Saturday, July 16, 2022

ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ, ವಾಸ್ತವ್ಯ ಜಿಗಜೇವಣಗಿಯಲ್ಲಿ ಯಶಸ್ವಿ




ಈ ದಿವಸ ವಾರ್ತೆ

ವಿಜಯಪುರ:  ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜುಲೈ 16ರಂದು ಚಡಚಣ ತಾಲೂಕಿನ ಜಿಗಜೇವಣಗಿಯಲ್ಲಿ ಕೈಗೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಸಾರ್ವಜನಿಕರ ಸಹಭಾಗೀತ್ವದ ಮೂಲಕ ಯಶಸ್ವಿಯಾಯಿತು.

ಗ್ರಾಮದ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ಡಾ.ದೇವಾನಂದ ಫೂ.ಚವ್ಹಾಣ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು, ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಸಾರ್ವಜನಿಕರ ಅಹವಾಲು ಆಲಿಸಿದರು. ಚಡಚಣ ತಹಸೀಲ್ದಾರ ಹನುಮಂತ ಎನ್.ಶಿರಹಟ್ಟಿ ಅವರು ಸಾರ್ವಜನಿಕರ ಅರ್ಜಿಗಳನ್ನು ಓದಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅರ್ಜಿಗಳ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬಹುತೇಕ ಅರ್ಜಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಶಾಲಾ ಆವರಣದಲ್ಲಿ ಸಾಲಾಗಿ ಗಣಕಯಂತ್ರಗಳನ್ನಿಟ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅರ್ಜಿ ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸ್ವೀಕೃತವಾದ ಒಟ್ಟು 358 ಅರ್ಜಿಗಳ ಪೈಕಿ ಸ್ಥಳದಲ್ಲಿಯೇ 300 ಅರ್ಜಿಗಳನ್ನು ವಿಲೇಗೊಳಿಸಲಾಯಿತು. ಬಾಕಿ ಉಳಿದ 58 ಅರ್ಜಿಗಳಿಗೆ ದಾಖಲಾತಿ ಪಡೆದು ವಾರದೊಳಗೆ ವಿಲೇವಾರಿಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಿದರು.



ಜಿಗಜೇವಣಿ ಸೇರಿದಂತೆ ಚಡಚಣ ತಾಲೂಕಿನ ಇಂಚಗೇರಿ, ದೇವರ ನಿಂಬರಗಿ, ಕಾತ್ರಾಳ, ಸಾತಲಗಾಂವ್, ನಂದರಗಿ, ಹನುಮನಗರ, ಸೊನಕನಳ್ಳಿ, ಕಾತ್ಯಾಳ, ಸೂರಮುತ್ಯಾನ ತಾಂಡಾ ಸೇರಿದಂತೆ ಹಲವಾರು ಹಳ್ಳಿಗಳ ಜನರು ನಾನಾ ಅಹವಾಲುಗಳನ್ನು ಹೊತ್ತು ಜಿಗಜೇವಣಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಎದುರು ತಮ್ಮೂರಿನ ಸಮಸ್ಯೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. ಶಿಥಿಲಗೊಂಡ ಶಾಲಾ ಮೇಲ್ಚಾವಣಿ ದರಸ್ತಿಗೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು, ದೇವಸ್ಥಾನ ಕಟ್ಟಡ ನಿರ್ಮಿಸುವ ಕುರಿತು, ಗ್ರಾಪಂನಲ್ಲಿ ಸುಸಜ್ಜಿತ ಗ್ರಂಥಾಲಯ ಕಲ್ಪಿಸುವ ಕುರಿತು, ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣದ ಕುರಿತು, ಬಸ್ ಸೌಕರ್ಯ ಕಲ್ಪಿಸುವ ಕುರಿತು ವಸತಿ ಇಲ್ಲದಿರುವ ಬಗ್ಗೆ, ಕೃಷಿ ಹೊಂಡ ಬಿಲ್ಲು ಮಂಜೂರಿ ಮಾಡುವ ಕುರಿತು, ಕ್ಯಾನಲ್ ವಸರಿ ನೀರು ಜಮೀನು ಹತ್ತುವ ಕುರಿತು, ಜಮೀನು ಹದ್ದು ಬಸ್ತ್ ಮಾಡುವ ಕುರಿತು, ದಾಳಿಂಬೆ ಗಿಡಗಳು ಒಣಗಿದ ಬಗ್ಗೆ, ಬ್ಯಾಂಕ್ ಖಾತೆಯಲ್ಲಿರುವ ಪಿಂಚಣಿ ಹಣವನ್ನು ಹೋಲ್ಡ್ ಮಾಡಿರುವುದು ಸೇರಿದಂತೆ ಸಾರ್ವಜನಿಕ ಮತ್ತು ವೈಯಕ್ತಿಕ ವಿಷಯಗಳ ಹತ್ತಾರು ಬೇಡಿಕೆಗಳ ಮನವಿಗಳನ್ನು ನಾನಾ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿ ಮಾಡಿ ಸಲ್ಲಿಸಿದರು.

ಕೊಡೆ ಹಿಡಿದು ಗ್ರಾಮ ಸಂಚಾರ: ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಜಿಗಜೇವಣಿ ಗ್ರಾಮಕ್ಕೆ ತೆರಳಿದ್ದ ಜಿಲ್ಲಾಧಿಕಾರಿಗಳು, ಮಧ್ಯಾಹ್ನ ವೇಳೆ ಗ್ರಾಮದ ಶಾಲಾ ಆವರಣದಲ್ಲಿ ಶಾಸಕರು, ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸರಳವಾಗಿ ಹಳ್ಳಿ ವಿಶೇಷತೆಯ ಜೋಳ ಮತ್ತು ಸಜ್ಜೆಯ ಕಟಕ್ ರೊಟ್ಟಿ, ಮೊಸರು ಶೇಂಗಾ ಚಟ್ನಿ, ಶ್ಯಾವಿಗೆ ಪಾಯಸ್, ಬದನೆಕಾಯಿ, ಹೆಸರುಕಾಳು ಪಲ್ಲೆಯ ಊಟ ಸವಿದರು. ಊಟದ ಬಳಿಕ ಗ್ರಾಮದ ಅಂಗನವಾಡಿ, ಸರ್ಕಾರಿ ಶಾಲೆ, ಪರಿಶಿಷ್ಟ ಜಾತಿ ಸಮುದಾಯದವರ ಕಾಲೋನಿಗಳಿಗೆ ಭೇಟಿಗಾಗಿ ಎರಡು ಗಂಟೆಗೂ ಹೆಚ್ಚು ಕಾಲ, ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಗ್ರಾಮ ಸಂಚಾರ ನಡೆಸಿದರು.

ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು: ಗ್ರಾಮ ಸಂಚಾರ ಕೈಗೊಂಡ ಸಂದರ್ಭದಲ್ಲಿ ಅಂಗನವಾಡಿಗೆ ತೆರಳಿದ ವೇಳೆ ಜಿಲ್ಲಾಧಿಕಾರಿಗಳು ಅಲ್ಲಿದ್ದ ಬಾಲ ಮಕ್ಕಳೊಂದಿಗೆ ಆಪ್ತವಾಗಿ ಬೆರೆತರು. ಮಕ್ಕಳಿಂದ ಹಾಡೊಂದನ್ನು ಕೇಳಿದರು. ಅಂಗನವಾಡಿಯಲ್ಲಿನ ಆಹಾರ ಸಾಮಗ್ರಿ ದಾಸ್ತಾನು ಸಂಗ್ರಹ ಕೋಣೆಗೆ ತೆರಳಿ ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿ, ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಗುಣಮಟ್ಟದ ಆಹಾರ ನೀಡುವ ವಿಷಯದಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಶಾಸಕರಾದ ಡಾ.ದೇವಾನಂದ ಫೂ.ಚವ್ಹಾಣ್ ಅವರು ಮಾತನಾಡಿ, ಅನೇಕ ಜನಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ, ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಾಗಠಾಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗಿದೆ. ಜನತೆಗೆ ವಚನ ನೀಡಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳ ಎದುರು ವಿವಿಧ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳಿಗೆ ಸಹ ಸ್ಪಂದನೆ ನೀಡಲಾಗುವುದು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರದ ಉದ್ದೇಶದಂತೆ, ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಈ ಮಹತ್ವದ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ವಿವಿಧ ಗ್ರಾಮಸ್ಥರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇಂಚಗೇರಿ ಕೆರೆ ತುಂಬಿಸುವ, ನಂದರಗಿ ಕೆರೆಯನ್ನು ಸರ್ಕಾರದ ಅಧೀನಕ್ಕೆ ಒಪ್ಪಿಸುವ, ವಿದ್ಯುತ್ ತಂತಿ, ರಸ್ತೆಗಳ ದುರಸ್ಥಿ ಸೇರಿದಂತೆ ಸಾರ್ವಜನಿಕರಿಂದ ಬಂದಿರುವ ನಾನಾ ಅಹವಾಲುಗಳ ಪೈಕಿ ಬಹುತೇಕ ಬೇಡಿಕೆಗಳಿಗೆ ಸ್ಥಳದಲ್ಲಿಯೇ ಸ್ಪಂದನೆ ನೀಡಲಾಗಿದೆ. ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿವಿಧ ಇಲಾಖೆಗಳಿಂದ ಮಳಿಗೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನತೆಗೆ ತಲುಪಿಸಲು ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕಾರ್ಯಕ್ರಮದ ಸ್ಥಳದಲ್ಲಿ ಮಳಿಗೆಗಳನ್ನು ಹಾಕಲಾಗಿತ್ತು. ಕೃಷಿ ಇಲಾಖೆಯ ವಸ್ತು ಪ್ರದರ್ಶನ, ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಯ ಕೃಷಿ ರಕ್ಷಕ ವಾಹನ, ತೋಟಗಾರಿಕಾ ಇಲಾಖೆಯ ಯಂತ್ರಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೌಷ್ಠಿಕ ಆಹಾರಗಳ ಪ್ರದರ್ಶನ ಮಳಿಗೆ, ಪಶುಪಾಲನಾ ಇಲಾಖೆಯ ನಾನಾ ಯೋಜನೆಗಳ ಮಾಹಿತಿಯ ಫಲಕಗಳ ಪ್ರದರ್ಶನದ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು. ಚಡಚಣ ತಾಲೂಕಿನ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಸಹ ಶಾಲಾ ಆವರಣದಲ್ಲಿ ಮಳಿಗೆಗಳನ್ನು ತೆರೆದು, ತಾವೇ ತಯಾರಿಸಿದ ವಸ್ತುಗಳ, ಬಗೆಬಗೆಯ ತನಿಸುಗಳ ಪ್ರದರ್ಶನ ನಡೆಸಿದರು.

ಕಾರ್ಯಕ್ರಮಕ್ಕೆ ಮೆಚ್ಚುಗೆ: ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ದೇವರ ನಿಂಬರಗಿ ಗ್ರಾಮದ ಸಾರ್ವಜನಿಕರು ಮತ್ತು ರೈತ ಮುಖಂಡರು, ಜಿಲ್ಲಾಧಿಕಾರಿಗಳ ಜೊತೆಗೆ ಭಾವಚಿತ್ರ ಪಡೆದುಕೊಂಡರು. 15 ವರ್ಷಗಳ ನಂತರ ಜಿಗಜೇವಣಿಗಿಯಲ್ಲಿ ಇಂತಹದ್ದೊಂದು ಒಳ್ಳೆಯ ಕಾರ್ಯಕ್ರಮವನ್ನು ನೋಡುತ್ತಿದ್ದೇವೆ. ನಮ್ಮೂರಲ್ಲಿ ತಾವು ಗ್ರಾಮ ವಾಸ್ತವ್ಯ ನಡೆಸಬೇಕು ಎಂದು ದೇವರನಿಂಬರಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಗಜೇವಣಿಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೂಡ ಮಳಿಗೆಯನ್ನು ಹಾಕಿ,75 ದಿನಗಳ ವಿಶೇಷ ಕೋವಿಡ್ ಲಸಿಕಾ ಅಮೃತ ಮಹೋತ್ಸವ ಅಭಿಯಾನ ನಡೆಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಇಂಡಿ ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಂಜಯ ಖಡಗೇಕರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಮುಚ್ಚಂಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ದಾನಯ್ಯ ಕರಜಗಿಮಠ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು. ಅಧಿಕಾರಿ ರಾಜಶೇಖರ ದೈವಾಡೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

17-07-2022 EE DIVASA KANNADA DAILY NEWS PAPER