Friday, July 10, 2020

11-07-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು ಮತ್ತೆ ೮೯ ಜನರಿಗೆ ಕೋವಿಡ್ ಪಾಸಿಟಿವ್ ದೃಢ



ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮತ್ತೆ ಒಟ್ಟು ೮೯ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಇದರಲ್ಲಿ ನಾಲ್ವರು ಮಹಾನಗರ ಪಾಲಿಕೆಯ ಮೂವ್ವರು ಪೌರಕಾರ್ಮಿಕರು, ಓರ್ವ ಪೌರಕಾರ್ಮಿಕ ಮೇಲ್ವಿಚಾರಕರು , ಒಬ್ಬರು ಪೊಲೀಸ್ ಹಾಗೂ ನಾಲ್ವರು ಆರೋಗ್ಯ ಆರೈಕೆ ಕಾರ್ಯಕರ್ತರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೭೧೦ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ೪೬೩ ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ ೨೩೪ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೧೩ ಜನ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯ



ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯ ಬಹುದಿನದ ಕನಸಾಗಿದ್ದ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ನೆನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಎಸ್ ಬಿರಾದಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಶ್ವವಿಖ್ಯಾತ ಗೋಳಗುಮ್ಮಟ ವಿಶ್ವಗುರು ಅಣ್ಣ ಬಸವಣ್ಣನವರು  ಜನ್ಮಸ್ಥಳ ಆಲಮಟ್ಟಿ ಜಲಾಶಯ ಸೇರಿದಂತೆ ಪಾರಂಪರಿಕ ಸ್ಮಾರಕಗಳನ್ನು ಒಳಗೊಂಡಿರುವ ಹಾಗೂ ದ್ರಾಕ್ಷಿ ಒಣದ್ರಾಕ್ಷಿ ದಾಳಿಂಬೆ ಲಿಂಬೆ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳ ರಫ್ತಿಗೆ ಹೆಸರಾಗಿರುವ ವಿಜಯಪುರ ಜಿಲ್ಲೆಗೆ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಚಾಲನೆ ಸಿಕ್ಕಿತು ಬಹಳ ಸಂತೋಷವಾಗಿದೆ ಈ ಮಹಾನ್ ಕಾರ್ಯಕ್ಕೆ ಶ್ರಮಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ  ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ಅಮೃತ ಯೋಜನೆಯಡಿ ಶೇ 100 ರಷ್ಟು ಕಾಮಗಾರಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ



ಈ ದಿವಸ ವಾರ್ತೆ
ವಿಜಯಪುರ : ಕೇಂದ್ರ ಪುರಸ್ಕøತ ಅಮೃತ ಯೋಜನೆಯಡಿ ನಗರದಲ್ಲಿ ಜಾರಿಯಿರುವ ಕುಡಿಯುವ ನೀರು ಸರಬರಾಜು ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೂಳಿಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
 
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅಮೃತ ಯೋಜನೆಯಡಿ ಸಾಧಿಸಿದ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು 177 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಈವರೆಗೆ 6 ವಲಯಗಳಲ್ಲಿ ಮಾತ್ರ ಶೇ100 ರಷ್ಟು ಪ್ರಗತಿ ಸಾಧಿಸಿದ್ದು, ಇನ್ನುಳಿದ ವಲಯಗಳಲ್ಲಿ ಆರ್ಥಿಕ ಗುರಿಗೆ ತಕ್ಕಂತೆ ಭೌತಿಕ ಸಾಧನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇನ್ನುಳಿದ 9 ವಲಯಗಳಲ್ಲಿ ಶೇ100 ರಷ್ಟು ಪ್ರಗತಿ ಸಾಧಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.

ಈ ಯೋಜನೆಯಡಿ 53,453 ಕುಡಿಯುವ ನೀರು ಸಂಪರ್ಕ ಸ್ಥಳಗಳನ್ನು ಜೋಡಿಸುವ ಗುರಿ ಇದ್ದು, ಆರ್ಥಿಕ ಸಾಧನೆಗೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಸಬೂಬು ನೀಡದೆ ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ ನಾಗರಿಕರಿಗೆ ನೆರವಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಅದರಂತೆ ಈ ಯೋಜನೆಯ ಅನುಷ್ಠಾನ ಜವಾಬ್ದಾರಿ ಹೊಂದಿರುವ ಜೈನ್‍ಸಂಸ್ಥೆ ಮಂದಗತಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ರವಾನಿಸುವುದರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಅದರಂತೆ ಸಂಬಂಧಿಸಿದ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಕೂಡಾ ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ನಗರದಲ್ಲಿ ಒಟ್ಟು 15 ವಲಯಗಳ ಪೈಕಿ 6 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜುಲೈ ಅಂತ್ಯಕ್ಕೆ ಇನ್ನು ಮೂರು ವಲಯಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಅಂತ್ಯಕ್ಕೆ ಎಲ್ಲ 15 ವಲಯಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯ
ನಿರ್ವಾಹಕ ಅಭಿಯಂತರ ಪಟ್ಟಣಶೆಟ್ಟಿ ಅವರು ಸಭೆಗೆ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ವಾಟರ್‍ಬೋರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು.