Saturday, October 29, 2022

ಅ.31ರಂದು ಮತ ಎಣಿಕೆಗೆ ಸಕಲ ಸಿದ್ಧತೆ : 7 ಕೊಠಡಿ-35 ಟೇಬಲ್‍ಗಳ ವ್ಯವಸ್ಥೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅಕ್ಟೋಬರ್ 31ರಂದು ನಗರದ ವಿ.ಬಿ.ದರಬಾರ  ಹೈಸ್ಕೂಲ್‍ನಲ್ಲಿ ನಡೆಯಲಿದ್ದು,  ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಅಕ್ಟೋಬರ್ 31ರಂದು ಬೆಳಿಗ್ಗೆ 7-30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, 35 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡಗೆ ಒಂದು ಟೇಬಲ್ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು.

ಮತ ಎಣಿಕೆ ಸುತ್ತು: ವಾರ್ಡ ಸಂಖ್ಯೆ 15ರ  ಒಂದು ವಾರ್ಡಗೆ 03 ಸುತ್ತುಗಳು, ವಾರ್ಡ ಸಂ.26ರ ಒಂದು ವಾರ್ಡಗೆ 05 ಸುತ್ತುಗಳು,  ವಾರ್ಡ ಸಂ.4,5,6,9 ಹಾಗೂ 17ರ ಐದು ವಾರ್ಡಗಳಿಗೆ  06 ಸುತ್ತುಗಳು,  ವಾರ್ಡ ಸಂ.10, 25, 27, 33, 34 ಹಾಗೂ 35ರ ಆರು ವಾರ್ಡಗಳಿಗೆ 07 ಸುತ್ತುಗಳು, ವಾರ್ಡ ಸಂ.01, 12, 24, 32ರ ನಾಲ್ಕು ವಾರ್ಡಗಳಿಗೆ  08 ಸುತ್ತುಗಳು, ವಾರ್ಡ ಸಂ.19, 28, 30 ಹಾಗೂ 31 ರ ನಾಲ್ಕು ವಾರ್ಡಗಳಿಗೆ  09 ಸುತ್ತುಗಳು, ವಾರ್ಡ ಸಂ.02, 03, 13, 16, 23 ಹಾಗೂ 29ರ ಆರು ವಾರ್ಡಗಳಿಗೆ 10 ಸುತ್ತುಗಳು, ವಾರ್ಡ ಸಂ.14 ಹಾಗೂ 20ರ ಎರಡು ವಾರ್ಡಗಳಿಗೆ 11 ಸುತ್ತುಗಳು, ವಾರ್ಡ ಸಂ. 7,8,11,18 ಹಾಗೂ 22ರ ಐದು ವಾರ್ಡಗಳಿಗೆ 12 ಸುತ್ತುಗಳು  ಹಾಗೂ ವಾರ್ಡ ಸಂಖ್ಯೆ. 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆಗೆ 179

 ಅಧಿಕಾರಿ-ಸಿಬ್ಬಂದಿ: ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 07 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 07 ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗಳು ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.

ಪೊಲೀಸ್ ಬಂದೋಬಸ್ತ್:  ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 3 ಡಿವೈಎಸ್‍ಪಿ, 8 ಸಿಪಿಐ, 32 ಪಿಎಸ್‍ಐ, 35 ಎಎಸ್‍ಐ, 76 ಹೆಡ್ ಕಾನ್ಸಟೇಬಲ್, 128 ಪೊಲೀಸ್ ಕಾನ್ಸಟೇಬಲ್, 17 ಮಹಿಳಾ ಪೊಲೀಸ್ ಕಾನ್ಸಟೇಬಲ್, 04 ಐ.ಆರ್.ಬಿ. ಹಾಗೂ 06 ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರ ಪ್ರವೇಶ :  ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.