Friday, September 29, 2023

ಮಾನವ- ವನ್ಯಮೃಗಗಳ ಸಂಘರ್ಷಗಳನ್ನು ತಡೆಯುವ ಕೆಲಸವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

 ಈ ದಿವಸ ವಾರ್ತೆ

ಬೆಂಗಳೂರು, ಸೆಪ್ಟೆಂಬರ್ 29 :

 ಮಾನವ- ವನ್ಯಮೃಗಗಳ ಸಂಘರ್ಷಗಳನ್ನು ತಡೆಯುವ ಕೆಲಸವಾಗಬೇಕು. ಅರಣ್ಯ ಪ್ರದೇಶಗಳಿಂದ ಪ್ರಾಣಿಗಳು ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು ಹೆಚ್ಚಿನ  ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕಾಡು ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಅರಣ್ಯ ಪ್ರದೇಶದೊಳಗೆ ಲಭ್ಯವಾಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

 ಅವರು ಇಂದು ಕರ್ನಾಟಕ  ಅರಣ್ಯ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ “ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಕೆಲಸವಾಗಬೇಕು. ಅರಣ್ಯ ಪ್ರದೇಶದ ವಿಸ್ತೀರ್ಣಗೊಂಡರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

*ಅರಣ್ಯ ಪ್ರದೇಶ ಹೆಚ್ಚಳದಿಂದ ಹವಾಮಾನ ವೈಪರೀತ್ಯಗಳನ್ನು ತಡೆಯಬಹುದು:*

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ದಾರಿ. ಅರಣ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾವೇರಿ ನೀರು , ಬರಗಾಲ, ಆಹಾರ ಉತ್ಪತ್ತಿ ಕೊರತೆಗಳನ್ನು ತಲೆದೋರುತ್ತದೆ. ಈ ಪರಿಸ್ಥಿತಿ ರಾಜ್ಯದ ಜಿಡಿಪಿ, ತಲಾವಾರು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ. 50 ರಷ್ಟು ಬೆಳೆ ಹಾನಿಯಾಗಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಇಂತಹ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಅರಣ್ಯ ಪ್ರದೇಶ ಹೆಚ್ಚಿದರೆ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

*ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ :*

ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯ ಸಂರಕ್ಷಣೆ ಮಾಡುತ್ತಾರೆ. ವನ್ಯಜೀವಿಗಳನ್ನು ರಕ್ಷಣೆ  ಮಾಡುವುದಲ್ಲದೆ ಕಾಡು ಬೆಳೆಸುವ ಕೆಲಸವನ್ನೂ ಮಾಡುತ್ತಾರೆ. ಅಸಾಧಾರಣ ಸೇವೆ ಮಾಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಉತ್ತೇಜಿಸುವ ಕೆಲಸವನ್ನು  2017 ರಿಂದ  ಮಾಡಲಾಗುತ್ತಿದೆ. 2017, 2018, 2019 ರಲ್ಲಿ ನೀಡಲಾಗಿದೆ. ಎರಡು ವರ್ಷಗಳಿಂದ ಪದಕ ವಿತರಣಾ ಸಮಾರಂಭ ನಡೆದಿರಲಿಲ್ಲ. 2020 ಹಾಗೂ 21 ನೇ ಸಾಲಿನ ಪದಕ ವಿತರಣೆಯನ್ನು ಅರಣ್ಯ ಇಲಾಖೆ ವತಿಯಿಂದ 50 ಪದಕಗಳನ್ನು ವಿತರಣೆ ಮಾಡಿದೆ. 2- 3 ವರ್ಷಗಳ ಪದಕಗಳನ್ನು ಒಟ್ಟಿಗೆ ನೀಡುವ ಪರಿಪಾಠ ಇರಬಾರದು .ಪ್ರಶಸ್ತಿ ವಿಜೇತರ ಆಯ್ಕೆಯ ನಂತರ ಎರಡು ಮೂರು ವರ್ಷ ಕಾಯುವ ಅಗತ್ಯವಿಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಬೇಕೆಂದು ಅರಣ್ಯ ಸಚಿವರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವ  ಪ್ರಿಯಾಂಕ ಖರ್ಗೆ, ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅ ಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ , ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಹಾಗೂ ಡಿಸಿಎಂ ರಿಂದ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಗಳ ಜತೆ ಸುದೀರ್ಘ ಚರ್ಚೆ

 ಈ ದಿಸವ ವಾರ್ತೆ

ಬೆಂಗಳೂರು:

ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಅದೇಶಿಸಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು. 

ಗೃಹಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕರೆದಿದ್ದ ಸಭೆಗೆ ನ್ಯಾಯಮೂರ್ತಿಗಳಾದ ಎಂ ಎನ್ ವೆಂಕಟಾಚಲಯ್ಯ, ಶಿವರಾಜ ಪಾಟೀಲ್, ವಿ ಗೋಪಾಲಗೌಡ, ಆರ್ ವಿ ರವೀಂದ್ರನ್, ಪಿ. ವಿಶ್ವನಾಥಶೆಟ್ಟಿ, ಎ ಎನ್ ವೇಣುಗೋಪಾಲಗೌಡ, ಕಾನೂನು ಸಚಿವರಾದ ಸಚಿವ ಎಚ್ ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ರಾಜಕೀಯ ಸಲಹೆಗಾರರಾದ ನಸೀರ್ ಅಹ್ಮದ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೋಕೇಟ್ ಜನರಲ್ ಗಳಾದ ಬಿ ವಿ ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ, ಕಾನೂನು, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಶ್ವಾಸಾರ್ಹತೆ ಆರ್ಥಿಕ ಪ್ರಗತಿಗೆ ಕಾರಣ-ಮಲ್ಲಿಕಾರ್ಜುನ ಲೋಣಿ


 ಈ ದಿವಸ ವಾರ್ತೆ

ವಿಜಯಪುರ: ನಂಬಿಕೆ, ವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಹಕಾರಿ ವಲಯ ಉಳಿಯಲು ಸಾಧ್ಯವಿದೆ. ಪರಸ್ಪರ ಸಹಕಾರ ಮನೋಭಾವನೆ ಮೂಡಿದರೆ ಸಂತೋಷ, ಸಮಾನತೆ ಕಾಣಬಹುದು ಎಂದು ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
       ಅವರು ನಗರದ ವನಶ್ರೀ ಭವನದಲ್ಲಿ ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಬ್ಯಾಂಕಿನ 23 ನೇ ವಾರ್ಷಿಕ ಸರ್ವಸಾಧರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
         ಸಹಕಾರ ಮನೋಭಾವ,ಪ್ರಾಮಾಣಿಕತೆ, ನಿಷ್ಠೆ,
ಸಹಕಾರಿ ತತ್ವದಡಿ ಹಲವು ಯೋಜನೆಗಳ ಮೂಲಕ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದ್ದು, ಇಂದಿನ ಆಧುನಿಕ ಯುಗದಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರೀಕೃತ ಬ್ಯಾಂಕುಗಳ ಹಾಗೆಯೇ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
        ಒಂದು ಮುಖ್ಯ ಕಚೇರಿ, ಐದು ಶಾಖೆಗಳುಳ್ಳ ಬ್ಯಾಂಕು 1816 ಜನ ಸದಸ್ಯರನ್ನು ಹೊಂದಿದೆ.ಪ್ರಸಕ್ತ ವರ್ಷದ ಆದಾಯ ತೆರಿಗೆ ಮುಂಗಡ ಪಾವತಿಸಿದ ನಂತರದಲ್ಲಿ ಒಟ್ಟು ರೂ.23,06,464 ಲಕ್ಷ ಲಾಭ ಗಳಿಸಿದೆ. ಪ್ರತಿವರ್ಷ 15 ℅ ಡಿವಿಡೆಂಡ್ ಕೊಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿಯೂ ಇದನ್ನು ಮುಂದುವರೆಸಲಾಗುವುದು.ರಾಜ್ಯದ ವಿವಿಧ ಸ್ಥಳಗಳಲ್ಲಿ 25 ಶಾಖೆಗಳನ್ನು ಆರಂಭಿಸಲು ನಿರ್ಣಯಿಸಲಾಯಿತು. ವೈಯಕ್ತಿಕ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ  25 ಲಕ್ಷ ರೂ. ಗಳಿಗೆ ಹೆಚ್ಚಿಸಲಾಯಿತು. ಈ ವರ್ಷದಿಂದ ಬಂಗಾರದ ಮೇಲಿನ ಸಾಲ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಸಾಲಗಾರರು ನಿಯಮಗಳಂತೆ ಸಕಾಲಕ್ಕೆ ಬಡ್ಡಿ, ಸಾಲ ಮರುಪಾವತಿಸಬೇಕು ಎಂದು ಹೇಳಿದರು.
       ಸೊಸೈಟಿಯ ಉಪಾಧ್ಯಕ್ಷ ಎ ಆರ್ ಉಕ್ಕಲಿ,
ನಿರ್ದೇಶಕರಾದ ಬಿ ಜಿ ಪಾಟೀಲ, ಎಸ್ ಎಸ್ ಶಿರಾಡೋಣ, ಜಿ ಟಿ ಪಾಟೀಲ,ಎಸ್ ಎಸ್ ಅರಕೇರಿ,ಆರ್ ಎಲ್ ಇಂಗಳೇಶ್ವರ,ಎ ಎಸ್ ಹೊಸಮನಿ, ಎಸ್ ಜಿ ಗಡಗಿ,ಎಸ್ ಜಿ ಹಿಟ್ನಳ್ಳಿ ಹಾಗೂ ಮಹಿಳಾ ನಿರ್ದೇಶಕರಾದ ಎಸ್ ಎಂ ಕಡಿ,ಶೋಭಾ ಕತ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
        ವ್ಯವಸ್ಥಾಪಕರಾದ ಮೇಘಾ ಅರ್ಜುಣಗಿ ವರದಿ ವಾಚಿಸಿದರು.ಸೊಸೈಟಿ ಸಿಬ್ಬಂದಿ ವರ್ಗ ಹಾಜರಿದ್ದರು.
ಶಿಕ್ಷಕ ಸಂತೋಷ ಬಂಡೆ ಕಾರ್ಯಕ್ರಮ ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಗ್ರಾಹಕರನ್ನು ,ಪಿಗ್ಮಿ ಸದಸ್ಯರನ್ನು, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಮಹಾತ್ಮ ಗಾಂಧೀಜಿ ಮಾನವ ಪ್ರಪಂಚಕ್ಕೆ ಮಾರ್ಗದರ್ಶಿ - ಸಿಪಿಐ ಅಶೋಕ್ ಚವ್ಹಾಣ್


 ಈ ದಿವಸ ವಾರ್ತೆ

ನಿಡಗುಂದಿ:

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪಶ್ಚಿಮ ಭಾರತದ ಗುಜರಾತ್ ನಲ್ಲಿ ಜನಿಸಿರಬಹುದು ಆದರೆ ಅವರು ಪ್ರತಿಪಾದಿಸಿದ ತತ್ವ - ಸಿದ್ದಾಂತಗಳಿಂದ ಮಾನವ ಪ್ರಪಂಚಕ್ಕೆ ಮಾರ್ಗದರ್ಶಿಯಾಗಿದ್ದಾರೆ, 

ಎಂದು ನಿಡಗುಂದಿ ಸಿಪಿಐ ಅಶೋಕ್ ಚವ್ಹಾಣ್ ಅಭಿಪ್ರಾಯ ಪಟ್ಟರು.

ಪಟ್ಟಣದ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನಲ್ಲಿ ಬೇನಾಳದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ' ಬಾಪೂ ಎಂಬ ಜಗದ ಬೆಳಕು'  ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು. 

ಆಂಗ್ಲ ಸೂರ್ಯನನ್ನು ಅಸ್ತಂಗತ ಗೊಳಿಸಿ ಸತ್ಯ- ಅಹಿಂಸೆಗಳೆಂಬ ಅಸ್ತ್ರಗಳನ್ನು ಹಿಡಿದು ಶಾಂತಿಯ ಪಥದಲ್ಲಿ ಸಾಗಿ ಭರತ ವರ್ಷದ ಬಾನಂಗಳದಲ್ಲಿ ಸ್ವತಂತ್ರ ಸೂರ್ಯ ನನ್ನು ಉದಯಿಸುವಂತೆ ಮಾಡಿದ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮ ಗಾಂಧೀಜಿಯವರು ಎಂದರು.

ಆರ್.ಎಂ.ಜಿ.ಎಫ್.ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಬ್ರಿಟಿಷ್  ರೂಲ್ಡ್ ಭಾರತದಲ್ಲಿ ಜರ್ನಲಿಸ್ಟ್  ಗಾಂಧಿ ಆಂಗ್ಲರ ಯಾವುದೇ ಬೆದರಿಕೆಗಳಿಗೆ ಬಗ್ಗದೆ, ಯಾವುದೇ ಎಚ್ಚರಿಕೆಗಳಿಗೆ ಜಗ್ಗದೆ  52 ವರುಷ ಪತ್ರಕರ್ತನಾಗಿ ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ, ನವ ಜೀವನ, ಹರಿಜನ, ಹರಿಜನ ಸೇವಕ, ಹರಿಜನ ಬಂಧು ಹೀಗೆ 6 ಪತ್ರಿಕೆಗಳನ್ನು ಪ್ರಕಟಿಸಿ 10 ದಶಲಕ್ಷ ಪದಗಳನ್ನು ಬರೆದರು.

ಯಂಗ್ ಇಂಡಿಯಾ ಜರ್ನಲ್ ನಲ್ಲಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ಕಠಿಣವಾಗಿ ಬರೆದ ಕಾರಣಕ್ಕಾಗಿ 1922 ಮಾರ್ಚ್ 10ರಂದು ರಾಷ್ಟ್ರದ್ರೋಹದ ಕೇಸ್ ಆಗಿ 6 ವರುಷ ಜೈಲು ಶಿಕ್ಷೆಗೂ ಗುರಿಯಾಗಿದ್ದರು ಎಂದು ನೆನಪಿಸಿದರು.

ಉಪನ್ಯಾಸಕ ಎಂ.ಬಿ.ಮುಲ್ಲಾ ತಮ್ಮ ಉಪನ್ಯಾಸದಲ್ಲಿ

ನಡೆ - ನುಡಿಗೆ ವ್ಯತ್ಯಾಸ ಇಲ್ಲದಂತೆ ಬದುಕಿದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಎಂದರು.

ಪ್ರಿನ್ಸಿಪಾಲ್ಸಿ.ಎಸ್.ರಾಥೋಡ್ 

ಅಧ್ಯಕ್ಷೀಯ ನುಡಿಗಳ ನ್ನಾಡಿದರು.

ಎಸ್.ಎಲ್.ಚಿಂತಾಮಣಿ, ಎಂ.ಎಲ್.ಹೊಸಮನಿ, ಕೆ.ವಿ.ಪಾರಶೆಟ್ಟಿ, ರಾಜು ಗುಂಡಿನಮನಿ, ಸಿ.ಬಿ.ಮುಲ್ಲಾ 

 ಸೇರಿದಂತೆ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಆರ್.ಪಿ.ಲಮಾಣಿ ಸ್ವಾಗತಿಸಿದರು,

ಶಿವು ಬೀಳಗಿ ನಿರೂಪಿಸಿದರು,

ಪಿ.ಎಂ. ನಡಕಟ್ಟಿವಂದಿಸಿದರು.

ಗಾಂಧಿ ಕ್ವಿಜ್ : 

ಬಾಪೂ ಕುರಿತು ಜರುಗಿದ ರಸ ಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿ/ನಿಯರಿಗೆ ಗಾಂಧಿ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಛಾಯಾಚಿತ್ರಗಳ ಪ್ರದರ್ಶನ :

ಮಹಾತ್ಮ ಗಾಂಧೀಜಿಯವರ ಬಾಲ್ಯ ಜೀವನ, ಶಿಕ್ಷಣ, ಅವರು ಭಾಗವಹಿಸಿದ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳ ಕುರಿತು 50 ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.