Sunday, September 4, 2022

05-09-2022 EE DIVASA KANNADA DAILY NEWS PAPER

"ಕುಯಿಲು" ವಿಮರ್ಶಾ ಕೃತಿ ಲೋಕಾರ್ಪಣೆ

 



ಬಾಗಲಕೋಟೆ : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಬಾದಾಮಿ ಇವರ ಸಹಯೋಗದಲ್ಲಿ ತಿಂಗಳ ಅತಿಥಿ ಯಾಗಿ ಕಥೆಗಾರರು,ಕವಿಗಳು, ಸಂಶೋಧಕರು ಆದ ಡಾ. ಚನ್ನಪ್ಪ ಕಟ್ಟಿ ಅವ್ಹಾನಿತರಾಗಿದ್ದರು, ಅವರ ಸಾಹಿತ್ಯ ಅವಲೋಕನ ಮತ್ತು "ಕುಯಿಲು" ಕೃತಿ ಬಿಡುಗಡೆ ಸಮಾರಂಭವು ಬಾದಾಮಿ ಯ ಸಾಹಿತ್ಯ ಪರಿಷತ್ ನ ಡಾ. ಬಿ ಎಸ್ ಗದ್ದಗಿಮಠ ವೇದಿಕೆಯಲ್ಲಿ  ನಡೆಯಿತು. 

ಈ ಸಂದರ್ಭದಲ್ಲಿ ಡಾ. ಚನ್ನಪ ಕಟ್ಟಿ ಅವರ "ಕುಯಿಲು" ವಿಮರ್ಶಾ ಕೃತಿಯನ್ನು  ಲೋಕಾರ್ಪಣೆ ಗೊಳಿಸಿದ  ನಗರದ ಖ್ಯಾತ ವೈದ್ಯರಾದ ಡಾ.ಹೆಚ್ ಎಫ್ ಯೋಗಪ್ಪನವರ್ ಅವರು  ಮನುಷ್ಯನು ಪ್ರಾಮಾಣಿಕ ಪ್ರಯತ್ನ ಮತ್ತು ವಿವೇಕವನ್ನು ಜಾಗ್ರತವಾಗಿಟ್ಟು ಕೊಂಡು ಸಾಹಿತ್ಯ ರಚಿಸಬೇಕು ಈ ದಿಶೆಯಲ್ಲಿ ಚನ್ನಪ್ಪ ಕಟ್ಟಿ ಅವರು ಪ್ರಾಮಾಣಿಕ ಪ್ರಯತ್ನ ದಿಂದ ಸಾಹಿತ್ಯ ರಚಿಸಿದ್ದಾರೆ ಕಟ್ಟಿ ಅವರ ವಿಮರ್ಶೆ ಕತ್ತರಿಸಿ,ಆಡಿಸಿ ಹಿರಿದು ತೋರಿಸುವುದಲ್ಲ ಬದಲಿಗೆ ತೆರೆದು ತೋರಿಸುವುದಾಗಿದೆ ಎಂದರು. "ಕುಯಿಲು"  ಕೃತಿಯಲ್ಲಿ ನ ಹನ್ನೆರಡು ವಿಮರ್ಶಾ ಲೇಖನಗಳಿಗೆ ಹಳೆಗನ್ನಡ ಕೃತಿಗಳ ಬಗೆಗಿನ ಒಳನೋಟ ವಿಭಿನ್ನ ವಾಗಿದೆ ,ಅನುಭಾವ ಸಾಹಿತ್ಯದ ಕುರಿತಾದ ಲೇಖನಗಳು ದರ್ಶನ ಮಾದರಿಯಲ್ಲಿವೆ , ವಚನಗಳು ಅನುವಾದ ಗೊಂಡ ಇತಿಹಾಸ ದ ಅವಲೋಕನ,ಕನಕದಾಸರ ದೃಷ್ಟಿಯಲ್ಲಿ ಮಹಿಳೆ ಇಂತಹ ಮಹತ್ತರವಾದ ಲೇಖನಗಳಿವೆ ಇಲ್ಲಿನ ಬಹುತೇಕ ಲೇಖನಗಳು ಬಹು ಬಿನ್ನವಾಗಿ ವಸ್ತು ನಿಷ್ಠ ಮತ್ತು ವಿಷಯ ನಿಷ್ಠ ವಾಗಿವೆ ನಮ್ಮ ಓದಿಗೆ ಈ ಕೃತಿ ಹೊಸ ಆಯಾಮ ನೀಡುವುದು ಎಂದು ಹೇಳಿ ಡಾ. ಚನ್ನಪ ಕಟ್ಟಿ ಅವರು  ವಿಮರ್ಶಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೃಷಿ ಮಾಡಲಿ ಎಂದು ಶುಭ ಹಾರೈಸಿದರು   

 ಇದೇ ಸಂದರ್ಭದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಸಾಹಿತ್ಯ ಅವಲೋಕನ ಮಾಡಿದ ಬೀಳಗಿಯ ಸರಕಾರಿ ಪದವಿ ಮಹಾ ವಿದ್ಯಾಲಯ ಕನ್ನಡ ಪ್ರಾಧ್ಯಾಪಕರಾದ ಡಾ.ವಿಜಯಶ್ರೀ ಇಟ್ಟಣ್ಣವರ್ ಅವರು ಕಟ್ಟಿ ಅವರು ಬಹುಶೃತ ಲೇಖಕರು ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯ ಕೃಷಿಯನ್ನು ಆರಂಭಿಸಿದ ಇವರು ಕಾವ್ಯ,ಕಥೆ, ವಿಮರ್ಶೆ, ಸಂಶೋಧನೆ, ಅನುವಾದ ಹಾಗೂ ಜೀವನ ಚರಿತ್ರೆಯ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಹಾಗೂ ಬರವಣಿಗೆ ಬಗೆಯ ಶೃದ್ಧೆಯನ್ನಿಟ್ಟು ಕೊಂಡವರು ,ನಿರಂತರ ಅಭ್ಯಾಸದೊಂದಿಗೆ, ನೆಲದ ಒಡಲಿಗೆ ನೀರುಣಿಸುವ ಕಾರ್ಯ ಮಾಡುತ್ತಲೆ ವಿಶೇಷ ಫಸಲನ್ನು ನಾಡಿಗೆ ನೀಡಿದವರು. ಇವರ ಸಾಹಿತ್ಯದ ಜೀವ ದ್ರವ್ಯ ಸಂಸ್ಕೃತಿಯ ಶೋಧ ಮಾಡುವುದಾಗಿದೆ ಹಾಗೂ ವರ್ತಮಾನದೊಂದಿಗೆ ಅನುಸಂಧಾನ ಗೊಳಿಸುವದಾಗಿದೆ ಈ ಕಾರಣವಾಗಿಯೇ ಇವರು ವಿಭಿನ್ನ ಲೇಖಕರಾಗಿ ಕಂಡು ಬರುತ್ತಾರೆ. 
ಸಂಸ್ಕೃತಿಯ ಬಹುತ್ವವನ್ನು ತೋರಿಸುವುದನ್ನು ಸೃಜನಶೀಲ ನೆಲೆಯಲ್ಲಿ ಮಾಡಿದ ಇವರು ಅಪರೂಪದ ಕನ್ನಡ ಲೇಖಕರು ಎಂದು ಹೇಳಿ ನಮ್ಮದನ್ನು ನಾವು ಒಳ ನೋಟದಿಂದ ಕಾಣುವ ಬಗೆಗೆ ಮಾದರಿ ಆಗಿರುವ ಇವರ ಕೃತಿಗಳು ಓದುಗರನ್ನು ಆಕರ್ಷಿಸುವುದರ ಜೊತೆಗೆ ಚಿಂತನೆಯ ಹೊಸ ಮಾರ್ಗ ದತ್ತ ನಮ್ಮನ್ನು ಕರೆದುಕೊಂಡು ಹೋಗುತ್ತವೆ ಹೀಗಾಗಿ ಎಲ್ಲರೂ ಎಲ್ಲಾ ಕಾಲದಲ್ಲೂ ಓದುವ ಹಾಗೆ ರಚಿಸಿದ್ದು  ಇವರ ಹೆಗ್ಗಳಿಕೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಕಥೆಗಾರರಾದ ಕಲ್ಲೇಶ ಕುಂಬಾರ ಅವರು ಮಾತನಾಡಿ ಡಾ. ಕಟ್ಟಿ ಅವರು  ಹೊಸ ತಲೆಮಾರಿನ ಕಥೆಗಾರರಿಗೆ ಮಾದರಿ ಆಗಿದ್ದಾರೆ ಅವರ ಕಥೆಯನ್ನು ಓದುವದರ ಮೂಲಕ ನಮ್ಮ ಕಥನದ ಮಾದರಿಯನ್ನು  ನಾವು ಮರು ರೂಪಿಸಿಕೊಳ್ಳ ಬಹುದಾಗಿದೆ  ಇವರ ಕಥೆಗಳಿಗೆ ಲೋಕದ ಸಂಗತಿಯನ್ನು ಕಾಣಿಸುವ ಶಕ್ತಿಯಿದೆ   ಮತ್ತು ಲೌಕಿಕ ಬದುಕನ್ನು ಪರಿಚಯಿಸುವುದರೊಂದಿಗೆ ಅಲೌಕಿಕ ಲೋಕದತ್ತ ಕೊಂಡೊಯ್ಯುತ್ತವೆ , ಕನ್ನಡದ ಶ್ರೇಷ್ಠ ಕಥೆಗಳ ಸಾಲಿಗೆ ಅವರ ರತ್ನಗಿರಿಯ ಮಾಹೆ, ಏಕತಾರಿ,ಸುಖದ ನಾದ ಹೊರಡಿಸುವ ಕೊಳಲು ಕಥೆಗಳು ಸೇರಿಕೊಂಡಿವೆ ಎಂದು ಹೇಳಿ ಕಟ್ಟಿ ಅವರಿಂದ ಮುಂದಿನ ಕಥೆ ಯಾವುದಿರಬಹುದು? ಎಂಬುದರ ಬಗ್ಗೆ ಕುತೂಹಲಿಯಾಗಿರುವೆ ಎಂದು ಹೇಳಿದರು. 
ನಂತರ ನಡೆದ ಸಂವಾದದಲ್ಲಿ ಬಿ ಕೆ ವೀರಲಿಂಗನಗೌಡರ, ವಿ ಟಿ ಪೂಜಾರ, ಸಂತೋಷ ಕಾಳನ್ನವರ, ಬಸಮ್ಮ ನರಸಾಪುರ,ಗುರು ಗಾಣಿಗೇರ ಅವರು ಭಾಗವಹಿಸಿ ಡಾ. ಚನ್ನಪ ಕಟ್ಟಿ ಅವರ ಸಾಹಿತ್ಯದ ವಿವಿಧ ಮಜಲುಗಳ ಹೊಲಳುಗಳ ಕುರಿತಾಗಿ ಚರ್ಚಿಸಿದರು. 


ನಂತರ ಡಾ. ಚನ್ನಪ ಕಟ್ಟಿ ಅವರು ಮಾತನಾಡಿ ನನ್ನ ಬರಹಕ್ಕೆ ಬಾದಾಮಿಯ ಪರಿಸರವು ಪುಷ್ಟಿಯನ್ನು ನೀಡಿದೆ. ಪ್ರತಿಯೊಬ್ಬ ಲೇಖಕನು ಬರೆಯುತ್ತಾ  ಹೋದಂತೆ  ಇರುವ ಎಲ್ಲ ಮಿತಿಗಳನ್ನು ಮೀರುತ್ತಾ ಸಾಗುತ್ತಾನೆ ಆ ಕೆಲಸ ನನ್ನಿಂದ ಆಗಿರುವ ಬಗೆಯನು ಗ್ರಹಿಸಿದ ಓದುಗ ಮಿತ್ರರಿಗೆ ಅಭಿನಂದಿಸುವೆ ಎಂದರು.
 ಹಾಗೆಯೇ ಬಾಗಲಕೋಟೆ ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸದಸ್ಯರೆಲ್ಲರಿಗೂ ಧನ್ಯವಾದ ಸಲ್ಲಿಸಿದರು. ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಮಾತನಾಡಿದರು .ಡಾ. ಜಿ ಜಿ ಹಿರೇಮಠ , ಬಾಗಲಕೋಟೆ ಯ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಶಿವಾನಂದ ಶೆಲ್ಲಿಕೇರಿ ವೇದಿಕೆಯಲ್ಲಿದ್ದರು ಮತ್ತು  ಬಾದಾಮಿ ಯ ಸಾಹಿತ್ಯ ಆಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.