Friday, September 1, 2023

02-09-2023 EE DIVASA KANNADA DAILY NEWS PAPER

ಪ್ರಪ್ರಥಮ ಬಾರಿಗೆ ವಿನೂತನ ಶಿಕ್ಷಣ ಅದಾಲತ್ ಕಾರ್ಯಕ್ರಮ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಕುಂದು ಕೊರತೆ ನಿವಾರಣೆ ಅತ್ಯವಶ್ಯಕ : ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ

 ವಿಜಯಪುರ: ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಕರ ಕುಂದು ಕೊರತೆ ನಿವಾರಣೆ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು. 

ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಗಂಣದಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ಬಗೆಹರಿಸಲು  ಹಮ್ಮಿಕೊಂಡ ಶಿಕ್ಷಣ ಅದಾಲತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅವರು, ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಶಿಕ್ಷಣ ಇಲಾಖೆ ಕಾರ್ಯ ಅತಿ ಮುಖ್ಯ ಹಾಗೂ ಮಹತ್ವದ್ದಾಗಿದೆ. ಶಿಕ್ಷಕರ ಹಲವಾರು ಕುಂದು ಕೊರತೆಗಳ ನಿವಾರಣೆಗೆ ಪ್ರತಿ ದಿನ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿಸಲು ರಾಜ್ಯದಲ್ಲಿಯೇ ಪ್ರಪ್ರಥಮಬಾರಿಗೆ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಶಿಕ್ಷಕರು ಶಾಲಾ ಭೋಧನೆ ಬಿಟ್ಟು ಕಚೇರಿ ಕಚೇರಿ ಅಲೆದಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಅಸಾಧ್ಯ. ಆದ್ದರಿಂದ ಇಂದಿನ ಮಕ್ಕಳು ನಮ್ಮ ದೇಶದ ಮುಂದಿನ ಸತ್ಪ್ರಜೆಯನ್ನಾಗಿ ಮಾಡಲು ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿ ಸಲು ಏಕಗವಾಕ್ಷಿ ಪದ್ಧತಿಯಲ್ಲಿ ಶಿಕ್ಷಣ ಅದಾಲತ್ ಎಂಬ ವಿನೂತನ ಕಾರ್ಯ ಕ್ರಮ ಆಯೋಜಿಸಿಲಾಗಿದೆ. ಇದರ ನಿವಾರಣೆಗಾಗಿ ಇಂದು ಈ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆ ಗೂ ಮೀರಿ ಶಿಕ್ಷಕರು ಈ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ  ಜಿಲ್ಲಾ ಪಂಚಾಯತಿ ಅಧೀನ ದಲ್ಲಿ ಬರುವ ಎಲ್ಲ ಇಲಾಖೆಯ ಅಧಿಕಾ ರಿಗಳ ಮತ್ತು ಸಿಬ್ಬಂದಿಗಳ ಹಿತದೃಷ್ಠಿ ಯಿಂದ ಎಲ್ಲ ಇಲಾಖೆಗಳ ಕುಂದು ಕೊರತೆ ಅದಾಲತ್ ಹಮ್ಮಿಕೊಳ್ಳಲಾಗು ವುದು ಎಂದು ಅವರು ಹೇಳಿದರು. 

ಶಿಕ್ಷಣ ಅದಾಲತ್ ಕಾರ್ಯಕ್ರಮದಲ್ಲಿ ಇಂಡಿ ಮತ್ತು ವಿಜಯಪುರ ಗ್ರಾಮೀಣ ಭಾಗದ ನೂರಾರು ಶಿಕ್ಷಕರು ಬಾಗವಹಿಸಿ ಗಳಿಕೆ ರಜೆ ನಗದೀಕರಣ, ಹಬ್ಬದ ಮುಂಗಡ, ವೇತನ ಬಡ್ತಿ, ಕಾಲಮಿತಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಸೇವಾ ಪುಸ್ತಕ ಅಪಡೇಟ್ ಮಾಡುವುದು, ಶಿಸ್ತು ಕ್ರಮ, ಪಿಂಚಣಿ, ಜಿಪಿಎಫ್ ಮತ್ತು ವೈಧ್ಯಕೀಯ ಬಿಲ್ಲುಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಅದಾಲತ್ ನಲ್ಲಿ ಆಲಿಸಿ, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಯಿತು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು, ತಮ್ಮ ಕುಂದು ಕೊರತೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿ ಸಫಲರಾಗಿ ಹರ್ಷವನ್ನು ವ್ಯಕ್ತಪಡಿಸಿದರು. ಜಿಲ್ಲಾ ಶಿಕ್ಷಕರ ಸಂಘದ ಪ್ರತಿನಿದಿ ಅರ್ಜುನ ಲಮಾಣಿ ತಮ್ಮ ಸಂತಸವನ್ನು ವ್ಯಕ್ತಪಡಿಸಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿರುವುದರಿಂದ  ಜಿಲ್ಲೆಯ ಶಿಕ್ಷಕ ವರ್ಗಕ್ಕೆ ಉಪಯುಕ್ತವಾಗಿದೆ ಎಂದು ಹೇಳಿದರು. 

ಇಂತಹ ವಿನೂತನ ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. 

  ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಎನ್.ಎಚ್.ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಆಲಗೂರ, ಶ್ರೀಮತಿ ಪ್ರಮೋದಿನಿ ಬಳೋಲಮಟ್ಟಿ, ಉಪ ಯೋಜನಾ ಸಮನ್ವಯಾಧಿಕಾರಿ ಎಮ್.ಎ.ಗುಳೆದಗುಡ್ಡ, ಶ್ರೀಮತಿ ಟಿ.ಎಚ್.ಕೊಲ್ಹಾರ, ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಪಂಚಾಯತಿ ಮತ್ತು ಬಿಇಒ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪೋಷಣ್ ಮಾಸಾಚರಣೆ ಕಾರ್ಯಕ್ರಮ

 


ವಿಜಯಪುರ: ಶಿಶು ಅಭಿವೃದ್ಧಿ ಯೋಜನೆ ವಿಜಯಪುರ (ನಗರ) ಯೋಜನೆಯಲ್ಲಿ ಪೋಷಣ್ ಅಭಿಯಾಯಾನ ಯೋಜನೆಯಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.

ಸಂತೋಷ ಕುಂದರ್ ಹಿರಿಯ ಸಿವಿಲ್ ನ್ಯಾಯಾಧೀಶರು ಕಾನೂನು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ರವರು ಕಾರ್ಯಕ್ರಮ ಉದ್ಘಾಟಣೆ ನೆರವೆರಿಸಿ ಪೌಷ್ಠಿಕ ಆಹಾರ ಆರೋಗ್ಯಕ್ಕೆ ಎಷ್ಟು ಉತ್ತಮ ಅದರ ಮಹತ್ವವ ಏನು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿವಿಧ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳ ಒಮ್ಮುಖವನ್ನು ಖಾತ್ರಿಪಡಿಸುವ ಮೂಲಕ ಅಪೌಷ್ಟಿಕತೆ ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಗುರಿಯಾಗಿದೆ. ಇದು ಕುಂಠಿತ, ಅಪೌಷ್ಟಿಕತೆ, ರಕ್ತಹೀನತೆ (ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಲ್ಲಿ) ಮತ್ತು ಕಡಿಮೆ ಜನನ ಪ್ರಮಾಣವನ್ನು ಗುರಿಯಾಗಿಸುತ್ತದೆ ಎಂದರು.

ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯರು ದಿನೇಶ ಹಳ್ಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ದೀಪಾಕ್ಷಿ ಜಾನಕಿ ವಿಜಯಪುರ(ನಗರ) ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಝುಂಜರವಾಡ, ರಾಜಶೇಖರ ಜಿಲ್ಲಾ ಸಂಯೋಜಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಶ್ರೀಮತಿ ಅಶ್ವಿನಿ ಸನದಿ ಮೇಲ್ವಿಚಾರಕಿ ನಿರೂಪಿಸಿದರು.

ಇದೇ ಸಂಧರ್ಭದಲ್ಲಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು. ಇದಕ್ಕು ಮುನ್ನ ಸಹಿ ಕ್ಯಾಂಪಿಯನ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಕೇಕ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಮೇಲ್ವಿಚಾರಕಿಯರು, ಗರ್ಭಿಣಿ/ಬಾಣಂತಿಯರು ಕಾರ್ಯಕರ್ತೆ, ಸಹಾಯಕಿಯರು ಮುದ್ದು ಮಕ್ಕಳು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಆಡಳಿತ ನ್ಯಾಯಾಧೀಕರಣ ತರಬೇತಿಗೆ ಕಾನೂನು ಪದವೀಧರರ ಆಯ್ಕೆ

ವಿಜಯಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿಗೆ  ಪರಿಶಿಷ್ಟ ಜಾತಿಯ 25 ಹಾಗೂ ಪರಿಶಿಷ್ಟ ಪಂಗಡದ 11 ಕಾನೂನು ಪದವೀಧರರನ್ನು ಆಯ್ಕೆ ಮಾಡಲಾಗಿದೆ. 

ಸಮಾಜ ಕಲ್ಯಾಣ ಇಲಾಖೆ ಹಾಗೂ ಪದವಿಪುರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆ.29ರಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲಿಕ ಮಾನವರ, ಕಚೇರಿ ಅಧೀಕ್ಷಕರಾದ ಅರವಿಂದ ಲಂಬು, ಪ್ರಥಮ ದರ್ಜೆ ಸಹಾಯಕ ಬಸವರಾಜ ಕಾಮಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.