Sunday, September 3, 2023

ಸಿದ್ದಸಿರಿ ಸೌಹಾರ್ದ ಸಹಕಾರಿಯ 17ನೇ ವಾರ್ಷಿಕೋತ್ಸವ ಸಿದ್ದಸಿರಿ ಸಹಕಾರಿಗೆ ರೂ.11.11 ಕೋಟಿ ನಿವ್ವಳ ಲಾಭ

 

ಈ ದಿವಸ ವಾರ್ತೆ

ವಿಜಯಪುರ: ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಸಿದ್ದಸಿರಿ ಸೌಹಾರ್ದ ಸಹಕಾರಿ ರೂ. 2,244 ಕೋಟಿ ಠೇವಣಿ ಹೊಂದಿದ್ದು, 2022-23ನೇ ಸಾಲಿನಲ್ಲಿ ರೂ.11,11,11,111 ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 17ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ನಂಬರ್-1 ಸೌಹಾರ್ದ ಸ್ಥಾನದಲ್ಲಿರುವ ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ, ಸತತ 3ನೇ ವರ್ಷವೂ ಶೇ 25 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಹಕಾರಿಯ ಶೇರು ಬಂಡವಾಳ ರೂ.33 ಕೋಟಿ, ದುಡಿಯುವ ಬಂಡವಾಳ  ರೂ.2319 ಕೋಟಿ ಇದ್ದು, ಠೇವಣಿಗಳು ರೂ.2,244 ಕೋಟಿ, ಸಾಲವ ಮುಂಗಡ ರೂ.1,555, ಕಾಯ್ದಿಟ್ಟ ನಿಧಿ ರೂ.42 ಕೋಟಿ, ನಿಶ್ಚಿತ ಆಸ್ತಿಗಳು ರೂ.39 ಕೋಟಿ, ಹೂಡಿಕೆಗಳು ರೂ.171 ಕೋಟಿ ಹೊಂದಿದೆ. ರಾಜ್ಯಾದ್ಯಂತ ಸಂಪೂರ್ಣ ಗಣಕೀಕೃತ 154 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 14 ಸ್ವಂತ ಕಟ್ಟಡಗಳು, 20 ಖಾಲಿ ನಿವೇಶನ ನಗಳನ್ನು ಹೊಂದಿದೆ. 21,941 ಸದಸ್ಯರು ಇರುತ್ತಾರೆ  ಎಂದು ತಿಳಿಸಿದರು.

ಸಹಕಾರಿ ಲೇವಾದೇವಿ ವ್ಯವಹಾರ ಅಲ್ಲದೆ 3 ಸಿದ್ದಸಿರಿ ಭಾರತೀಯ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳು, ಜೇವರ್ಗಿಯಲ್ಲಿ ಸಿದ್ದಸಿರಿ ರೈತರ ಉಗ್ರಾಣ, ಸಿದ್ದಸಿರಿ ಇಂಧನ ಕೇಂದ್ರ, ವಿಜಯಪುರ, ಸಿಂದಗಿ, ಬಬಲೇಶ್ವರ, ಬಿಜ್ಜರಗಿ, ಝಳಕಿಯಲ್ಲಿ ಸಿದ್ದಸಿರಿ ಕೃಷಿ ಕೇಂದ್ರಗಳು ಸ್ಥಾಪನೆ. ವಿಜಯಪುರದಲ್ಲಿ 5 ಸಾವಿರ ಮೆಟ್ರಿಕ್ ಟನ್ ಸಾಮಾರ್ಥ್ಯದ ಸಿದ್ದಸಿರಿ ಶೀತಲ ಘಟಕ ಮತ್ತು ಸಂಸ್ಕರಣ ಘಟಕ, 28 ಸಿದ್ದಸಿರಿ ಇ- ಸ್ಟಾಂಪ್ ಕೇಂದ್ರಗಳು, ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ದಸಿರಿ ಎಥೆನಾಲ್ ಮತ್ತು ಪವರ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ನಾಗರಿಕರು, ಸೈನಿಕರು, ಮಾಜಿ ಸೈನಿಕರು, ವಿಧವೆಯರು ಮತ್ತು ದಿವ್ಯಾಂಗ ಠೇವಣಿದಾರರಿಗೆ ಶೆ 0.5 ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. 6 ವರ್ಷಕ್ಕೆ ಹಣ ದ್ವಿಗುಣ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ 5 ವರ್ಷ 8 ತಿಂಗಳಿಗೆ ಕೊಡಲಾಗುತ್ತದೆ. ಇದಲ್ಲದೇ, ಸಿದ್ದಸಿರಿ ಲಕ್ಕಿ ಗೋಲ್ಡ್ ಆರ್.ಡಿ ಸ್ಲಿಮ್ ಸೌಲಭ್ಯ ಇರುತ್ತದೆ ಎಂದು ಹೇಳಿದರು.

ಇದೇ ವೇಳೆ ಈಚೆಗೆ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳು, ನಿಧನರಾದ ರಾಜಕೀಯ ಮುಖಂಡರು, ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಂದ್ರಯಾನ-3 ಯಶಸ್ಸಿಗೆ ಬೆನ್ನೆಲುಬಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಹೆಮ್ಮೆಯ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕರಾಗಿ ಆಯ್ಕೆಯಾದ ರಾಮನಗೌಡ ಬ. ಪಾಟೀಲ ಯತ್ನಾಳ ಅವರನ್ನು ಹಾಗೂ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಸಿದ್ದಸಿರಿ ಒಣದ್ರಾಕ್ಷಿ ಬ್ರಾಂಡ್ ಬಿಡುಗಡೆಗೊಳಿಸಲಾಯಿತು.

ಸೌಹಾರ್ದದ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ್ ಚವ್ಹಾಣ, ಅಶೋಕಗೌಡ ತೊರವಿ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ್ ಬಂಡಿ, ಡಾ.ಬಸನಗೌಡ ಪಾಟೀಲ ನಾಗರಾಳ ಹುಲಿ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕರು ಜೋತಿಬಾ ಖಂಡಗಾಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕರು ರಾಘವ ಅಣ್ಣಿಗೇರಿ ಮತ್ತಿತರರು ಇದ್ದರು.