Thursday, March 12, 2020




ಮಹಿಳೆಯರಿಗೆ ಸಮಾನತೆ ಇಲ್ಲಿಯವರೆಗೂ ಸಿಗದಿರುವುದು ದುರ್ದೈವದ ಸಂಗತಿ


ಧರಣಿ ನಿರತ ಸ್ಥಳದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕಲಬುರ್ಗಿ ಜನವಾದಿ ಮಹಿಳಾ ಸಂಘದ ಕಾಂ. ಕೆ. ನೀಲಾ  ಮಾತನಾಡಿದರು.

ವಿಜಯಪುರ : ಮಹಿಳೆಯರಿಗೆ ಸಮಾನತೆ ಇಲ್ಲಿಯವರೆಗೂ ಸಿಗದಿರುವುದು ದುರ್ದೈವದ ಸಂಗತಿ ಎಂದು ಕಲಬುರ್ಗಿ ಜನವಾದಿ ಮಹಿಳಾ ಸಂಘದ ಕಾಂ. ಕೆ. ನೀಲಾ ಕಳವಳ ವ್ಯಕ್ತಪಡಿಸಿದರು.
ಸಿಎಎ, ಎನ್.ಆರ್.ಪಿ. ಎನ್.ಆರ್.ಸಿ ಕೈ ಬಿಡಿ ? ಮಹಿಳೆಯರಿಗೆ ರಕ್ಷಣೆ ಕೊಡಿ!! ಸಂವಿಧಾನ ರಕ್ಷಣೆಯೇ ಮಹಿಳೆಯರ ರಕ್ಷಣೆ ಶಾಹಿನ್ ಬಾಗ್ ಹೋರಾಟಕ್ಕೆ ಬೆಂಬಲಿಸಿ ನವಬಾಗ್‍ದಲ್ಲಿ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ, ವಿಜಯಪುರ ವತಿಯಿಂದ ಗುರುವಾರ ಧರಣಿ ನಿರತ ಸ್ಥಳದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡುತ್ತಿದ್ದಾರೆ. ಆದರೆ ಅವರಿಗೆ ಇಲ್ಲಿಯವರೆಗೆ ಸರಿಸಮಾನವಾದ ಸ್ಥಾನ ಸಿಗದಿರುವುದು ವಿಷಾದನೀಯ. ಕೇವಲ ಬರಿ ಮಾತಿನಲ್ಲಿ ಮಹಿಳೆ-ಪುರುಷ ಸಮಾನರು ಎಂಬುವುದು ಕೇಳಿ ಬರುತ್ತದೆ ಹೊರತು ಅನುಷ್ಠಾನ ಇಲ್ಲಿಯವರೆಗೆ ಆಗಿಲ್ಲ. ಕೂಡಲೇ ಮಹಿಳೆಯರಿಗೆ ಶೇ % 33 ಮೀಸಲಾತಿ ನೀಡಬೇಕು. ಅಂದಾಗ ಮಹಿಳೆಯು ಸಮಾನ ಎಂಬುದು ಗಣನೆಗೆ ಬರುತ್ತದೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ಜಾರಿಗೆ ಸಂಬಂಧಿಸಿದಂತೆ ಸರ್ಕಾರವು ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋದಿ ನಡೆಯಾಗಿದೆ. ಸಿಎಎ ಜಾರಿಯಿಂದ ದಾಖಲೆಗಳನ್ನು ಹೊಂದಿರದ ಹಿಂದುಗಳು ಕೂಡ ಸಂಕಷ್ಟಕ್ಕೆ ಸಿಲುಕುತ್ತಾರೆ. ಆನತೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಸರ್ಕಾರ ಚರ್ಚೆಗೆ ಅವಕಾಶ ನೀಡಬೇಕು. ಆದರೆ ಸರ್ಕಾರವು ಪ್ರಜಾಪ್ರಭುತ್ವದ ಆಶಯ ಅನುಸಾರ ನಡೆದುಕೊಳ್ಳುತ್ತಿಲ್ಲ ಎಂದರು.





ಹಾವೇರಿಯ ಕೆ.ಎಸ್.ಎಮ್.ಎಫ್. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಸಮಾನ್ಯ ಕನ್ನಡತಿ ಪ್ರಶಸ್ತಿ ಪುರಸ್ಕøತರಾದ ಕಾಂ. ಅಕ್ಷೀತಾ ಕೆ.ಸಿ. ಮಾತನಾಡಿ, ಪೌರತ್ವ ಕಾಯ್ದೆಯು ತೃತೀಯ ಲಿಂಗಿಗಳಿಗೂ ಕೂಡ ಮಾರಕವಾಗಲಿದೆ. ತೃತಿಯ ಲಿಂಗಿಗಳಿಗೆ ತಂದೆ ತಾಯಿ ಇರುವುದಿಲ್ಲ. ದೇವದಾಸಿಯರ ಮಕ್ಕಳಿಗೆ ತಾಯಿ ಇರುವುದಿಲ್ಲ. ದಯವಿಟ್ಟು ಕೂಡಲೇ ಈ ಪೌರತ್ವ ಕಾಯ್ದೆಯನ್ನು ವಾಪಸ್ಸು ಮಾಡಬೇಕು. ಈ ದೇಶದ ಸಂವಿಧಾನವು ನಮ್ಮ ಏಳ್ಗೆಗೆ ಸಹಕಾರಿಯಾಗಿದೆ. ಮರಳಿ ಈ ಪೌರತ್ವ ಕಾಯ್ದೆಯನ್ನು ತರುವ ಮೂಲಕ ನಮ್ಮ ಬೆಳವಣಿಗೆಗೆ ಮಾರಕವಾಗಿದೆ ಆದ್ದರಿಂದ ಈ ಕಾಯ್ದೆಯನ್ನು ದಯವಿಟ್ಟು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಅಪ್ಸರಾಬೇಗಂ ಚಪ್ಪರಬಂದ ಪ್ರಾಸ್ತಾವಿಕ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆ ವಿಜಯಪುರ ಜಿಲ್ಲಾ ಮುಖಂಡರಾದ ಕಾಂ . ಸುರೇಖಾ ರಜಪೂತ, ಲಕ್ಷ್ಮೀ ದೇಸಾಯಿ, ಶ್ರೀಮತಿ ಭಾರತಿ ನಾವಿ, ಇರ್ತಸ ಪಠಾಣ, ಶರಣಮ್ಮ ಗುಲಬರ್ಗಾ, ಸುಪ್ರೀಯಾ ವಾಟಿ, ಸಂಗೀತಾ ಪೂಜಾರಿ, ಜಯಶ್ರೀ ಭರತೆ, ಸುನಂದಾ ನಾಯಕ, ಯಾಸ್ಮೀನ್ ಲಕ್ಕುಂಡಿ, ಶೈಲಾ ಕಟ್ಟಿ, ಸಬೀನ್ ಬೀಳಗಿ, ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭಾರತಿ ವಾಲಿ, ಅಪರೋಜಾ ಬಾಜೀ, ಅಮೀರಿನ್ ಬಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಾದೇವಿ ಗೋಕಾಕ ಸ್ವಾಗತಿಸಿದರು. ಸುನಂದಾ ನಾಯಕ ವಂದಿಸಿದರು. ಕುಮಾರಿ ಭುವನೇಶ್ವರಿ ದೊಡ್ಡಮನಿ ನಿರೂಪಿಸಿದರು.