Thursday, August 31, 2023

01-09-2023 EE DIVASA KANNADA DAILY NEWS PAPER

ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ದಿವಸ ವಾರ್ತೆ  ಬೆಂಗಳೂರು ಆ 31: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ವಿರೋಧಿಗಳ ಒಡೆದು ಆಳುವ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜಯಂತೋತ್ಸವ ಮತ್ತು ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರು ಅಧ್ಯಕ್ಷರಾಗದೇ ಹೋಗಿದ್ದರೆ ನಮ್ಮ ದೇಶಕ್ಕೆ ಇಷ್ಟೊಂದು ಅರ್ಥಪೂರ್ಣವಾದ ಸಂವಿಧಾನ ದೊರೆಯುತ್ತಿರಲಿಲ್ಲ ಎಂದರು.

ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ಮುಖ್ಯಮಂತ್ರಿ ಸ್ಥಾನದ ಮೂಲಕ ಸಮರ್ಥವಾಗಿ ಜಾರಿ ಮಾಡಲು ದೇವರಾಜ ಅರಸು ಅವರು ಶ್ರಮಿಸಿದರು. ಹೀಗಾಗಿ ಅವರಿಗಿಂತ ಮುಂಚಿನ ಯಾವ ಮುಖ್ಯಮಂತ್ರಿಗಳೂ ಜಾರಿ ಮಾಡದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದರು ಎಂದು ವಿವರಿಸಿದರು. 

ದೇವರಾಜ‌ಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಕಾನೂನನ್ನು ಬಿಜೆಪಿ ಯವರು ಉಲ್ಟಾ ಮಾಡಿ ಉಳ್ಳವನೇ ಭೂ ಒಡೆಯ ಎಂದು ಬದಲಾಯಿಸಿಬಿಟ್ಟಿದ್ದಾರೆ. ಇದಕ್ಕಾಗಿ ಸಂವಿಧಾನ 79 (a), (b) ವನ್ನೇ ರದ್ದುಪಡಿಸಿದ್ದಾರೆ ಎಂದು ಟೀಕಿಸಿದರು. 

ಸಂವಿಧಾನ ವಿರೋಧಿಗಳಿಗೆ, ಬಡವ-ಮಧ್ಯಮ ವರ್ಗದ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟರೆ ಸಾಮಾಜಿಕ ನ್ಯಾಯ ನೆಗೆದು ಬೀಳುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ದೇವರಾಜ ಅರಸರು‌ ಹಾವನೂರು ವರದಿ ಜಾರಿ ಮಾಡುವವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಎಷ್ಟೇ ವಿರೋಧ ಬಂದರೂ ಎದೆಗುಂದದೆ ಎದೆಗಾರಿಕೆಯಿಂದ ಹಾವನೂರು ವರದಿ ಜಾರಿ ಮೀಡಿದ್ದು ಅರಸು ಅವರು ಎಂದು ಮೆಚ್ಚುಗೆ ಸೂಚಿಸಿದರು. 

ಅಧಿಕಾರ ಯಾರ ಕೈಗೆ ಕೊಡಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ ದಲಿತ-ಶೂದ್ರ ಸಮುದಾಯ ಪಡೆದುಕೊಳ್ಳಬೇಕು. ದಲಿತ-ಶೂದ್ರ-ಬಡವ ಮತ್ತು ಮಧ್ಯಮ ವರ್ಗಗಳಿಗೆ ಬದುಕಿನ ಅವಕಾಶ ದೊರಕಿದ್ದು ಸಂವಿಧಾನದಿಂದ. ಈ ಸಂವಿಧಾನವನ್ನು ದ್ಷೇಷಿಸುವವರ ಕೈಗೆ ಅಧಿಕಾರ ಕೊಟ್ಟರೆ ಬಡವ-ಮಧ್ಯಮ ವರ್ಗದವರ ಉದ್ದಾರ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

 ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ದಸಂಸ ಮುಖಂಡ ಡಿ.ಜಿ.ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


scp/tsp ಬಗ್ಗೆ BJP ಭಯಾನಕ ಸುಳ್ಳು ಹೇಳುತ್ತಿದೆ 

ಬಡವರ ಮತ್ತು ಮಧ್ಯಮ ವರ್ಗದವರ ಬದುಕಿಗೆ ಶಕ್ತಿ ತುಂಬುವ ಐದು ಗ್ಯಾರಂಟಿಗಳಿಗೆ scp/tsp ಹಣ ಬಳಕೆ ಎಂದು ಬಿಜೆಪಿ ಭಯಾನಕ ಸುಳ್ಳು ಹೇಳುತ್ತಿದೆ. ಇದನ್ನು ನಂಬಬೇಡಿ ದಾಖಲೆಗಳನ್ನು ನೋಡಿ ಬಿಜೆಪಿಯವರಿಗೆ ಪಾಠ ಕಲಿಸಿ ಎಂದರು.

Sunday, August 27, 2023

ತಂತ್ರಜ್ಞಾನದ ವೇಗ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತರಬೇತಿ ಪತ್ರಕರ್ತರಿಗೆ ಅಗತ್ಯವಿದೆ: ಕೆ.ವಿ.ಪ್ರಭಾಕರ್

 

ಈ ದಿವಸ ವಾರ್ತೆ

ದಾವಣಗೆರೆ ಆ 27: ತಂತ್ರಜ್ಞಾನದ ಬೆಳವಣಿಗೆ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪತ್ರಕರ್ತರಿಗೆ ತರಬೇತಿ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. 

ಪತ್ರಿಕೋದ್ಯಮವೂ ತಂತ್ರಜ್ಞಾನ ಮತ್ತು ಬದಲಾದ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು, ವೇಗವನ್ನು ಬದಲಾಯಿಸಿಕೊಳ್ಳುತ್ತಿದೆ. ಹಿಂದೆಲ್ಲಾ ಬರೆಯುವವರೊಬ್ಬರು, ಪ್ರೂಫ್ ನೋಡುವುದಕ್ಕೆ ಹಲವರು ಇರುತ್ತಿದ್ದರು. ಈಗ ಪ್ರೂಫ್ ರೀಡರ್ ಹುದ್ದೆಯೇ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳು ಅಸ್ತಿತ್ವ ಕಳೆದುಕೊಳ್ಳಬಹುದು. ಎಲ್ಲವನ್ನೂ ಸಂಪಾದಕರಿಂದ ವರದಿಗಾರರು ಮಾಡುವ ಕೆಲಸಗಳನ್ನೆಲ್ಲವನ್ನೂ ಮುಂದಿನ ದಿನಗಳಲ್ಲಿ ಒಬ್ಬರೇ ಮಾಡಬೇಕಾಗಬಹುದು. ಇಂತಹ  ಕೌಶಲ್ಯ ಪ್ರತಿಭೆಗಳನ್ನು ಸುದ್ದಿ ಸಂಸ್ಥೆಗಳು ಅರಸುತ್ತಿವೆ. ಹೀಗಾಗಿ ಇದಕ್ಕೆ ತಕ್ಕಂತೆ ಪತ್ರಿಕೋದ್ಯಮ ಮತ್ತು ಯುವ ಪೀಳಿಗೆಯ ಪತ್ರಕರ್ತರು ಸಜ್ಜಾಗಬೇಕಿದೆ. ಸಜ್ಜುಗೊಳ್ಳಲು ಬೇಕಾದ ತರಬೇತಿಯನ್ನು ಪತ್ರಕರ್ತರ ಕೂಟಗಳು, ಸಂಘಗಳು ನೀಡಬೇಕಾಗುತ್ತದೆ ಎಂದು ಆಶಿಸಿದರು. 

ತಂತ್ರಜ್ಞಾನದ ವೇಗಕ್ಕೆ ಪತ್ರಿಕೋದ್ಯಮ ಸಿಲುಕಿದ್ದರೂ ಪತ್ರಿಕಾ ವೃತ್ತಿಯ ಪ್ರಾಥಮಿಕ ಮತ್ತು ಮೂಲಭೂತ ಕಾಳಜಿ ಅದೇ ಇದೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಯ ಕಾಳಜಿ ಮತ್ತು ಜವಾಬ್ದಾರಿ ಈಗಲೂ ಪತ್ರಕರ್ತರ ಮೂಲಭೂತ ಕರ್ತವ್ಯವೇ ಆಗಿದೆ ಎಂದರು. 

ವಿರಕ್ತ ಮಠದ ಬಸವ ಪ್ರಭು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಸಂಘದ ಜಿಲ್ಲಾಧ್ಯಕ್ಷರಾದ ವಹಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಮಂಜುನಾಥ್, ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಕಣಸೋಗಿ  ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Saturday, August 26, 2023

ಜನರ ಹಿತ ಕಾಪಾಡುವುದು ಎಂದರೆ ಅದು ಸರ್ಕಾರದ ಹಿತ ಕಾಪಾಡಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ




 ದಿವಸ ವಾರ್ತೆ

ಬೆಂಗಳೂರು ಆ 26: ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ   ನಡೆದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ, 2023ರ ಸಭೆಯಲ್ಲಿ ಮಾತನಾಡಿದರು. 

ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಬಡವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಬಡವರಿಗೆ ನ್ಯಾಯ ಸಿಗದಿದ್ದರೆ ಸರಕಾರಿ ವಕೀಲರನ್ನು ನೇಮಿಸಿಕೊಂಡಿದ್ದು ಸಾರ್ಥಕ ಆಗುವುದಿಲ್ಲ ಎಂದರು. 

ಪ್ಲೀಡಿಂಗ್ಸ್ ಸರಿಯಾಗಿ, ಪರಿಣಾಮಕಾರಿಯಾಗಿ ಬರೆಯುವುದು ಬಹಳ ಮುಖ್ಯ. ಈ ಹಂತದಲ್ಲೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲಾ ಹಂತಗಳಲ್ಲಿ ವೈಫಲ್ಯ ಆಗುತ್ತದೆ. ಆದ್ದರಿಂದ ಬಹಳ ಜವಾಬ್ದಾರಿಯುತವಾಗಿ ಸರ್ಕಾರಿ ವಕೀಲರು ವರ್ತಿಸಬೇಕು ಎಂದು ಸೂಚಿಸಿದರು. 

ಸರ್ಕಾರಿ ವಕೀಲರು ಮತ್ತು ಅಧಿಕಾರಿಗಳ ವೈಫಲ್ಯಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವ್ಯಾಜ್ಯ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಹೋಂ ವರ್ಕ್ ಮಾಡಿ. ನಮಗೆ ಹಣ ಕೊಡುವುದು ಜನರು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿವೆ. ಈ ಬಗ್ಗೆ ನಮಗೆ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಹಾಗೂ ಧನ್ಯತೆ ಇರಬೇಕು ಎಂದರು. 

ಕೆಲವು ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು. ಪ್ರಕರಣಗಳಲ್ಲಿ ಅನಗತ್ಯವಾಗಿ ದಿನಾಂಕ ಪಡೆಯಬಾರದು. ಕೇಸು ನಡೆಸಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ಪರಿಣಾಮಕಾರಿಯಾಗಿ ವಿರೋಧಿಸಬೇಕು. ಅಲ್ಲೇ ನಿಮ್ಮಗಳ ಅರ್ಹತೆ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ಮುಖ್ಯಮಂತ್ರಿಗಳು ತಿಳಿ ಹೇಳಿದರು. 

ನ್ಯಾಯಾಂಗ ನಿಂಧನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸರ್ಕಾರವೇ ನಿಮ್ಮ ಕಕ್ಷಿದಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.  ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಸರ್ಕಾರ ಮತ್ತು ಜನರ ಹಿತ ಕಾಪಾಡುವ ಮತ್ತು ಸರ್ಕಾರದ ಆಸ್ತಿ ಉಳಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು. 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸಭೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರದ ಒಗ್ಗಟ್ಟಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಸ್ತಿನ ಸೇನಾಪತಿ ಡಾ.ನಾ.ಸು.ಹಡೀ೯ಕರ್

 ಈ‌‌ ದಿವಸ ವಾರ್ತೆ

ವಿಜಯಪುರ - ಭಾರತದ ಇತಿಹಾಸ ಪುಟಗಳಲ್ಲಿ  ಸ್ವಾತಂತ್ರ್ಯದ ಕ್ರಾಂತಿ ಕಹಳೆ ಊದಿದ  ಭಾರತ ಸೇವಾದಳ ಸಂಸ್ಥಾಪಕರಾದ ಡಾ|| ನಾರಾಯಣ ಸುಬ್ಬರಾವ್ ಹಡಿ೯ಕರ್ ಅವರು  ಮೇ 7, 1889 ರಂದು ಆಗಿನ ಧಾರವಾಡ ಜಿಲ್ಲೆ (ಈಗಿನ ಹಾವೇರಿ ಜಿಲ್ಲೆ) ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿಸ್ತು,ಸಂಯಮ,ಸಂಘಟನೆ ಹಾಗೂ ಸಂಸ್ಕೃತಿಗಳ ವಿಚಾರಶೀಲರಾಗಿದ್ದ ಡಾ|| ಹಡಿ೯ಕರ್ ಅವರು ರಾಷ್ಟ್ರದ ಒಗ್ಗಟ್ಟಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ಧರು.ಅವರ ಆದಶ೯ ಜೀವನವು ನಮ್ಮ ನಾಡಿಗೆ ಅದರಲ್ಲೂ ಇಂದಿನ ಯುವಜನಾಂಗಕ್ಕೆ ದಾರಿ ದೀಪವಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಎಸ್ ಪಿ ಬಿರಾದಾರ (ಕಡ್ಲೇವಾಡ) ಹೇಳಿದರು.              ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ ಹಾಗೂ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂ - ೨೪ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ಭಾರತ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ|| ನಾ,ಸು, ಹಡೀ೯ಕರ ಅವರ ೪೮ ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾ,ಸು, ಹಡೀ೯ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.                     ನಾ,ಸು, ಹಡೀ೯ಕರ ಅವರು ವೃತ್ತಿಯಲ್ಲಿ ವೈದ್ಯರಾಗಿರುವ ಕಾರಣ ತಮ್ಮ ಕೊನೆಯ ದಿನಗಳನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ಬಡ ರೋಗಿಗಳ ಸೇವೆ ಮಾಡುತ್ತಾ 1975 ಅಗಸ್ಟ್ 26 ರಂದು ಕೊನೆಯುಸಿರೆಳೆದರು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದರು.         

                                 

 ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿ ನಾ,ಸು ಹಡೀ೯ಕರ ಅವರ ಸಂಘಟನಾ ಚಾತುರ್ಯ ಮತ್ತು ಅವರ ತತ್ವ ಸಿದ್ಧಾಂತಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಸೇವಾದಳದ ಜಿಲ್ಲಾ ಕಾಯ೯ದಶಿ೯ ಎಸ್ ಜಿ ಕೋರಿ, ಜಿಲ್ಲಾ ಕೋಶಾಧ್ಯಕ್ಷ ಡಿ ಬಿ ಹಿರೇಕುರುಬರ, ತಾಲೂಕು ಉಪಾಧ್ಯಕ್ಷ ರಾಜು ಹಿಪ್ಪರಗಿ, ಕೋಶಾಧ್ಯಕ್ಷ ಬಸವರಾಜ ಜೋರಾಪೂರ, ಸದಸ್ಯರಾದ ಡಾ, ಹೆಚ್ ಎಮ್ ಮುಜಾವರ, ತಾಲೂಕು ಕಾರ್ಯದರ್ಶಿ ಎಸ್ ಎಸ್ ಬ್ಯಾಕೋಡ, ಸಂಪನ್ಮೂಲ ಶಿಕ್ಷಕ ಸೋಮಶೇಖರ್ ರಾಠೋಡ ಶಾಲಾ ಮುಖ್ಯ ಗುರುಗಳಾದ ವಿ ಎಸ್ ಹಾಲವರ ಹಾಗೂ ಸೇವಾದಳ ಮಕ್ಕಳು ಉಪಸ್ಥಿತರಿದ್ದರು.

ದಲ್ಲಾಳಿಗಳಿಂದ ನಷ್ಟ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರು ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಣೆಗೆ ಒತ್ತಾಯ

 ಈ ದಿವಸ ವಾರ್ತೆ

ವಿಜಯಪುರ: ಇಡೀ ದೇಶದಲ್ಲಿ ದ್ರಾಕ್ಷಿ ಬೆಳೆಗೆ ಮಹಾರಾಷ್ಟç ರಾಜ್ಯ ಪ್ರಥಮ ಸ್ಥಾನ ಬಿಟ್ಟರೆ ಎರಡನೆಯದ್ದು ಕರ್ನಾಟಕ ರಾಜ್ಯ. ಅದರಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಶೇ.70 ರಷ್ಟು ದ್ರಾಕ್ಷಿ ಬೆಳೆದ ರೈತರಿದ್ದಾರೆ ಮತ್ತು ರುಚಿಕಟ್ಟಾದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಉಳ್ಳ ದ್ರಾಕ್ಷಿ ವಿಜಯಪುರ ಜಿಲ್ಲೆಯದ್ದಾಗಿದೆ. ಆದರೆ ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಇಲ್ಲ. ಒಂದು ಕೆ.ಜಿ. ಒಣದ್ರಾಕ್ಷಿಗೆ ಈ ಸದ್ಯದ ಮಾರುಕಟ್ಟೆ ಬೆಲೆ ಪ್ರತಿ ಕೆ.ಜಿ.ಗೆ. ಕೇವಲ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕಳೆದ ವರ್ಷ ಅಲ್ಪಸ್ವಲ್ಪ ಒಣ ದ್ರಾಕ್ಷಿಗೆ 200 ರಿಂದ 250 ರೂ. ಬೆಲೆ ಇತ್ತು ಆದರೆ ಈ ಭಾರಿ ಸಂಪೂರ್ಣ ಬೆಲೆ ಕುಷಿತ ಕಂಡಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರು ತೀವ್ರ ಕಂಗಾಲಾಗಿದ್ದಾರೆ. ಒಣದ್ರಾಕ್ಷಿ ಮಾನವ ಕುಲಕ್ಕೆ ಅತ್ಯಂತ ಉಪಯುಕ್ತವಾಗಿದೆ. ಅದರಲ್ಲಿ ಸುಮಾರು 20 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಒಣ ದ್ರಾಕ್ಷಿ ಹೊಂದಿದೆ. ಅದರಲ್ಲಿ ವಿಟ್ಯಾಮಿನ್ ಬಿ6, ವಿಟ್ಯಾಮಿನ್ ಸಿ, ಗ್ಲೂಕೋಶ್ ಕ್ಯಾಲ್ಸಿಯಮ್ನ, ಮ್ಯಾಗ್ನಿಸಿಯಂ, ಪೊಟ್ಯಾಸಿಯಂ,. ಐರಾನ್ ಸೇರಿದಂತೆ ಹಲವಾರು ವಿಟ್ಯಾಮಿನ್‌ಗಳು ಒಣದ್ರಾಕ್ಷಿಯಲ್ಲಿ ಲಭ್ಯವಿವೆ. ಇದನ್ನು ಮಕ್ಕಳು ಸೇವಿಸುವದರಿಂದ ಅವರಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳು ಕೂಡ ನೀಡಿದರೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಆದ್ದರಿಂದ ಸರ್ಕಾರ ಕನಿಷ್ಠ 50 ಗ್ರಾಮ ನಷ್ಟು ಮನುಕನ್ನು ವಿತರಣೆ ಮಾಡಬೇಕು ಎಂದು ದೇವರ ಹಿಪ್ಪರಗಿ ಸದಯ್ಯನ ಮಠದ ಶ್ರೀಗಳಾದ ವೀರಗಂಗಾಧರ ಸ್ವಾಮಿಗಳು ಹಾಗೂ ರೈತ ಮುಖಂಡ ಅರವಿಂದ ಕುಲಕರ್ಣಿ ಹೇಳಿದರು.

ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಇಡೀ ವರ್ಷ ಕಷ್ಟ ಪಟ್ಟು ದ್ರಾಕ್ಷಿ ಬೆಳೆದು ನಂತರದ ಮನುಕು ತಯಾರಿಸಿ ಮಾರುಕಟ್ಟೆಗೆ ಸಾಗಿಸಿದರೆ ಕೇವಲ 60 ರಿಂದ 70 ರೂಪಾಯಿ ಪ್ರತಿ ಕೆ.ಜಿ.ಗೆ ಮಾರಾಟವಾಗುತ್ತಿವೆ. ಖರೀದಿ ಮಾಡಿದ ನಂತರ ದಲ್ಲಾಳಿಗಳು ಏನು ಕಷ್ಟ ಪಡದೆ 4 ಪಟ್ಟು ಲಾಭ ಪಡೆಯತ್ತಾರೆ. ದಲ್ಲಾಳಿಗಳು ಯಾವುದೇ ಬೆವರು ಸುರಿಸದೆ, ಕಷ್ಟ ಪಡದೆ ಹಣ ಗಳಿಸುತ್ತಾರೆ. ಆದರೆ ದ್ರಾಕ್ಷಿ ಬೆಳೆದ ರೈತ ಮಾತ್ರ ಇನ್ನು ಬಡತನದ ಬೇಗೆಯಲ್ಲಿ ಬಳಲುತ್ತಿದ್ದಾನೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಹಾಗೂ ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯನ್ನು ಅಂದಾಜು 90 ಸಾವಿರದಿಂದ 90 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದು 7 ರಿಂದ 8 ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪನ್ನ ಮಾಡಲಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವೇ ರೈತರಿಂದ ಬೆಂಬಲ ಬೆಲೆ ನೀಡಿ ನೇರವಾಗಿ ಖರೀದಿಸಬೇಕು. ಆದ್ದರಿಂದ ತಾವುಗಳು ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೇದ ಮರೆತು ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಿ ಅವರಿಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ಮಠಾಧೀಶರ ಹಾಗೂ ರೈತರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ಪ್ರತಿ ಕೆಜೆ ಒಣ ದ್ರಾಕ್ಷಿಗೆ ಕನಿಷ್ಠ 250 ರೂಪಾಯಿ ಬೆಲೆ ನಿಗಧಿಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿದರು. ದಿನಾಂಕ: 07-09-2023 ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ನಾಡಿನ ಹಲವಾರು ಮಠಾಧೀಶರ ಸಮ್ಮುಖದಲ್ಲಿ ಕನಿಷ್ಠ 5 ರಿಂದ 6 ಸಾವಿರ ದ್ರಾಕ್ಷಿ ಬೆಳೆದ ರೈತರು ರೈತಪರ ಸಂಘಟನೆಗಳವತಿಯಿAದ ಬೃಹತ್ ಪ್ರಮಾಣದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಯುವ ರೈತರು ರೈತಪರ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಸಂಗಮೇಶ ಸಗರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಕಾರ್ಯದರ್ಶಿ ಜೀರದಾಳ ವಕೀಲರು, ಪ್ರೊ. ಐ.ಜಿ. ಹಿರೇಮಠ, ಸೇರಿದಂತೆ ಮುಂತಾದವರು ಇದ್ದರು.

ಪರ್ಯಾಯ ಕನ್ನಡ ಚಲನಚಿತ್ರದ ಟ್ರೇಲರ್ ಬಿಡುಗಡೆ

ಈ ದಿವಸ ವಾರ್ತೆ

ವಿಜಯಪುರ: ಮಮತಾ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಕನ್ನಡ ಚಲನಚಿತ್ರ ಪರ್ಯಾಯ, ಮೂರು ವ್ಯಕ್ತಿಗಳು ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಹುಡುಕಿಕೊಂಡು ಹೋಗುವ ಪರ್ಯಾಯ ಮಾರ್ಗಗಳು ಅದರಿಂದ ಅಗುವ ಘಟನೆಗಳ ಸುತ್ತ ಪರ್ಯಾಯ ಕತೆ ಸಾಗುತ್ತದೆ, ಹೊಸ ಕಲಾವಿದರ ಒಂದು ವಿನೂತನ ಪ್ರಯೋಗದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಲಿರುವ ಪರ್ಯಾಯ ವಾಸ್ತವ ನೆಲೆಗಟ್ಟಿನಲ್ಲಿ ಒಂದು ಉತ್ತಮ ಅಂಶವನ್ನು ಇಟ್ಟುಕೊಂಡು ಸಪ್ಟೆಂಬರ್ ಎಂಟರAದು ತೆರೆಗೆ ಬರಲಿದೆ ಎಂದು ನಿರ್ದೇಶಕ ರಮಾನಂದ ಮಿತ್ರ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಕನ್ನಡ ಚಲನಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲವೂ ಉತ್ತಮ ಸಂದೇಶ ನೀಡುವ ಹಾಡುಗಳಾಗಿವೆ, ಅಜಯ್ ವಾರಿಯರ್, ನಾದಿರಾ ಬಾನು, ಮೆಹಬೂಬ್ ಸಾಬ್, ಲೆಮನ್ ಪರಶುರಾಮ್ ಹಾಡಿದ್ದಾರೆ.

ರಾಜಕುಮಾರ್, ಶ್ರೀಮತಿ ಇಂದುಮತಿ ರಾಜಕುಮಾರ್ ನಿರ್ಮಾಪಕರಾಗಿದ್ದಾರೆ. ಮುರುಗೇಶ್ ಬಿ ಶಿವಪೂಜೆ, ಶಿವಾನಂದ ಚಿಕ್ಕಮಠ ಸಹ ನಿರ್ಮಾಪಕರಾಗಿದ್ದಾರೆ. ರವೀಶ್ ರಾಮ್ ಸಂಗೀತ ನೀಡಿದ್ದಾರೆ. ಜಿ. ರಂಗಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. ಜೀವನ್ ಪ್ರಕಾಶ್ ಸಂಕಲನ ಮಾಡಿದ್ದಾರೆ. ಮೂರ್ತಿ ನಿಡುವಳ್ಳಿ ಪ್ರಸಾದನ ಸೇವೆ ನೀಡಿದ್ದಾರೆ.

ಈ ಚಿತ್ರದಲ್ಲಿ ರಾಜಕುಮಾರ್, ಮುರುಗೇಶ್ ಬಿ ಶಿವಪೂಜಿ, ರಂಜನ್ ಕುಮಾರ್, ಜಯಂತಿ ರೇವಡಿ, ಅರ್ಚನಾ ಶೆಟ್ಟಿ, ಪ್ರಿಯಾ ಕೊಠಾರಿ, ಭೀಮ ನಾಯಕ್, ಬೆಳಗಾವಿ ಕಟ್ಟಪ್ಪ, ದಿನೇಶ್ ಖಾಂಡ್ಯ, ಸುರೇಶ್ ಬೆಳಗಾವಿ, ಕಂಪರಾಜ್ ಇತರರು ಅಭಿನಯಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪರ್ಯಾಯ ಕನ್ನಡ ಚಲನಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಗರದ ಅಧ್ಯಕ್ಷರಾದ ಫಯಾಜ ಕಲಾದಗಿ, ಹಿರಿಯ ಪತ್ರಕರ್ತರಾದ ಪ್ರದೀಪ ಕುಲಕರ್ಣಿ ಉಪಸ್ಥಿತರಿದ್ದರು.

Thursday, August 24, 2023

25-08-2023 EE DIVASA KANNADA DAILY NEWS PAPER

ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ : ಐತಿಹಾಸಿಕ ಸಾಧನೆ : ಮುಖ್ಯ ಮಂತ್ರಿ ಸಿದ್ದರಾಮಯ್ಯ

 ಈ ದಿವಸ ವಾರ್ತೆ

ಬೆಂಗಳೂರು, ಆಗಸ್ಟ್ 24:  ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವುದು ಐತಿಹಾಸಿಕ ಸಾಧನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಳಿಗ್ಗೆ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು

ಇಸ್ರೋ  ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ . ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ   ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದರು.  

ಸರ್ಕಾರದ ವತಿಯಿಂದ  ಸನ್ಮಾನ

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇಸ್ರೋ ವಿಜ್ಞಾನಿಗಳನ್ನು  ಸರ್ಕಾರ ಗೌರವಿಸಲಿದೆ ಎಂದರು. ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ  ಕರ್ನಾಟಕದ 500 ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡಿದ್ದು, ಅವರೆಲ್ಲರಿಗೂ ಸನ್ಮಾನಿಸಲಾಗುವುದು ಎಂದರು. 3 ಲಕ್ಷ 84 ಕಿಮೀ ಪ್ರಯಾಣ ಮಾಡಿರುವ ವಿಕ್ರಂ ಸಾಧನೆ ಕಡಿಮೆಯಲ್ಲ. ಸರ್ಕಾರದ ಸಹಕಾರ ಬೆಂಬಲ ಇರಲಿದೆ. ಇದು ದೇಶದ ಹೆಮ್ಮೆ ಎಂದರು.

ದಿನಾಂಕ ನಿಗದಿ

ವಿಜ್ಞಾನಿಗಳು ಹಗಲು ಇರುಳು ಎನ್ನದೆ ಇದಕ್ಕಾಗಿ ಶ್ರಮಿಸಿದ್ದಾರೆ. ದೇಶದ ಒಟ್ಟು ಒಂದು ಸಾವಿರ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದಲೇ 500 ಜನ ಪಾಲ್ಗೊಂಡಿದ್ದಾರೆ.  ಸೆಪ್ಟೆಂಬರ್ 02 ರ ನಂತರ ಸನ್ಮಾನ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದರು.

Tuesday, August 22, 2023

ದೇಶ ರಕ್ಷಕ ಪಡೆಯ 5ನೇ ವಾರ್ಷಿಕೋತ್ಸವ ಹಾಗೂ ಚಂದ್ರಯಾನ 3ರ ನೇರ ಪ್ರಸಾರ


 ಈ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ 5ನೇ ವಾರ್ಷಿಕೋತ್ಸವ ಹಾಗೂ ಚಂದ್ರಯಾನ 3ರ ನೇರ ಪ್ರಸಾರ ಕಾರ್ಯಕ್ರಮವನ್ನು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರುಗಡೆ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದೆ.

ಮಧುಮೇಹ ತಜ್ಞರು ಹಾಗೂ ಬಿಜೆಪಿ ಮುಖಂಡರಾದ ಡಾ. ಬಾಬುರಾಜೇಂದ್ರ ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರ ಮಟ್ಟದ ಉತ್ತಮ  ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ನಾರಾಯಣ ಬಾಬಾನಗರ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ ಭಾಗವಹಿಲಿಸದ್ದಾರೆ.

ವಿಶೇಷ ಆಹ್ವಾನಿತರಾಗಿ ಗೆಜ್ಜಿ ಕರಿಯರ ಅಕಾಡೆಮಿಯ ಸಂಸ್ಥಾಪಕರಾದ ಸುರೇಶ ಗೆಜ್ಜಿ ಅವರು ಭಾಗವಹಿಸಲಿದ್ದಾರೆ ಎಂದು ದೇಶ ರಕ್ಷಕ ಪಡೆಯ ರೋಹನ ಆಪ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ – ಗ್ರಂಥಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್



ಈ ದಿವಸ ವಾರ್ತೆ 

ವಿಜಯಪುರ :  ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಂಗಳವಾರ ಸಂಜೆ ಜಿಲ್ಲಾಸ್ಪತ್ರೆಗೆ ದಿಢೀರ ಭೇಟಿ ನೀಡಿ ಆಸ್ಪತ್ರೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಆಭಾ ಸೆಂಟರ್ ವಿಭಾಗ, ಫಾರ್ಮಾಸಿ ವಿಭಾಗ, ಎನ್‍ಆರ್‍ಸಿ ಮಕ್ಕಳ ವಿಭಾಗ, ತುರ್ತು ವಿಭಾಗ, ಚಿಕ್ಕ ಮಕ್ಕಳ ವಿಭಾಗ, ಚಿಕ್ಕ ಮಕ್ಕಳ ತುರ್ತು ಚಿಕಿತ್ಸಾ ವಿಭಾಗ, ಡಯಾಲಿಸಿಸ್ ವಿಭಾಗ ಹಾಗೂ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಎಲ್ಲ ಅಗತ್ಯ ಔಷಧಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹಿತದೃಷ್ಟಿಯಿಂದ ಅವರ ಆರೋಗ್ಯ ಮತ್ತು ಮನರಂಜನೆಗಾಗಿ ಉದ್ಯಾನವನ ನಿರ್ಮಾಣ ಮಾಡಬೇಕು. ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಆಸ್ಪತ್ರೆಯಲ್ಲಿ ಆಧುನಿಕ ಅಡುಗೆ ಕೋಣೆ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 


ಈ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಉಪಚಾರಕ್ಕಾಗಿ ಬಂದ ರೋಗಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು. ಅಪೌಷ್ಟಿಕತೆಯಿಂದ ಬಳಲುತ್ತಿರುವ (ಎನ್.ಆರ್.ಸಿ.) ಮಕ್ಕಳ ಹಾಗೂ ತಾಯಂದಿರ ಯೋಗಕ್ಷೇಮದ ಬಗ್ಗೆ ವಿಚಾರಿಸಿ, ಅವರಿಗೆ ಒದಗಿಸುತ್ತಿರುವ ವೈದ್ಯಕೀಯ ಸೇವೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. 


ಆವರಣದಲ್ಲಿರುವ ಪಿ.ಎಸ್.ಎ. ಪ್ಲಾಂಟ್, ಸಖಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಆರ್.ಟಿ.ಪಿ.ಸಿ.ಆರ್ ಸೆಂಟರ್, ಎಮ್.ಆರ್.ಐ ಸೆಂಟರ್ ಎಮ್.ಸಿ.ಎಚ್ ಆಸ್ಪತ್ರೆಯ ಎಲ್ಲಾ ವಿಭಾಗ ಸೇರಿದಂತೆ ಪೂರ್ಣಗೊಳ್ಳುವ ಹಂತದಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಹಾಗೂ ಟ್ರಾಮಾ ಕೇರ್ ಕಟ್ಟಡವನ್ನು ಹಸ್ತಾಂತರಿಸಿದ ಕಡತಗಳ ಕುರಿತು ಪರಿಶೀಲನೆ ನಡೆಸಿದರು. 

ಜಿಲ್ಲಾ ಆಸ್ಪತ್ರೆಗೆ ಭೇಟಿ ನಿಡಿದ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಎಲ್.ಲಕ್ಕಣ್ಣವರ ಅವರು ಶ್ರೀ ಸಿದ್ದೇಶ್ವರ ಸ್ವಾಮಿಜಿ ಯವರ ರಚಿಸಿದ ಪುಸ್ತಕವನ್ನು ನೀಡಿ ಜಿಲ್ಲಾಧಿಕಾರಿಗಳಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ಎ.ಜಿ.ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಅದಿಕಾರಿಗಳಾದ ಕಟ್ಟಿಮನಿ, ಸಹಾಯಕ ಆಡಳಿತಾಧಿಕಾರಿ ಎ.ಎ.ಸಿಂದಗಿಕರ, ಡಾ. ಆನಂದ ಝಳಕಿ, ಡಾ.ಪರಶುರಾಮ ದೇವಮಾನೆ, ಶುಶ್ರೂμÁಧಿಕಾರಿ ಶ್ರೀಮತಿ ಬಿಸನಾಳ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ : ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದ ಹತ್ತಿರದ ಸುಭಾಸಚಂದ್ರ ಭೋಸ್ ವೃತ್ತ, ಅಲ್‍ಅಮೀನ್ ಮೆಡಿಕಲ್ ಕಾಲೇಜ್ ಹಾಗೂ ತೊರವಿ ರಸ್ತೆಯ ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ವಿಜಯಪುರ-ಅಥಣಿ-ಮುರಗುಂಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿವೀಕ್ಷಣೆ ನಡೆಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ನಿವಾರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯ ಪಾಟೀಲ, ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಉಪಸ್ಥಿತರಿದ್ದರು.


ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ : ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಟಿ.ಭೂಬಾಲನ್

 

ವಿಜಯಪುರ :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ  ಕುಟುಂಬದ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ಮಾಹೆ 2000 ರೂ. ಡಿಬಿಟಿ ಮೂಲಕ ಒದಗಿಸುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ ಆ.30 ರಂದು ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಜುಲೈ 19 ರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ 300 ಗ್ರಾಮ ಒನ್ ಕೇಂದ್ರ, ನಗರ ಸ್ಥಳೀಯ ಸಂಸ್ಥೆ ಕೇಂದ್ರಗಳು ಸೇರಿದಂತೆ 41 ಕರ್ನಾಟಕ ಒನ್ ಕೇಂದ್ರಗಳು, 211 ಬಾಪೂಜಿ ಸೇವಾ ಕೇಂದ್ರಗಳು ಒಳಗೊಂಡಂತೆ 552 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಅವರ ಪತಿಯ ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ ವಿವರ ಅಗತ್ಯವಾಗಿರುತ್ತವೆ. ಈ ಯೋಜನೆಯಡಿ ನೊಂದಾಯಿಸಲು ಯಾವುದೇ ಶುಲ್ಕವಿರುವುದಿಲ್ಲ ಸಂಪೂರ್ಣ ಉಚಿತವಾಗಿದೆ.

ಜಿಲ್ಲೆಯಲ್ಲಿ ಮಹಿಳೆ ಯಜಮಾನಿಯಾಗಿರುವ 5,20,906 ರೇಷನ್ ಕಾರ್ಡಗಳಿದ್ದು, ಇದರಲ್ಲಿ ಆಗಸ್ಟ್ 20ರವರೆಗೆ 4,24,839 ಫಲಾನುಭವಿಗಳು ಗೃಹ ಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದು, ಶೇ.82 ರಷ್ಟು ಸಾಧನೆಯಾಗಿದೆ. ಉಳಿದ ಅರ್ಜಿಗಳ ನೊಂದಣಿ ಕಾರ್ಯ ಪ್ರಗತಿಯಲ್ಲಿದೆ.

ಜುಲೈ 30ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗಳು ಭಾಗವಹಿಸಬೇಕೆಂಬ ಸದುದ್ದೇಶ ಹಾಗೂ ಎಲ್ಲ ಫಲಾನುಭವಿಗಳು ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲೆಯ 288 ಸ್ಥಳೀಯ ಸಂಸ್ಥೆಗಳ ವಾರ್ಡಗಳಲ್ಲಿ ಹಾಗೂ 211 ಗ್ರಾಮ ಪಂಚಾಯತ್ ಸೇರಿದಂತೆ ಒಟ್ಟು 499 ಸ್ಥಳಗಳಲ್ಲಿ  ಏಕಕಾಲದಲ್ಲಿ ಯಶಸ್ವಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಓರ್ವ ನೊಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಕಾರ್ಯಕ್ರಮ ಸ್ಥಳದಲ್ಲಿ 10/10 ಅಳತೆಯ ಎಲ್‍ಇಡಿ ವ್ಯವಸ್ಥೆ 200 ರಿಂದ 2000 ಫಲಾನುಭವಿಗಳು ಭಾಗವಹಿಸಲು ಆಸನ ವ್ಯವಸ್ಥೆ, ಉಪಹಾರ ನೀರಿನ ವ್ಯವಸ್ಥೆ ಮಾಡಲಾಗಿದೆ. 

ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ  ನೀಡಲಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮವು ನಗರದ ಸ್ಟೇಶನ್ ರಸ್ತೆಯಲ್ಲಿರುವ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಲ್ಲಿ ಜರುಗಲಿದೆ. ತಾಲೂಕಾ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಮೈಸೂರು ಕಾರ್ಯಕ್ರಮದ ಸ್ಥಳದಿಂದ ಜಿಲ್ಲೆಯ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಸಂವಾದ ನಡೆಸಲು ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ. 

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ನಾಡಗೀತೆ, ಮೈಸೂರು ಕಾರ್ಯಕ್ರಮದ ನೇರ ಪ್ರಸಾರ, ಪ್ರತಿಜ್ಞಾ ವಿಧಿ ಬೋಧನೆ, ಮೈಸೂರದಿಂದ ಹಣ ಬಿಡುಗಡೆಯ ಪ್ರಕ್ರಿಯೆ, ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸಂವಾದ ಕಾರ್ಯಕ್ರಮಗಳು ಜರುಗಲಿವೆ. ಈ ಜನಪರ ಯೋಜನೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಫಲಾನುಭವಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. 


23-08-2023 EE DIVASA KANNADA DAILY NEWS PAPER

ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದ ರೈತರ ಸಮಸ್ಯೆ ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಭೆ: ರೈತ ಮುಖಂಡರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ


ಈ ದಿವಸ ವಾರ್ತೆ

ಬೆಂಗಳೂರು, ಆಗಸ್ಟ್‌ 22-ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಓ.ಟಿ.ಎಸ್. (One Time Settlement) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್‌ ಹಾಗೂ ಪ್ರವರ್ತಕ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ಬಿ.ಆರ್. ಪಾಟೀಲ ಹಾಗೂ ದರ್ಶನ್‌ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ರೈತ ಮುಖಂಡರ ನಿಯೋಗದೊಂದಿಗೆ ಈ ಸಮಸ್ಯೆ ಕುರಿತು ಚರ್ಚೆ ನಡೆಸಿದರು.



ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆ ಸಾಲ ಪಡೆದ ರೈತರು, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ ದಂತಹ ಸಮಸ್ಯೆಗಳಿಂದಾಗಿ ಸಕಾಲದಲ್ಲಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸಾಲ ಮರುಪಾವತಿಗೆ ನೋಟೀಸು, ಲೀಗಲ್‌ ನೋಟೀಸುಗಳನ್ನು ಕಳುಹಿಸಿ, ಅದರ ವೆಚ್ಚವನ್ನೂ ರೈತರ ಮೇಲೆಯೇ ಹಾಕುತ್ತಿದ್ದಾರೆ. ಇಂತಹ ಕ್ರಮಗಳಿಂದಾಗಿ 30,000 ರೂ. ಮೊತ್ತದ ಸಾಲಕ್ಕೆ 2.8 ಲಕ್ಷ ರೂ. ಪಾವತಿಸುವಂತೆ, 3 ಲಕ್ಷ ರೂ. ಸಾಲಕ್ಕೆ 3೦ ಲಕ್ಷ ರೂ. ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಪ್ರತಿಭಟಿಸಿ, 8 ತಿಂಗಳಿನಿಂದ ರೈತ ಹೋರಾಟಗಾರರು ಧರಣಿ ನಡೆಸುತ್ತಿದ್ದಾರೆ. ರೈತರು ಓ.ಟಿ.ಎಸ್. ಅಡಿ  ಶೇ. 50 ರಷ್ಟು ಅಸಲು ಪಾವತಿಸಲು ಸಿದ್ಧರಿದ್ದಾರೆ. ರೈತರ ಸಮಸ್ಯೆ ಬಗೆಹರಿಸಿ, ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಹಲವು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಈ ಅನುಕೂಲ ಕಲ್ಪಿಸಿವೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್‌ ಅಧಿಕಾರಿಗಳು, ಬ್ಯಾಂಕಿನ ಆಡಳಿತ ಮಂಡಳಿ ಇದಕ್ಕೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕಿನಲ್ಲಿ 6500 ಕೋಟಿ ರೂ. ಸುಸ್ತಿ ಸಾಲವಿದ್ದು, ಅದರಲ್ಲಿ 5000 ಕೋಟಿ ರೂ. ಬೆಳೆ ಸಾಲವಾಗಿದೆ ಎಂದರು. ಬ್ಯಾಂಕಿನ ಅಧ್ಯಕ್ಷರು ಗೈರು ಹಾಜರಾದ ಕುರಿತು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರೈತರ ಕುರಿತು ಮಾನವೀಯತೆಯಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರಲ್ಲದೆ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಿಸಿದ ಬ್ಯಾಂಕರುಗಳ ಸಭೆ ನಡೆಸಿದ ಪರಿಹಾರ ಸೂತ್ರ ಕಂಡುಕೊಂಡ ನಂತರ ಮತ್ತೊಮ್ಮೆ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಕೃಷಿ ತಜ್ಞ ಡಾ. ಪ್ರಕಾಶ್‌ ಕಮ್ಮರಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಮಾಧವರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಝಾನ್ಸಿಲಕ್ಷ್ಮಿ, ಟಿ.ಯಶವಂತ್, ಅಲಿಬಾಬ ಸೇರಿ ಹಲವು ರೈತ ಮುಖಂಡರು ಭಾಗವಹಿಸಿದ್ದರು.

Monday, August 21, 2023

22-08-2023 EE DIVASA KANNADA DAILY NEWS PAPER

ಸುಳ್ಳು ಸುದ್ದಿ ಪತ್ತೆ-ನಿಯಂತ್ರಣ-ಕಠಿಣ ಶಿಕ್ಷೆಗೆ ತುರ್ತು ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು, ಆಗಸ್ಟ್ 21 : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ  ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು   ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ನೀಡಿದರು. 

ಗೃಹ ಕಚೇರಿ  ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ  ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಅವರು ಈ ತೀರ್ಮಾನ ಮಾಡಿದರು. 

ಸುಳ್ಳು ಸುದ್ದಿಗಳ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಅನುಮೋದನೆ ನೀಡಿದರು. 

ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆ :

ಪ್ಯಾಕ್ಟ್ ಚೆಕ್ ಘಟಕವು ಮೇಲುಸ್ತುವಾರಿ ಸಮಿತಿ, SOPC ಪರಿಶೀಲನೆ, ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಸತ್ಯ ತಪಾಸಣೆ ತಂಡ ವಿಶ್ಲೇಷಣ ತಂಡವನ್ನು ಒಳಗೊಳ್ಳಲಿದೆ. ಹಾಗೂ ಸಾಮರ್ಥ್ಯ ವರ್ಧನೆ ತಂಡ ರಚನೆ ಮಾಡಿ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡಬಹುದು ಎಂದು ಸಭೆಯಲ್ಲಿ  ವಿವರಿಸಲಾಯಿತು. 

ಬೆಂಗಳೂರು ಪೊಲೀಸ್ ಕೂಡ  ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದರೂ, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಅಗತ್ಯವಿದೆ. ಎಐ ಬಳಕೆ ಮಾಡಿ ಡೀಪ್ ಫೇಕ್ ಕೂಡ ಉಪಯೋಗ ಮಾಡಲಾಗುತ್ತಿದೆ. ಇದು ಸುಳ್ಳು ಸುದ್ದಿ ಹರಡುವವರಿಗೆ ಅನುಕೂಲ ವಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಫೇಕ್ ಸುದ್ದಿ ಜಾಲ ಜಾಗತಿಕವಾಗಿ ಬಾಲ್ಯಾವಸ್ಥೆಯಲ್ಲಿದ್ದರೂ ಕಾಲಾಂತರದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಯೂ ಇದೆ. ಸುಳ್ಳು ಸುದ್ದಿ ಬಳಕೆ ಮಾಡುವವರಿಗೆ ಶಿಕ್ಷೆ ಕೂಡ ಆಗಬೇಕು. ಈ ಸಮಿತಿ ಕೂಡಲೇ ರಚಿಸಿ  ಸಾಮರ್ಥ್ಯ ಹೆಚ್ಚಿಸುವ ಕೆಲಸ  ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಭಿಪ್ರಾಯಪಟ್ಟರು. 

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅತ್ಯಗತ್ಯ. ಆರಂಭಿಕ ಹಂತದಲ್ಲಿ ಐ.ಟಿ ಬಿಟಿ ಇಲಾಖೆ ಸಹಕರಿಸುತ್ತದೆ. ಕಾನೂನಿನ  ವ್ಯಾಪ್ತಿಯಲ್ಲಿ ತರಲು ಕ್ರಮ ವಹಿಸಬೇಕು ನಂತರ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ  ಎಂದು ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ಪಟ್ಟರು.

 ಸಚಿವರಾದ ಕೃಷ್ಣಬೈರೇಗೌಡ ಅವರು ಮಾತನಾಡಿ  ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಯಿಂದ ಸುಳ್ಳುಸುದ್ದಿ ಹರಡುವುದನ್ನು ನಿಯಂತ್ರಿಸಿ ಇದು ಶಿಕ್ಷಾರ್ಹ ಅಪರಾಧ ಎಂದು ಜನರಿಗೆ ಮನವರಿಕೆಯಾಗಬೇಕು ಎಂದರು. 

 ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್ , ಪೊಲೀಸ್ ಮಹಾ ನಿರ್ದೇಶಕ  ಅಲೋಕ್ ಮೋಹನ್ ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕ ರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾ ವೃತ್ತಿ ಸಂಬಂಧಿತ ನಾನಾ ಪದಾಧಿಕಾರಿಗಳ ಜತೆ ಸಭೆ ನಡೆಸಿ ಎಲ್ಲರ ಅಹವಾಲು ಮತ್ತು ಬೇಡಿಕೆಗಳನ್ನು ಆಲಿಸಿದರು. 

ಪತ್ರಿಕಾ ವಿತರಕರ ಸಂಘ ಸೇರಿ ಕಾರ್ಯನಿರತ ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಒಟ್ಟು ಒಂಬತ್ತು ಸಂಘಟನೆಗಳ 12 ಮಂದಿ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಮಂಡಿಸಿದರು. 

ಎಲ್ಲರ ಬೇಡಿಕೆಗಳನ್ನೂ ಸಮಗ್ರವಾಗಿ ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

 

 ಈ ದಿವಸ ವಾರ್ತೆ

ಬೆಂಗಳೂರು : ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅವರು ಇಂದು ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟಾಕುತ್ತಿವೆ. ಕೇರಳ, ತಮಿಳು ನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಪುರಸ್ಕೃತ ಯೋಜನೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಾರದು ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಇದರಿಂದ ಬಡವರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತಿ ವರ್ಷ ಪ್ರಮಾಣ ಪತ್ರ ನೀಡಿದರೂ, ಒಂದು ವರ್ಷ, ಎರಡು ವರ್ಷ ಓದಿದವರಿಗೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಉದ್ಯೋಗವಕಾಶ ದೊರೆತು ಹೋದ ಬಡವರ ಮಕ್ಕಳು ಮತ್ತೆ ಓದಲು ಎಷ್ಟು ಅವಕಾಶ ದೊರೆಯುವುದು? ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧ್ಯಯನ ಮತ್ತು ಸಂಶೋಧನೆಗಳು ಗ್ರಂಥಾಲಯಗಳಲ್ಲಿ ಕೊಳೆಯಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿವಿಗಳು ಉನ್ನತ ಶಿಕ್ಷಣವನ್ನು, ಜ್ಞಾನವನ್ನು ಯುವಕ-ಯುವತಿಯರಿಗೆ ಒದಗಿಸುವ ಜೊತೆಗೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಮೂಡಿಸಬೇಕು

ಶಿಕ್ಷಣ ಅಂದರೆ ಕೇವಲ ಓದುಬರಹ ಕಲಿಯುವುದಲ್ಲ. ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಒಬ್ಬ ವ್ಯಕ್ತಿ ವಿವಿಯಿಂದ ಹೊರಗೆ ಬಂದ ಮೇಲೆ ಸಮಾಜದ ಜವಾಬ್ದಾರಿ ಹೊರುವ ಶಕ್ತಿ ಇರಬೇಕು. ಅಂತಹ ಜ್ಞಾನ ಬರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಂಡು ಹೋಗುವುದಾದರೆ ಅದು ಶಿಕ್ಷಣವೇ ಅಲ್ಲ



ಬೆಂಗಳೂರು : ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು. ಅದಕ್ಕೆ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನರ್‌ ವಿಮರ್ಶೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕುಲಪತಿಗಳ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

 ಬೇರೆ ಬೇರೆ ಭಾಷೆ, ಸಂಸ್ಕೃತಿ ಮತ್ತಿತರ ಅಂಶಗಳ ಕಾರಣದಿಂದ ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ಧತಿ ಸಾಧ್ಯವಿಲ್ಲ. ಕುಲಪತಿಗಳು ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ.

 ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿದ್ದಾಗ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ಈ ಸಮ ಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ನಾವು ವಿವಿಗಳ ಮೂಲಕ ಕೊಡಬೇಕು ಎಂದರು. 

ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆ ಮತ್ತು ಕ್ರಮಗಳು ವಿವಿಗಳಲ್ಲಿ ನಡೆಯಬಾರದು. ವಿವಿಗಳಿಂದ ಬಂದವರು ಮತ್ತೆ ಮೌಢ್ಯಗಳು, ಜಾತಿಯ ಜೊತೆಯಲ್ಲಿದ್ದರೆ ಅವರು ಪಡೆದಿರುವುದು ಶಿಕ್ಷಣ ಎಂದು ಕರೆಯಲಾಗದು. ವಿವಿಗಳಲ್ಲಿ ಧರ್ಮ ನಿರಪೇಕ್ಷತೆ, ಮೌಢ್ಯ ರಹಿತ, ಕಂದಾಚಾರ ರಹಿತ ಹಾಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು.  ಕೆಲವೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳನ್ನು ನಡೆಸಿರುವುದನ್ನು ಕೆಲವು ವಿವಿಗಳಲ್ಲಿ ನೋಡಿದ್ದೇನೆ. ಜಾತ್ಯತೀತ ವಿರೋಧಿ ಮನೋಭಾವವನ್ನು ಪುರಸ್ಕರಿಸಬಾರದು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾರಣಕ್ಕೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಇಲ್ಲವಾದರೆ ಉನ್ನತ ಶಿಕ್ಷಣ ಸರಿದಾರಿಯಲ್ಲಿ ಸಾಗದೆ ಹೋದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದರು. 

 ಅತಿಥಿ ಉಪನ್ಯಾಸಕರ ನೇಮಕದ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳನ್ನು ನೇಮಕ ಮಾಡಕೂಡದು. 

ವಿವಿಯ ವಿದ್ಯಾರ್ಥಿಗಳು ಮನುಷ್ಯತ್ವ ಇರುವ ವ್ಯಕ್ತಿಗಳಾಗಿ ಬೆಳೆಯಬೇಕು. ಹುಟ್ಟುವಾಗ ಎಲ್ಲರೂ ವಿಶ್ವಮಾನವರು, ಬೆಳೆಯುತ್ತಾ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದಂತೆ ಆಗಬಾರದು ಎಂದರು. 

ಸಾಕಷ್ಟು ಕೊರತೆಗಳನ್ನು ಇಟ್ಟುಕೊಂಡು ಜಿಲ್ಲೆಗೊಂದು ವಿವಿ ಮಾಡುವ ತೀರ್ಮಾನ ಸರಿಯಲ್ಲ.  ಮೂಲಸೌಲಭ್ಯ ಒದಗಿಸಲಾಗದಿದ್ದರೆ ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಶೇ. 3 ಕ್ಕಿಂತ ಹೆಚ್ಚು ಅನುದಾನ ಒದಗಿಸಲಾಗಿತ್ತು. ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು.

 ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಯಾವುದೇ ಲೋಪವಾಗಬಾರದು. ಒಂದೇ ಬಾರಿ ಎಲ್ಲ ಪರಿಹಾರ ಒದಗಿಸಲಾಗದು. ಆದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದರು. 

ಸಂಶೋಧನೆಯ ಫಲ ಗ್ರಂಥಾಲಯಗಳಲ್ಲಿ ಉಳಿಯಬಾರದು. ಸಮಾಜವನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆ ಫಲಪ್ರದವಾಗುವುದು ಎಂದರು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್,  ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ , ಆರ್ಥಿಕ ಇಲಾಖೆ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರ ಹಿರಿಯ ಅಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳ ಹಬ್ಬ ಪಂಚಮಿ ಹಬ್ಬ

ಈ ದಿವಸ ವಿಶೇಷ ವರದಿ

ಹಬ್ಬವೆಂದರೆ ಎಲ್ಲರಿಗೂ ಇಷ್ಟ ಅದರ ಸಡಗರ ಮನೆಯಲ್ಲಿ ತುಂಬಾ ಜೋರಾಗಿರುತ್ತದೆ ಇದು ಪಂಚಮಿ ಎಂದರೆ ಹೆಣ್ಣು ಮಕ್ಕಳಾಚರಿಸುವ ಒಂದು ಪ್ರಮುಖವಾದ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದೆ. ಒಂದು ವಾರಕ್ಕೆ ಮೊದಲೇ ಮನೆಯಲ್ಲಿ  ಸಿಹಿ ತಯಾರಿಸಲು ಪ್ರಾರಂಭ ಮಾಡಿರುತ್ತಾರೆ ಎಲ್ಲಾ ತರಹದ ಉಂಡೆಗಳು ನಾಗರ ಪಂಚಮಿ ಪೂಜೆ ಸಲುವಾಗಿ ಮಾಡುತ್ತಾರೆ.

ಮುಂಗಾರಿನ ಮಳೆಯ ಆದನಂತರ ಬರುವ ಮೊದಲ ಹಬ್ಬ ಇದಾಗಿದೆ ಸುಂದರವಾಗಿ ಅಲಂಕಾರವನ್ನು ಮಾಡಿಕೊಂಡು ಮನೆಯ ತುಂಬಾ ಓಡಾಡುವುದು ಹೆಣ್ಣು ಮಕ್ಕಳು ಅವರಿಂದಲೇ ಒಂದು ಕಳೆ ಬರುತ್ತದೆ ಈ ಹಬ್ಬಕ್ಕೆ ನಾಗದೇವನಿಗೆ ಹಾಲೆರೆಯುವುದು  ನೈವಿದ್ಯ ಸಹ ತೆಗೆದುಕೊಂಡು ಹೋಗುತ್ತಾರೆ ಹಳ್ಳಿಯ ಕಡೆ ಗೆಳತಿಯರು ಎಲ್ಲಾ ಸೇರಿಕೊಂಡು ಯಾರ ಮನೆಯ ಮುಂದೆ ಜೋಕಾಲಿ ಇದ್ದ ಕಡೆ ಅಲ್ಲಿ ಹೋಗಿ ಆಟವನ್ನು ಆಡುತ್ತಾ ಯಾವುದೇ ಭೇದ ಭಾವ ಇಲ್ಲದೆ ಎರಡು ದಿನಗಳ ಕಾಲ ಆಚರಿಸುತ್ತಾರೆ.

ಹಿಟ್ಟು ಅಥವಾ ಉಂಡಿ ತಿನ್ನುವ ದಿನವೆಂದು ಹಳ್ಳಿ ಕಡೆ ಆಚರಣೆಯನ್ನು ಮಾಡುತ್ತಾರೆ ಎಲ್ಲರೂ ತಮ್ಮ ತಮ್ಮ ಮನೆ ಪಕ್ಕದವರ ಮನೆಗೆ ಹೋಗಿ ತುಂಟಾಟ ಮಾಡುತ್ತಾ ಉಂಡಿ‌ತಿಂದು ಹೋಗುತ್ತಾರೆ ನಾಗಗಳನ್ನು ಪೂಜಿಸುವ ಹಬ್ಬ ಇದಾಗಿದೆ ಏಕೆಂದರೆ ಅವುಗಳ ಮೇಲೆ ಅಪಾರವಾದ ನಂಬಿಕೆ ಭಕ್ತಿಯನ್ನು ಇಟ್ಟುಕೊಂಡ ಜನರು ಯಾವುದೇ ರೀತಿಯಲ್ಲಿ ತೊಂದರೆ ಸಮಸ್ಯೆ ಕುಟುಂಬದಲ್ಲಿ ಬರಬಾರದೆಂದು ಬೇಡಿಕೊಳ್ಳುತ್ತಾರೆ  ಪೂಜಿಸುತ್ತಾರೆ ಹಾಲು ಎರೆಯುವ ಮೂಲಕ ಮೂಲಕ ಭಕ್ತಿಯಿಂದ ಪೂಜಿಸುತ್ತಾರೆ ಇದರಲ್ಲೇ ಪ್ರಮುಖ ಪಾತ್ರ ಮಹಿಳೆಯರು   ಮನೆಯ ಒಳತಿನ ಸಲವಾಗಿ ಉಪವಾಸವನ್ನು ಸಹಿತ ಮಾಡುತ್ತಾರೆ.

ತಮ್ಮ ಎಲ್ಲಾ ಕಷ್ಟಗಳು ನಾಗದೇವರು ದೂರವಾಗುತ್ತದೆ  ಎಂದು ಖುಷಿಯಿಂದ ಗೆಳತಿಯರ ಜೊತೆ ಹರಟೆಯನ್ನು ಹೊಡೆಯುತ್ತಾರೆ ಮತ್ತು ಗಂಡು ಮಕ್ಕಳು ಸಹಿತ  ಈ ಹಬ್ಬವನ್ನು ಆಚರಿಸುತ್ತಾರೆ ಏಕೆಂದರೆ ಅವರು ನಿಂಬೆಕಾಯಿ ಎಸೆತ ದಷ್ಟು ದೂರ ಹೋಗಬೇಕು  ಪಂದ್ಯ ಎಷ್ಟು ಸಮಯದ ವರೆಗೆ ಜೋಕಾಲಿ‌ ಆಡುತ್ತಾರೆ ಗೆದ್ದು ತುಂಬಾ ಸಂಭ್ರಮಾಚರಣೆಯಿಂದ ಯಾವುದೇ ಬೇಧ ಭಾವವಿಲ್ಲದೆ ಜೋಕಾಲಿಯನ್ನು ಆಡುತ್ತಾರೆ. ಉಂಡೆಗಳನ್ನು ತಿನ್ನುತ್ತಾ ಮಜಾ ಮಾಡುವುದೇ ಈ ಹಬ್ಬ ಪ್ರಮುಖವಾಗಿ ಅನ್ನ ತಂಗಿಯ ಬಂಧ ಬೇಸೆಯುವ  ಹಬ್ಬದ ನಂತರ ಕೊಬ್ಬರಿ  ಕುಬಸ  ತಂಗಿಯ ಮನೆಗೆ ಕೊಟ್ಟು ಕಳುಹಿಸುತ್ತಾರೆ ತಮ್ಮ ಬಂದು ಮಿತ್ರರಿಗೆ ಎಲ್ಲರಿಗೂ ಕೊಡುತ್ತಾರೆ   ಎಲ್ಲಾರೂ  ಒಂದೇ ಎನ್ನುವ ಮನೋಭಾವದಿಂದ ಆಚರಿಸುವ ಪಂಚಮಿ ಹಬ್ಬ ಎಂದೆನಿಸಿಕೊಳ್ಳುತ್ತದೆ

ಚೇತನಾ‌ ಶ್ರೀ ಬೆಳ್ಳೆನವರ, ಕಲಬೀಳಗಿ

Thursday, August 17, 2023

18-08-2023 EE DIVASA KANNADA DAILY NEWS PAPER

ಮುರುಗೇಶ ನಿರಾಣಿ ದಲಿತ ವಿರೋಧಿ ಕೈಗಾರಿಕಾ ಮಾಜಿ ಸಚಿವ: ಶ್ರೀನಿವಾಸನ ಆರೋಪ

 

ವಿಜಯಪುರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸ ಮಾತನಾಡಿದರು.

ಈ ದಿವಸ ವಾರ್ತೆ
ವಿಜಯಪುರ: ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು, ದಲಿತ ವಿರೋಧಿ ಸಚಿವರಾಗಿದ್ದರು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸನ್ ಆರೋಪಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿದ್ದ ಸಂದರ್ಭ, ದಲಿತರಿಗೆ ಬಹಳಷ್ಟು ವಂಚಿಸಿದ್ದು, ಕೆಐಎಡಿಬಿಯ ನಿವೇಶನ ಹಂಚಿಕೆಯ ಕಮಿಟಿಯಲ್ಲಿ ದಲಿತರಿಗೆ ಇಟ್ಟಿದ್ದ ಜಾಗವನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಇಟ್ಟಿದ್ದ 675 ಎಕರೆ ಜಮೀನನ್ನು ಬೇರೆಯವರಿಗೆ ನೀಡಿದ್ದಾರೆ. ಈ ಬಗ್ಗೆ ಮುರುಗೇಶ ನಿರಾಣಿಯವರ ಗಮನಕ್ಕೆ ತಂದರೂ ಅಂದು ಅವರು ಬಗೆಹರಿಸುವ ಪ್ರಯತ್ನವನ್ನು ಮಾಡಲಿಲ್ಲ. ಇದು ಅವರ ದಲಿತ ವಿರೋಧಿ ನೀತಿಯಾಗಿದೆ. ಈ ಅಕ್ರಮವನ್ನು ದಾಖಲೆ ಸಮೇತ ನಾನು ಸಾಬೀತು ಪಡಿಸುವೆ. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳು ಇವೆ ಎಂದರು.
ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿರುವ ಕುರಿತು ಸದ್ಯ ಸರ್ಕಾರದ ಗಮನಕ್ಕೆ ತಂದಿರುವೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.
ಇನ್ನು ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾ ಘಟಕಗಳ ಅಡಿಯಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರು ಸಮಾವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆದಾರರು ಹೆಚ್ಚಿದ್ದು, ಈ ನಿಟ್ಟಿನಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿಯೂ ಜವಳಿ ಕ್ಷೇತ್ರದ ದಲಿತ ಕೈಗಾರಿಕಾ ಉದ್ದಿಮಿಗಳ ಬೃಹತ್ ಸಮಾವೇಶ ಕೂಡಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೂ ಭೇಟಿ ಮಾಡಿ ಮನವಿ ಮಾಡಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಅಧಿಕಾರಿ ರಾಜಶೇಖರ ಯಡಿಹಳ್ಳಿ ಇದ್ದರು.

Tuesday, August 15, 2023

ಸ್ವಾತಂತ್ರ್ಯ ಹೋರಾಟಗಾರರು ಹಾಕಿ ಕೊಟ್ಟ ದಾರಿಯಲ್ಲಿ ನಡೆದು ಜೀವನ ಸಾರ್ಥಕಗೊಳಿಸೋಣ : ಸಿಇಓ ರಾಹುಲ್ ಶಿಂಧೆ

ವಿಜಯಪುರ :  ನಮ್ಮ ಹಿರಿಯರ ಶ್ರಮ ಮತ್ತು ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಭಾರತದಲ್ಲಿ ಜನಿಸಿದ ನಾವೆಲ್ಲರೂ ನಿಜಕ್ಕೂ ಹೆಮ್ಮೆ ಪಡಬೇಕು. ಹಿರಿಯರು, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಬಲಿದಾನಗೈದ ಹೋರಾಟಗಾರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಹೇಳಿದರು. 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಧ್ವಜಾರೋಹಣ ನೇರೆವೇರಿಸಿ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ ಸೇರಿದಂತೆ  ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರು.

16-08-2023 EE DIVASA KANNADA DAILY NEWS PAPER

ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣ


 ಈ ದಿವಸ ವಾರ್ತೆ

ವಿಜಯಪುರ : ನಗರದ ಜಿಪಂ ರಸ್ತೆಯಲ್ಲಿರುವ ಹೊಸ ಪತ್ರಿಕಾ ಭವನ ಹಾಗೂ ಹಳೆ ತಹಸೀಲ್ದಾರ್ ಕಚೇರಿ ಬಳಿಯಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಹಿರೇಮಠ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಳಿಕ ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲಿಸಲಾಯಿತು.  

ಉಪಾಧ್ಯಕ್ಷ ಫಿರೋಜ್ ರೋಜಿನದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿಣಿ ಸದಸ್ಯ ಸಮೀರ ಇನಾಂದಾರ, ನಾಮನಿರ್ದೇಶನ ಸದಸ್ಯೆ ಕೌಶಲ್ಯ ಪನಾಳಕರ, ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ಶಶಿಕಾಂತ ಮೆಂಡೇಗಾರ, ಬಸವರಾಜ ಕುಂಬಾರ, ದೇವೇಂದ್ರ ಹೆಳವರ, ಸುಮೀತರಾಜಕುಮಾರ ಶಿವಶರಣ,ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಎಸ್.ಬಿ. ಪಾಟೀಲ್, ಬಾಲು ಸಾರವಾಡ, ನಾಗರಾಜ ಚೋಳಕೆ, ಕೆ.ಕೆ. ಬನ್ನಟ್ಟಿ, ಜಿ.ಬಿ. ಲೋಕುರಿ, ಮಲಕಪ್ಪ ಹೂಗಾರ, ಶಿವಕುಮಾರ ಉಪ್ಪಿನ, ವಿಠ್ಠಲ ಲಂಗೋಟಿ, ಇಸ್ಮಾಯಿಲ್ ಮುಲ್ಲಾ, ಅಲ್ತಾಫ ಯಂಬತ್ನಾಳ,  ಮತ್ತಿತರರಿದ್ದರು.

Saturday, August 12, 2023

13-08-2023 EE DIVASA KANNADA DAILY NEWS PAPER

ಪರೀಕ್ಷೆ: ಡಿ.ಇಎಲ್‌ಇಡಿ ಕಾಲೇಜು ಶೇ.100ರಷ್ಟು ಫಲಿತಾಂಶ


ಈ ದಿವಸ ವಾರ್ತೆ

ಕೊಪ್ಪಳ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪಿಎಸ್.ಟಿ.ಇ ವಿಭಾಗ ಮುನಿರಾಬಾದ್, ಕೊಪ್ಪಳ ಇಲ್ಲಿನ 2022-23ನೇ ಸಾಲಿನ ಡಿ.ಇಎಲ್‌ಇಡಿ ಕಾಲೇಜಿನ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಟಿ.ಬಿ.ಪಿ ಮುನಿರಾಬಾದನ ಪ್ರಾಚಾರ್ಯರು ಹಾಗೂ ಪದ ನಿಮಿತ್ಯ ಉಪನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.

ಡಿ.ಇ.ಎಲ್.ಇ.ಡಿ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾದ 11 ಪ್ರಶಿಕ್ಷಣಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 10 ಪ್ರಶಿಕ್ಷಣಾರ್ಥಿಗಳು ಮತ್ತು ಪ್ರಥಮ ಶ್ರೇಣಿಯಲ್ಲಿ ಒಬ್ಬರು ಉತ್ತೀರ್ಣರಾಗಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ. ವಿಜಯಲಕ್ಷ್ಮೀ ಹೆಚ್ ವೀರೇಶ ಅವರು ಶೇ.95 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಅಂಜಲಿ ಗೊರವಲೆಕ್ಕಪ್ಪ ಶೇ.94.37 ಹಾಗೂ ಆಸೀಯಾ ಹುಸೇನಸಾಬ ಶೇ.94.25 ರಷ್ಟು ಅಂಕ ಪಡೆದಿದ್ದಾರೆ. ಡಿ.ಇಎಲ್‌.ಇಡಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಪೂಜಾ ಮಂಜುನಾಥ ಶೇ. 93.25 ಮತ್ತು ಅಜ್ಮೀರ ಹುಸೇನಸಾಬ ನದಾಫ್ ಶೇ. 92ರಷ್ಟು ಅಂಕ ಗಳಿಸಿದ್ದಾರೆ. 

ಪ್ರಶಿಕ್ಷಣಾರ್ಥಿಗಳ ಸಾಧನೆಗೆ ಡಯಟ್ ಸಂಸ್ಥೆಯ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು ಮತ್ತು ಪಿ.ಎಸ್.ಟಿ.ಇಯ ಮುಖ್ಯಸ್ಥರು ಮತ್ತು ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನವ ವಿವಾಹಿತೆ ಆತ್ಮ ಹತ್ಯೆಗೆ ಶರಣು


ಈ ದಿವಸ ವಾರ್ತೆ

ವಿಜಯಪುರ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದೆ. ಚಡಚಣ ತಾಲೂಕಿನ ನಾಕಿಮಂದಿ ಓಣಿಯ ಚೈತ್ರಾ ಮಲ್ಲಿಕಾರ್ಜುನ ನಾವಿ (23) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

 6 ತಿಂಗಳ ಹಿಂದೆ ಚಡಚಣ ತಾಲೂಕಿನ ನಿವಾಸಿ ಮಲ್ಲಿಕಾರ್ಜುನ  ಜೊತೆ ವಿವಾಹವಾಗಿತ್ತು.

ಮೃತ ಚೈತ್ರಾಳ ಪತಿ ಮಲ್ಲಿಕಾರ್ಜುನ ನಾವಿ, ಮಾವ ಶಿವಪ್ಪ ನಾವಿ ಹಾಗೂ ಅತ್ತೆ ಅಂಬವ್ವ ನಾವಿ ಮೂವರು ಸೇರಿ ವರದಕ್ಷಿಣೆ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು.

ಗಂಡನ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಾಳ ತಂದೆ ಅಶೋಕ ಹಡಪದ ನೀಡಿದ ದೂರಿನ ಮೇರೆಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ :ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ


ಈ ದಿವಸ‌ ವಾರ್ತೆ

ವಿಜಯಪುರ : ಇಂದಿನ ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್. ಆಯುರ್ವೇದ ಮಹಾವಿದ್ಯಾಲ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.

76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ವಿಜಯಪುರ ಅಂತರ್ ಕಾಲೇಜು ದೇಶಭಕ್ತಿ ಗೀತೆ ಸ್ಪರ್ಧೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆಯಿತು.  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  



ಸಂಗೀತಕ್ಕೆ ಮಾನಸಿಕ ಮತ್ತು ದೈಹಿಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.  ಹೀಗಾಗಿ ಸಂಗೀತದ ಕಡೆ ಗಮನ ಹರಿಸಬೇಕು ಎಂದು ಅವರು ಹೇಳಿದರು.  

ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಡಿ. ಎನ್. ಧರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸ್ಪರ್ಧೆಯಲ್ಲಿ ವೇದಾಂತ ಬಿಸಿಎ ಕಾಲೇಜಿನ ಸಾಕ್ಷಿ ಹಿರೇಮಠ ಪ್ರಥಮ, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಳವಿಕ ಜೋಶಿ, ದ್ವಿತೀಯ ಹಾಗೂ ಬಿ.ಎಲ್.ಡಿಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸುನಯನಾ ದೇಶಪಾಂಡೆ ತೃತೀಯ ಸ್ಥಾನ ಪಡೆದರು.  ವಿಜೇತರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 

ಸಂಗೀತ ವಿದ್ವಾಂಸರಾದ ಮುತ್ತುರಾಜ ಮದನಭಾವಿ ಮತ್ತು ಸುನಂದಾ ಘಾಟಗೆ ನಿರ್ಣಾಯಕರಾಗಿ ಪಾಲ್ಗೋಂಡರು.  ಸಹ ಕಾರ್ಯದರ್ಶಿ ಡಾ. ವಿಜಯಲಕ್ಷಿ, ವಿಧ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಸೀತಾ ಬಿರಾದಾರ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ. ಸುಮಾ ಮತ್ತು ಡಾ. ದಾಮೋದರ ಉಪಸ್ಥಿತರಿದ್ದರು. ಡಾ. ಸುಮಾ ಕಗ್ಗೋಡ ವಂದಿಸಿದರು. 

ಈ ಸ್ಪರ್ಧೆಯಲ್ಲಿ ನಗರದ 20ಕ್ಕೂ ಹೆಚ್ಚು ಮಹಾವಿದ್ಯಾಲಗಳ ಒಟ್ಟು 40 ಸ್ಪರ್ಧಾಳುಗಳು ಭಾಗವಹಿಸಿದ್ದರು.

Friday, August 11, 2023

ಗ್ರಾಮೀಣ ಕೂಲಿಕಾರ್ಮಿಕರ ಶಿಶು ಪೋಷಣೆ ಸರ್ಕಾರದ ಮಡಿಲಿಗೆ: ರಾಹುಲ್ ಶಿಂಧೆ




ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ  06 ತಿಂಗಳಿಂದ 03 ವರ್ಷದ ಶಿಶುಗಳನ್ನು ವ್ಯವಸ್ಥಿತ  ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು   ರಾಜ್ಯ ಸರ್ಕಾರವು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ರಾಜ್ಯ ಸರ್ಕಾರವು ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಜವಾಬ್ದಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದು ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದ್ದಾರೆ. 

ಜಿಲ್ಲೆಯ ಆಯ್ದ 163 ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ  ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಕಾರ್ಯಾರಂಭಗೊಳ್ಳಲಿವೆ.

ಕೂಸಿನ ಮನೆ ಸಿಬ್ಬಂದಿಗಳು: 

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ 22 ರಿಂದ 45 ವರ್ಷ ವಯಸ್ಸಿನೊಳಗಿನ ಕನಿಷ್ಠ 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿಕಾರ್ಮಿಕರೇ ಈ ಕೂಸಿನ ಮನೆಗೆ ಕೇರ್ ಟೆಕರ್ಸ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇವರಿಗೆ ಸರಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ಮನರೇಗಾ ಯೋಜನೆಯಡಿ ಎನ್.ಎಂ.ಆರ್ ಸೃಜನೆ ಮಾಡಿ ದಿನಕ್ಕೆ ರೂ. 316  ರಂತೆ ನೂರು ದಿನಗಳವರೆಗ ಕೆಲಸ  ನೀಡಲಾಗುತ್ತಿದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ.

ಕೂಸಿನ ಮನೆ ಕುಶಲತೆಯ ನಿರ್ವಹಣೆಗೆ ತರಬೇತಿ: 

 ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಪ್ರಾರಂಭಕ್ಕೆ ರಾಜ್ಯ ಮಟ್ಟದಲ್ಲಿ ಜಿಲ್ಲೆಯ 05 ಜನರಿಗೆ ತರಬೇತಿ ನೀಡಲಾಗಿದೆ.            ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡ ಮಾಸ್ಟರ್ ಟ್ರೇನರ್ ಗಳು  ವಿಜಯಪುರ ಜಿಲ್ಲೆಯ ಐದು ಸ್ಥಳಗಳಲ್ಲಿ ಈಗಾಗಲೇ ಎಲ್ಲ ಗ್ರಾಮ ಪಂಚಾಯತಿ ಕೇರ್ ಟೇಕರ್ಸ್ ಗಳಿಗೆ ತರಬೇತಿ ನೀಡಿದ್ದಾರೆ.

ಅನುದಾನ: 

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳನ್ನು ಆರಂಭಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖಾಲಿ ಇರುವ ಸರಕಾರಿ ಶಾಲೆ, ಅಂಗನವಾಡಿ, ಸಮುದಾಯ ಭವನ ಸೇರಿದಂತೆ ಇತರೆ ಸರಕಾರಿ  ಕಟ್ಟಡಗಳ ಆಯ್ಕೆಗೆ ಪರಿಗಣಿಸಿದೆ.ಈ ಕಟ್ಟಡಗಳ  ಅಲ್ಪ-ಸ್ವಲ್ಪ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ಘಟಕಕ್ಕೆ 1 ಲಕ್ಷ ರೂ ಅನುದಾನ ಬಿಡುಗಡೆ ಮಾಡುತ್ತದೆ. ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧ ಮತ್ತಿತರ ಸೌಲಭ್ಯಗಳು ಈ ಕೇಂದ್ರದಲ್ಲಿ ದಾಸ್ತಾನು ಇರಿಸಲಾಗುವುದು.

 ಮುಖ್ಯ ಉದ್ದೇಶ: 

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ.ಇಂತಹ  ಕುಟುಂಬದ ಮಹಿಳೆಯರು ತಮ್ಮ  ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ.ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರಕಾರ ಈ ಯೋಜನೆ ಆರಂಭಿಸಿದೆ. ಹಳ್ಳಿಗಳ ಮಹಿಳೆಯರು ತಮ್ಮ ಮಕ್ಕಳ ಕುರಿತು ಚಿಂತಿಸಿ, ಮಾನಸಿಕವಾಗಿ ಕುಗ್ಗದೇ ಈ ಯೋಜನೆಯ ಸದುಪಯೋಗಪಡೆದುಕೊಂಡು ನಿಶ್ಚಿಂತೆಯಿಂದ ಕೂಸಿನ ಮನೆಯಲ್ಲಿ ತಮ್ಮ 06 ತಿಂಗಳಿಂದ 03 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳಬಹುದಾಗಿದೆ ಎಂದು  ಅವರು ತಿಳಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಣೆ

ಈ ದಿವಸ ವಾರ್ತೆ

ವಿಜಯಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಬಿವೃದ್ದಿ ಯೋಜನೆ ನಗರ ಹಾಗೂ ಗ್ರಾಮೀಣ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ರುಡ್‍ಸೆಟ್ ಸಂಸ್ಥೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಸ್.ಕುಂದರ ಅವರು ಉದ್ಘಾಟಿಸಿ, ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಾನೂನಿನ್ವಯ ಅಪರಾಧವಾಗಿದ್ದು, ಸಂವಿಧಾನ ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಲವು ಕಾನೂನುಗಳಿದ್ದು, ಸೂಕ್ತ ಪಾಲನೆಯಿಂದ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಬಹುದಾಗಿದೆ ಎಂದು ಹೇಳಿದ ಅವರು, ಸವಿವರವಾಗಿ ಅಂಕಿ-ಅಂಶದೊಂದಿಗೆ ಮಾನವ ಕಳ್ಳ ಸಾಗಾಣಿಕೆ ಕುರಿತು ಮಾತನಾಡಿದರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ ಅವರು, ಬಂದಂತಹ ಅತಿಥಿ ಹಾಗೂ ಗಣ್ಯ ವ್ಯಕ್ತಿಗಳಿಗೆ ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಡಿವೈಎಸ್‍ಪಿ ಗಿರೀಶ ತಳಕಟ್ಟಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು  ವಕೀಲರಾದ ಬಾಬು ಅವತಾಡೆ ಪೋಕ್ಸೊ ಕಾಯ್ದೆ ಕುರಿತು, ಮೇಲ್ವಿಚಾರಕಿ ಅಶ್ವಿನಿ ಸನದಿ ಮಾನವ ಕಳ್ಳ ಸಾಗಾಣಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಸಾವಿತ್ರಿ ಗುಗ್ಗರಿ, ಶ್ರೀಮತಿ ದೀಪಾ ಕಾಲೆ, ಶ್ರೀಮತಿ ದೀಪಾಕ್ಷಿ ಜಾನಕಿ, ಶ ಎಸ್.ಸಿ.ಮ್ಯಾಗೇರಿ, ಸಾಹೇಬಗೌಡ ಝುಂಜರವಾಡ, ಶ್ರೀಮತಿ ಜಯಶ್ರೀ ಪವಾರ, ರುಡಸೆಟ್ ಸಂಸ್ಥೆಯ ನಿರ್ದೇಶಕ ಮುತ್ತಣ್ಣ ಧನಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ದೊಡ್ಡಣ್ಣ ಬಜಂತ್ರಿ ಅವರಿಗೆ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ

 ಈ ದಿವಸ ವಾರ್ತೆ

ವಿಜಯಪುರ: ದೊಡ್ಡಣ್ಣ ಬಜಂತ್ರಿ ವಿಜಯಪುರ ಅವರು ರಚಿಸಿದ "ಒಲೆಯಹೊಕ್ಕು" ಕವನಸಂಕಲನ ಕ್ಕೆ ಸಮೀರವಾಡಿಯಲ್ಲಿ ಜರುಗಿದ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಗೆ ಆಯ್ಕೆ ಯಾಗಿದ್ದು, ಇದೆ ದಿನಾಂಕ ೧೩-೮-೨೦೨೩ರಂದು ಜಮಖಂಡಿ ಯಲ್ಲಿ ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ದೊಡ್ಡಣ್ಣ ಬಜಂತ್ರಿ ಯವರು ೫ ಕವನ ಸಂಕಲನಗಳನ್ನು(ಕಾಲ ಕೆಟ್ಟಿತ ತಂಗಿ,  ಲಚ್ಚ, ತುಂತುರು,ತಲ್ಲಣದ ಹಕ್ಕಿಹಾಡು, ಒಲೆಯಹೊಕ್ಕು ) ೨ ನಾಟಕಗಳನ್ನು,(ಕತ್ತಲುಹರಿಯಿತು, ನಿಶ್ಯಾದಾಗಿನ ಮಾತ ಆತು) ೧ ವಿನೋದ ಕಥಾಸಂಕಲನ,(ಕ್ಷಯಾಂಬರ). ೨೦೧೭ರಕಾವ್ಯ ಕರ್ನಾಟಕ ಸಾಹಿತ್ಯ ಅಕಾಡಮಿಯ ಬೆಂಗಳೂರು ಸಂಪಾದನೆ ಕೃತಿಗಳನ್ನೊಳಗೊಂಡು ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅಲ್ಲದೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕ ರಾಗಿ ಕಾರ್ಯ ನಿರ್ವಹಿಸುತಿರುವ ಇವರು ವಿಜಯಪುರ ಜಿಲ್ಲೆಯ ಹಿರಿಯ ಸಾಹಿತಿಗಳ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ.

Sunday, August 6, 2023

07-08-2023 EE DIVASA KANNADA DAILY NEWS PAPER

ಕಲಬುರಗಿಯಲ್ಲಿ ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಚಿತ್ರ ಪ್ರದರ್ಶನ ಹಾಗೂ ಸಂವಾದ

ಈ ದಿವಸ ವಾರ್ತೆ

ವಿಜಯಪುರ: ಅಂಬೇಡ್ಕರ್ ಆಗಿ ಪ್ರೊ ಎಚ್ ಟಿ ಪೋತೆ ಅವರು ರಾಮಾಸಾಹೇಬ್ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರು ಹೇಳಿದರು. ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಖಾ ಪಾಟೀಲ ಅವರು ಚಿತ್ರದಲ್ಲಿ ನಟಿಸುತ್ತಾ ನಟಿಸುತ್ತಾ ರಾಮಬಾಯಿಯಾಗಿ ಜೀವಂತಕಿ ತುಂಬಿದ್ದಾರೆ, ಚಿತ್ರದಲ್ಲಿ ಕ್ಯಾಮೆರಾ ಸಂಭಾಷಣೆ, ಡಬ್ಬಿಂಗ್ ಎಲ್ಲವೂ ಸೊಗಸಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.



ಕೇಂದ್ರೀಯ ವಿವಿ ಪ್ರಾಧ್ಯಪಕಿ ಮಹಿಮಾ ರಾಜ್ ಅವರು ಮಾತನಾಡಿ ಚಿತ್ರ ಸೊಗಸಾಗಿ ಮೂಡಿ ಬಂದಿದ್ದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಮರಾಠಿಯಲ್ಲಿ ಕೆಲವು ಸಿನಿಮಾಗಳು ಬಂದಿವೆ ಆದರೆ ಕನ್ನಡದಲ್ಲಿ ಬಂದಿರಲಿಲ್ಲ ಈ ಥರ ಚಿತ್ರಗಳು ಹೆಚ್ಚಾಗಿ ಬರಬೇಕು ಈ ಸಿನಿಮಾದಲ್ಲಿ ಸಾಕಷ್ಟು ಪ್ರಯೋಗಶೀಲ ಗುಣಗಳಿವೆ ಒಂದು ಕಡೆ ರಮಾಬಾಯಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇನ್ನೊಂದೆಡೆ ಅಂಬೇಡ್ಕರ್ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಜೀವನವನ್ನು ಸುಂದರವಾಗಿ ತೋರಿಸುವ ಕೆಲಸವನ್ನು ನಿರ್ದೇಶಕ ಸುನೀಲಕುಮಾರ ಸುಧಾಕರ ಅವರು ಮಾಡಿದ್ದಾರೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಏಕೀಕರಣಗೊಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತದೆ ಎಂದು ಹೇಳಿದರು.

ಸುರೇಶ ಬಡಿಗೇರ :ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವುದು ಭಾಳ ಇದೆ ಹಿಂದೂ ಧರ್ಮದ ದೇವರ ಮೇಲೆ ರಮಾತಾಯಿ ಅವರಿಗೆ ಭಾಳ ಭಕ್ತಿ ಇತ್ತು,ರಮಾತಾಯಿ ತ್ಯಾಗದಿಂದ ಬಾಬಾಸಾಹೇಬರು ವಿಶ್ವ ಮಟ್ಟಕ್ಕೆ ಬೆಳೆದರೂ ಪೋತೆ ಸರ್ ಅಂಬೇಡ್ಕರ್ ಅವರ ಪಾತ್ರ ಮಾಡಿದ್ದೂ ನಮ್ಮ ಮನೆಯ ಅಣ್ಣನೇ ಮಾಡಿದಷ್ಟು ಖುಷಿಯಾಗಿದೆ,ಈ ಸಿನಿಮಾ ಎಲ್ಲರ ಕಣ್ಣಲ್ಲಿ ನೀರು ತರಿಸಿತು ಅಪರೂಪದ ಸಿನಿಮಾ ಶಾಲೆ ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂದರು. ದಸಾಪ ರಾಜ್ಯ ಖಜಾಂಚಿ ಅವರು ಮಾತನಾಡಿ ನಮ್ಮ ಕಾಲದ ಬಾಬಾಸಾಹೇಬರಾಗಿ ನಮ್ಮ ಮಧ್ಯ ಪೋತೆ ಅವರು ಇದ್ದಾರೆ ಅಕ್ಷರ ಕ್ರಾಂತಿಯ ಈ ಚಿತ್ರದಲ್ಲಿ ಬದುಕೇ ಹಾಡಾಗಿದೆ ಎಲ್ಲ ನೋವುಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕಲೆ ಕರಗತ ಮಾಡಿಕೊಂಡಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಶ್ರಮ ಸಾರ್ಥಕವಾದದ್ದು ಎಂದರು. ನಿಕಟ ಪೂರ್ವ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ ರಮಾಬಾಯಿ ಮತ್ತು ಅಂಬೇಡ್ಕರ್ ಎರಡು ಪಾತ್ರಧಾರಿಗಳು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ ಈ ರೀತಿಯ ಸಿನಿಮಾ ನೋಡಲು ಪ್ರೇಕ್ಷಕರಿಗೆ ವಿಶೇಷ ಮನಸ್ಥಿತಿ ಬೇಕಾಗುತ್ತದೆ ಅಂಬೇಡ್ಕರ್ ಅವರದ್ದು ಗಂಭೀರ ವ್ಯಕ್ತಿತ್ವ ಅಂತಹ ಪರಿಣಾಮಕಾರಿ ಪಾತ್ರ ಈ ಸಿನಿಮಾದಲ್ಲಿ ಅಂಬೇಡ್ಕರ್ ಅವರನ್ನು ಕನ್ನಡದ ಅಂಬೇಡ್ಕರ್ ಆಗಿ ತೋರಿಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ಅರುಣ ಜೋಳದ ಕೂಡಗಿ ಅವರು ಮಾತನಾಡಿ ಎಲ್ಲವನ್ನು ದೃಶ್ಯದಲ್ಲಿ ಕಟ್ಟಿಕೊಡುವ ಮೂಲಕ ರಮಾಬಾಯಿ ಅವರ ವ್ಯಕ್ತಿತ್ವವನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಪ್ರೊ ಎಚ್ ಟಿ ಪೋತೆ ಅವರು ಮಾತನಾಡಿ ಚಿತ್ರ ತಂಡದ ಪ್ರೀತಿ ವಿಶ್ವಾಸಕ್ಕೆ ನಾನು ಪಾತ್ರನಾಗಿ ಈ ಚಿತ್ರ ನಾನು ಮಾಡಿದೆ ನಾನು ಚಿತ್ರ ಮಾಡುವುದಾಗಿ ಭಾವುಕ ನಾಗಿ ಅತ್ತಿದ್ದೆ, ಚಿತ್ರದಲ್ಲಿ ಕನಿಷ್ಠ ಬಡತನ ತೋರಿಸುವ ಕೆಲಸವನ್ನು ನೈಜವಾಗಿ ತೋರಿಸುವ  ಕೆಲಸ ಮಾಡಿದ ನಿರ್ದೇಶಕರ ಕಾರ್ಯ ಶ್ಲಾಘನೀಯವಾದುದು ಸಿನಿಮಾದ ಮಿತಿಗಳ ನಡುವೆ ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ದಸಾಪ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ,  ನಿರ್ದೇಶಕ ಸುನೀಲಕುಮಾರ ಸುಧಾಕರ, ನಿರ್ಮಾಪಕ ಜೀವನ ಗೊಳಸಂಗಿ,  ನಟಿ ರೇಖಾ ಪಾಟೀಲ, ಕಲಾವಿದ ವಿಶ್ವೇಶ್ವರಯ್ಯ ಮಠಪತಿ, ಬಾಬು ತಡ್ಲಿ, ಲಕ್ಷಣ‌ ಹಂದ್ರಾಳ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ರಾಹುಲ್ ಮೆಳ್ಳಿ, ಸುನೀಲ ಕಳ್ಳಿಮನಿ, , ಚಂದ್ರಶೇಖರ ಅಂಬಲಿ, ಜಗದೀಶ ಗಲಗಲಿ, ಶ್ರೀಶೈಲ ನಾಗರಾಳ‌ ,ಪ್ರೀತಿ ಪಾಟೀಲ ಸೇರಿದಂತೆ ಕಲ್ಬುರ್ಗಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿವಿಧ ಸಾಹಿತಿಗಳು ಕಲಾವಿದರು ಹಾಗೂ ವಿದ್ಯಾರ್ಥಿಗಳು ಹಾಗೂ ಎಚ್.ಟಿ.ಪೋತೆ ಅವರ ಅಭಿಮಾನಿಗಳು  ಮುಂತಾದವರು ಉಪಸ್ಥಿತರಿದ್ದರು.

Saturday, August 5, 2023

3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಶ್ರಾವಣಿ

 


ಈ ದಿವಸ ವಾರ್ತೆ

ವಿಜಯಪುರ  : ಇಂಡಿಯಲ್ಲಿ ವಾಸವಿರುವ ಬಿ.ಕೆ.ಹೊಸಮನಿ ಹಾಗೂ ಮಲ್ಲಮ್ಮ ಅವರ ಮೊಮ್ಮಗಳಾದ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ತಾಯಿ ಸಾವಿತ್ರಿ  ಮಣೂರ, ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂದೆ ನಾಗರಾಜ್ ಹೊಸಮನಿ ಅವರ ಮುದ್ದಿನ ಮಗಳಾದ

 ಶ್ರಾವಣಿಯ  3ನೇ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಯಿತು.

ಮನೆಯ ಸದಸ್ಯರಾದ ವಾರ್ತಾಧಿಕಾರಿ ಅಮರೇಶ ದೊಡಮನಿ, ರೇಣುಕಾ ದೊಡಮನಿ, ರೈಲ್ವೆ ಇಲಾಖೆಯ ಶರಣು ಹೊಸಮನಿ,ಚಂದ್ರಶೇಖರ ಹೊಸಮನಿ, ರಾಘವೇಂದ್ರ ಹೊಸಮನಿ,ಮಲ್ಲಿಕಾರ್ಜುನ ಹೊಸಮನಿ, ಯೋಗಿತಾ ದೊಡಮನಿ, ಮಂಜುಳಾ, ಜ್ಯೋತಿ ಹೊಸಮನಿ ಹಾಗೂ ಪ್ರೇಮಾ ಶ್ರಾವಣಿಯ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದರು.

06-08-2023 EE DIVASA KANNADA DAILY NEWS PAPER

ನಮ್ಮೂರ ಸಿರಿ ಹಾಡು ಬಿಡುಗಡೆಗೊಳಿಸಿದ : ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ


 ಈ ದಿವಸ ವಾರ್ತೆ

ವಿಜಯಪುರ : ವಿಜಯಪುರದ ಯುವ ಸಾಹಿತಿ ಸೋಮು ಹಿಪ್ಪರಗಿ ಅವರ ವಿರಚಿತ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ಗತ ಇತಿಹಾಸ ಸಾರುವ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಬೆಂಗಳೂರಿನ ಸವಿತಾ ಗಣೇಶ ಪ್ರಸಾದ ಕಲಾವಿದೆ ಅವರ ಸಂಗೀತ ಮತ್ತು ಗಾಯನದಲ್ಲಿ ಸೊಗಸಾಗಿ ಮೂಡಿಬಂದ ನಮ್ಮೂರ ಸಿರಿ ಎನ್ನುವ ಹಾಡನ್ನು ಪತ್ರಕರ್ತ ಹಾಗೂ ಸಾಹಿತಿ ಪರಶುರಾಮ ಶಿವಶರಣ ಅವರು ಬಿಡುಗಡೆಗೊಳಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಸಾಹಿತಿ ಸೋಮು ಎಚ್. ಹಿಪ್ಪರಗಿ ಅವರು ರಚಿಸಿದ ಹಲವು ಹಾಡುಗಳು ನಾಡಿನ ಖ್ಯಾತ ಸಂಗೀತ ಸಂಗೀತಗಾರರಿAದ ಸಂಯೋಜನೆಗೊAಡು ಈಗಾಗಲೇ ಬಿಡುಗಡೆಗೊಂಡು ಜನಪ್ರಿಯತೆಗಳಿಸಿವೆ. ವಿಜಯಪುರದ ಇತಿಹಾಸ ಸಾರುವ ವಿಜಯಪುರ ಗುಮ್ಮಟಗಳ ನಾಡು ನಮ್ಮೂರು.... ಕಲೆ ಸಿರಿಯ ಕಾವ್ಯದ ಬೀಡು ನಮ್ಮೂರು ಹಾಡು ಕೂಡ ಮುಂದಿನ ದಿನಗಳಲ್ಲಿ ಜನಪ್ರಿಯತೆಗಳಿಸಿ ಸೋಮು ಅವರು ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಹಾಗೂ ಸಾಹಿತಿ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಬಸವರಾಜ ಬೆಲ್ಲದ, ವಿಜಯ ಹಿರೇಮಠ, ರಾಹುಲ ಟೋಣೆ, ರಾಹುಲ ಮೆಳ್ಳಿ, ಅಭಿಷೇಕ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ( ಅಮೃತ ಭಾರತಿ ಯೂಟ್ಯೂಬ್‌ನಲ್ಲಿ ಹಾಡು ಕೇಳಲು https://youtu.be/VyZaKv-oN3I ಲಿಂಕ್ ಮೇಲೆ ಕ್ಲಿಕ್ ಮಾಡಿ).