Wednesday, February 22, 2023

ಪಠ್ಯದತ್ತ ಲಕ್ಷ್ಯ ವಹಿಸಿ: ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ


ಈ ದಿವಸ ವಾರ್ತೆ

ವಿಜಯಪುರ : ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಮಹತ್ತರ ಘಟ್ಟವಾಗಿದ್ದು, ಈ ಹಂತದಲ್ಲಿ ಮೊಬೈಲ್ ಬಳಕೆ ಕೈ ಬಿಟ್ಟು, ಪಠ್ಯಕ್ರಮದತ್ತ ಲಕ್ಷ್ಯ ವಹಿಸಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು ಎಂದು ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಹೇಳಿದರು.

ನಗರದ ಶ್ರೀ ಅಭಿನವ ವಿದ್ಯಾ ಸಂಸ್ಥೆಯ ಶ್ರೀ ಅಭಿನವ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿದ್ದು, ಶೈಕ್ಷಣಿಕ ದೃಷ್ಟಿಯಿಂದ ಸರಿಯಲ್ಲ. ಅದರ ಬದಲಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಗೀಳು ಬೆಳೆಸಿಕೊಳ್ಳುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಇಳುವರಿ ಪಡೆದುಕೊಂಡರೆ, ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಮನೆಯಲ್ಲಿ ಮಕ್ಕಳ ಚಟುವಟಿಕೆಗಳತ್ತ ಗಮನ ಹರಿಸಬೇಕು. ಆ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಧ್ಯಕ್ಷತೆ ವಹಿಸಿ, ತಲೆತಗ್ಗಿಸಿ ಪುಸ್ತಕ ಓದಿದವರು ತಲೆಎತ್ತಿ ಜೀವನ ನಡೆಸುತ್ತಿದ್ದಾರೆ. ಆದರೆ ಇಂದು ಬಹುತೇಕರು ತಲೆತಗ್ಗಿಸಿ ಎಗ್ಗಿಲ್ಲದೇ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೋಷಕರು ಹೊರತಾಗಿಲ್ಲ. ಈ ಹೀನ ಸಂಪ್ರದಾಯಕ್ಕೆ ಮೊದಲು ಪೋಷಕರು ಗುಡ್ ಬೈ ಹೇಳಬೇಕು. ನಂತರ ಮನೆಯಲ್ಲಿ ಮಕ್ಕಳಿಗೆ ತಲೆತಗ್ಗಿಸಿ ಪುಸ್ತಕ ಓದುವ ರುಚಿ ಬೆಳೆಸುವುದರ ಮೂಲಕ ಭವಿಷ್ಯದ ದಿನಗಳಲ್ಲಿ ಅವರು ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವಂತೆ ಪ್ರೇರಣೆಯಾಗಿ ನಿಲ್ಲಬೇಕು ಎಂದು ಪೋಷಕರಿಗೆ ಸಲಹೆ ಮಾಡಿದರು.

ಅಭಿನವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ, ವಿವಿಧ ಕ್ಷೇತ್ರದ ಗಣ್ಯರಾಗಬೇಕು. ಆ ಮೂಲಕ ಈ ನಾಡು ಹಾಗೂ ಇದೇ ದೇಶದ ಸೆಲೆಬ್ರೆಟಿಗಳಾಗಿ ನಿಲ್ಲಬೇಕೆಂದರು.

ವೇದಿಕೆಯಲ್ಲಿ ಸಶಸ ಮೀಸಲು ಪಡೆಯ ಡಿವೈಎಸ್ಪಿ ಧೂಳಪ್ಪ ಧನಗರ, ಸಂಚಾರಿ ಠಾಣೆ ಸಿಪಿಐ ಪರಮೇಶ್ವರ ಕವಟಗಿ, ಆರ್‌ಪಿಐ ಜಾರ್ ಶೇಖ್, ಸಂಸ್ಥೆಯ ಅಧ್ಯಕ್ಷ ಮೋಹನ ದಳವಾಯಿ, ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ರಮೇಶ ಪಾಟೀಲ, ಬಿಆರ್‌ಸಿ ಎ.ಕೆ. ದಳವಾಯಿ, ಸಿಆರ್‌ಸಿ ಸವಿತಾ ಧನಗೊಂಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಇದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಬಾನಾ ಚಿತ್ತರಗಿ, ಮೋಹನ ದಳವಾಯಿ, ರವಿ ಕಿತ್ತೂರ, ದೈಹಿಕ ಶಿಕ್ಷಕ ಚನ್ನಪ್ಪ ಸೈದಾಪುರ, ಬಸವರಾಜ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಜ್ಯೋತಿ ಮತ್ತು ನಿಖಿತಾ ನಿರೂಪಿಸಿದರು.

ಉದ್ಘಾಟನೆ ಕಾರ್ಯಕ್ರಮದ ನಂತರ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


No comments:

Post a Comment