Tuesday, June 16, 2020

‘’ಕೋವಿಡ್-19 ಹಿನ್ನಲೆ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರಿಗೆ ಸಾಲ ಸೌಲಭ್ಯ ಕಲ್ಪಿಸಿ’’ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ




ಈ ದಿವಸ ವಾರ್ತೆ
ವಿಜಯಪುರ : ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉತ್ಪಾದನಾ ಮತ್ತು ಸೇವಾ ಘಟಕಗಳ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಉದ್ಯಮಿದಾರರಿಗೆ ಸಕಾಲಕ್ಕೆ ಸಾಲ ನೀಡುವಲ್ಲಿ ನೆರವಾಗುವಂತೆ ಖಾಸಗಿ ಬ್ಯಾಂಕ್‍ಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದ್ದಾರೆ. 

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಯೋಜನೆ ಕುರಿತು ಆಯೋಜಿಸಲಾಗಿದ್ದ ವಿವಿಧ ಉದ್ಯಮೆಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರ ಪುನಶ್ಚೇತನಕ್ಕಾಗಿ ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಈ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಒಟ್ಟು 253 ಕೋಟಿ ರೂ,ಗಳನ್ನು ಸಾಲಕ್ಕಾಗಿ ಮೀಸಲಿಡಲಾಗಿದೆ. ಅರ್ಹರಿಗೆ ಇದರ ಸದುಪಯೋಗ ದೊರಕುವಂತೆ ನೋಡಿಕೊಳ್ಳಲು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆ ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಉದ್ಯಮಿದಾರರಿಗೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೇನೆರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಒವರ್‍ಸಿಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯು.ಸಿ.ಓ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾಗಳ ಮೂಲಕ ಸಾಲ ಮಂಜೂರಾತಿ ಮಾಡಲಾಗುತ್ತಿದ್ದು, ಈವರಗೆ ಒಟ್ಟು 28 ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ತೀವ್ರ ಸಂಕಷ್ಟ ಮತ್ತು ವಿಷಮ ಪರಿಸ್ಥಿತಿ ಇದಾಗಿದ್ದು ಆರ್.ಬಿ.ಐ ಮಾರ್ಗಸೂಚಿ ಮತ್ತು ನಿರ್ದೇಶನಗಳಂತೆ ಖಾಸಗಿ ಬ್ಯಾಂಕ್‍ಗಳು ಕೂಡಾ ಸಕಾಲಕ್ಕೆ ಅರ್ಹ ಫಲಾನುಭವಿ ಉದ್ಯಮಿದಾರರಿಗೆ ಸಾಲ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು. ಕಷ್ಟದ ಈ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸಿದ ಗ್ರಾಹಕರಿಗೆ ಸಕಾಲಕ್ಕೆ ನೆರವಾಗಬೇಕು. ಇದಕ್ಕೆ ಸ್ಪಂದಿಸದ ಬ್ಯಾಂಕ್‍ಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾತಿಗೆ ಕ್ರಮಕೈಗೊಳ್ಳುವುದರ ಜೊತೆಗೆ ಸರ್ಕಾರದ ಗಮನಕ್ಕೂ ಸಹ ತರುವುದಾಗಿ ಎಚ್ಚರಿಕೆ ನೀಡಿದರು.

ಈ ಯೋಜನೆಯ ರೋಪುರೇಷೆಗಳ ಬಗ್ಗೆ ಖಾಸಗಿ ಬ್ಯಾಂಕ್‍ಗಳಿಗೆ ಮನವರಿಕೆ ಮಾಡುವಂತೆ ತಿಳಿಸಿದ ಅವರು ಆರ್.ಬಿ.ಐ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಸೂಕ್ತ ತಿಳುವಳಿಕೆ ನೀಡಲು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು 2020ರ ಅಕ್ಟೋಬರ್ 31ರ ರೊಳಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅವಕಾಶ ಇರುವುದರಿಂದ ಮತ್ತು ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹದಾಯಕ ವಾಗಿರುವುದರಿಂದ ಇವುಗಳ ಲಾಭ ದೊರಕಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಸೋಮನಗೌಡ ಅವರು ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ 3 ಲಕ್ಷ ರೂಗಳ ವರೆಗೆ ಸಾಲ ಪಡೆಯಲು ಅವಕಾಶವಿದ್ದು, ಅರ್ಹ ಸಣ್ಣ, ಅತೀ ಸಣ್ಣ ಮತ್ತು ಮದ್ಯಮ (ಎಂ.ಎಸ್.ಎಂ.ಇ) ಉದ್ಯಮಿದಾರರು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಸಂಪರ್ಕಿಸಿ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಬರುವ ಅಕ್ಟೋಬರ್ 31 ರೊಳಗೆ ಮೊದಲು ಬಂದವರಿಗೆ ಪ್ರಥಮ ಆಧ್ಯತೆ ಮೇಲೆ ಸಾಲ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. 

ಇದೇ ಸಂದರ್ಭದಲ್ಲಿ ವಿವಿಧ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಸಭೆಯಲ್ಲಿ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. 

No comments:

Post a Comment