Sunday, June 14, 2020

ಬೈಕ್‌ ಕಳ್ಳನನ್ನು ಬಂಧಿಸಿದ ಖಾಕಿ ಪಡೆ


ಈ ದಿವಸ ವಾರ್ತೆ
ವಿಜಯಪುರ: ನಗರದಲ್ಲಿ ಬೈಕ್‌ ಮತ್ತು ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜಮಖಂಡಿ ನಿವಾಸಿ ಇಮ್ರಾನ್‌ ಮೆಹಬೂಬ ಕಾಟಿಕ್‌(28) ಬಂಧಿತ ಆರೋಪಿಯಾಗಿದ್ದಾನೆ. ಈತನು ಶನಿವಾರ ನಗರ ಸಮೀಪದ ಮಹಲ್‌ ಐನಾಪುರದ ಬಳಿ ಅಡ್ಡಾಡುತ್ತಿರುವಾಗ ಪೊಲೀಸರು ಅನುಮಾನ ಬಂದು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯಿಂದ ಸುಮಾರು ₹ 50 ಸಾವಿರ ಮೊತ್ತದ ವಿವಿಧ ಕಂಪನಿಗಳ ಒಟ್ಟು ನಾಲ್ಕು ಮೊಬೈಲ್‌ ಸೆಟ್‌ಗಳು ಹಾಗೂ ರೂ. 1ಲಕ್ಷ ಮೊತ್ತದ ಐದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.
ಗ್ರಾಮೀಣ ವಿಭಾಗದ ಸಿಪಿಐ ಎಂ.ಕೆ.ದಾಮಣ್ಣವರ, ಪಿಎಸ್‌ಐ ಆನಂದ ಠಕ್ಕನ್ನವರ, ಆರ್‌.ಎ.ದಿನ್ನಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Saturday, June 13, 2020

ರಕ್ತ ದಾನ ಮಹಾ ದಾನ



ಜಾತಿ ಯಾವುದಾದರೇನು ರಕುತದ ಬಣ್ಣ ಒಂದು .. 
ರಕುತ ದಾನದಿ ಉಳಿಯಬಲ್ಲದು ಜೀವವೊಂದು.. 

ರಕ್ತದಾನ ಮಹಾದಾನ... 
ರಕ್ತದಾನ ಜೀವದಾನ...
ರಕ್ತದಾನದಿ ಬೆಳಗೋದು ಜೀವನ...

ಹದಿನೆಂಟರ ಭಂಟ .. 
ನಲ್ವತ್ತೈದರ ತೂಕವ ಹೊಂದಿದ್ದರೆ ನೀನೆ ನೆಂಟ..
ಇರಬೇಕು ಹಿಮೋಗ್ಲೋಬಿನ್   12.5gm% ಕನಿಷ್ಟ...
ನೀನಾಗಿರಬೇಕು  ಆರೋಗ್ಯ ದೇಹದ ಪಂಟ...
ನಿನಗಿರಬಾರದು   ಮಾರಕ ಖಾಯಿಲೆಗಳ ನಂಟು...
ರಕ್ತದಾನ ಮಾಡಿ  ನೀನಾಗುವೆ  ನೆಂಟ...

ರಕ್ತ  ದಾನದಿ  ಮೊದಲು ನೀ ಅರಿಯಬೇಕು 
ರಕ್ತ ದಾನಕೆ ನೀ ಯೋಗ್ಯನಾಗಿರಬೇಕು..
ನಿನ್ನ ರಕ್ತದ  ಗುಂಪ ಪರೀಕ್ಷಿಸಬೇಕು..
ರಕ್ತವ ಪಡೆಯುವ ಜೀವದ ಹನಿಗೆ ನಿನ್ನ ರಕ್ತದ ಹನಿ ಹೊಂದಿಕೆಯಾಗಬೇಕು..
ನಿನ್ನ ರಕ್ತದಲಿ  ಇರಬಾರದು ಆಲ್ಕೋಹಾಲ್ ನ  ಗುಟುಕು..

ರಕ್ತದಾನದಿ ಮೊದಲು ನೀ ಸೇವಿಸು ಉತ್ತಮ ಆಹಾರ.. 
ಉಪವಾಸದಿ  ನೀ ರಕ್ತ ದಾನಿಯಾದರೆ ರೋಗದ ಪ್ರಹಾರ..
ರಕ್ತದಾನದಿ ನಂತರ ನೀ ಸೇವಿಸು ಪೌಷ್ಟಿಕ ಆಹಾರ...
ನಿನ್ನ ಅಲಂಕರಿಸುವುದು  ಆರೋಗ್ಯದ ಹಾರ.. 

ರಕ್ತದಾನದಿ ನೀ ಪಡೆವೆ  ಸದೃಢ ಕಾಯ...
ರಕ್ತದಾನದಿ ಹಲವು ರೋಗಗಳು ಮಾಯಾ...

ರಕ್ತದಾನ ಶ್ರೇಷ್ಠ ದಾನ...
ಜೀವವ  ಉಳಿಸಲು  ಇರುವ ದಾನ.. 
ಜಾತಿ ಭೇದವಿಲ್ಲದೆ ಮಾಡುವ ದಾನ...
ಬಡವ - ಬಲ್ಲಿದ  ಅನ್ನೋ ಹಂಗಿಲ್ಲದ  ದಾನ..
ಇದನ ಅರಿತು ಮಾನವರೆಲ್ಲ ಒಂದಾಗೋಣ...


ಸಮಿತ ಶೆಟ್ಟಿ 
ಸಿದ್ಧಕಟ್ಟೆ, ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಕವಿತೆಯಾಗಬೇಕು..!



ಸಹಜ ಆಶಯ
ಸರಳ ಭಾಷೆ
ಸುಲಲಿತವಾಗಿ ಸೇರಿ
ಕವಿತೆಯಾಗಬೇಕು!

ದ್ವಂದ್ವ ಬೇಡ
ಧ್ವನಿ ಬೇಡ
ಭಾವದ ದನಿ ಭಾಷೆಯಾಗಿ
ಕವಿತೆಯಾಗಬೇಕು.

ಛಂದ ಬೇಡ,
ಬಂದ ಬೇಡ,
ಭಾವ ಭಾಷೆಗಳ ಬಂಧನ
ಕವಿತೆಯಾಗಬೇಕು.

ಪ್ರಾಸವೇಕೆ?
ಲಯ ಬೇಕೆ?
ಎದೆಯ ಮಾತು ಅಕ್ಷರವಾಗಿ
ಕವಿತೆಯಾಗಬೇಕು.

ಚೆಲುವಿಗೆ ಕನ್ನಡಿಯಾಗಿ
ಒಲವಿಗೆ ಮುನ್ನುಡಿಯಾಗಿ
ಚೆಲುವು-ಒಲವುಗಳ ಚೆಲುವಿನ ವ್ಯಾಖ್ಯಾನ
ಕವಿತೆಯಾಗಬೇಕು.

ವಾಸ್ತವತೆಗೆ ಪ್ರತಿಬಿಂಬವಾಗಿ.
ಸಮಾಜಕ್ಕೆ ಗತಿಬಿಂಬವಾಗಿ.
ಜೊತೆ -ಜೊತೆ ಸಾಗುವ ಸಾಲುಗಳು.
ಕವಿತೆಯಾಗಬೇಕು.

ಅಂಬರೀಷ ಎಸ್. ಪೂಜಾರಿ. 

Friday, June 12, 2020

ಕನಸ ನನಸಾಗಿಸಬಲ್ಲ ಕುಸುಮಗಳು




ಖುಷಿ ಖುಷಿಯಾಗಿ ಬಾಲ್ಯವ ಕಳೆಯುವ  ಆಸೆ ಕಂಗಳಲಿ......................
ಹೊಟ್ಟೆಪಾಡಿಗಾಗಿ ಬಳಲಿ ಬೆಂಡಾಗಿ ಒದ್ದಾಡಿದೆ ಜೀವಾ  ನೋವಲಿ....................

ಆಸೆಯ ತೊರೆದು ಹಗಲಿರುಳು ದುಡಿಯುತ್ತಿದೆ ಎಳೆಮನಸು.. 
ಯಾರಾದೋ ತಪ್ಪಿಗೆ ಕುಟುಂಬವ  ಸಲಹಲು ಬಾಡಿದೆ ತಿಳಿಗನಸು..

ಪುಸ್ತಕ ಹಿಡಿಯುವ ಕೈ ಬಂಧಿಯಾಗಿದೆ  ಹಾರೆ ಪಿಕಾಸಿನ ಹಿಡಿತದಲಿ .. 
ಶಾಯಿಯ ಹನಿಯಲಿ  ಅರಳುವ ಕುಸುಮ ಬಾಡಿ ನಲುಗಿದೆ ಬೆವರ ಹನಿಯಲಿ..

ನೆನೆಯುತ ಮಳೆಯ ಹನಿಯಲಿ 
ನಡುಗುತ ಕೊರೆವ ಚಳಿಯಲಿ 
ಬೆಂದಿವೆ ಬಿಸಿಲ ಬೇಗೆಯಲಿ
ದುಡಿಯುತ ದಿನ ದೂಡುತಿದೆ ಎಳೆ ಮನಸು ಜೀವ ಸವೆಸುತಲಿ 

ಮೊಗ್ಗು ಅರಳೋ ಮುನ್ನ ಬಾಡಿ ಹೋಗುತ್ತಿದೆ ಬಾಲಕಾರ್ಮಿಕ ಅನ್ನೋ ಹಣೆಬರಹದಲಿ..
  

ಕಪಿ ಮುಷ್ಟಿಯಲಿ ನರಳುತ್ತಿದೆ ಎಳೆ ಜೀವಾ..
ಬಾಲಕಾರ್ಮಿಕರ ಕಷ್ಟವ ಕಳೆದು  ಕನಸ ಅರಳಿಸೋ ಓ ದೇವಾ.. 

ವಿದ್ಯೆಯ  ಪಡೆದು ಉನ್ನತ ಹುದ್ದೆಯಲಿ... 
ನವಸಮಾಜದ ಶಕ್ತಿಯಾಗಿ  ಮೆರೆದಾಡಲಿ...
ಎಳೆ ಮನಸು ಕನಸ ಜೋಕಾಲಿಯಲಿ ತೇಲಾಡಲಿ.. 
ಕನಸ ನನಸಾಗಿಸಿ ಹೊಸಯುಗಕೆ ಮುನ್ನುಡಿಯಾಗಲಿ...

ಕನಸ ಹೊತ್ತ ಕುಸುಮಗಳು ಸೌಗಂಧವ ಬೀರಲಿ.. 
ಜಗದ ತುಂಬಾ ಕಾಂತಿ ಪಸರಲಿ....
ಬಣ್ಣದ  ಚಿತ್ತಾರ ಮೂಡಲಿ  ಚಿಣ್ಣರ ಬಾಳಲಿ... 

🖊️ಸಮಿತ ಶೆಟ್ಟಿ, ಸಿದ್ಧಕಟ್ಟೆ 

Thursday, June 11, 2020

ಬಡವರಿಗೆ ಆಹಾರ ಸಾಮಗ್ರಿ ನೀಡುವ ಮೂಲಕ ಜನ್ಮದಿನ ಆಚರಣೆ


ಈ ದಿವಸ ವಾರ್ತೆ
ಅಫಜಲಪುರ :
ತಾಲೂಕಿನ ಮಾಶಾಳ ಗ್ರಾಮದ ಜೈ ಭೀಮ್‌ ನಗರದಲ್ಲಿ ಸುಮಾರು ಇನ್ನೂರ ಐವತ್ತು ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ನೀಡುವ ಮೂಲಕ ತಾಪಂ ಸದಸ್ಯ ರಾಜು ಬಬಲಾದ ಅವರ 38ನೇ ಜನ್ಮದಿನವನ್ನು ವಿನೂತನವಾಗಿ ಆಚರಿಸಲಾಯಿತು.

 ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಶಾಳ ಜಿ.ಪಂ ಸದಸ್ಯ ಅರುಣಕುಮಾರ ಎಂ.ವೈ ಪಾಟೀಲ್ ರವರು ಮಾತನಾಡಿ
ದೇಶಾದ್ಯಂತ ವ್ಯಾಪಿಸಿದ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಹೇರಲಾದ ಅನಿರೀಕ್ಷಿತ ಲಾಕ್ ಡೌನ್ ನಿಂದಾಗಿ ಕೂಲಿಯನ್ನೇ ಅವಲಂಬಿಸಿದ ಜನರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇಂತವರ ಸಂಕಷ್ಟದ ಜೊತೆಗೆ ನಾವೆಲ್ಲರೂ ನಿಲ್ಲುವುದರ ಕಡೆಗೆ ಗಮನ ಹರಿಸೋಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪರಿಸರ ರಕ್ಷಣೆಯ ಪಾತ್ರ ಪ್ರಮುಖವಾಗಿರುವುದರಿಂದ ಪ್ರತಿಯೊಬ್ಬರು ಮರ ಗಿಡಗಳನ್ನು ಬೆಳೆಸುವ ಕರ್ತವ್ಯವನ್ನು ನಮ್ಮದಾಗಿಸಿಕೊಳ್ಳೊಣ ಎಂದರು.

ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ,
 ಲಾಕ್‍ಡೌನ್‍ನಿಂದಾಗಿ ಇನ್ನೂ ಅನೇಕ ಜನ ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಡಂಬರದ ಜನ್ಮದಿನದ ಆಚರಣೆಗೆ ಅವಕಾಶ ಕೊಡದೆ, ಸಂಕಷ್ಟದಲ್ಲಿರುವವರಿಗೆ  ಸಹಾಯ ಮಾಡುವತ್ತ ಹೆಜ್ಜೆ ಇಟ್ಟ ರಾಜು ಬಬಲಾದ ರವರ ಕಾರ್ಯ ಮೆಚ್ಚುವಂತದ್ದು ಮತ್ತು ನಾವು ನೀವೆಲ್ಲರೂ ಮುಂದಿನ ದಿನಗಳಲ್ಲಿ ನಮ್ಮ ನಡುವೆ ಇರುವ ಬಡ ಜನರ ಕಷ್ಟದ ಜೊತೆಗೆ ನಿಲ್ಲುವ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ಅಳ್ಳಗಿ, ರಾಜುಗೌಡ ಪಾಟೀಲ್, ಸುರೇಶ ಸಿಂಗೆ, ಪುನ್ನಪ್ಪ ಡಾಳೆ, ರಾಜು ಸಿಂಗೆ, ನಾಗೇಶ ತೆಲ್ಲೂಣಗಿ, ಪೀರಪ್ಪ ಭಂಗಿ, ಸೈದು ದುಧನಿ, ಸಿದ್ದಯ್ಯಸ್ವಾಮಿ ಝಳಕಿ ಮಠ್, ಅಣ್ಣಾರಾಯ ಪ್ರಧಾನಿ,  ರೇವಣಸಿದ್ದ  ಝಳಕಿ, 
ಮಹಾಲಿಂಗ ಅಂಗಡಿ, ಮಹಾಂತೇಶ ಬಳೂಂಡಗಿ, ರವಿ ಗೌರ, ಸದಾಪತಿ ಕುಲ್ಕರ್ಣಿ‌ ಸೇರಿದಂತೆ ರಾಜು ಬಬಲಾದ ಅವರ ಅಭಿಮಾನಿ ಬಳಗ ಹಾಜರಿದ್ದರು.

12-06-2020 EE DIVASA KANNADA DAILY NEWS PAPER

ವರ್ಷಧಾರೆ.




ವರ್ಷದ ಹರ್ಷದ ಮೊದಲ ವರ್ಷಧಾರೆ,

ದಾರೆಯಾಗುತ್ತಿದೆ ಧರೆಯೊಳಗೆ.
ಮುಗಿಲೆಲ್ಲ ಕಪ್ಪಾಗಿ, ಕಪ್ಪೆಲ್ಲ
ಕರಗಿರೆ,
ತಂಪಾಗಿ, ಸೊಂಪಾಗಿ,  ಸುರಿಯುತಿದೆ ಹನಿಯಾಗಿ.

ಕಾದು, ಕಾಯ್ದುಕುಳಿತ ಧರೆಗೆ.
ಬಾನಿನ ಹನಿ -ಹನಿಮಾತು ಇಂಪಾಗಿ,
ಮುಗಿಲ ಹನಿಗಳ ಮಾತಿಗೆ.
ಸ್ವರದಿ, ನುಡಿಯುತಿಹಳು  'ಅವನಿ'
ರಾಗವಾಗಿ.

ಇಳೆಯ  ಕಂಗಳು ಮಳೆಗೆ, 
ಮುತ್ತಾಗಿ, ಹೊಳೆಯುತಿದೆ.
ಹೊಳೆವ ಹನಿ ನೀರಾಗೆ,
ಇಳೆ ನಾಚಿ, ನೀರಾಗುತಿದೆ.

ಆಗಸದ ಆಸೆಯಹನಿ, ಇಳೆಮೆತ್ತಿ.
ಇಳೆ ಹೆಣ್ಣಾಗಿ, ಮಳೆ ಮುತ್ತಿ.
ಇಳೆ-ಮಳೆಗಳೊಂದಾಗಿ ಸುತ್ತಿ.
ಹರಿಯುತ್ತಿರೆ ಜಗನಗುತಿದೆ,  ಮುಖಎತ್ತಿ.

ಅಂಬರೀಷ ಎಸ್. ಪೂಜಾರಿ.