Tuesday, August 22, 2023

ದೇಶ ರಕ್ಷಕ ಪಡೆಯ 5ನೇ ವಾರ್ಷಿಕೋತ್ಸವ ಹಾಗೂ ಚಂದ್ರಯಾನ 3ರ ನೇರ ಪ್ರಸಾರ


 ಈ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ 5ನೇ ವಾರ್ಷಿಕೋತ್ಸವ ಹಾಗೂ ಚಂದ್ರಯಾನ 3ರ ನೇರ ಪ್ರಸಾರ ಕಾರ್ಯಕ್ರಮವನ್ನು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರುಗಡೆ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದೆ.

ಮಧುಮೇಹ ತಜ್ಞರು ಹಾಗೂ ಬಿಜೆಪಿ ಮುಖಂಡರಾದ ಡಾ. ಬಾಬುರಾಜೇಂದ್ರ ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರ ಮಟ್ಟದ ಉತ್ತಮ  ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ನಾರಾಯಣ ಬಾಬಾನಗರ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ ಭಾಗವಹಿಲಿಸದ್ದಾರೆ.

ವಿಶೇಷ ಆಹ್ವಾನಿತರಾಗಿ ಗೆಜ್ಜಿ ಕರಿಯರ ಅಕಾಡೆಮಿಯ ಸಂಸ್ಥಾಪಕರಾದ ಸುರೇಶ ಗೆಜ್ಜಿ ಅವರು ಭಾಗವಹಿಸಲಿದ್ದಾರೆ ಎಂದು ದೇಶ ರಕ್ಷಕ ಪಡೆಯ ರೋಹನ ಆಪ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ – ಗ್ರಂಥಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್



ಈ ದಿವಸ ವಾರ್ತೆ 

ವಿಜಯಪುರ :  ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಂಗಳವಾರ ಸಂಜೆ ಜಿಲ್ಲಾಸ್ಪತ್ರೆಗೆ ದಿಢೀರ ಭೇಟಿ ನೀಡಿ ಆಸ್ಪತ್ರೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಆಭಾ ಸೆಂಟರ್ ವಿಭಾಗ, ಫಾರ್ಮಾಸಿ ವಿಭಾಗ, ಎನ್‍ಆರ್‍ಸಿ ಮಕ್ಕಳ ವಿಭಾಗ, ತುರ್ತು ವಿಭಾಗ, ಚಿಕ್ಕ ಮಕ್ಕಳ ವಿಭಾಗ, ಚಿಕ್ಕ ಮಕ್ಕಳ ತುರ್ತು ಚಿಕಿತ್ಸಾ ವಿಭಾಗ, ಡಯಾಲಿಸಿಸ್ ವಿಭಾಗ ಹಾಗೂ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಎಲ್ಲ ಅಗತ್ಯ ಔಷಧಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹಿತದೃಷ್ಟಿಯಿಂದ ಅವರ ಆರೋಗ್ಯ ಮತ್ತು ಮನರಂಜನೆಗಾಗಿ ಉದ್ಯಾನವನ ನಿರ್ಮಾಣ ಮಾಡಬೇಕು. ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಆಸ್ಪತ್ರೆಯಲ್ಲಿ ಆಧುನಿಕ ಅಡುಗೆ ಕೋಣೆ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 


ಈ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಉಪಚಾರಕ್ಕಾಗಿ ಬಂದ ರೋಗಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು. ಅಪೌಷ್ಟಿಕತೆಯಿಂದ ಬಳಲುತ್ತಿರುವ (ಎನ್.ಆರ್.ಸಿ.) ಮಕ್ಕಳ ಹಾಗೂ ತಾಯಂದಿರ ಯೋಗಕ್ಷೇಮದ ಬಗ್ಗೆ ವಿಚಾರಿಸಿ, ಅವರಿಗೆ ಒದಗಿಸುತ್ತಿರುವ ವೈದ್ಯಕೀಯ ಸೇವೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. 


ಆವರಣದಲ್ಲಿರುವ ಪಿ.ಎಸ್.ಎ. ಪ್ಲಾಂಟ್, ಸಖಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಆರ್.ಟಿ.ಪಿ.ಸಿ.ಆರ್ ಸೆಂಟರ್, ಎಮ್.ಆರ್.ಐ ಸೆಂಟರ್ ಎಮ್.ಸಿ.ಎಚ್ ಆಸ್ಪತ್ರೆಯ ಎಲ್ಲಾ ವಿಭಾಗ ಸೇರಿದಂತೆ ಪೂರ್ಣಗೊಳ್ಳುವ ಹಂತದಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಹಾಗೂ ಟ್ರಾಮಾ ಕೇರ್ ಕಟ್ಟಡವನ್ನು ಹಸ್ತಾಂತರಿಸಿದ ಕಡತಗಳ ಕುರಿತು ಪರಿಶೀಲನೆ ನಡೆಸಿದರು. 

ಜಿಲ್ಲಾ ಆಸ್ಪತ್ರೆಗೆ ಭೇಟಿ ನಿಡಿದ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಎಲ್.ಲಕ್ಕಣ್ಣವರ ಅವರು ಶ್ರೀ ಸಿದ್ದೇಶ್ವರ ಸ್ವಾಮಿಜಿ ಯವರ ರಚಿಸಿದ ಪುಸ್ತಕವನ್ನು ನೀಡಿ ಜಿಲ್ಲಾಧಿಕಾರಿಗಳಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ಎ.ಜಿ.ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಅದಿಕಾರಿಗಳಾದ ಕಟ್ಟಿಮನಿ, ಸಹಾಯಕ ಆಡಳಿತಾಧಿಕಾರಿ ಎ.ಎ.ಸಿಂದಗಿಕರ, ಡಾ. ಆನಂದ ಝಳಕಿ, ಡಾ.ಪರಶುರಾಮ ದೇವಮಾನೆ, ಶುಶ್ರೂμÁಧಿಕಾರಿ ಶ್ರೀಮತಿ ಬಿಸನಾಳ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ : ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದ ಹತ್ತಿರದ ಸುಭಾಸಚಂದ್ರ ಭೋಸ್ ವೃತ್ತ, ಅಲ್‍ಅಮೀನ್ ಮೆಡಿಕಲ್ ಕಾಲೇಜ್ ಹಾಗೂ ತೊರವಿ ರಸ್ತೆಯ ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ವಿಜಯಪುರ-ಅಥಣಿ-ಮುರಗುಂಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿವೀಕ್ಷಣೆ ನಡೆಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ನಿವಾರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯ ಪಾಟೀಲ, ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಉಪಸ್ಥಿತರಿದ್ದರು.


ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ : ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಟಿ.ಭೂಬಾಲನ್

 

ವಿಜಯಪುರ :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ  ಕುಟುಂಬದ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ಮಾಹೆ 2000 ರೂ. ಡಿಬಿಟಿ ಮೂಲಕ ಒದಗಿಸುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ ಆ.30 ರಂದು ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಜುಲೈ 19 ರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ 300 ಗ್ರಾಮ ಒನ್ ಕೇಂದ್ರ, ನಗರ ಸ್ಥಳೀಯ ಸಂಸ್ಥೆ ಕೇಂದ್ರಗಳು ಸೇರಿದಂತೆ 41 ಕರ್ನಾಟಕ ಒನ್ ಕೇಂದ್ರಗಳು, 211 ಬಾಪೂಜಿ ಸೇವಾ ಕೇಂದ್ರಗಳು ಒಳಗೊಂಡಂತೆ 552 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಅವರ ಪತಿಯ ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ ವಿವರ ಅಗತ್ಯವಾಗಿರುತ್ತವೆ. ಈ ಯೋಜನೆಯಡಿ ನೊಂದಾಯಿಸಲು ಯಾವುದೇ ಶುಲ್ಕವಿರುವುದಿಲ್ಲ ಸಂಪೂರ್ಣ ಉಚಿತವಾಗಿದೆ.

ಜಿಲ್ಲೆಯಲ್ಲಿ ಮಹಿಳೆ ಯಜಮಾನಿಯಾಗಿರುವ 5,20,906 ರೇಷನ್ ಕಾರ್ಡಗಳಿದ್ದು, ಇದರಲ್ಲಿ ಆಗಸ್ಟ್ 20ರವರೆಗೆ 4,24,839 ಫಲಾನುಭವಿಗಳು ಗೃಹ ಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದು, ಶೇ.82 ರಷ್ಟು ಸಾಧನೆಯಾಗಿದೆ. ಉಳಿದ ಅರ್ಜಿಗಳ ನೊಂದಣಿ ಕಾರ್ಯ ಪ್ರಗತಿಯಲ್ಲಿದೆ.

ಜುಲೈ 30ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗಳು ಭಾಗವಹಿಸಬೇಕೆಂಬ ಸದುದ್ದೇಶ ಹಾಗೂ ಎಲ್ಲ ಫಲಾನುಭವಿಗಳು ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲೆಯ 288 ಸ್ಥಳೀಯ ಸಂಸ್ಥೆಗಳ ವಾರ್ಡಗಳಲ್ಲಿ ಹಾಗೂ 211 ಗ್ರಾಮ ಪಂಚಾಯತ್ ಸೇರಿದಂತೆ ಒಟ್ಟು 499 ಸ್ಥಳಗಳಲ್ಲಿ  ಏಕಕಾಲದಲ್ಲಿ ಯಶಸ್ವಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಓರ್ವ ನೊಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಕಾರ್ಯಕ್ರಮ ಸ್ಥಳದಲ್ಲಿ 10/10 ಅಳತೆಯ ಎಲ್‍ಇಡಿ ವ್ಯವಸ್ಥೆ 200 ರಿಂದ 2000 ಫಲಾನುಭವಿಗಳು ಭಾಗವಹಿಸಲು ಆಸನ ವ್ಯವಸ್ಥೆ, ಉಪಹಾರ ನೀರಿನ ವ್ಯವಸ್ಥೆ ಮಾಡಲಾಗಿದೆ. 

ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ  ನೀಡಲಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮವು ನಗರದ ಸ್ಟೇಶನ್ ರಸ್ತೆಯಲ್ಲಿರುವ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಲ್ಲಿ ಜರುಗಲಿದೆ. ತಾಲೂಕಾ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಮೈಸೂರು ಕಾರ್ಯಕ್ರಮದ ಸ್ಥಳದಿಂದ ಜಿಲ್ಲೆಯ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಸಂವಾದ ನಡೆಸಲು ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ. 

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ನಾಡಗೀತೆ, ಮೈಸೂರು ಕಾರ್ಯಕ್ರಮದ ನೇರ ಪ್ರಸಾರ, ಪ್ರತಿಜ್ಞಾ ವಿಧಿ ಬೋಧನೆ, ಮೈಸೂರದಿಂದ ಹಣ ಬಿಡುಗಡೆಯ ಪ್ರಕ್ರಿಯೆ, ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸಂವಾದ ಕಾರ್ಯಕ್ರಮಗಳು ಜರುಗಲಿವೆ. ಈ ಜನಪರ ಯೋಜನೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಫಲಾನುಭವಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. 


23-08-2023 EE DIVASA KANNADA DAILY NEWS PAPER

ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದ ರೈತರ ಸಮಸ್ಯೆ ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಭೆ: ರೈತ ಮುಖಂಡರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ


ಈ ದಿವಸ ವಾರ್ತೆ

ಬೆಂಗಳೂರು, ಆಗಸ್ಟ್‌ 22-ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಓ.ಟಿ.ಎಸ್. (One Time Settlement) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್‌ ಹಾಗೂ ಪ್ರವರ್ತಕ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ಬಿ.ಆರ್. ಪಾಟೀಲ ಹಾಗೂ ದರ್ಶನ್‌ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ರೈತ ಮುಖಂಡರ ನಿಯೋಗದೊಂದಿಗೆ ಈ ಸಮಸ್ಯೆ ಕುರಿತು ಚರ್ಚೆ ನಡೆಸಿದರು.



ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆ ಸಾಲ ಪಡೆದ ರೈತರು, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ ದಂತಹ ಸಮಸ್ಯೆಗಳಿಂದಾಗಿ ಸಕಾಲದಲ್ಲಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸಾಲ ಮರುಪಾವತಿಗೆ ನೋಟೀಸು, ಲೀಗಲ್‌ ನೋಟೀಸುಗಳನ್ನು ಕಳುಹಿಸಿ, ಅದರ ವೆಚ್ಚವನ್ನೂ ರೈತರ ಮೇಲೆಯೇ ಹಾಕುತ್ತಿದ್ದಾರೆ. ಇಂತಹ ಕ್ರಮಗಳಿಂದಾಗಿ 30,000 ರೂ. ಮೊತ್ತದ ಸಾಲಕ್ಕೆ 2.8 ಲಕ್ಷ ರೂ. ಪಾವತಿಸುವಂತೆ, 3 ಲಕ್ಷ ರೂ. ಸಾಲಕ್ಕೆ 3೦ ಲಕ್ಷ ರೂ. ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಪ್ರತಿಭಟಿಸಿ, 8 ತಿಂಗಳಿನಿಂದ ರೈತ ಹೋರಾಟಗಾರರು ಧರಣಿ ನಡೆಸುತ್ತಿದ್ದಾರೆ. ರೈತರು ಓ.ಟಿ.ಎಸ್. ಅಡಿ  ಶೇ. 50 ರಷ್ಟು ಅಸಲು ಪಾವತಿಸಲು ಸಿದ್ಧರಿದ್ದಾರೆ. ರೈತರ ಸಮಸ್ಯೆ ಬಗೆಹರಿಸಿ, ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಹಲವು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಈ ಅನುಕೂಲ ಕಲ್ಪಿಸಿವೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್‌ ಅಧಿಕಾರಿಗಳು, ಬ್ಯಾಂಕಿನ ಆಡಳಿತ ಮಂಡಳಿ ಇದಕ್ಕೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕಿನಲ್ಲಿ 6500 ಕೋಟಿ ರೂ. ಸುಸ್ತಿ ಸಾಲವಿದ್ದು, ಅದರಲ್ಲಿ 5000 ಕೋಟಿ ರೂ. ಬೆಳೆ ಸಾಲವಾಗಿದೆ ಎಂದರು. ಬ್ಯಾಂಕಿನ ಅಧ್ಯಕ್ಷರು ಗೈರು ಹಾಜರಾದ ಕುರಿತು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರೈತರ ಕುರಿತು ಮಾನವೀಯತೆಯಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರಲ್ಲದೆ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಿಸಿದ ಬ್ಯಾಂಕರುಗಳ ಸಭೆ ನಡೆಸಿದ ಪರಿಹಾರ ಸೂತ್ರ ಕಂಡುಕೊಂಡ ನಂತರ ಮತ್ತೊಮ್ಮೆ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಕೃಷಿ ತಜ್ಞ ಡಾ. ಪ್ರಕಾಶ್‌ ಕಮ್ಮರಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಮಾಧವರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಝಾನ್ಸಿಲಕ್ಷ್ಮಿ, ಟಿ.ಯಶವಂತ್, ಅಲಿಬಾಬ ಸೇರಿ ಹಲವು ರೈತ ಮುಖಂಡರು ಭಾಗವಹಿಸಿದ್ದರು.