Friday, February 2, 2024

ಜನ ಸಾಮಾನ್ಯರು ಪತ್ರಕರ್ತರ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು: ಸಿ.ಎಂ.ಸಿದ್ದರಾಮಯ್ಯ


ಈ ದಿವಸ ವಾರ್ತೆ

ದಾವಣಗೆರೆ ಫೆ 3 : ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

 ದಾವಣಗೆರೆಯಲ್ಲಿ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು  ಉದ್ಘಾಟಿಸಿ ಮಾತನಾಡಿದರು. 

ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ, ನೀವೇ ಪರಿಶೀಲಿಸಿ ಬರೆಯಿರಿ. ಏನನ್ನಾದರೂ ಪ್ರಕಟಿಸುವ ಮೊದಲು ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು. 

ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟ ಭದ್ರರನ್ನು ಗುರುತಿಸಿ ಬರೆಯಿರಿ. ಇದರಿಂದ ಸಮಾಜಮುಖಿ ಪತ್ರಕೋದ್ಯಮ ಸಾಧ್ಯ ಎಂದರು. 

ಹಣವಂತರು, ಅತೀ ಶ್ರೀಮಂತರ ಕೈಯಲ್ಲಿ ಪತ್ರಿಕೋದ್ಯಮ ಸಿಲುಕಿದೆ.  ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ , ಬಡವರ ಹಿತಾಕ್ತಿಗೆ ವಿರುದ್ಧವಾಗಿ ಬರೆಯುವ ಅಪಾಯ ಇರುತ್ತದೆ. ಇದನ್ನು ಪರಿಶೀಲಿಸಿಕೊಳ್ಳಿ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು, ಬೆಂಬಲಿಸುವವನು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಘನತೆ ತರುವಂತೆ ಮಾಡಬೇಕು ಎಂದು ವಿನಂತಿಸಿದರು. 

ಸ್ವಾತಂತ್ರ್ಯಾಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವವನ್ನು ಕಾಯುವ, ರಕ್ಷಿಸುವ ಆಶಯ ಪ್ರಮುಖವಾಗಿದೆ ಎಂದು ವಿವರಿಸಿದರು. 

ಜನ ಸಾಮಾನ್ಯರು ಪತ್ರಿಕಾ ವೃತ್ತಿ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಈಗ ತಂತ್ರಜ್ಞಾನ , ವಿಜ್ಞಾನ ಬಹಳ ಬೆಳೆದಿದ್ದು ಇದರ ಪ್ರಯೋಜನವನ್ನು ಪತ್ರಿಕಾವೃತ್ತಿ ಬಳಸಿಕೊಳ್ಳಬೇಕಿದೆ. ಆದರೆ ಸತ್ಯನಿಷ್ಠೆಯನ್ನು ಯಾವುದೇ ಕಾರಣಕ್ಕೂ ಪತ್ರಕರ್ತರು ಬಿಡಬಾರದು ಎಂದರು. 

ಪತ್ರಿಕಾ ವೃತ್ತಿ ಸಮಾಜದ ಅಸಮಾನತೆ ಹೋಗಲಾಡಿಸಲು, ಅವಕಾಶ ವಂಚಿತರ ಪರವಾಗಿ, ಮೀಸಲಾತಿಯ ಆಶಯಗಳ ಪರವಾಗಿ ಇರಬೇಕು. ಇದರಿಂದ ಸಾಮಾಜಿಕ ನ್ಯಾಯಯನ್ನು ದ್ವನಿ ಇಲ್ಲದವರಿಗೆ ಕೊಡಲು ಸಾಧ್ಯ. ಹೀಗಾದಾಗ ಬಸವಣ್ಣನವರ ಸಮ ಸಮಾಜದ ಆಶಯ ಈಡೇರಲು ಸಾಧ್ಯ. ಪತ್ರಕರ್ತರು ಇದಕ್ಕೆ ಪೂರಕವಾಗಿ ವಸ್ತುನಿಷ್ಠವಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು. 



ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಸಹಯೋದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು KUWJ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿದ್ದರು. 

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಈ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ , ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಮಾಯ್ಕೊಂಡ ಬಸಂತಪ್ಪ, ಡಿ.ಜಿ.ಶಾಂತನಗೌಡರು, ಇನ್ ಸೈಟ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಜಿ.ಬಿ.ವಿನಯ್ ಕುಮಾರ್ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇ.ಎಂ.ಮಂಜುನಾಥ್ ಸಮ್ಮೇಳನದ ಆಶಯಗಳನ್ನು ಆಡಿದರು.


ನಾನು ಬಸವಾದಿ ಶರಣರ ಅಪ್ಪಟ ಅನುಯಾಯಿ: ಸಿ.ಎಂ. ಸಿದ್ಧರಾಮಯ್ಯ



ಈ ದಿವಸ ಕನ್ನಡ  ದಿನ ಪತ್ರಿಕೆ ವಾರ್ತೆ

ವಿಜಯಪುರ ಫೆ 2: ನಾನು ಬಸವಾದಿ ಶರಣರ ಅನುಯಾಯಿ. ಮೌಡ್ಯ, ಕಂದಾಚಾರ, ಕಂದಾಚಾರ, ಜಾತಿ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಆರಂಭಿಸಿದ್ದರಿಂದ ನಾನು ಅವರ ಅನುಯಾಯಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. 

ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸರ್ಕಾರದ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.

ದುಡಿಯುವವರು ಯಾರೋ, ದುಡಿದು ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು-ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ವಚನ ಕ್ರಾಂತಿ ಶುರು ಆಯಿತು. ಈ ಕಾರಣಕ್ಕೆ ನಾನು ಬಸವಾದಿ ಶರಣರ ಅನುಯಾಯಿ. ಇವರು ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿತು ಎಂದು ವಿವರಿಸಿದರು. 



 ಆದರೆ, ಕ್ರಾಂತಿಯ ಪ್ರಭಾವದಲ್ಲಿ ಸಮಾಜ ಪೂರ್ಣ ಬದಲಾಗುವ ಮೊದಲೇ ವಚನ ಕ್ರಾಂತಿಗೆ ಅಡ್ಡಗಾಲು ಹಾಕಿದರು. ಆದ್ದರಿಂದ ಇನ್ನೂ ಬಸವಣ್ಣನವರ ಆಶಯದ "ಇವ ನಮ್ಮವ ಇವ ನಮ್ಮವ" ಎನ್ನುವ ಆಶಯ ಈಡೇರದೆ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ನಾಡಿನ ಜನರನ್ನು ತಪ್ಪು ದಾರಿಗೆ ಎಳೆದು ಅವರನ್ನು ವಂಚಿಸಲು ಬಿಜೆಪಿ ಅಪ್ಪಟ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು , ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 


ಒಂದೇ ದಿನ 227 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ.  ಅಪ್ಪಾಜಿ ನಾಡಗೌಡರು ಅತ್ಯಂತ ಹಿರಿಯ ಸಭ್ಯ ರಾಜಕಾರಣಿ. ಅವರಿಗೆ ಸಚಿವರಾಗುವ ಅರ್ಹತೆ, ಅನುಭವ ಎರಡೂ ಇದೆ. ನಾಡಗೌಡರ ಕಾರಣದಿಂದ ಮುದ್ದೇಬಿಹಾಳ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಾರ್ಚ್ 20 ರಂದು ನಾನು ಮುದ್ಸೇಬಿಹಾಳ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವತ್ತು ನಾನು ಮುದ್ದೇ ಬಿಹಾಳದಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನೂ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ನಾನು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆದಿದ್ಸೇವೆ. ಈಗಲೂ ಅಷ್ಟೆ. ಬಸವಾದಿ ಶರಣರು ನುಡಿದಂತೆ ನಡೆದರು. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ವಿವರಿಸಿದರು. 

ಶರಣ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 12 ಮಂದಿ ಶರಣ ಸ್ವಾಮೀಜಿಗಳು ವೇದಿಕೆಯಲ್ಲೇ ಅಭಿನಂದಿಸಿ, ಸನ್ಮಾನಿಸಿ ಆಶೀರ್ವದಿಸಿದರು

ಕ್ಷೇತ್ರದ ಶಾಸಕರಾದ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಕೃಷಿ ಸಚಿವರಾದ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಶಾಸಕರುಗಳಾದ ಯಶವಂತರಾಯಗೌಡ ವ್ಹಿ ಪಾಟೀಲ್, ಹಣಮಂತ ನಿರಾಣಿ, ಬಸವನಗೌಡ ಆರ್ ಪಾಟೀಲ್, ಸುನಿಲಗೌಡ ಬಿ ಪಾಟೀಲ, ಪೊ.ಹೆಚ್.ಪೂಜಾರ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮಲ್ಲಪ್ಪ ಮನಗೂಳಿ, ಭೀಮನಗೌಡ ಪಾಟೀಲ, KPCC ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡ ರಜಾಕ ಬಾಗೇವಾಡಿ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.