Monday, June 15, 2020

‘’ಜಿಲ್ಲೆಯಲ್ಲಿನ ತೀವ್ರ ಉಸಿರಾಟ ತೊಂದರೆ, ನೆಗಡಿ,ಕೆಮ್ಮು,ಜ್ವರ ಸಂಬಂಧಿತ ರೋಗಿ ಚಿಕಿತ್ಸೆಗೆ ಬಂದ ತಕ್ಷಣ ಮಾಹಿತಿ ಒದಗಿಸಿ” : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ



ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯ ಖಾಸಗಿ ವೈದ್ಯರ ಬಳಿ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿತ ಯಾವುದೇ ರೋಗಿಗಳು ಬಂದಲ್ಲಿ ತಕ್ಷಣ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಂಟಲು ದ್ರವ ಮಾದರಿ ಪಡೆಯಲು ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ಪ್ರತಿ ಆಸ್ಪತ್ರೆಗಳಿಗೆ ಹೋಗುವ ನೆಗಡಿ,ಕೆಮ್ಮು, ಜ್ವರ, ಹಾಗೂ ತೀವ್ರ ಉಸಿರಾಟ ಸಂಬಂಧಿತ ತೊಂದರೆಗಳಿಂದ ಬಳಲುತ್ತಿರುವವರ ಬಗ್ಗೆ ತಕ್ಷಣ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕು. ದೂರವಾಣಿ ಸಂಖ್ಯೆ 9739224889(ಭೀಮರಾವ ಮಮದಾಪೂರ) ಇವರಿಗೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. 

ಅದರಂತೆ ಈ ಮಾಹಿತಿ ಲಭ್ಯವಾದ ತಕ್ಷಣ ಇಂತಹ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸಂಬಂಧಪಟ್ಟ ಲ್ಯಾಬ್ ಟೆಕ್ನಿಷಿಯನ್‍ಗಳ ಮೂಲಕ ಆಯಾ ಆಸ್ಪತ್ರೆಗಳಿಗೆ ಸಂಪರ್ಕ ಸಾಧಿಸಿ ಗಂಟಲು ದ್ರವ ಮಾದರಿ ಸಂಗ್ರಹಿಸಬೇಕು. ತೀವ್ರ ಉಸಿರಾಟ ತೊಂದರೆ ಸಂಬಂಧಸಿದ ಪ್ರಕರಣಗಳಲ್ಲಿ ಟ್ರೂನ್ಯಾಟ್ ಯಂತ್ರದ ಮೂಲಕ ಗಂಟಲು ದ್ರವ ಮಾದರಿಗೆ ಒಳಪಡಿಸಿ ಪಾಸಿಟಿವ್ ಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಐ.ಎಲ್.ಐ ಪ್ರಕರಣಗಳಲ್ಲಿಯೂ ತಕ್ಷಣ ಗಂಟಲು ದ್ರವ ಮಾದರಿಗೆ ಒಳಪಡಿಸಿದ ನಂತರ ಆನ್‍ಲೈನ್ ನೊಂದಣಿ ಮತ್ತು ಆಪ್‍ಲೋಡ್‍ಗೆ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲೆಯ ಆಯುರ್ವೇದ, ಯೂನಾನಿ, ಹೋಮಿಯೋಪತಿಕ್ ವೈದ್ಯರ ಬಳಿ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳು ಬಂದ ತಕ್ಷಣ ಮೇಲಿನ ಮೋಬೈಲ್ ಸಂಖ್ಯೆಗೆ ಮಾಹಿತಿ ನೀಡಬೇಕು. ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸೂಕ್ತ ರೀತಿಯಲ್ಲಿ ನೆರವಾಗಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ ಮತ್ತು ಲೋಪ ಕಂಡುಬಂದಲ್ಲಿ ಅಂತಹವರ ವಿರುದ್ಧ ಕೆ.ಪಿ.ಎಂ.ಎ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಅದರಂತೆ ಕೋವಿಡ್-19 ರೋಗ ವಿಸ್ತರಣೆ ತಡೆಯಲು ಮತ್ತು ಸಾವುಗಳನ್ನು ತಪ್ಪಿಸಲು ತಕ್ಷಣ ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿ ಐಎಲ್‍ಐ ಮತ್ತು ಸಾರಿ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಬೇಕು. ಈ ಕುರಿತು ಐ.ಎಂ.ಎ ಸಂಸ್ಥೆಯಡಿ ನೊಂದಾಸಿಕೊಂಡಿರುವ ವೈದ್ಯರು, ಕಂಟೇನ್ಮೆಂಟ್ ವಲಯ ಮತ್ತು ಬಫರ್ ಝೋನ್‍ಗಳಲ್ಲಿನ ಪ್ರತಿ ವೈದ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ನೀಡಬೇಕು. ಆಯಾ ತಾಲೂಕಾ ಆರೋಗ್ಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ ತಾಲೂಕಾ ಆರೋಗ್ಯಾಧಿಕಾರಿ ಶ್ರೀ ಸತೀಶ (ಮೋ.ಸಂ:8277504629) ವಿಜಯಪುರ ಟಿ.ಎಚ್.ಓ ಡಾ.ಕವಿತಾ (ಮೋ.ಸಂ:8073742494), ಬ ಬಾಗೇವಾಡಿ ಟಿ.ಎಚ್.ಓ ಶ್ರೀ ಓತಗಿರಿ (ಮೋ.ಸಂ: 8277504283), ಇಂಡಿ ಟಿ.ಎಚ್.ಓ ಡಾ. ಅರ್ಚನಾ ಕುಲಕರ್ಣಿ( ಮೋ.ಸಂ: 7483685695), ಸಿಂದಗಿ ಟಿ.ಎಚ್.ಓ ಆರ್.ಎಸ್ ಇಂಗಳೆ (ಮೋ.ಸಂ: 9606656104) ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ (ಮೋ.ಸಂ: 9538240225) ಇವರಿಗೂ ಆಯಾ ಕ್ಷೇತ್ರಗಳಲ್ಲಿ ಬರುವ ಐ.ಎಲ್‍ಐ ಮತ್ತು ಸಾರಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ತೀವ್ರ ಉಸಿರಾಟ ತೊಂದರೆಯಿಂದ ಬಳಲಿ ಕೋವಿಡ್-19 ಪ್ರಕರಣಗಳು ದೃಡಪಟ್ಟು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ವ್ಯವಸ್ಥಿತ ನಿಗಾದಲ್ಲಿ ಚಿಕಿತ್ಸೆ ನಡೆಯಬೇಕು. ಐಸಿಯುಗಳಲ್ಲಿರುವ ರೋಗಿಗಳ ಆರೋಗ್ಯ ಲಕ್ಷಣ, ಏರುಪೇರು ನಿಗಾಕ್ಕೆ ನಿರಂತರ ಪರಿಶೀಲನೆಗಾಗಿ ಶಿಶ್ರೋಶಕಿ ಒಬ್ಬರನ್ನು ನಿಯೋಜಿಸಬೇಕು. ಜಿಲ್ಲಾಸ್ಪತ್ರೆ ಶತ್ರಚಿಕಿತ್ಸಕರು ಸೂಕ್ತ ಗಮನ ನೀಡುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇಂತಹ ರೋಗಿಗಳ ಗಂಟಲುದ್ರವ ಮಾದರಿ ಸಂಗ್ರಹಣೆಗೆ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಮತ್ತು ನೋಡಲ್ ಅಧಿಕಾರಿಗಳನ್ನು ನೀಯೋಜಿಸಬೇಕು. ಇಂದಿನಿಂದ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಎಲ್ಲರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಐ.ಎಲ್.ಐ ಮತ್ತು ಸಾರಿ ಸಂಬಂಧಿತ ರೋಗಿಗಳ ತಕ್ಷಣ ಲಕ್ಷಣ ಗುರುತಿಸುವಿಕೆ, ಗಂಟಲು ದ್ರವ ಮಾದರಿ ಸಂಗ್ರಹಣೆ, ವೈದ್ಯಕೀಯ ಪರೀಕ್ಷೆ ನಂತರ ವೆಬ್‍ಸೈಟ್‍ನಲ್ಲಿ ನೋಂದಣಿಗೆ ಕ್ರಮಕೈಗೊಳ್ಳಬೇಕು. ಖಾಸಗಿ ವೈದ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಐ.ಎಲ್.ಐ ಹಂತದಲ್ಲಿಯೇ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು. ಇವರೊಂದಿಗೆ ಸಂಪರ್ಕ ಗುರುತಿಸುವ ಕಾರ್ಯ ಸಹ ಅಚ್ಚುಕಟ್ಟಾಗಿ ನಡೆಯಬೇಕು. ಅದರಂತೆ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳಿಗೆ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಮತ್ತು ಹೋಮ್‍ಕ್ವಾರಂಟೈನ್ ತೀವ್ರ ನಿಗಾ ಇಡುವ ಬಗ್ಗೆಯೂ ಅವರು ಸಂಬಂಧಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿ ಅವರು ಮಾತನಾಡಿ ಈ ಕರ್ತವ್ಯಕ್ಕೆ ನೇಮಿಸಿರುವ ಎಲ್ಲ ನೋಡಲ್ ಅಧಿಕಾರಿಗಳು, ಲ್ಯಾಬ್ ಟೆಕ್ನಿಷಿಯನ್‍ಗಳು, ತಾಲೂಕಾವಾರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಐ.ಎಂ.ಎ ಮತ್ತು ಕಂಟೇನ್ಮೆಂಟ್ ವಲಯಗಳ ವೈದ್ಯರು ಕೂಡಾ ಯಾವುದೇ ರೀತಿಯ ನಿರ್ದಾಕ್ಷಣ್ಯ ಕ್ರಮಕ್ಕೆ ಅವಕಾಶ ನೀಡದೆ ರೋಗಿಗಳು ಬಂದ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಗಂಟಲು ದ್ರವ ವೈದ್ಯಕೀಯ ಪರೀಕ್ಷೆಗೆ ನೆರವಾಗಬೇಕು. ನಂತರ ಪೋರ್ಟಲ್‍ನಲ್ಲಿ ನೋಂದಣಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಡಿ.ಎಚ್.ಓ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಡಾ.ಎಂ.ಬಿ ಬಿರಾದಾರ, ಸಂಪತಕುಮಾರ ಗುಣಾರೆ, ಶರಣಪ್ಪಾ ಕಟ್ಟಿ, ಡಾ. ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಇಂದು ಮತ್ತೆ ೩ ಕೋವಿಡ್-೧೯ ಪಾಸಿಟಿವ್ ದೃಢ ಸೋಂಕಿತರ ಸಂಖ್ಯೆ ೨೩೨ ಕ್ಕೆ ಏರಿಕೆ : ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ



ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೩೨ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ೬೨ ರೋಗಿಗಳು ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ ೩ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ ೭೦೬೬ (೨೪ ವರ್ಷದ ಹೆಣ್ಣು) ರೋಗಿ ಸಂಖ್ಯೆ ೭೦೬೭ (೪೨ ವರ್ಷದ ಗಂಡು) ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹಾಗೂ ರೋಗಿ ಸಂಖ್ಯೆ ೭೦೬೮ (೮ ವರ್ಷದ ಹೆಣ್ಣು) ಇವರಿಗೆ ಐಎಲ್‌ಐ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ ೫೯೭೪ (೫ ವರ್ಷದ ಹೆಣ್ಣು) ರೋಗಿ ಸಂಖ್ಯೆ ೫೯೭೫ (೩ ವರ್ಷದ ಹೆಣ್ಣು) ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತೆಯಿಂದ ಬಿಡುಗಡೆ ಆಗಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೨೯೮೩೧ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು ೨೩೨ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೮೯೮೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೬೭೭ ಜನರು (೧ ರಿಂದ ೨೮ ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೬ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೬೪ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೬೨ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೬೯೩೦ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೨೬೫೪೨ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೧೫೬ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ : ಇನ್ನುಮುಂದೆ ಆಕಾಶವಾಣಿ ಬೆಂಗಳೂರು ಕೇಂದ್ರದ ಕಾರ್ಯಕ್ರಮ ಪ್ರಸಾರ



ಈ ದಿವಸ ವಾರ್ತೆ
ವಿಜಯಪುರ: ಆಕಾಶವಾಣಿ ವಿಜಯಪುರ ಕೇಂದ್ರದಿಂದ ಜೂ.16, 2020 ರಿಂದ ಇನ್ನುಮುಂದೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬೆಂಗಳೂರು ಕೇಂದ್ರದ ಮುಖ್ಯವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ವಿಜಯಪುರ ಆಕಾಶವಾಣಿ ಕಾರ್ಯಾಲಯ ಮುಖ್ಯಸ್ಥ ಬಿ.ಡಿ. ಕಾಂಬಳೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಪ್ರತಿದಿನ ಬೆಳಗ್ಗೆಯಿಂದ ಸಂಜೆ ವರೆಗೆ ಬೆಂಗಳೂರು ಕೇಂದ್ರದ ಮುಖ್ಯವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ಬೆಂಗಳೂರು ಕೇಂದ್ರದ ಕಾರ್ಯಕ್ರಮಗಳು ಲಭ್ಯವಿಲ್ಲದಿದ್ದಾಗ ವಿವಿಧ ಭಾರತೀ ಮುಂಬೈ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಅವರು ತಿಳಿಸಿದ್ದಾರೆ.