Wednesday, November 8, 2023

ದೇಶಕ್ಕಾಗಿ ನಾವು ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು: ಗೋವಿಂದ ಕಾರಜೋಳ ಕರೆ

ವಿಜಯಪುರ: ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ದೇಶಪ್ರೇಮ ಮೆರೆಯಬೇಕು. ಪ್ರತಿಯೊಬ್ಬ ಭಾರತೀಯನು ಯಾವುದೇ ಜಾತಿ-ಮತ ಪಂಥಗಳನ್ನು ಮೀರಿ ರಾಷ್ಟ್ರಪ್ರೇಮ ಬೆಳೆಸಿಕೊಂಡು, ಒಗ್ಗಟ್ಟಾಗಿ ಸುಭದ್ರ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕರೆ ನೀಡಿದರು.

ಮಂಗಳವಾರ ಜಿಲ್ಲೆಯ ಉಕ್ಕಲಿ ಗ್ರಾಮದ ಬಿಎಲ್‍ಡಿಇ ಸಂಸ್ಥೆಯ ನ್ಯೂ ಇಂಗ್ಲೀಷ್ ಹೈಸ್ಕೂಲ್ ಆವರಣದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತ್ಮಾತ್ಮರಾದ ವೀರಯೋಧ ಶೌರ್ಯಚಕ್ರ ಪ್ರಶಸ್ತಿ ಪುರಸ್ಕøತ ಹವಲ್ದಾರ ಕಾಶೀರಾಯ ಬಮ್ಮನಳ್ಳಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯ ವೀರಯೋಧ ಕಾಶೀರಾಯನ ತ್ಯಾಗಕ್ಕೆ ಬೆಲೆ ಕಟ್ಟಲಾಗಲ್ಲ. ಇಂತಹ ವೀರನಿಗೆ ಜನ್ಮ ನೀಡಿದ ತಂದೆ-ತಾಯಿಗೆ ಎಷ್ಟು ಕೊಂಡಾಡಿದರೂ ಕಡಿಮೆ. ಪುಲ್ವಾಮಾ ದಾಳಿ ಸಂದರ್ಭದಲ್ಲಿ ಶತ್ರುವನ್ನು ಸದೆಬಡೆದು, ವೀರ ಮರಣ ಹೊಂದಿದ ಕಾಶೀರಾಯ ಸೂರ್ಯಚಂದ್ರ ಇರುವರೆಗೂ ಅಜರಾಮರಾಗಿ ಉಳಿಯಲಿದ್ದಾರೆ. ಅವರ ತ್ಯಾಗದ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವ-ನೆನಪಿಸುವ ನಿಟ್ಟಿನಲ್ಲಿ ಪುತ್ಥಳಿ ಅನಾವರಣ ಅತಿ ಸ್ತ್ಯುತ್ಯವಾಗಿದೆ. ಕಾಶೀರಾಯನಂತೆ ಪ್ರತಿಯೊಬ್ಬರು ದೇಶಪ್ರೇಮ ಮೆರೆಯಬೇಕು. ದೇಶಕ್ಕಾಗಿ ನಾವು ಏನನ್ನಾದರೂ  ಕೊಡುಗೆ ನೀಡಬೇಕೆಂಬ ಬಾವನೆ ಬೆಳೆಸಿಕೊಳ್ಳಬೇಕು  ಎಂದು ಹೇಳಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತನಾಡಿ, ದೇಶ ಕಾಯುವ ಸೈನಿಕ ಯಾವುದೇ ಒಂದು ಜಾತಿ, ಮತ, ಪಂಥ, ಸಮಾಜದ ರಕ್ಷಣೆಗಾಗಿ ಗಡಿಯಲ್ಲಿ ನಿಲ್ಲುವುದಿಲ್ಲ. ತನ್ನ ಮನೆ, ಸಂಬಂಧಿಕರನ್ನು ದೂರವಾಗಿ ಇಡೀ ದೇಶದ ಜನರು ನೆಮ್ಮದಿಯಿಂದ ಸುರಕ್ಷಿತವಾಗಿರಲಿ ಎಂಬ ಭಾವನೆಯಿಂದ ಗಡಿಯಲ್ಲಿ ಬಿಸಿಲು, ಮಳೆ ಲೆಕ್ಕಿಸದೇ ತನ್ನ ಪ್ರಾಣವನ್ನು ಮುಡುಪಾಗಿಟ್ಟು ದೇಶ ರಕ್ಷಣೆಗೆ ನಿಲ್ಲುತ್ತಾನೆ. ಇಂತಹ ಸೈನಿಕರ ಪ್ರತಿ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡೆಬೇಕು ಎಂದರು.

ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ  ಕೊಲ್ಹಾಪುರದ ಶ್ರೀ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿ ಮಠದ ಕೃಷಿ ಋಷಿ ರಾಷ್ಟ್ರಸಂತ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಉಕ್ಕಲಿ ಯರನಾಳ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಡಾ.ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಜಾಲವದಿ-ನಂದವಾಡಗಿ ಆಳಂದ ಶ್ರೀ ಡಾ. ಷ.ಬ್ರ.ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು,  ಹಜರತ್ ಸೈಯ್ಯದ್ ಷಾ ಹುಸೇನ್ ಪೀರ ಖಾದ್ರಿ ಚಿಸ್ತಿ ಮನಗೂಳಿ ಶರೀಫ್‍ದ ಶ್ರೀ ಡಾ.ಫೈರೋಜ ಇನಾಂದಾರ, ಧರ್ಮಗುರುಗಳಾದ ಮೌಲಾನಾ ಶಕೀಲ್ ಅಹಮದ್ ಖಾಸ್ಮಿ ಅವರು ಆರ್ಶೀವಚನ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಿ.ಎಂ. ಗಣಕುಮಾರ ಅವರು ಮಾತನಾಡಿದರು.  

ಕಾರ್ಯಕ್ರಮದಲ್ಲಿ  ಉಮೇಶ ಕಾರಜೊಳ, ಊರಿನ ಗಣ್ಯರಾದ ಎನ್.ಜಿ.ಸಿಂದಗಿ, ಬಾಳು ಮಸಳಿ, ಧರೆಪ್ಪ ಮಸಳಿ, ಶ್ರೀಮತಿ ದೊಡಮನಿ, ಪ್ರಕಾಶ ಪಟ್ಟಣದ, ಬಿ.ಜಿ.ಬಿರಾದಾರ, ಪ್ರಕಾಶ ಜುಮನಾಳ ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು. ಪ್ರವೀಣ ಕಾಮಗೊಂಡ ಸ್ವಾಗತಿಸಿದರು. ಶಿಕ್ಷಕ ಹಿರೇಮಠ, ಟೆಂಕಲಿ ಹಾಗೂ ಮುಲ್ಲಾ  ಅವರು ನಿರೂಪಿಸಿದರು. ಮಹೇಶ ಹಾವಿನಾಳ ವಂದಿಸಿದರು.

No comments:

Post a Comment