಂ.ಆರ್ ಸೃಜನೆ ಮಾಡಿ ದಿನಕ್ಕೆ ರೂ. 316  ರಂತೆ ನೂರು ದಿನಗಳವರೆಗ ಕೆಲಸ  ನೀಡಲಾಗುತ್ತಿದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ.

ಕೂಸಿನ ಮನೆ ಕುಶಲತೆಯ ನಿರ್ವಹಣೆಗೆ ತರಬೇತಿ: 

 ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಪ್ರಾರಂಭಕ್ಕೆ ರಾಜ್ಯ ಮಟ್ಟದಲ್ಲಿ ಜಿಲ್ಲೆಯ 05 ಜನರಿಗೆ ತರಬೇತಿ ನೀಡಲಾಗಿದೆ.            ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡ ಮಾಸ್ಟರ್ ಟ್ರೇನರ್ ಗಳು  ವಿಜಯಪುರ ಜಿಲ್ಲೆಯ ಐದು ಸ್ಥಳಗಳಲ್ಲಿ ಈಗಾಗಲೇ ಎಲ್ಲ ಗ್ರಾಮ ಪಂಚಾಯತಿ ಕೇರ್ ಟೇಕರ್ಸ್ ಗಳಿಗೆ ತರಬೇತಿ ನೀಡಿದ್ದಾರೆ.

ಅನುದಾನ: 

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳನ್ನು ಆರಂಭಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖಾಲಿ ಇರುವ ಸರಕಾರಿ ಶಾಲೆ, ಅಂಗನವಾಡಿ, ಸಮುದಾಯ ಭವನ ಸೇರಿದಂತೆ ಇತರೆ ಸರಕಾರಿ  ಕಟ್ಟಡಗಳ ಆಯ್ಕೆಗೆ ಪರಿಗಣಿಸಿದೆ.ಈ ಕಟ್ಟಡಗಳ  ಅಲ್ಪ-ಸ್ವಲ್ಪ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ಘಟಕಕ್ಕೆ 1 ಲಕ್ಷ ರೂ ಅನುದಾನ ಬಿಡುಗಡೆ ಮಾಡುತ್ತದೆ. ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧ ಮತ್ತಿತರ ಸೌಲಭ್ಯಗಳು ಈ ಕೇಂದ್ರದಲ್ಲಿ ದಾಸ್ತಾನು ಇರಿಸಲಾಗುವುದು.

 ಮುಖ್ಯ ಉದ್ದೇಶ: 

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ.ಇಂತಹ  ಕುಟುಂಬದ ಮಹಿಳೆಯರು ತಮ್ಮ  ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ.ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರಕಾರ ಈ ಯೋಜನೆ ಆರಂಭಿಸಿದೆ. ಹಳ್ಳಿಗಳ ಮಹಿಳೆಯರು ತಮ್ಮ ಮಕ್ಕಳ ಕುರಿತು ಚಿಂತಿಸಿ, ಮಾನಸಿಕವಾಗಿ ಕುಗ್ಗದೇ ಈ ಯೋಜನೆಯ ಸದುಪಯೋಗಪಡೆದುಕೊಂಡು ನಿಶ್ಚಿಂತೆಯಿಂದ ಕೂಸಿನ ಮನೆಯಲ್ಲಿ ತಮ್ಮ 06 ತಿಂಗಳಿಂದ 03 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳಬಹುದಾಗಿದೆ ಎಂದು  ಅವರು ತಿಳಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಣೆ

ಈ ದಿವಸ ವಾರ್ತೆ

ವಿಜಯಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಬಿವೃದ್ದಿ ಯೋಜನೆ ನಗರ ಹಾಗೂ ಗ್ರಾಮೀಣ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ರುಡ್‍ಸೆಟ್ ಸಂಸ್ಥೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಸ್.ಕುಂದರ ಅವರು ಉದ್ಘಾಟಿಸಿ, ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಾನೂನಿನ್ವಯ ಅಪರಾಧವಾಗಿದ್ದು, ಸಂವಿಧಾನ ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಲವು ಕಾನೂನುಗಳಿದ್ದು, ಸೂಕ್ತ ಪಾಲನೆಯಿಂದ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಬಹುದಾಗಿದೆ ಎಂದು ಹೇಳಿದ ಅವರು, ಸವಿವರವಾಗಿ ಅಂಕಿ-ಅಂಶದೊಂದಿಗೆ ಮಾನವ ಕಳ್ಳ ಸಾಗಾಣಿಕೆ ಕುರಿತು ಮಾತನಾಡಿದರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ ಅವರು, ಬಂದಂತಹ ಅತಿಥಿ ಹಾಗೂ ಗಣ್ಯ ವ್ಯಕ್ತಿಗಳಿಗೆ ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಡಿವೈಎಸ್‍ಪಿ ಗಿರೀಶ ತಳಕಟ್ಟಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು  ವಕೀಲರಾದ ಬಾಬು ಅವತಾಡೆ ಪೋಕ್ಸೊ ಕಾಯ್ದೆ ಕುರಿತು, ಮೇಲ್ವಿಚಾರಕಿ ಅಶ್ವಿನಿ ಸನದಿ ಮಾನವ ಕಳ್ಳ ಸಾಗಾಣಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಸಾವಿತ್ರಿ ಗುಗ್ಗರಿ, ಶ್ರೀಮತಿ ದೀಪಾ ಕಾಲೆ, ಶ್ರೀಮತಿ ದೀಪಾಕ್ಷಿ ಜಾನಕಿ, ಶ ಎಸ್.ಸಿ.ಮ್ಯಾಗೇರಿ, ಸಾಹೇಬಗೌಡ ಝುಂಜರವಾಡ, ಶ್ರೀಮತಿ ಜಯಶ್ರೀ ಪವಾರ, ರುಡಸೆಟ್ ಸಂಸ್ಥೆಯ ನಿರ್ದೇಶಕ ಮುತ್ತಣ್ಣ ಧನಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ದೊಡ್ಡಣ್ಣ ಬಜಂತ್ರಿ ಅವರಿಗೆ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ

 ಈ ದಿವಸ ವಾರ್ತೆ

ವಿಜಯಪುರ: ದೊಡ್ಡಣ್ಣ ಬಜಂತ್ರಿ ವಿಜಯಪುರ ಅವರು ರಚಿಸಿದ "ಒಲೆಯಹೊಕ್ಕು" ಕವನಸಂಕಲನ ಕ್ಕೆ ಸಮೀರವಾಡಿಯಲ್ಲಿ ಜರುಗಿದ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಗೆ ಆಯ್ಕೆ ಯಾಗಿದ್ದು, ಇದೆ ದಿನಾಂಕ ೧೩-೮-೨೦೨೩ರಂದು ಜಮಖಂಡಿ ಯಲ್ಲಿ ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ದೊಡ್ಡಣ್ಣ ಬಜಂತ್ರಿ ಯವರು ೫ ಕವನ ಸಂಕಲನಗಳನ್ನು(ಕಾಲ ಕೆಟ್ಟಿತ ತಂಗಿ,  ಲಚ್ಚ, ತುಂತುರು,ತಲ್ಲಣದ ಹಕ್ಕಿಹಾಡು, ಒಲೆಯಹೊಕ್ಕು ) ೨ ನಾಟಕಗಳನ್ನು,(ಕತ್ತಲುಹರಿಯಿತು, ನಿಶ್ಯಾದಾಗಿನ ಮಾತ ಆತು) ೧ ವಿನೋದ ಕಥಾಸಂಕಲನ,(ಕ್ಷಯಾಂಬರ). ೨೦೧೭ರಕಾವ್ಯ ಕರ್ನಾಟಕ ಸಾಹಿತ್ಯ ಅಕಾಡಮಿಯ ಬೆಂಗಳೂರು ಸಂಪಾದನೆ ಕೃತಿಗಳನ್ನೊಳಗೊಂಡು ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅಲ್ಲದೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕ ರಾಗಿ ಕಾರ್ಯ ನಿರ್ವಹಿಸುತಿರುವ ಇವರು ವಿಜಯಪುರ ಜಿಲ್ಲೆಯ ಹಿರಿಯ ಸಾಹಿತಿಗಳ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ.