Sunday, May 24, 2020

ಜಿಲ್ಲೆಯಲ್ಲಿ ಈವರೆಗೆ ೬೯ ಪಾಸಿಟಿವ್ ಪ್ರಕರಣಗಳು ದೃಢ : ಇಂದು ಓರ್ವನಲ್ಲಿ ಕೋವಿಡ್-೧೯ ಸೋಂಕು

ಈ ದಿವಸ ವಾರ್ತೆ ವಿಜಯಪುರ: ಜಿಲ್ಲೆಯಲ್ಲಿ ಇಂದು ದಿನಾಂಕ ೨೪-೦೫-೨೦೨೦ ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: ೨೦೧೧ (೮೦ ವರ್ಷದ ವೃದ್ಧ) ಹಾಗೂ ಇವರು ತೀವ್ರ ರೀತಿಯ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ೪೨ ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ ೨೩ ಕೋವಿಡ್ ಸೋಂಕಿತ ರೋಗಿಗಳು ಸಕ್ರಿಯ ರೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೧೧,೧೫೩ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ೧೭೪೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೯೩೬೩ ಜನರು (೧ ರಿಂದ ೨೮ ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೪ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೧,೬೭೯ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೪೦೬೬ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೭೫೪೪ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜೀವಭಯದೊಳಗೆ ಜೀವನ ತೆವಳುತ್ತಿದೆ, ಸಾಗುತ್ತಿಲ್ಲ!

ಸಾಗುವ ದಾರಿ, 
ಹೊಸತೆನಿಸುತ್ತಿದೆ, 
ಹೆಜ್ಜೆ ಹಾಕಲಾಗದೆ.
ಸಂಶಯ, ಹೆಜ್ಜೆ-ಹೆಜ್ಜೆಗೂ ತಾಕಿ, 
ಹೆಜ್ಜೆ ಹಿಂಜರಿಯುತ್ತಿದೆ.
ಜೀವಭಯದೊಳಗೆ, 
ಜೀವನ ತೆವಳುತಿದೆ,  ಸಾಗುತ್ತಿಲ್ಲ!

ಕೈಮುಟ್ಟಿ, ಕಾಲು ತಾಗಿಸಿ, 
ಜೋಲಿ ಹೊಡೆದು, ಜೋತುಬಿದ್ದು
ಹತ್ತುತ್ತಿದ್ದ, ಬಸ್ಸು ಓಡುತ್ತಿದೆ.
ಜನ ಮುಟ್ಟುತ್ತಿಲ್ಲ,  ಹತ್ತುತ್ತಿಲ್ಲ.
ಬದುಕ ಭಯದೊಳಗೆ, 
ಬದುಕು ನಡೆಯುತ್ತಿದೆ, ಓಡುತ್ತಿಲ್ಲ!

ಮನೆ ತೆರೆದಿದೆ, 
ಮನ ತೆರೆಯುತ್ತಿಲ್ಲ.
ಕಾಲಿಟ್ಟರೆ, ಮುಖವರಳಿಸಿ, 
ನೀರು ಕೊಡುತ್ತಿದ್ದವರು, 
ದೂರವಾಗುತ್ತಿದ್ದಾರೆ!
ಉಸಿರಭಯದೊಳಗೆ, 
ಉಸಿರು ಉಸಿರುತ್ತಿದೆ, ಮಾತಾಗುತ್ತಿಲ್ಲ !

ಅಂಬರೀಷ ಎಸ್. ಪೂಜಾರಿ
ಕಥೆ

ಕೆಂಪು ಅರಮನೆ -ಹಸಿರು ಗುಡಿಸಲು


ಈಶ ಮತ್ತು ವಾಸ ಗೆಳೆಯರು. ಅಕ್ಕ ಪಕ್ಕ ಇದ್ದ ಅವರ ಮನೆಯ ಈರ್ವರು ಶಾಲೆ ವಿದ್ಯಾಭ್ಯಾಸದಲ್ಲಿ ಭಿನ್ನಭಿನ್ನ ರಾಗಿದ್ದರು. ಈಶ ಕನ್ನಡ ಮಾಧ್ಯಮ ಓದುತ್ತಿದ್ದರೆ ವಾಸ ಆಂಗ್ಲಮಾಧ್ಯಮ ಶಾಲೆಗೆ ಪ್ರವೇಶ ಪಡೆದಿದ್ದ. ಸೂಟು-ಬೂಟು ಆತನ ಸಮವಸ್ತ್ರವಾದರೆ ಈಶನದು ನೆಹರೂ ಶರ್ಟ್ ಪೈಜಮಾ ಗಾಂಧಿ ಟೊಪ್ಪಿಗೆ ಕೊಲ್ಹಾಪುರಿ ಪಾದರಕ್ಷೆ.

      ವಾಸ ಶಾಲೆಗೆ ಹೋಗಬೇಕಾದರೆ ವಾಹನ ಬಂದು ಕರೆದುಕೊಂಡು ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದುಬಿಡುತ್ತಿತ್ತು. ಆದರೆ ಈಶನ ವಾಹನ ವೆಂದರೆ ಆತನ ಕಾಲುಗಳೇ. ಸರ್ಕಾರ ಕೊಡುವ ಬಿಸಿಊಟ ಮೊಟ್ಟೆ ಕುಡಿಯಲು ಹಾಲು ಆತನ ಉದರ ತುಂಬುತ್ತಿದ್ದವು.ಆದರೆ ವಾಸನದು  ಇಡ್ಲಿ-ಸಾಂಬಾರ್ ಚಪಾತಿ ಪಲ್ಲೆ ಜೀರಾ ರೈಸ್ ಮೃಷ್ಟಾನ್ನ ಭೋಜನ ವಾಗಿತ್ತು.

      ಹೀಗಿರುವಾಗ ಅವರು ಪ್ರೌಢಶಾಲೆಗೆ ಕಾಲಿಡುತ್ತಲೇ ವಾಸನಿಗೆ ಮೋಟಾರ್ಸೈಕಲ್, ಶಾಲೆಯಲ್ಲಿ ಆಡಲು ಕ್ರಿಕೆಟ್, ಜಿಮ್, ಕೇರಂ, ಕುಡಿಯಲು ಸಂಸ್ಕರಿಸಿದ ನೀರು. ಆದರೆ ಈಶ ಶಾಲೆಯ ಪಕ್ಕ ಹರಿಯುವ ಕೃಷ್ಣಾನದಿಯ ನೀರುಕುಡಿದು ತೋಟ ಪಟ್ಟಿಯಲ್ಲಿ ಆಟವಾಡಿ ಮನೆಯಲ್ಲಿ ರೊಟ್ಟಿ ಪುಂಡಿಪಲ್ಯ ಮೇಲೆ ಕುಡಿಯಲು ಮಜ್ಜಿಗೆ ಶಾಲೆಗೆ ಹೋಗಲು ಸೈಕಲ್ ಇವನಿಗೊದಗಿದವು. ಈಶ ನೇಗಿಲಯೋಗಿಯ ಮಗನಾದರೆ ವಾಸ ಧನಿಕನ ಮಗ.

     ಶಾಲೆಯ ಅಕಾಡೆಮಿಕ ವರ್ಷ ಮುಗಿಯುವ ಸಂದರ್ಭದಲ್ಲಿ ವಾಸನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು ಆ ಸವಿನೆನಪಿಗಾಗಿ ಈಶ ಕಲಿಯುವ ಕನ್ನಡ ಮಾಧ್ಯಮ ಶಾಲೆ ವಾಸ ಓದುವ ಆಂಗ್ಲಮಾಧ್ಯಮ ಶಾಲೆಯವರೆಗೆ ರಸಪ್ರಶ್ನೆ , ಕಬಡ್ಡಿ ಭಾರದ ಗುಂಡು ಎಸೆತ ಸ್ಪರ್ಧೆ ಏರ್ಪಡಿಸಲಾಗಿತ್ತು.  ಪ್ರಾರಂಭವಾದಾಗ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು .ಮಾತೃಭಾಷೆಯಲ್ಲಿ ನದಿ ನೀರು ಕುಡಿದು ತೋಟಪಟ್ಟಿ ಸುತ್ತಾಡಿದ ಮಕ್ಕಳು ಸೋಲಿಲ್ಲದ ಸರದಾರ ರಾದರು

       ಅಂತೂ ಇಂತೂ ಡಿಗ್ರಿ ಓದಿ ಮುಗಿಸಿದ ಈರ್ವರ ದಾರಿ ವಿರುದ್ಧವಾಗಿದ್ದವು. ಈಶ ಚೆನ್ನಾಗಿ ಓದಿ ಡಿಗ್ರಿ ಪಾಸಾಗಿ ಸರ್ಕಾರದ ಉದ್ಯೋಗ ಅರಸದೆ ಭಾರತದ ಬೆನ್ನೆಲುಬಾದ. ಆದರೆ ವಾಸ ಮಾತ್ರ ಡಾಲರ್ ಸಂಬಳ ಗಳಿಸಲು ಉದ್ಯೋಗ ಪಡೆದು ಅಮೆರಿಕ ವಿಶ್ವದ ದೊಡ್ಡಣ್ಣನ ನೆಲ ಸ್ಪರ್ಶಿಸಿದ. ಕಾರು ಬಂಗಲೆ ಮತ್ತು ರತ್ನ ಎಲ್ಲವೂ ಅವನ ಪಾಲಿಗೆ ಬಂದವು. ಬಡವರ ಬಂಧು ತನ್ನ ತೋಟದಲ್ಲಿ ಬೆಳೆದ ದವಸ ಧಾನ್ಯ ಹಣ್ಣು-ಹಂಪಲು ದೀನದಲಿತರಿಗೆ ಬಡವ ನಿರ್ಗತಿಕರಿಗೆ ದಾನ ಮಾಡಿ ಕರ್ಣನಾದ . ವಾಸ ದೈತ್ಯ ಕಂಟಕ ತಂದೊಡ್ಡಿದ ಕೊರೋಣ ಹೆಮ್ಮಾರಿಯಿಂದ ಅಮೆರಿಕಾದಲ್ಲಿನ ಉದ್ಯೋಗ ಕಳೆದುಕೊಂಡು ಮರಳಿಗೂಡಿಗೆ ಬಂದ. ಅರಮನೆಯಲ್ಲಿ ಹುಟ್ಟಿ ಬೆಳೆದವ ಬೆಂಕಿ ಉಂಡು ನಾಲಿಗೆ ಸುಟ್ಟುಕೊಂಡ . ಕೈಕೆಸರು ಮಾಡಿಕೊಂಡವ ಮೊಸರುಂಡು ಹಾಯಾಗಿದ್ದ.                           -  ಮಂದಾಕಿನಿ  ಎಸ್.ಬಿರಾದರ್
           ವಿಜಯಪುರ
ಪವಿತ್ರ ಹಬ್ಬ ರಂಜಾನ್


ಆ ಭಗವಂತನ ಸೃಷ್ಟಿಯಲ್ಲಿ ನಾವೆಲ್ಲಾ ಒಂದೇ ಅಂದ ಮೇಲೆ ಯಾವ ಧರ್ಮವು ಮೇಲಲ್ಲ ಕೀಳಲ್ಲ, ನಾವೆಲ್ಲರೂ ಒಂದೇ. ಮನುಷ್ಯ ಹುಟ್ಟಿದ ತಕ್ಷಣ ಒಂದು ಜಾತಿಯ ಹೆಸರು ಸೂಚಿಸಬೇಕಾಯಿತು. ಧರ್ಮಗಳು ಹಲವು ಇದ್ದರೇನು ಎಲ್ಲರೂ ಪೂಜಿಸುವ ದೇವರು ಒಂದೇ ತಾನೆ?ಆದರೆ ಆಚರಿಸುವ ಪದ್ಧತಿಗಳು ಸಂಪ್ರದಾಯಗಳು ಬೇರೆ ಬೇರೆಯಷ್ಟೇ.
 ಬೌದ್ಧ, ಜೈನ ,ಹಿಂದೂ, ಕ್ರೈಸ್ತ, ಮುಸ್ಲಿಂ, ಎಂದು ನಾನಾ  ಧರ್ಮಗಳು ಇರುವವು.

ಧರ್ಮವೊಂದೇ ಪ್ರತಿಪಾದಿಸುವುದು ಎಲ್ಲರೂ ಒಂದೇ, ಅಹಿಂಸಾ ತತ್ವದಿಂದ ನಡೆಯಿರಿ. ದೇವರ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುದ್ಧ ಮನಸ್ಸುಗಳಿಂದ ಮಾನವೀಯತೆಯ ವ್ಯಕ್ತಿತ್ವ ಬೆಳೆಸಿಕೊಂಡು ಸತ್ಯ ನಿಷ್ಠೆಯಿಂದ ನಡೆದುಕೊಳ್ಳುವುದೇ ಧರ್ಮ.

ಅಹಿಂಸಾಥಾಯ ಲೋಕನಾಂ ಧರ್ಮ ಪ್ರವಚನಂ* ಎಂದು ಇನ್ನೊಬ್ಬರನ್ನು ಹಿಂಸಿಸಿ ಬದುಕಬಾರದು ಎಂಬುದು ಇದರ ತಾತ್ಪರ್ಯ.

ಪ್ರಭುವಾರ್ತಾಯ ಭೂತಾನಾಂ
ಧರ್ಮ ಪ್ರವಚನ ಗೃತಂ
ಏಷ್ಯ ಪ್ರಭವ ಸವಿಯುಕ್ತಾಹ
ಸಧರ್ಮ ಇತಿ ನಿಷ್ಞ
ಎಲ್ಲ ಧರ್ಮಗಳು ಎತ್ತರಕ್ಕೆ ಇರುವುದು ಎಲ್ಲ ಧರ್ಮೀಯರು ಕೈ ಹಿಡಿದು ಪ್ರತಿಯೊಬ್ಬರು ಮೇಲಕ್ಕೇರಬೇಕು ಮತ್ತೊಬ್ಬರನ್ನು ತುಳಿದು ನಾವು ಮೇಲಕ್ಕೆ ಎರುವುದಲ್ಲ ಅದು ಅಧರ್ಮ ಎಂಬುವುದು ತಿಳಿಯಬೇಕು.

ಹಾಗೆ ಮುಸ್ಲಿಮರ ಹಬ್ಬ ರಂಜಾನ್ ವು ಒಂದು ವಿಶೇಷವಾದ ಪವಿತ್ರವಾದ ಹಬ್ಬವಾಗಿದೆ.
 ಈದ್ ಮುಬಾರಕ್ ಈದ್ಎಂದರೆ ಹಬ್ಬ ,ಮುಬಾರಕ್ ಎಂದರೆ ಶುಭಾಶಯ, ಹಾಗೆ ನನ್ನ ಎಲ್ಲ ಮುಸ್ಲಿಂ ಬಂಧುಗಳಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರುತ್ತಾ

ರಂಜಾನ್ ಹಬ್ಬದ ಮಹತ್ವವನ್ನು ಪ್ರಸ್ತಾಪಿಸುವೆ.
ಮಾನವ ತನ್ನ ಬದುಕಿನಲ್ಲಿ ಮಾಡುವ ಎಲ್ಲಾ ಪಾಪಗಳನ್ನು ವಿಮುಕ್ತಿಗೊಳಿಸಿಕೊಳ್ಳಲು, ಅಂದರೆ ಪರಿಹರಿಸಿಕೊಳ್ಳಲು ಇದೊಂದು ಸನ್ಮಾರ್ಗ ವೆಂದು ಈ ಹಬ್ಬ ಆಚರಿಸುವರು. ಎಲ್ಲ ಧರ್ಮಗಳಲ್ಲಿ ಅವರವರ ಸಂಪ್ರದಾಯದ ಕುರಿತಂತೆ ದೇವರಲ್ಲಿ ಪ್ರಾರ್ಥಿಸುವರು.

ಒಂದು ತಿಂಗಳು ರಂಜಾನ್ ತಿಂಗಳ ವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಉಪವಾಸ  (ರೋಜಾ) ಮಾಡುವುದುಂಟು ಕಟ್ಟುನಿಟ್ಟಿನ ಉಪವಾಸ ಮಾಡಿ ಈ ಒಂದು ತಿಂಗಳು ಸಹಾನುಭೂತಿಯ ತಿಂಗಳು ಸಹನೆಯ ತಿಂಗಳು ಎಂದೇ ಹೇಳಬಹುದಾಗಿದೆ.  ಈ ತಿಂಗಳಲ್ಲಿ ದಾನ ಧರ್ಮಗಳನ್ನು ಮಾಡುವುದು ಹೆಚ್ಚು.ಬಡವರಿಗೆ ನಿರ್ಗತಿಕರಿಗೆ ಅಬಲೆಯರಿಗೆ ಅಸಹಾಯಕ ಸ್ಥಿತಿಯಲ್ಲಿರುವ ಎಲ್ಲ ಜನರಿಗೂ ಈ ತಿಂಗಳ ಪೂರ್ತಿ ದಾನವನ್ನು ಮಾಡುತ್ತಾರೆ.ಅಲ್ಲಾಹ್ ಕೊಟ್ಟ ದುಡ್ಡನ್ನು ಇಂತಹ ದಾನ ಧರ್ಮಗಳನ್ನು ಮಾಡಿ  ಪಾಪಗಳನ್ನು ವಿಮುಕ್ತಿ ಗೊಳಿಸುವಂತಹ ಕಾರ್ಯ ಇದಾಗಿದೆ.
           ರಂಜಾನ್ ಆಚರಿಸುವ ದಿನದ ಹಿಂದಿನ ದಿನ ಚಂದ್ರ ಕಂಡಾಗಲೇ ಈ ಹಬ್ಬವನ್ನು  ಆಚರಿಸುತ್ತಾರೆ.
14 ಗಂಟೆಗಳ ಕಾಲ ಒಂದು ಹನಿ ನೀರು ಆಹಾರವನ್ನು ಸೇವಿಸದೆ ಕಟ್ಟುನಿಟ್ಟಿನ ಉಪವಾಸವನ್ನು ಕೈಗೊಂಡು, ಈ ತಿಂಗಳಲ್ಲಿ ಪ್ರತಿ ದಿನ ಕುರಾನ್ನನ್ನು ಸಹ ಓದುವವರು. ಕುರಾನ್ ಇದೊಂದು ಮಹಾ ಪವಿತ್ರವಾದ ಗ್ರಂಥ ಈ ಪುರಾಣವು ಮಾನವನ ಬದುಕಿನ ಬಗ್ಗೆ ಚಲಿಸಲಾಗುತ್ತದೆ ಮಹಮ್ಮದ್ ಪೈಗಂಬರ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕೊಡಾ ತಿಳಿಯಬಹುದು.  ಕುರಾನ್ ಆಶಯದಂತೆ ಜೀವನ ಸಾಗಿಸಬೇಕಾದರೆ ಅದಕ್ಕೆ ವಿಶೇಷ ತರಬೇತಿ ಬೇಕು. ಕುರಾನ್ ರೀತಿಯಲ್ಲಿ ಬದುಕಿದ ಮಹಮ್ಮದ್ ಪೈಗಂಬರ್ ಅವರ ಜೀವನ ಹೇಗಿತ್ತು, ಎಂದರೆ ಕುರಾನ್ ಪ್ರತಿ ಆದೇಶವೂ ಚಾಚು ತಪ್ಪದೆ ಪಾಲಿಸುತ್ತಿದ್ದರು ಅವರ ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದರು.
1450 ವರ್ಷಗಳ ಹಿಂದೆ ನಿರಂತರ 23 ವರ್ಷಗಳ ಅವಧಿಯಲ್ಲಿ ನೀಡಿದ ಕಾಲಘಟ್ಟ ಮತ್ತು ಆಯಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪ್ರವಾದಿ ಮಹಮ್ಮದರು ಹಂತ ಹಂತವಾಗಿ ಕುರಾನ್ ಅವಿರ್ಭಾವ ಗೊಳಿಸಿದ್ದರು.

6236 ವಚನಗಳಿಂದ ಕೂಡಿರುವ ಅರಬ್ಬಿ ಭಾಷೆಯಲ್ಲಿರುವ ಈ ಗ್ರಂಥದಲ್ಲಿ 30 ವಿಭಾಗಗಳನ್ನು 114ಅಧ್ಯಾಯಗಳು ಇವೆ. ವಿಶ್ವದಲ್ಲಿರುವ ಜನತೆಗೆ ಮಾರ್ಗದರ್ಶಿ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈ ಕುರಾನ್, ವಿಶ್ವದಲ್ಲಿ ಹೆಚ್ಚು ಓದುಗರನ್ನು ಹೊಂದಿದೆ ದುರಂತ ಎನ್ನುವ ಶ್ರೇಯ ಪಡೆದಿದೆ. ಕುರಾನ್ ಎಂಬ ಪದಕ್ಕೆ ವಿಶಿಷ್ಟವಾದ ಮಹತ್ವವಿದೆ ಕುರಾನ್ ಪ್ರತಿ ವಿಷಯದ ಬಗ್ಗೆ ಮಾತನಾಡುತ್ತದೆ.
ಜಗತ್ತಿನ ಸೃಷ್ಟಿ ವೈವಿಧ್ಯ ನೋಡಿ ಪಾಠ ಕಲಿಯಲು ಮನುಷ್ಯನಿಗೆ ಕರೆ ನೀಡುತ್ತದೆ ಮೂಲ ಅರಬಿ ಭಾಷೆಯಲ್ಲಿರುವ ಕುರಾನ್ ಇಂದು ಜಗತ್ತಿನ ಎಲ್ಲ ಭಾಷೆಗಳಿಗೆ ಭಾಷಾಂತರಗೊಂಡಿದೆ.ತನ್ನ ಆಕಾಂಕ್ಷೆಗಳನ್ನು ದೇವರ ಆದೇಶಗಳಿಗೆ ಅಧೀನ ಬರಿಸುವ ಶಕ್ತಿ ಮನುಷ್ಯನಿಗೆ ಸಿಗಬೇಕು, ಇದನ್ನು ಕುರಾನ್ ಕಲಿಸುತ್ತದೆ. ಜಾಗರೂಕತೆಯಿಂದ ಜೀವನ ಸಾಗಿಸಲು ಬೇಕಾದ ತರಬೇತಿ ಪ್ರತಿ ವರ್ಷ ರಂಜಾನ್ ತಿಂಗಳ ಪೂರ್ತಿ ಸಿಗುತ್ತದೆ. ಹಾಗಾಗಿ ಈ ಹಬ್ಬ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ ಎಲ್ಲರೂ ಸಂತಸದಿಂದ ಹೊಸ ಉಡುಪುಗಳನ್ನು ಧರಿಸಿ, ಖುಷಿಯಿಂದ ಸುರ್ಕುಂಬಾ ಎಂಬ ಪಾನೀಯವನ್ನು ಮಾಡಿ ಆಪ್ತ ಸ್ನೇಹಿತರಿಗೆ ಕರೆದು ಅಪ್ಪುಗೆಯಿಂದ ಪ್ರೀತಿಯಿಂದ ಶುಭಾಶಯ ಕೋರಿ  ಕುಡಿದು ಕುಪ್ಪಳಿಸುವ ಹಬ್ಬ ರಂಜಾನ್ ಹಬ್ಬ ಇದಾಗಿದೆ.

-ಮಮತಾ ಗುಮಶೆಟ್ಟಿ
 ವಿಜಯಪುರ