Monday, October 4, 2021

ಸಿಂದಗಿಯ ಉಪ ಚುನಾವಣೆ :ಪ್ರಚಾರ ಸಾಮಗ್ರಿ ಮುದ್ರಿಸಲು ಘೋಷಣಾ ಪತ್ರ ಸಲ್ಲಿಕೆ ಕಡ್ಡಾಯ



ಈ ದಿವಸ ವಾರ್ತೆ

ವಿಜಯಪುರ :ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ  ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರಗಳ ಬಗ್ಗೆ ಕಡ್ಡಾಯವಾಗಿ ಡಿಕ್ಲರೇಷನ್(ಘೋಷಣಾ ಪತ್ರ) ಸಲ್ಲಿಸುವಂತೆ ಮುದ್ರಕರಿಗೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ನಗರದ ವಿವಿಧ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿದ ಅವರು ಪ್ರಜಾಪ್ರತಿನಿಧಿ ಕಾಯ್ದೆ 1951 ರ 127(A) ರನ್ವಯ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರ ಮುದ್ರಣ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುದ್ರಕರಿಗೆ ಅವರು ಸೂಚಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಪೋಸ್ಟರ್ ಗಳಿಗೆ ಕಡ್ಡಾಯವಾಗಿ ಮುದ್ರಕರ ಹೆಸರು,ವಿಳಾಸ ಹಾಗೂ ಪ್ರಕಟಿಸುವ ಪಾಂಪ್ಲೆಟ್ ಹಾಗೂ ಪೋಸ್ಟರ್ ಗಳ ಸಂಖ್ಯೆಯನ್ನು ನಮೂದಿಸಬೇಕು.

ಅದರಂತೆ ಮುದ್ರಕರಿಗೆ ಮುದ್ರಣ ಮಾಡಲು ನೀಡುವಂತಹ ಪಾಂಪ್ಲೆಟ್ ಮತ್ತು ಪೋಸ್ಟರ್ ಗಳಿಗೆ ಸಂಬಂಧಪಟ್ಟ ವ್ಯಕ್ತಿಯು ಕಡ್ಡಾಯವಾಗಿ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿ ಮುದ್ರಕರಿಗೆ ಸಲ್ಲಿಸಬೇಕು ಮುದ್ರಕರು ಸಹ ಈ ಕುರಿತು ಘೋಷಣಾ ಪತ್ರ ಸಲ್ಲಿಸಬೇಕು.

ಅದರಂತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹಾಗೂ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ರಕರು ಜಿಲ್ಲೆಯ ವಿವಿಧ ತಾಲೂಕುಗಳ ಮುದ್ರಕರು ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಮುದ್ರಣಾಲಯದ ಮುದ್ರಕರು ಸಹ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಹೇಳಿದರು.

 ವಿಜಯಪುರ ನಗರದ ಮುದ್ರಣಾಲಯ ಸಂಘದ ಅಧ್ಯಕ್ಷರು ಕೂಡ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುದ್ರಣಾಲಯಗಳ ಮುದ್ರಕರಿಗೆ ಪತ್ರದ ಮೂಲಕ ಚುನಾವಣಾ ಆಯೋಗದ ನಿರ್ದೇಶನದ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಅವಶ್ಯಕ ಕ್ರಮಕೈಗೊಳ್ಳಲು ಅವರು ಸೂಚನೆ ನೀಡಿ ಒಟ್ಟಾರೆ ನೀತಿ ಸಂಹಿತೆ ಉಲ್ ಲಂಘನೆಯಾಗದಂತೆ  ನೋಡಿಕೊಳ್ಳಲು ಸೂಚಿಸಿದರು.

ಸಿಂದಗಿ ವಿಧಾನಸಭಾ ಚುನಾವಣೆ ಅಧಿಕಾರಿಗಳ ಮೂಲಕವೂ ಆ ಕ್ಷೇತ್ರದ ವ್ಯಾಪ್ತಿಯ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿ ಈ ಕುರಿತು ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ,ಡಾ ಔದ್ರಾಮ ಸೇರಿದಂತೆ ವಿವಿಧ ಮುದ್ರಣಾಲಯಗಳ ಮುದ್ರಕರು ಉಪಸ್ಥಿತರಿದ್ದರು.

05-10-2021 EE DIVASA KANNADA DAILY NEWS PAPER