Thursday, October 20, 2022

21-10-2022 EE DIVASA KANNADA DAILY NEWS PAPER

ಮತದಾನದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಲು ಜಾಗೃತಿ ಮೂಡಿಸಿ: ಪಿ.ಎಸ್.ವಸ್ತ್ರದ


ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಮಾತನಾಡಿರು 

ವಿಜಯಪುರ : ೧೮ ರಿಂದ ೨೦ ವಯೋಮಾನದ ನವ ಮತದಾರರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು  ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ ೧೮ರಂದು ಸ್ವೀಪ್ ಹಾಗೂ ಇಎಲ್‌ಸಿ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮತದಾನ ಕೇಂದ್ರಕ್ಕೆ ಅಗತ್ಯವಾಗಿ ಕೊಂಡೋಯ್ಯಬೇಕಾದ ಇವಿಎಂಗಳ ಬಳಕೆ ಮತ್ತು ಚುನಾವಣೆ ಪ್ರಕ್ರಿಯೆಯ  ಪಾವಿತ್ರ‍್ಯತೆಯ ಪಾಲನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಹ ನಿರಂತರವಾಗಿ ಸಂಘಟಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಸಂಬಂಧಿಸಿದ ಘಟಕಗಳು, ಸಂಚಾಲನಾ ಸಮಿತಿ ಮತ್ತು ಕಾರ್ಯಪಡೆಗಳು ಅತ್ಯಗತ್ಯವಾಗಿ ಗಮನಿಸಬೇಕಾದ ಸಂಗತಿಗಳಾದ ಪಟ್ಟಿಯಲ್ಲಿನ ಹೆಸರು, ಸರಿಯಾದ ನಮೂದು, ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮತದಾನದ ದಿನಾಂಕ, ಸಮಯ ಮೊದಲಾದ ವಿವರಗಳ ಬಗ್ಗೆ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮತದಾರರು ಕಡ್ಡಾಯವಾಗಿ ತಮ್ಮ ಎಪಿಕ್ ಚೀಟಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಆಧಾರ್ ಇಲ್ಲದಿದ್ದಲ್ಲಿ ಚುನಾವಣಾ ಆಯೋಗವು ಗುರುತಿಸಿದ ಯಾವುದಾದರೂ ಪೂರಕ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಮತದಾರರಲ್ಲಿ ಸೂಕ್ತ ಜಾಗೃತಿ ಮೂಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
೨೦೨೩ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿ, ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆ ಅಧಿಕಾರಿಗಳು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ, ಸರ್ಕಾರೇತರ ಸಂಘ-ಸಂಸ್ಥೆಗಳ ಒಕ್ಕೂಟ ಪದಾಧಿಕಾರಿಗಳು, ಎನ್‌ಸಿಸಿ ಅಧಿಕಾರಿಗಳು, ಜಿಲ್ಲಾ ಅಗ್ರಣೀಯ ಬ್ಯಾಂಕ್ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೀಪ್ ಚಟುವಟಿಕೆಗಳ ಭಾಗವಾಗಿ ೨೦೨೩ರ ಮಾರ್ಚ್ವರೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವಾರ್ಷಿಕ ಕ್ರೀಯಾ ಯೋಜನೆ ಸಿದ್ಧಪಡಿಸಿ ಹಂಚಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಅನುದಾನ, ಅನುದಾನ ರಹಿತ ಎಲ್ಲ ಸಂಘ-ಸಂಸ್ಥೆಗಳು ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮತದಾರರಲ್ಲಿ ಜಾಗೃತಿ-ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು ಎಂದರು.  
ಮತದಾರ ಸಹಾಯವಾಣಿ ಸಂಖ್ಯೆ ೧೯೫೦ ಸಂಪರ್ಕಿಸಿ, ಮತದಾರರು ತಮ್ಮ ವಿವರವನ್ನು ಖಚಿತಪಡಿಸಿಕೊಳ್ಳಬೇಕು. ಈ ಸಹಾಯವಾಣಿಯನ್ನು ಸಂಪರ್ಕಿಸಿ ಮತದಾನದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಮತದಾರರು ತಮ್ಮ ಮತಗಟ್ಟೆ, ಸೇರಿದಂತೆ ಮತದಾರರ ಸಮಸ್ಯೆಗಳ ಕುರಿತು ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂಬುದರ ಕುರಿತಾಗಿಯೂ ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಮಾತನಾಡಿ, ಐಎಲ್‌ಓಗಳು ಸಹ ಮನೆ-ಮನೆಗೆ
ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು, ಮತದಾನದ ಹಕ್ಕು ಚಲಾಯಿಸಲು ಬೇಕಾಗುವ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮಕ್ಕಳಕಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

20-10-2022 EE DIVASA KANNADA DAILY NEWS PAPER