Tuesday, September 26, 2023

27-09-2023 EE DIVASA KANNADA DAILY NEWS PAPER

"ರಾಷ್ಟ್ರೀಯ ಸೇವಾ ಯೋಜನೆ "ದಿನ NSS DAY

ಈ ದಿವಸ ವಾರ್ತೆ

ವಿಜಯಪುರ: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಎನ್ಎಸ್ಎಸ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಸಿ ಬಿ ನಾಟಿಕಾರ್ರವರು ವಹಿಸಿಕೊಂಡಿದ್ದರು.

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಮೀನಾಕ್ಷಿ ಪಾಟೀಲ್  ಎನ್ಎಸ್ಎಸ್ ದಿನದ ಆಚರಣೆಯ ಉದ್ದೇಶ ಮತ್ತು ಆಶಯವನ್ನು ಹೇಳುತ್ತಾ, ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿಯ ನೆನಪಿಗೋಸ್ಕರ ಕೇಂದ್ರ ಸರ್ಕಾರ ದಿನಾಂಕ 24.09 1969ರಲ್ಲಿ ಎನ್ಎಸ್ಎಸ್ ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾದ ಡಾಕ್ಟರ್ ವಿ.ಕೆ.ಆರ್ .ವಿ ರಾವ್ ಅವರಿಂದ ಉದ್ಘಾಟನೆಗೊಂಡಿತು. ಅಂದು ಕೇವಲ ದೇಶಾದ್ಯಂತ 37 ವಿಶ್ವವಿದ್ಯಾಲಯಗಳ 40,000 ವಿದ್ಯಾರ್ಥಿಗಳಿಂದ ಆರಂಭವಾದ ಈ ಘಟಕವು ಇಂದು 1 ಕೋಟಿ 48 ಲಕ್ಷ 999,400 ಸ್ವಯಂಸೇವಕರನ್ನು ಹೊಂದಿದ ಒಂದು ಬೃಹತ್ ಘಟಕವಾಗಿದೆ.

ವಿದ್ಯಾರ್ಥಿಗಳು ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆ ಅಂದರೆ ಏನ್ ಎಸ್ ಎಸ್ ದ ಮೂಲಕ ಸಮಾಜೋಪಯೋಗಿ ಕೆಲಸ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಮತ್ತು ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಲು ಅವರಿಗೆ ಒಂದು ವೇದಿಕೆಯನ್ನು ಒದಗಿಸಿಕೊಡುವುದೇ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ದೇಶ. ಈ ಮೂಲಕ ಶ್ರಮದಾನಕ್ಕೆ ಹೆಚ್ಚು ಮಹತ್ವ ಕೊಟ್ಟು ಪರಿಸರದ ರಕ್ಷಣೆಗೆ ಮುಂದಾಗಬೇಕು. ತಮ್ಮ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಶ್ರಮದಾನವನ್ನು ಕೈಕೊಳ್ಳುವುದು ಇಲ್ಲಿ ಬಹು ಮುಖ್ಯವಾದದ್ದು. ಜೊತೆಗೆ ಈ ಮೂಲಕ ನೈತಿಕ ಶಿಕ್ಷಣವನ್ನು ಪಡೆಯುವದು, ಬೇರೆ ಬೇರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರವನ್ನ ಸ್ವಚ್ಚವಾಗಿಡುವಂತ ಕಾರ್ಯಕ್ಕೂ ಮುಂದಾಗಬೇಕು. ಇದರಿಂದ ಸಮಾಜದ ಜನರೊಂದಿಗೆ ಬೆರೆತು ಮುಂದೆ ನಾಯಕನಾಗುವ ಅವಕಾಶವನ್ನು ಪಡೆಯಬಹುದು ಇಂಥ ನಾಯಕತ್ವದ ಗುಣಗಳನ್ನು ಬೆಳೆಸುವುದು ಈ ಎನ್ಎಸ್ಎಸ್ ಘಟಕದ ವೇದಿಕೆಯ ಉದ್ದೇಶವೆಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎನ್ಎಸ್ಎಸ್ ಘಟಕದ ಸ್ವಯಂಸೇವಕರಾಗಿರುವ ವಿದ್ಯಾರ್ಥಿನಿಯರು ಎನ್ಎಸ್ಎಸ್ ಗೀತೆಯೊಂದಿಗೆ ಪ್ರಾರ್ಥನ ಗೀತೆಯನ್ನು ಹೇಳಿದರು ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಮಹದೇವಿ ಸುಂಗಾರೆ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾನ್ಯ ಪ್ರಾಚಾರ್ಯರು ಹಾಗೂ ಹಿರಿಯ ಉಪನ್ಯಾಸಕರು ಅತಿಥಿ ಮಹೋದಯರು ಸಸಿಗೆ ನೀರು ಹನಿಸುವದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ವೇದಿಕೆಯ ಮೇಲೆ ಉಪಸ್ಥಿತರಿರುವ ಹಿರಿಯರಾದ ಶ್ರೀ ಎಸ್ ಬಿ ಸಾವಳಸಂಗ , ಶ್ರೀಮತಿ ಎಂಎಂ ದಖನಿ ಶ್ರೀಎಂ ಬಿ ರಜಪೂತ್, ಶ್ರೀ ತೋಳ್ನೂರ್ ಉಪನ್ಯಾಸಕರು, ಶ್ರೀಮತಿ ಶೈಲಜಾ ಕರಣಿ ಶ್ರೀ ಆರ್ ಸಿ ಹಿರೇಮಠ, ಮೇತ್ರಿ , ಡಾ. ಸವಿತಾ ಜಳಕಿ, ಮುಂತಾದವರು ಉಪಸ್ಥಿತರಿದ್ದರು.  ಪ್ರಾಚಾರ್ಯರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಹಿತನುಡಿಗಳನ್ನುಹೇಳಿದರು. ಶ್ರೀಮತಿ ಶೈಲಜಾ ಕರಣಿ ಮೇಡಮ್ ಅವರು ವಂದಿಸಿದರು.ವಿದ್ಯಾರ್ಥಿನಿ ಜೈ ರಾಬಿ ಕಾರ್ಯಕ್ರಮ ನಿರೂಪಣೆ ಮಾಡಿದರು..ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಉಪನ್ಯಾಸಕ ವೃಂದ ಹಾಜರಿದ್ದರು .

ನಮ್ಮ ನಾಡಿನ ರೈತರ ಹಿತ ಕಾಪಾಡುವ ವಿಚಾರದಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ: ಸಿಎಂ ಸಿದ್ದರಾಮಯ್ಯ ಭರವಸೆ

 

ಈ ದಿವಸ ವಾರ್ತೆ

ಮೈಸೂರು ಸೆ 26: ಪಶುಸಂಗೋಪನೆ, ಗೋ ಸಂಪತ್ತು ಹೆಚ್ಚಿದಷ್ಟೂ ನಾಡಿನ ಸಂಪತ್ತು ಹೆಚ್ಚಿ ನಾಡಿನ ಆರ್ಥಿಕತೆಯೂ ಪ್ರಗತಿ ಕಾಣುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಶುಸಖಿಯರ ತರಬೇತಿ ಕಾರ್ಯಕ್ರಮ, ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು. 

ಹಾಲು ಉತ್ಪಾದಕರು ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಹರಿವಿಗೆ ಕಾರಣರಾಗಿದ್ದಾರೆ. ಹಾಲು ಒಕ್ಕೂಟಗಳು ರಚನೆಯಾಗಿದ್ದೇ ರೈತರ, ಹಾಲು ಉತ್ಪಾದಕರ ಶೋಷಣೆ ತಪ್ಪಿಸುವುದಕ್ಕಾಗಿ. ಕೆಎಂಎಫ್ ಮತ್ತು ಡೈರಿಗಳಲ್ಲಿ ಅಧಿಕಾರಿಗಳ ಏಕಸ್ವಾಮ್ಯ ತಪ್ಪಿಸಲು ಹಾಲು ಒಕ್ಕೂಟಗಳಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಪಶುಸಂಗೋಪನಾ ಸಚಿವನಾಗಿ ಮಾಡಿದ್ದೆ ಎಂದು ಸ್ಮರಿಸಿದರು. 

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇನ್ನಷ್ಟು ಹೆಚ್ಚಿಸಲು ಮತ್ತು ಅದನ್ನು ಮಾರಾಟ ಮಾಡುವುದಕ್ಕೂ ಸಾಕಷ್ಟು ಅವಕಾಶಗಳಿವೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಆಗ ನಾನು ಕ್ಷೀರಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದು ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಜತೆಗೆ ರೈತರಿಗೆ ಪ್ರತಿ ಲೀಟರ್ ಗೆ 5ರೂ ಪ್ರೋತ್ಸಾಹದನದ ಮೂಲಕ ಅನುಕೂಲ ಆಗುವ ಕಾರ್ಯಕ್ರಮವನ್ನು ರೂಪಿಸಿದ್ದೆ ಎಂದು ವಿವರಿಸಿದರು. 

ನಾನು ಈ ಹಿಂದೆ ಪಶುಸಂಗೋಪನಾ ಸಚಿವನಾಗಿ ಮಾಡಿದ ಒಳ್ಳೆಯ ಕೆಲಸಗಳು ನನ್ನನ್ನು ಎರಡು ಬಾರಿ ಮುಖ್ಯಮಂತ್ರಿ ಆಗುವವರೆಗೂ ಕೈಹಿಡಿದಿವೆ. 14 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ನನ್ನನ್ನು ಚಾಮುಂಡೇಶ್ವರಿ, ವರುಣ ಮತ್ತು ಬಾದಾಮಿಯ ಮತದಾರರು 9 ಬಾರಿ ಗೆಲ್ಲಿದ್ದಾರೆ. ಪ್ರಜಾಪ್ರಭುತ್ವಕ್ಕೆ ಜನರೇ ನಿಜವಾದ ಮಾಲೀಕರು ಎಂದು ಕೃತಜ್ಞತೆ ಸಲ್ಲಿಸಿದರು. 

ಹಸು, ಎಮ್ಮೆ, ಕುರಿ, ಮೇಕೆ ತಳಿಗಳ ಉಳಿಸುವ ಮತ್ತು ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ಪಶುಸಂಗೋಪನಾ ಇಲಾಖೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತರು ಮಾಡುತ್ತಿರುವ ಉತ್ತಮ ಕಾರ್ಯವನ್ನೇ ಪಶು ಇಲಾಖೆಯಲ್ಲಿ ಪಶುಸಖಿಯರು ನಿರ್ವಹಿಸುತ್ತಾರೆ. ಇವರು ಪಶುಪಾಲಕರು, ರೈತರು ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು. 

ಸರ್ಕಾರ ರೈತರಿಗೆ, ಪಶುಪಾಲಕರಿಗೆ, ಕುರಿ, ಕೋಳಿ ಸಾಕಾಣಿಕೆದಾರರಿಗೆ ಹಲವು ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ನೀಡಿದೆ. ಇವೆಲ್ಲವನ್ನೂ ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ.ಮಹದೇವಪ್ಪ ಅವರು ಅಧ್ಯಕತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ಶಾಸಕರುಗಳಾದ ಸಿ.ಅನಿಲ್ ಕುಮಾರ್, ಡಿ.ರವಿಶಂಕರ್, ಕೆ.ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್, ಜಿ.ಡಿ.ಹರೀಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.