Wednesday, April 26, 2023

27-04-2023 EE DIVASA KANNADA DAILY NEWS PAPER

ಬಬಲೇಶ್ವರ ತಾಲೂಕಿಗೆ ಭೇಟಿ : ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ್ ಶಿಂಧೆ

 


ಈ ದಿವಸ ವಾರ್ತೆ

ವಿಜಯಪುರ : ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಬುಧವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.  

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ‘ಸಖಿ’ ಬೂತ್ ಮತಗಟ್ಟೆ ಕೇಂದ್ರದ ಮುಂಭಾಗದಲ್ಲಿ ಬಿಡಿಸಿರುವ ಸುಂದರ ಕಲಾಕೃತಿಗಳನ್ನು ವೀಕ್ಷಿಸಿದರು. ಪ್ರಗತಿಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ   ಘಟಕ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಂತ್ರಿಕ  ಸಿಬ್ಬಂದಿಗಳಿಗೆ ಸೂಚಿಸಿದರು. 

ಕಂಬಾಗಿ ಗ್ರಾಮದ ಪ್ರಗತಿಯಲ್ಲಿರುವ ಅಮೃತ ಸರೋವರ ಯೋಜನೆಯ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ,ಸುತ್ತ-ಮುತ್ತಲಿನ ರೈತರಿಗೆ ಅನುಕೂಲವಾಗಿರುವ ಕುರಿತು ರೈತರೊಂದಿಗೆ ಸಮಾಲೋಚಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರ್ಮಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಮತ್ತು ಕ್ಯಾಪ್ ವಿತರಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ  ಸೂಚಿಸಿದರು. ಮದರಕಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣದ ಕಾಮಗಾರಿ ಪರಿಶೀಲನೆ ನಡೆಸಿ, ಬಾಸ್ಕೆಟ್ ಬಾಲ್ ಕಂಬಗಳಿಗೆ 3 ಎಂಎಂ ಫೈಬರ್ ಗ್ಲಾಸ್ ಅಳವಡಿಸುವಂತೆಯೂ, ಕ್ರೀಡಾಂಗಣದ ಸುತ್ತ  ಗುಣಮಟ್ಟದ ಕೆಂಪು ಮರಳು ಹಾಕುವ ವ್ಯವಸ್ಥೆ ಮಾಡುವಂತೆ          ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಗ್ರಾಮೀಣ ಭಾಗದ 8 ರಿಂದ 15 ವರ್ಷದ ವಯೋಮಾನದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ದೃಷ್ಠಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಂಡು ಸ್ಕೇಟಿಂಗ್ ತರಬೇತಿ ಸೇರಿದಂತೆ, ವಿವಿಧ ಕ್ರೀಡಾ ತರಬೇತಿ ಕಲ್ಪಿಸಿಕೊಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜೈನಾಪುರ ಗ್ರಾಮ ಪಂಚಾಯತಿಯ ಬೆಳ್ಳುಬ್ಬಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರಕ್ಕೆ ಭೇಟಿ ನೀಡಿ,   ಮೂಲಭೂತ ಸೌಲಭ್ಯಗಳಾದ  ವಿದ್ಯುತ್ ದೀಪ, ಫ್ಯಾನ್, ಕಿಟಕಿ ಬಾಗಿಲುಗಳ ಮತ್ತು ವಿಕಲಚೇತನರಿಗೆ ಮತದಾನಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ರ್ಯಾಂಪ್ ಹಾಗೂ ಅಗತ್ಯ ದುರಸ್ತಿಯನ್ನು ಕೈಗೊಳ್ಳಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದರು. ಗ್ರಾಮದ ಸರಕಾರಿ ಶಾಲೆಯಲ್ಲಿನ ಬೋಜನಾಲಯದಲ್ಲಿನ ಸೂಕ್ತ ಆಸನ  ವ್ಯವಸ್ಥೆ ಕಲ್ಪಿಸಬೇಕೆಂದೂ, ಜೈನಾಪುರ ಗ್ರಾಮದಲ್ಲಿನ ನೀರು ಸರಬರಾಜು ಕೇಂದ್ರದ ಕಾಮಗಾರಿಯನ್ನು ಉತ್ಕೃಷ್ಟ  ಗುಣ್ಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. 

ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ.ಎಸ್.ಪಠಾಣ, ಬಬಲೇಶ್ವರ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತಿ ಹಿರೇಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನೀಯರ ಎಚ್.ಎಮ್. ಸಾರವಾಡ, ಪಂಚಾಯತ ರಾಜ್, ಇಂಜಿನಿಯರಿಂಗ ಉಪ ವಿಭಾಗದ ಎಇಇ ಪಿ.ಎಸ್.ಚವಾಣ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಗೀತಾ ಕಲ್ಲವಗೊಳ, ಶ್ರೀಮತಿ ರೇಖಾ ಪಾಟೀಲ,   ಮಹೇಶ ಕಗ್ಗೂಡ, ತಾಂತ್ರಿಕ ಸಂಯೋಜಕ ಕಲ್ಲನಗೌಡ ಪಾಟೀಲ, ಐಇಸಿ ಸಂಯೋಜಕ ಶಾಂತಪ್ಪ ಇಂಡಿ, ಶ್ರೀಧರ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿರೀಕ್ಷೆ ಮೀರಿ ಜನ ಬೆಂಬಲ; ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ ; ರಾಮನಗೌಡ ಪಾಟೀಲ ಯತ್ನಾಳ

ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು ಮತಯಾಚನೆ ಮಾಡಿದರು.

 ದಿವಸ ವಾರ್ತೆ

ವಿಜಯಪುರ: ತಂದೆಯ ಅಭಿವೃದ್ಧಿ ಮೆಚ್ಚಿರುವ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದು, ಅತೀ ಹೆಚ್ಚು ಮತಗಳಿಂದ ಗೆಲುವು ನಿಶ್ಚಿತ ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.29, 30 ಹಾಗೂ 24 ರ ಕಾಸಗೇರಿ, ಬಸವನಗರ, ಗೌಡರ ಓಣಿ, ಮಣೂರ ಕಾಲೊನಿ, ಸುಹಾಗ ಕಾಲೊನಿ, ಗಿರೀಶ ನಗರ, ಕುಂಬಾರ ಓಣಿ, ಕಮಾನಖಾನ ಬಜಾರ, ತೇಕಡೆ ಗಲ್ಲಿ, ಯಡವಣ್ಣವರ ಗಲ್ಲಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿಯಿಂದ ಎರಡು ವರ್ಷ ಅಭಿವೃದ್ಧಿ ಕುಂಠಿತಗೊಂಡರೂ, ಉಳಿದ ಕೇವಲ ಮೂರು ವರ್ಷಗಳಲ್ಲಿ ಎರಡೂವರೆ ಸಾವಿರ ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ರಸ್ತೆ ಗಳ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮರ್ಪಕ ಕಸ ವಿಲೇವಾರಿ, ಉದ್ಯಾನಗಳ ಅಭಿವೃದ್ಧಿ, ಓಪನ್ ಜಿಮ್, ಚಿಲ್ಡ್ರನ್ ಪಾರ್ಕ್, ಮಹಾಪುರುಷರ ವೃತ್ತಗಳು ನಿರ್ಮಾಣ ಹಾಗೂ ಮಾರ್ಗಗಳಿಗೆ ಹೆಸರು ನಾಮಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದ್ದರಿಂದ, ಪ್ರಚಾರಕ್ಕೆ ಬರುವ ಅಗತ್ಯವಿಲ್ಲ ತಮಗೆ ನಮ್ಮ ಬೆಂಬಲ ಎಂದು ಜನ ಮನಸಾರೆ ಹೇಳುತ್ತಿದ್ದಾರೆ. ಇದರಿಂದ ಅತೀ ಹೆಚ್ಚು ಮತಗಳಿಂದ ನಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳ ಜೊತೆಗೆ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 250 ಕೋಟಿ ಅನುದಾನ ಸಿಕ್ಕಿರುವುದು,  ದ್ರಾಕ್ಷಿ ಬೆಳೆಗಾರರ ಬಹುದಿನಗಳ ಬೇಡಿಕೆಯಾದ ವೈನ್ ಪಾರ್ಕ್ ಮಂಜೂರು, ಉದ್ಯೋಗ ಸೃಷ್ಟಿಸಲು ಜವಳಿ ಪಾರ್ಕ್ ಮಂಜೂರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಟಿಟಿಸಿ ಕಾಲೇಜು ಮಂಜೂರು ಹೀಗೆ ಹತ್ತು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿರುವ ಕೀರ್ತಿ ನಮ್ಮ ತಂದೆಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರು, ಕಾಲೊನಿ, ಬಡಾವಣೆಯ ಹಿರಿಯ ನಾಗರಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.