Tuesday, August 1, 2023

02-08-2023 EE DIVASA KANNADA DAILY NEWS PAPER

01-08-2023 EE DIVASA KANNADA DAILY NEWS PAPER

ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಸ್ವಸ್ಥ ಬದುಕಿಗಾಗಿ ದುಶ್ಚಟಗಳಿಂದ ದೂರವಿರಲು ಯುಜನಾಂಗಕ್ಕೆ ಕರೆ


 ಈ ದಿವಸ ವಾರ್ತೆ

ವಿಜಯಪುರ :  ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವು ನಮ್ಮ ಗುರಿಯಾಗಿದೆ. ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿದಾಯಕವಾಗಿದೆ. ಮಾದಕವೆಂಬ ವಿಷ ಮನುಕುಲದಲ್ಲಿ ಯುವ ಸಮುದಾಯ ನಲುಗುತ್ತಿದೆ. ವ್ಯಸನಕ್ಕೆ ಒಳಗಾಗಿ ಸುಂದರ ಬದುಕನ್ನು ವ್ಯರ್ಥಮಾಡಿಕೊಳ್ಳದೇ ಸ್ವಾಸ್ಥ ಸುಂದರ ಬದುಕು ರೂಪಿಸುವತ್ತ ಯುವಜನಾಂಗ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಆಯೋಜಿಸಿರುವ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಕಾಲ್ನಡಿಗೆಯಲ್ಲಿ ಊರೂರು ತಿರುಗಾಡಿ ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಡಾ.ಮಹಾಂತ ಶಿವಯೋಗಿಗಳು ಶ್ರಮಿಸಿದ್ದರು. ಡಾ. ಮಹಾಂತಶಿವಯೋಗಿಗಳ ಜನ್ಮದಿನವಾದ ಆಗಸ್ಟ್ 1ಅನ್ನು ವ್ಯಸನ ಮುಕ್ತ ದಿನವನ್ನಾಗಿ ಸರ್ಕಾರ ಆಚರಿಸುತ್ತಿದೆ.

ಯುವ ಜನತೆ ವ್ಯಸನಗಳಿಂದ ಮುಕ್ತವಾಗಲು ಪಣ ತೊಡಬೇಕಿದೆ. ಇಂತಹ ಆಚರಣೆಗಳ ಮೂಲಕ ಸಂತ-ಮಹಾಂತರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಶಿಸ್ತು-ಬದ್ಧ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. 

ಉಪನ್ಯಾಸಕರಾಗಿ ಭಾಗವಹಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಮನೋರೋಗ ತಜ್ಞರಾದ ಡಾ.ಮಂಜುನಾಥ ಮಸಳಿ ಅವರು ಮಾತನಾಡಿ, ವ್ಯಸನ ಮುಕ್ತ ಜೀವನ ನಡೆಸುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವುದು ಅತ್ಯವಶ್ಯಕವಾಗಿರುವುದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ನಿರಂತರ ಯೋಗ, ವ್ಯಾಯಾಮ  ಸೇರಿದಂತೆ ಉತ್ತಮ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು. 

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಅವರು ಮಾತನಾಡಿ, ಶಿಸ್ತು, ಪ್ರಾಮಾಣಿಕತೆ, ಆಜ್ಞಾಧಾರಕತೆ, ಸುಗುಣಶೀಲತೆ, ಸತತ ಪ್ರಯತ್ನ, ನಿರಂತರ ಓದು ಹಾಗೂ ಗುರುಭಕ್ತಿಯನ್ನು ಜೀವನದಲ್ಲಿ ಇಂದಿನ ಪೀಳಿಗೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. 

ಗಮನ ಸೆಳೆದ ರಂಗೋಲಿ : ಇಂದು ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಮಂಜುಳಾ, ಪ್ರಶಿಕ್ಷಣಾರ್ಥಿ ಶುಲಕ್ಷ್ಮಿ ಹೊಸಮನಿ ಅವರು ಗಾಂಧಿ ಭವನದ ಪ್ರವೇಶ ದ್ವಾರದಲ್ಲಿ ಬಿಡಿಸಿದ ರಂಗು- ರಂಗಿನ ರಂಗೋಲಿ ಎಲ್ಲರ ಗಮನ ಸೆಳೆಯಿತು. 

ಕಾರ್ಯಕ್ರಮದಲ್ಲಿ  ವೀರೇಶ ವಾಲಿ ತಂಡದವರಿಂದ ಗಾಯನ ಪ್ರಸ್ತುತಪಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನುಸೂಯಾ ಕೆ.ಚಲವಾದಿ, ನಿವೃತ್ತ ಶಿಕ್ಷಕ ಹುಮಾಯೂನ ಮಮದಾಪುರ, ಜಗಜ್ಯೋತಿ ಬಸವೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶೇಬಾನಿ ಹಾಗೂ ಕಾಲೇಜಿನ 80 ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.