Sunday, September 5, 2021

06-09-2021 EE DIVASA KANNADA DAILY NEWS PAPER

ಭೂಕಂಪದ ಹಿನ್ನೆಲೆ ಸಾರ್ವಜನಿಕರು ಆತಂಕ ಪಡದಿರಲು ಜಿಲ್ಲಾಧಿಕಾರಿಗಳಿಂದ ಮನವಿ


ಈ ದಿವಸ ವಾರ್ತೆ

ವಿಜಯಪುರ ಜಿಲ್ಲೆಯು ಭೂಕಂಪನ ವಲಯ-2 ರಲ್ಲಿ ಬರುತ್ತಿದ್ದು, ಇದು ಕಡಿಮೆ ಅಪಾಯ ಇರುವ ವಲಯವಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ ಹಾಗೂ ಸಾರ್ವಜನಿಕರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಲು ಮತ್ತು ಭಯಪಡದಿರಲು ಜಿಲ್ಲಾಧಿಕಾರಿ ಪಿ ಸುನೀಲಕುಮಾರ್ ಅವರು ತಿಳಿಸಿದ್ದಾರೆ.

    ನಿನ್ನೆ ದಿನಾಂಕ:4-9-2021 ರ ರಾತ್ರಿ ಸಮಯ 11.47 ರಿಂದ 11.49 ರ ಅವಧಿಯಲ್ಲಿ ಪ್ರಮುಖವಾಗಿ ವಿಜಯಪುರ ಜಿಲ್ಲೆಯ ವಿಜಯಪುರ, ಬಬಲೇಶ್ವರ, ತಿಕೋಟಾ, ಬ.ಬಾಗೇವಾಡಿ ತಾಲೂಕು, ವಿಜಯಪುರ ನಗರ ಹಾಗೂ ಜಿಲ್ಲೆಯ ಇತರೆ ಭಾಗಗಳಲ್ಲಿ ಭೂಕಂಪನದ ಅನುಭವವಾಗಿರುವ ಬಗ್ಗೆ ಸಾರ್ವಜನಿಕರಿಂದ/ಮಾಧ್ಯಮಗಳಿಂದ ಹಾಗೂ ತಿಳಿದು ಬಂದಿರುತ್ತದೆ.

    ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಬೆಂಗಳೂರು ಇವರಿಂದ ಮಾಹಿತಿಯನ್ನು ಪಡೆಯಲಾಗಿ ಜಿಲ್ಲೆಯ ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ ಕೇಂದ್ರದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿರುವ ಬಗ್ಗೆ ತಿಳಿಸಿದ್ದು, ಭೂಕಂಪನದ ಕೇಂದ್ರವು (Epicentre) ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಇರುವುದಾಗಿ ತಿಳಿಸಿರುತ್ತಾರೆ.

ನಿನ್ನೆ ರಾತ್ರಿ ಭೂಕಂಪನದ ಅನುಭವದ ಮಾಹಿತಿಯು ಸಾರ್ವಜನಿಕರಿಂದ/ಮಾಧ್ಯಮಗಳಿಂದ ತಿಳಿದು ಬಂದ ಕೂಡಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮಧ್ಯರಾತ್ರಿ ಭೂಕಂಪನ ಅನುಭವವಾದ ಪ್ರದೇಶಗಳಿಗೆ ಭೇಟಿ ನೀಡಿದ್ದು ಇರುತ್ತದೆ.  ಈವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ/ಜಾನುವಾರು ಜೀವಹಾನಿ ಮತ್ತು ಆಸ್ತಿ-ಪಾಸ್ತಿಗಳ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.