Sunday, May 31, 2026
Sunday, May 17, 2026
Saturday, May 16, 2026
Thursday, May 14, 2026
Sunday, May 10, 2026
ಮಕ್ಕಳು ತಂದೆ ತಾಯಿಯ ಮಾತು ಕೇಳಿದ್ದರೆ ; ವೃದ್ಧಾಶ್ರಮ ಅನಾಥವಾಗಿರುತ್ತಿದ್ದವು..!
ಇಂದಿನ ಆಧುನಿಕ ಸಮಾಜದಲ್ಲಿ “ತಾಯಿ ದಿನ”, “ತಂದೆ ದಿನ”, “ಹಿರಿಯರ ದಿನ” ಎಂಬ ವಿಶೇಷ ಆಚರಣೆಗಳು ಬಹಳ ಜನಪ್ರಿಯವಾಗಿವೆ. ಆ ದಿನ ಮಕ್ಕಳಿಂದ ಪೋಷಕರಿಗೆ ಉಡುಗೊರೆಗಳು, ಶುಭಾಶಯಗಳು, ಪ್ರೀತಿಯ ಮಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ಗಳು ಹರಿದು ಬರುತ್ತವೆ. ಆದರೆ ಮನಸ್ಸಿಗೆ ನೋವು ಕೊಡುವ ಸತ್ಯ ಏನೆಂದರೆ, ಇದೇ ಪ್ರೀತಿ ಮತ್ತು ಕಾಳಜಿ ಪ್ರತಿದಿನ ತೋರಿಸಲ್ಪಟ್ಟಿದ್ದರೆ, ಇಂದು ನಮ್ಮ ಸಮಾಜದಲ್ಲಿ ಇಷ್ಟು ವೃದ್ಧಾಶ್ರಮಗಳ ಅಗತ್ಯವೇ ಉಂಟಾಗುತ್ತಿರಲಿಲ್ಲ.
ತಾಯಿ-ತಂದೆಗಳು ಮಕ್ಕಳಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸುತ್ತಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅವರ ಕನಸು, ಸಂತೋಷ, ಭವಿಷ್ಯ ಎಲ್ಲವೂ ಮಗುವಿನ ಸುತ್ತಲೇ ತಿರುಗುತ್ತವೆ. ತಾಯಿ ತನ್ನ ನಿದ್ರೆಯನ್ನು ಬಿಟ್ಟು ಮಗುವಿನ ಅಳುವಿಗೆ ಸ್ಪಂದಿಸುತ್ತಾಳೆ. ತಂದೆ ತನ್ನ ಆಸೆಗಳನ್ನು ಬದಿಗಿಟ್ಟು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ದುಡಿಯುತ್ತಾನೆ. ಮಕ್ಕಳಿಗೆ ನೋವಾಗದಂತೆ ತಮ್ಮ ನೋವನ್ನು ಮರೆಮಾಡಿಕೊಳ್ಳುವವರು ಪೋಷಕರು. ಮಗುವಿನ ಒಂದು ನಗು ನೋಡಲು ಸಾವಿರ ಕಷ್ಟಗಳನ್ನು ಸಹಿಸುವ ಮಹಾನ್ ಹೃದಯಗಳು ಅವರದು.
ಆದರೆ ಕಾಲ ಬದಲಾಗುತ್ತಾ, ಮಕ್ಕಳು ದೊಡ್ಡವರಾದ ನಂತರ ತಮ್ಮದೇ ಜೀವನದಲ್ಲಿ ಬ್ಯುಸಿಯಾಗುತ್ತಾರೆ. ಉದ್ಯೋಗ, ಹಣ, ವೈಭವ, ವೈಯಕ್ತಿಕ ಸ್ವಾತಂತ್ರ‍್ಯ ಇವೆಲ್ಲದರ ನಡುವೆ ಪೋಷಕರಿಗೆ ಸಮಯ ಕೊಡಲು ಮರೆತುಬಿಡುತ್ತಾರೆ. ಕೆಲವು ಮಕ್ಕಳು ವರ್ಷದಲ್ಲಿ ಒಂದು ದಿನ ಮಾತ್ರ “ಅಮ್ಮಾ, ಅಪ್ಪಾ ನೀವು ನನ್ನ ಜಗತ್ತು” ಎಂದು ಹೇಳುತ್ತಾರೆ. ಆದರೆ ಉಳಿದ ದಿನಗಳಲ್ಲಿ ಅವರ ಜೊತೆ ಮಾತನಾಡಲು ಸಹ ಸಮಯ ಕೊಡೋದಿಲ್ಲ. ಈ ಒಂದು ದಿನದ ಪ್ರೀತಿ ಪೋಷಕರ ಮನದ ಖಾಲಿತನವನ್ನು ತುಂಬಲಾರದು.
ಇಂದು ಅನೇಕ ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ಹಣಕ್ಕಾಗಿ ಅಲ್ಲ, ಪ್ರೀತಿಗಾಗಿ ಕಾಯುತ್ತಿದ್ದಾರೆ. ಅವರಿಗೆ ದುಬಾರಿ ಉಡುಗೊರೆಗಳು ಬೇಕಿಲ್ಲ. “ಊಟ ಮಾಡಿದ್ದೀರಾ?”, “ಔಷಧಿ ತೆಗೆದುಕೊಂಡಿರಾ?”, “ಹೇಗಿದ್ದೀರಾ?” ಎಂದು ಕೇಳುವ ಒಂದು ಆತ್ಮೀಯ ಧ್ವನಿ ಸಾಕು. ಆದರೆ ಈ ಮಾತುಗಳು ಕೇಳಿಸದೇ ಹೋದಾಗ, ಅವರ ಜೀವನದಲ್ಲಿ ಒಂಟಿತನ ಹೆಚ್ಚಾಗುತ್ತದೆ. ಮಕ್ಕಳು ಜೀವಂತವಾಗಿದ್ದರೂ, ಅವರ ನೆನಪುಗಳಲ್ಲಿ ಮಾತ್ರ ಬದುಕುವ ಪರಿಸ್ಥಿತಿ ಬರುತ್ತದೆ.
ವೃದ್ಧಾಶ್ರಮಗಳ ಗೋಡೆಗಳು ಅನೇಕ ಮೌನ ಕಣ್ಣೀರಿನ ಕಥೆಗಳನ್ನು ಹೇಳುತ್ತವೆ. ಅಲ್ಲಿ ಇರುವ ಪ್ರತಿಯೊಬ್ಬ ತಂದೆ-ತಾಯಿಯ ಕಣ್ಣುಗಳಲ್ಲಿ ಒಂದೇ ಪ್ರಶ್ನೆ ಕಾಣುತ್ತದೆ. “ನಮ್ಮ ಮಕ್ಕಳಿಗಾಗಿ ಬದುಕಿದ್ದ ನಾವು, ಇಂದು ಏಕೆ ಅನಾಥರಂತೆ ಬದುಕಬೇಕು?” ಎಂಬುದು. ಈ ಪ್ರಶ್ನೆ ಕೇವಲ ಅವರದು ಮಾತ್ರವಲ್ಲ; ಅದು ಇಡೀ ಸಮಾಜದ ಮನಸ್ಸನ್ನು ಕಾಡುವ ಪ್ರಶ್ನೆಯಾಗಿದೆ.
ಪ್ರೀತಿ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ಪ್ರತಿದಿನದ ವರ್ತನೆಯಲ್ಲಿ ಕಾಣಬೇಕು. ಪೋಷಕರ ಜೊತೆ ಕೆಲವು ಕ್ಷಣ ಕಳೆಯುವುದು, ಅವರ ಆರೋಗ್ಯದ ಕಡೆ ಗಮನ ಕೊಡುವುದು, ಅವರ ಮಾತುಗಳನ್ನು ಸಹನೆಯಿಂದ ಕೇಳುವುದು, ಅವರಿಗೆ ಒಂಟಿತನ ಅನ್ನಿಸದಂತೆ ನೋಡಿಕೊಳ್ಳುವುದು ಇವೆಲ್ಲವೇ ನಿಜವಾದ ಪ್ರೀತಿ ಮತ್ತು ಕಾಳಜಿ. ಮಕ್ಕಳು ಈ ಸಣ್ಣ ಸಣ್ಣ ವಿಷಯಗಳನ್ನು ಪ್ರತಿದಿನ ಪಾಲಿಸಿದ್ದರೆ, ಇಂದು ಅನೇಕ ವೃದ್ಧಾಶ್ರಮಗಳು ಖಾಲಿಯಾಗುತ್ತಿದ್ದವು.
ಬಾಲ್ಯದಲ್ಲಿ ಮಗು ನಡೆಯಲು ಕಲಿತಾಗ ತಂದೆ ಕೈ ಹಿಡಿದಿದ್ದ. ಇಂದು ವಯಸ್ಸಾದ ತಂದೆ ನಡೆಯಲು ಕಷ್ಟಪಟ್ಟಾಗ ಮಗ ಕೈ ಹಿಡಿಯಬೇಕು. ತಾಯಿ ಬಾಲ್ಯದಲ್ಲಿ ಮಗು ತಿನ್ನದೇ ಇದ್ದರೆ ಕಥೆ ಹೇಳಿ ಊಟ ಮಾಡಿಸುತ್ತಿದ್ದಳು. ಇಂದು ಅದೇ ತಾಯಿಗೆ ಸಮಯಕ್ಕೆ ಔಷಧಿ ಕೊಡುವುದು ಮಗುವಿನ ಕರ್ತವ್ಯ. ಜೀವನದ ನಿಜವಾದ ಅರ್ಥ ಇದೇ ಪೋಷಕರು ನಮ್ಮನ್ನು ನೋಡಿಕೊಂಡAತೆ, ನಾವು ಅವರ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಬೇಕು.
ಹಿರಿಯರು ಮನೆಯ ಭಾರವಲ್ಲ; ಅವರು ಮನೆಯ ಆಶೀರ್ವಾದ. ಅವರ ಅನುಭವ ಜೀವನದ ದಾರಿ ತೋರಿಸುವ ದೀಪ. ಅವರ ಸಾನ್ನಿಧ್ಯ ಮನೆಯ ಶಾಂತಿ ಮತ್ತು ಸಂಸ್ಕೃತಿಯ ಸಂಕೇತ. ಅವರನ್ನು ದೂರ ಮಾಡುವ ಸಮಾಜ ಯಾವತ್ತೂ ಸಂಪೂರ್ಣ ಸಂತೋಷ ಕಂಡುಕೊಳ್ಳಲು ಸಾಧ್ಯವಿಲ್ಲ.
ಒಂದು ದಿನದ ಪ್ರೀತಿಯನ್ನು ಪ್ರದರ್ಶಿಸುವುದಕ್ಕಿಂತ ಪ್ರತಿದಿನ ಅವರ ಜೊತೆ ನಿಂತು ಬದುಕುವುದು ಮುಖ್ಯ. ಪೋಷಕರಿಗೆ ಬೇಕಾಗಿರುವುದು ದೊಡ್ಡ ಉಡುಗೊರೆಗಳಲ್ಲ, ಪ್ರೀತಿಯಿಂದ ತುಂಬಿದ ಕೆಲವು ಕ್ಷಣಗಳು. ಮಕ್ಕಳು ಪ್ರತಿದಿನ ಕಾಳಜಿ ತೋರಿಸಿದರೆ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುವುದಷ್ಟೇ ಅಲ್ಲ, ಪೋಷಕರ ಕಣ್ಣೀರಿನ ಜಾಗದಲ್ಲಿ ಸಂತೋಷ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ತಾಯಿ-ತಂದೆಗಳಿಗೆ ಬೇಕಾಗಿರುವುದು “ವಿಶೇಷ ದಿನದ ಗೌರವವಲ್ಲ… ಜೀವನಪೂರ್ತಿ ಇರುವ ಆತ್ಮೀಯತೆ.”
ವಿಶೇಷ ವರದಿ : ಕಲ್ಲಪ್ಪ ಶಿವಶರಣ, 7207279187
Monday, May 4, 2026
Sunday, May 3, 2026
ವಿಜಯಪುರ ಕರ್ನಾಟಕದ ಸಾಂಸ್ಕೃತಿಕ ನಗರವಾಗಿದೆ : ಡಾ. ಕುಶಾಲ ಬರಗೂರು
ವಿಜಯಪುರ: ಕಾವ್ಯಕ್ಕೆ ಸಂಗೀತ ಮತ್ತು ದೃಶ್ಯದ ಸ್ಪರ್ಶ ನೀಡಿದರೆ ಜನಮನ ತಲುಪುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಹೇಳಿದರು.
ಅವರು ನಗರದ ಗಾನಬನದ ಶ್ರೀಗುರು ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಹಾಗೂ ಸಿದ್ಧರಾಮೇಶ್ವರ ಟೆಲಿಫಿಲಂ ಆಶ್ರಯದಲ್ಲಿ ಹಮ್ಮಿಕೊಂಡ ಸೋಮು ಹಿಪ್ಪರಗಿ ಅವರ ‘ವಿಜಯಪುರ’ ಕನ್ನಡ ಅಲ್ಬಮ್ ಸಾಂಗ್ ಲೋಕಾರ್ಪಣೆ ಹಾಗೂ ವರ್ತಮಾನ ಕಾವ್ಯ ಸಿಂಚನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯದ ಓದು ವ್ಯಕ್ತಿಯ ಚಿಂತನೆಯ ಹರಿವನ್ನು ಹೆಚ್ಚಿಸುವುದರ ಜೊತೆಗೆ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದಿವ್ಯ ಶಕ್ತಿಯಾಗಿದೆ. ಕವಿತೆ ಗಟ್ಟಿಗೊಳ್ಳಲು ಅಧ್ಯಯನ ಅಗತ್ಯವಾಗಿದೆ. ಕವಿ ಸೋಮು ಅವರ ವಿಜಯಪುರ ಸಾಂಸ್ಕೃತಿಕ ಪರಂಪರೆ ಸಾರುವ ಸಾಹಿತ್ಯವನ್ನು ದೃಶ್ಯಗಳಲ್ಲಿ ಸೆರೆ ಹಿಡಿದಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಕ್ರಿಯಾಶೀಲತೆಗೆ ವಿಜಯಪುರ ಅಲ್ಬಮ್ ಸಾಂಗ್ ಹಿಡಿದ ಕೈಗನ್ನಡಿಯಾಗಿದೆ ಆ ಮೂಲಕ ವಿಜಯಪುರ ಕರ್ನಾಟಕದ ಸಾಂಸ್ಕೃತಿಕ ನಗರವಾಗಿದೆ ಎಂದರು.
ಅಲ್ಬಮ್ ಸಾಂಗ ಬಿಡುಗಡೆಗೊಳಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ದಾಕ್ಷಾಯಣಿ ಹುಡೇದ ಮಾತನಾಡಿ, ಇತಿಹಾಸ ಎಲ್ಲರನ್ನು ಕರೆದುಕೊಂಡು ಹೋಗುವ ಸಂದೇಶಗಳನ್ನು ಹೇಳುತ್ತದೆ. ಸಾಮರಸ್ಯದ ನೆಲೆಗಳನ್ನು ಹುಡುಕುತ್ತಾ ಹೋಗುವ ಸಂದರ್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆಸೆಯುವ ಅಲ್ಬಮ್ ಸಾಂಗ್ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾದುದು ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಸಂಶೋಧಕ ಲಾಯಪ್ಪ ಇಂಗಳೆ ಮಾತನಾಡಿ, ವಿಜಯಪುರದಲ್ಲಿ ಎರಡು ಗುಮ್ಮಟಗಳಿವೆ. ಒಂದು ಭೌತಿಕ ಗೋಳ ಗುಮ್ಮಟ ಇನ್ನೊಂದು ಬೌದ್ಧಿಕ ವಚನ ಗುಮ್ಮಟ, ಭೌತಿಕ ಗುಮ್ಮಟವು ಪ್ರವಾಸಿಗರನ್ನು ತನ್ನತ್ತ ಸೆಳೆದರೆ, ಬೌದ್ಧಿಗ ವಚನ ಗುಮ್ಮಟವು ನಿರಂತರವಾಗಿ ಶರಣರ ಸಂದೇಶಗಳ ಮೂಲಕ ಎಲ್ಲರನ್ನು ಎಚ್ಚರಿಸುತ್ತಿವೆ. ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳನ್ನು ಮಾನವ ಕುಲಕ್ಕೆ ದಾರಿದೀಪವಾಗಿವೆ. ಜನ ಬಯಸುವ ರೀತಿಯಲ್ಲಿ ನಾವು ಸಾಹಿತ್ಯವನ್ನು ಹೇಳುವ ಪರಿ ಬದಲಿಸಿಕೊಳ್ಳಬೇಕಿದೆ ಜನ ದೃಶ್ಯ ಮಾಧ್ಯಮದತ್ತ ವಾಲುತ್ತಿರುವಾಗ ಸಾಹಿತ್ಯಕ್ಕೆ ಸಂಗೀತ ಮತ್ತು ದೃಶ್ಯದ ಅಳವಡಿಕೆ ಇಂದಿನ ಕಾಲದಲ್ಲಿ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಸೋಮು ಮತ್ತು ಅವರ ತಂಡದ ಪ್ರಯತ್ನ ಅಭಿನಂದನಾರ್ಹವಾದುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾದ ರಾಜೇಶ್ವರಿ ಮೋಪಗಾರ ಮಾತನಾಡಿ, ಚಿತ್ರ ಕಲಾವಿದರು ತಮ್ಮ ಲಲಿತ ಕಲೆಗಳ ಮೂಲಕ ಭಾವನೆಗಳನ್ನು ಕಟ್ಟಿಕೊಟ್ಟರೆ ಕವಿ ಸಾಹಿತ್ಯದ ಮೂಲಕ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಾನೆ. ಚಲನಚಿತ್ರ ನಿರ್ದೇಶಕ ಭಾವನೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಾನೆ. ಪ್ರಸ್ತುತ ಸಂದರ್ಭದಲ್ಲಿ ವಿಜಯಪುರ ಕನ್ನಡ ಅಲ್ಬಮ್ ಸಾಂಗ್ ಉದಾಹರಣೆಯಾಗಿದೆ ಎಂದರು.
ಈ ಸಂದರ್ಭ ಕವಿ ಸೋಮು ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಗೀತಾ ಸನದಿ, ಮುರುಗೇಶ ಸಂಗಮ, ಭೀಮರಾವ ಉಪ್ಪಾರ, ಭರತಕುಮಾರ ಎಚ್.ಟಿ., ಕಲ್ಲಪ್ಪ ಶಿವಶರಣ, ಲಕ್ಷಿö್ಮÃ ಗೋಡೆಕರ, ಪ್ರಶಾಂತ ಬಿಳೆಭಾವಿ, ಜಯಶ್ರೀ ಚಲವಾದಿ, ಮಲ್ಲಿಕಾರ್ಜುನ ನಾಟೀಕಾರ, ಧಾನೇಶ್ವರಿ ಆಲಾಳೆ, ಶಿವಾಜಿ ಮೋರೆ, ರೇಣುಕಾ ಕೋಟ್ಯಾಳ ಅವರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಇದೇ ಸಂದರ್ಭ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟಗಾರರಾದ ನೀಲಾಂಬಿಕಾ ಕಟ್ಟಿಮನಿ, ಶಿವರಂಜಿನಿ ಉಪ್ಪಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಗುರು ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದ ಗಾನ ಬನದ ಪಂಡಿತ ತೋಂಟದಾರ್ಯ ಕವಿಗವಾಯಿಗಳು ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮದಲ್ಲಿ ಅಲ್ಬಾಮ್ ಸಾಂಗ್ ನಲ್ಲಿ ಅಭಿನಯಿಸಿದ ಕಲಾವಿದರು ಹಾಗೂ ಗಾನಬದನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಮಲಾಬಾಯಿ ಹಿಪ್ಪರಗಿ, ಲಕ್ಷಿö್ಮÃ ಸೇಜಾಳ, ದುಂಡಮ್ಮ ಹಿಪ್ಪರಗಿ, ರಾಮನಗೌಡ ಚೌಧ್ರಿ,
ಶ್ರೀಕಾಂತ ಮೆಂಡೆಗಾರ, ಭೀಮರಾಯ ಕುಂಟೋಜಿ, ಪ್ರಕಾಶ ಚೌಧ್ರಿ, ಆನಂದ ಕುಂಟೋಜಿ, ಎ.ಎಚ್.ಕೊಳಮಲಿ, ಶರಣಗೌಡ ಪಾಟೀಲ, ಉಮೇಶ ಶಿವಶರಣ, ದೀಪಕ ಶಿಂಧೆ, ಸೋಮಶೇಖರ ಕುರ್ಲೆ, ವಿನೋದ ಪಟ್ಟಣದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಮೇಶ ಶಿವಶರಣ ಸ್ವಾಗತಿಸಿದರು. ಮುರುಗೇಶ ಸಂಗಮ ನಿರೂಪಿಸಿದರು. ಕಲ್ಲಪ್ಪ ಶಿವಶರಣ ವಂದಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Friday, May 1, 2026
ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಅವರ ಕೊಡುಗೆ ಅನನ್ಯ : ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ
ಸಿಂದಗಿ: ಸಿಂದಗಿ ನಗರದಲ್ಲಿ ಬಿದಿಯುದ್ಧಕ್ಕೂ ರಸ್ತೆ ಗುಂಡಿ, ಕಸ ಹಾಗೆಯೇ ಇದೆ. ಇದೆಲ್ಲವನ್ನು ಬರುವ ಸಮಯದಲ್ಲಿ ಗಮನಿಸಿದ್ದನ್ನು ನೋಡಿದರೆ ನಗರವು ಅಶುಚಿತ್ವ ಮತ್ತು ಗುಂಡಿಗಳಿAದ ಕುಡಿದೆ ಎಂದು ತಿಳಿಯುತ್ತದೆ. ಇದರ ಕುರಿತಾಗಿ ತಾಲೂಕು ದಂಡಾಧಿಕಾರಿ ಹಾಗೂ ಪೌರಾಯುಕ್ತರಿಗೆ ಕ್ರಮಕೈಗೊಳ್ಳು ವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಎಂದರು.
ಸಿಂದಗಿ ನಗರದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಸಿಂದಗಿಯ ಡಾ.ಚನ್ನಪ್ಪ ಕಟ್ಟಿ ಅಭಿನಂದನ ಸಮಿತಿ ಹಮ್ಮಿಕೊಂಡ ಅಭಿನಂದನ ಸಮಾರಂಭ ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮಾತನಾಡಿ, ಆಂಗ್ಲ ಪ್ರಾಧ್ಯಾಪಕರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಅವರ ಕೊಡುಗೆ ಅನನ್ಯ. ಕಥೆ, ಕಾವ್ಯ, ಸಂಶೋಧನೆ, ಜೀವನ ಚರಿತ್ರೆ ಮತ್ತು ಅನುವಾದದ ಮೂಲಕ ಸಾಹಿತ್ಯದ ಕೃಷಿಯನ್ನು ಮಾಡಿ ಅಮೋಘ ಸಾಧನೆ ಮಾಡಿದ್ದಾರೆ. ಅವರ ಈ ಅವಿರತ ಪರಿಶ್ರಮದಿಂದಲೇ ಇಂದು ಅವರು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಒದಗಿ ಬಂದಿದ್ದು ಸಿಂದಗಿ ನೆಲೆಗೆ ಹೆಮ್ಮೆಯ ಗರಿ. ಒಟ್ಟಿನಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಬದುಕು, ಬರಹ ಮತ್ತು ಆಡಳಿತ ಕಾರ್ಯವೈಖರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.
ಈ ವೇಳೆ ನೆಲೆ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿದ ಬೆಂಗಳೂರಿನ ಸಂಸ್ಕೃತಿ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನೆಲೆ ಎನ್ನುವ ಹೆಸರೇ ಚನ್ನಪ್ಪ ಕಟ್ಟಿ ಅವರ ಅಸ್ಮಿತೆ. ಅವರ ಇಡೀ ಬದುಕು ಮತ್ತು ಸಾಹಿತ್ಯ ಚಟುವಟಿಕೆಗೆ ಒಂದು ನೆಲೆ ಸಿಕ್ಕಿರುವುದೇ ಈ ನೆಲೆ ಎನ್ನುವ ಶಬ್ದ ಅವರ ವ್ಯಕ್ತಿತ್ವದ ಗುಣವಾಗಿದೆ. ಸ್ವಾಹಿತ ಮತ್ತು ಸಮಾಜ ಹಿತಕ್ಕಾಗಿ ಕಾರ್ಯ ಮಾಡಿದಾಗ ಮಾತ್ರ ಅದು ಸತ್ಯ ಶುದ್ಧ ಕಾಯಕ. ೫ ಭಾಗಗಳಾಗಿ ಈ ಕೃತಿಯನ್ನು ರಚನೆ ಮಾಡಲಾಗಿದೆ.
ಇದು ನೆಲೆ ೧೦೦ರೊಳಗಿನ ಒಂದಲ್ಲ. ಇದೊಂದು ವಿಶೇಷ ಅಭಿನಂದನಾ ಗ್ರಂಥವಾಗಿದೆ. ಅಕ್ಷರ ಮಾಧ್ಯಮ ಆಚೆಗಿನ ಮಾತುಗಳನ್ನು ಕಥೆಯ ರೂಪದಲ್ಲಿ ತರಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅಭಿನಂದನಾ ನುಡಿಗಳನ್ನಾಡಿದರು. ಡಾ.ಅರವಿಂದ ಮನಗೂಳಿ, ಅಭಿನಂದನ ಗ್ರಂಥದ ಗೌರವ ಸಂಪಾದಕ ಡಾ.ಶ್ರೀರಾಮ ಇಟ್ಟಣ್ಣವರ ಮಾತನಾಡಿ ದರು. ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಗಮೇಶ ಮೇತ್ರಿ ಸಂಪಾದಿಸಿದ ಅಮೋಘಸಿದ್ಧ ಜನಪದ ಮಹಾಕಾವ್ಯ ಸಾಂಸ್ಕೃತಿಕ ಮುಖಾಮುಖಿ ಗ್ರಂಥವನ್ನು ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಚನ್ನಪ್ಪ ಕಟ್ಟಿ ಅವರ ವಿಮರ್ಶಾ ಸಂಕಲನ ಒಕ್ಕಣೆಯನ್ನು ವಿಪ ಮಾಜಿ ಸದಸ್ಯ ಅರುಣ ಶಹಾಪೂರ ಬಿಡುಗಡೆಗೊಳಿ ಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಶಿವಾ ಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷರು, ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾ ರ್ಯರು, ಸಮ್ಮುಖವನ್ನು ಹಾಲುಮತ ಗುರುಪೀಠ ಅಗತೀರ್ಥದ ಸರೂರದ ರೇವಣಸಿದ್ದೇಶ್ವರ ಶಾಂತಮ ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ವಿಜಯಪುರ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ, ಪ್ರಧಾನ ಸಂಪಾದಕ ಡಾ.ಎಂ.ಎA. ಪಡಶೆಟ್ಟಿ, ಡಾ.ಸಂಗಮೇಶ ಮೇತ್ರಿ, ಡಾ.ಚನ್ನಪ್ಪ ಕಟ್ಟಿ, ಪತ್ನಿ ಸರೋಜಾ ಕಟ್ಟಿ, ಎಂ.ಎಸ್.ಹೈಯ್ಯಾಳಕರ, ಶಿವಪ್ಪ ಗವಸಾಯಿ, ಬಿ.ಎಸ್.ಹಣಮಶೆಟ್ಟಿ, ಚಿದಂಬರ ಬಂಡಗಾರ, ಡಾ.ರವಿ. ಗೋಲಾ, ಡಾ.ಶರಣಬಸವ ಜೋಗುರ, ಶಿವಾನಂದ ಕಲಬುರ್ಗಿ ಸೇರಿದಂತೆ ಅವರ ಗೆಳೆಯರ ಬಳಗ, ಶಿಷ್ಯ ಬಗಳ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ: ಬೆಳಿಗ್ಗೆ ೧೦ಗಂಟೆಗೆ ಡಾ.ಚನ್ನಪ್ಪ ಕಟ್ಟಿ ಸಾಹಿತ್ಯ ಮುಖಾಮುಖಿ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮಕ್ಕಳ ಸಾಹಿತಿಗಳಾದ ಹ.ಮ.ಪೂಜಾರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಥಣಿಯ ಕತೆಗಾರ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅವರು ಡಾ.ಚನ್ನಪ್ಪ ಕಟ್ಟಿ ಅವರ ಕತೆಯ ಕುರಿತು ಮಾತನಾಡಿದರು. ಬೆಂಗಳೂರಿನ ವಿಮರ್ಶಕಿ ಎನ್.ಆರ್.ಲಲಿತಾಂಬಾ ಕಟ್ಟಿ ಅವರ ಕಾವ್ಯ ಕುರಿತು, ತಿಪಟೂರಿನ ಅನುವಾದಕ ಬರಹಗಾರ ಎಸ್. ಗಂಗಾಧರಯ್ಯ ಅನುವಾದ ಕುರಿತು, ಹಂಪಿ ಕನ್ನಡ ವಿಶ್ವವಿದ್ಯಾಯದ ಸಂಶೋಧಕ ಡಾ.ಎಫ್.ಟಿ.ಹಳ್ಳಿಕೇರಿ ಅವರು ಕಟ್ಟಿ ಸಂಶೋಧನೆ ಕುರಿತಾಗಿ ಮಾತನಾಡಿ ದರು. ಮುಖ್ಯ ಅತಿಥಿಗಳಾಗಿ ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಸೇರಿದಂತೆ ಇತರರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಶ್ರಮಜೀವಿಗಳಿಗೆಂದೇ ಮೀಸಲಾದ ದಿನ ಕಾರ್ಮಿಕರ ದಿನ : ಸಿದ್ರಾಮ ಕಾಸೆ
ಕಾರ್ಮಿಕರು ಜಗತ್ತಿನ ಆಸ್ತಿ. ಕಾರ್ಮಿಕರಿಲ್ಲದ ಜಗತ್ತನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ. ಇಂತಹ ಶ್ರಮಜೀವಿಗಳನ್ನು ಗೌರವಿಸುವ, ಅವರ ಸೇವೆಯನ್ನು ಸ್ಮರಿಸುವ ದಿನವಾಗಿ ಪ್ರತಿವರ್ಷ `ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ವನ್ನು ಆಚರಿಸಲಾಗುತ್ತದೆ ಎಂದು ರವಿ ಇಂಡಸ್ಟ್ರೀಸ್ ಮಾಲೀಕರಾದ ಸಿದ್ರಾಮ ಕಾಸೆ ಹೆಳಿದರು.
ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ಯವಾಗಿ ಕಾರ್ಮಿಕರಿಗೆ ಸಿಹಿ ವಿತರಿಸಿ ಶಾಲು ಹೊದಿಸಿ ಸನ್ಮಾನಿಸದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮೇ 1 ಅಂತಾರಾಷ್ಟ್ರೀಯ ಕಾರ್ಮಿಕರ ದಿನ. ಇದು ಶ್ರಮಜೀವಿಗಳಿಗೆಂದೇ ಮೀಸಲಾದ ದಿನ. ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಾರೆ. ಇಂತಹ ಶ್ರಮಜೀವಿಗಳ ಪ್ರಯತ್ನ, ಕೆಲಸದಲ್ಲಿಯೇ ದೇಶದ ಅಭಿವೃದ್ಧಿಯಡಗಿದೆ. ಹೀಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ಗೌರವಿಸುವ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ನಮ್ಮ ಕರ್ತವ್ಯವಾಗಿದೆ ಎಂದರು.
ನೇತಾ, ಬಡಕನ, ಬುಲಾಯಿ, ಗೋಪಾಲ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಸವರಾಜ ಮಲಘಾಣ, ಉಮೇಶ ಶಿವಶರಣ, ಸುರೇಶ ಜಾಧವ, ಶ್ರೀನಿವಾಸ ವಾಘ್ಮೋರೆ, ಶ್ರೀಕಾಂತ ಬಂಡಿವಡ್ಡರ, ಭೀಮಶಿ, ಗೋವಿಂದ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಸಾಹಿತ್ಯದ ಕಿನ್ನುರಿ ನುಡಿಸಿದ ಡಾ.ಚನ್ನಪ್ಪ ಕಟ್ಟಿ ಅವರಿಗೆ "ನೆಲೆ" ಅಭಿನಂದನಾ ಗ್ರಂಥ ಸಮರ್ಪಣೆ:
ಸೃಜನಶೀಲತೆಯೇ ಜೀವಾಳವಾಗಿಸಿಕೊಂಡ ಕನ್ನಡದ ಅಪರೂಪದ ಲೇಖಕರಲ್ಲಿ ಡಾ. ಚನ್ನಪ್ಪ ಕಟ್ಟಿ ಅವರು ಕೂಡಾ ಒಬ್ಬರು, ಸಿಂದಗಿ ಎಂಬ 'ಅರೆ ನಗರಿ' ಯಲ್ಲಿ ನೆಲೆ ನಿಂತು, ಕಾವ್ಯದ ಮೂಲಕ ಸಾಹಿತ್ಯದ ಯಾನವನ್ನು ಪ್ರಾರಂಭಿಸಿ ಕಥೆ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಸಂಪಾದನೆ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅನೂಹ್ಯವಾದ ಕಾರ್ಯ ಮಾಡಿ ಮೌನ ಸಾಧಕರಾದ ಡಾ. ಚನ್ನಪ್ಪ ಕಟ್ಟಿ ಅವರು ಅಪ್ಪಟ ಗ್ರಾಮೀಣ ಪ್ರತಿಭೆ, ತಮ್ಮ ಗ್ರಾಮ ಬದುಕಿನ ಸಶಕ್ತ ಅನುಭವಗಳಿಗೆ ಸಾಹಿತ್ಯದ ಆಧುನಿಕ ಚಿಂತನಾ ದಾರಿಯನ್ನು ತಂದು ಜೋಡಿಸುವ ಮೂಲಕ ಬರಹಕ್ಕೆ ಹೊಸ ಮೆರುಗನ್ನು ತಂದುಕೊಟ್ಟವರು.
ಸಿಂದಗಿಯ ನಿವಾಸಿಯಾದ ಡಾ. ಚನ್ನಪ್ಪ ಕಟ್ಟಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಕೊನೆಯ ಸಣ್ಣ ಹಳ್ಳಿ ಹಿರೇಹಾಳ ಗ್ರಾಮದವರು, ಕೃಷಿಯನ್ನೇ ಅವಲಂಬಿಸಿದ ಕನಕಪ್ಪ ಮತ್ತು ವೆಂಕವ್ವ ನವರ ಆರನೆಯ ಮಗನಾಗಿ ಮೇ 1, 1956 ರಲ್ಲಿ ಜನಿಸಿ ಅಲ್ಲಿಯೇ ಪ್ರಾಥಮಿಕ ಶಿಕ್ಷಣ, ಬಾದಾಮಿಯಲ್ಲಿ ಮಾಧ್ಯಮಿಕ ಮತ್ತು ಪದವಿಪೂರ್ವ ಶಿಕ್ಷಣವನ್ನು ಪಡೆದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ, 1979 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಭಾಷಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಅದೇ ವರ್ಷವೇ ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ. ಪಿ ಪೋರವಾಲ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯನ್ನು ಪ್ರಾರಂಭಿಸಿದರು ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿರುವರು, ಒಟ್ಟು ಮೂವತ್ತೇಳು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯವನ್ನು ಮನ ಮುಟ್ಟುವಂತೆ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪೂಜ್ಯ ಗುರುಗಳಾಗಿ, ಮಾರ್ಗದರ್ಶಕರಾಗಿ ಇವತ್ತಿಗೂ ಶಿಷ್ಯ ಬಳಗವನ್ನು ಪ್ರೋತ್ಸಾಹಿಸುತ್ತಲೇ ಸಾಗಿದ್ದಾರೆ.
ಡಾ. ಚನ್ನಪ್ಪ ಕಟ್ಟಿ ಅವರದ್ದು ಸುಖೀ ಹಾಗೂ ಸುಂದರ ಕುಟುಂಬ, 1985 ರಲ್ಲಿ ಸರೋಜಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು, ಸಚಿನ್ ಮತ್ತು ಸುಮಾ ಎಂಬ ಇಬ್ಬರು ಮಕ್ಕಳನ್ನು ಪಡೆದ ಚನ್ನಪ್ಪ ಕಟ್ಟಿ ಹಾಗೂ ಸರೋಜಾ ಅವರು ಇಂದು ಅಜ್ಜ ಅಜ್ಜಿಯಾಗಿ ಮೊಮ್ಮಕ್ಕಳಾದ ಧೃತಿ ಮತ್ತು ಅವ್ಯುಕ್ತ ರವರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಸಾಹಿತ್ಯದ ವಾತಾವರಣವೇ ಇಲ್ಲದ ಕುಟುಂಬದ ಪರಿಸರದಲ್ಲಿ ಬೆಳೆದ ಬಂದ ಕಟ್ಟಿ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳು ಸಾಹಿತ್ಯದ ದಾರಿಗೆ ಕರೆದುಕೊಂಡು ಬಂದರೆ, ಅಣ್ಣ ನ ಉಸ್ತುವಾರಿಕೆ ಉನ್ನತ ಶಿಕ್ಷಣ ನೀಡಿತು, ಧಾರವಾಡದ ಗಾಳಿ ಸಾಹಿತ್ಯದ ರುಚಿ ತೋರಿಸಿತು , ಸಿಂದಗಿಯ ಜಾನಪದ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಡಾ. ಎಂ ಎಂ ಪಡಶೆಟ್ಟಿ ಅಪರಿಮಿತ ಗೆಳೆಯರಾಗಿ ದೊರೆತು ಸಾಹಿತ್ಯವು ಹುಲುಸಾಗಿ ಬೆಳೆಯಲು ಸಾಧ್ಯವಾಯಿತು.
ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಗೆಳೆಯರಾದ ನಾಗೇಶ್ ರಾಂಪೂರ ಅವರೊಂದಿಗೆ ಸೇರಿಕೊಂಡು " ಎರಡು ಸೆಲೆ, ಒಂದು ನೆಲೆ " ಕವನ ಸಂಕಲನ ಪ್ರಕಟಿಸಿ ಆಧುನಿಕ ಬದುಕಿಗೆ ಮುಖ ಮಾಡಿರುವ ಮನುಷ್ಯನ ಒಳ ತುಮುಲಗಳನ್ನು ತೆರದು ತೋರುವ ಪ್ರಯತ್ನಕ್ಕೆ ಮುನ್ನುಡಿ ಬರೆದರು, " ಇಂಡಿಯಾದಲ್ಲಿ", " ನೆನಪುಗಳು ಸಾಯುವುದಿಲ್ಲ", " ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ", " ಬೇರು - ಚಿಗುರು" , " ಓಡುವ ಪಾದ, ಕಾಡುವ ಸರಪಳಿ" ಕವಿತಾ ಸಂಕಲನಗಳಲ್ಲಿ ' ಸಾಮಾಜಿಕ ನ್ಯಾಯಕ್ಕಾಗಿ ಸದಾ ಹಂಬಲಿಸುವ ತಮ್ಮ ಧ್ವನಿಯನ್ನು ಮಾರ್ದನಿಸುವಂತೆ ಚಿತ್ರಿಸಿರುವುದನ್ನು ಕಾಣಬಹುದಾಗಿದೆ " ಹೇಳಲೇಬೇಕಾದುದನ್ನು ಹೇಳುವ ಸಲುವಾಗಿ, ಹೇಳಲಾಗದನ್ನು ಹೇಳಿಯೇ ತೀರುವ ಸಲುವಾಗಿ " ಬರೆಯುವೆ ಎನ್ನುವ ಅವರ ಮಾತು ಆಪ್ತವೆಸುತ್ತದೆ.
ಕಾವ್ಯದೊಳಗಿದ್ದು ಕಥೆಯ ಕಡೆಗೆ ಕಣ್ಣು ಹಾಯಿಸಿದ ಕಟ್ಟಿ ಅವರು " ಮುಳುಗಡೆ ಮತ್ತು ಇತರ ಕಥೆಗಳು", " ಬೆಂಕಿ ಇರದ ಬೆಳಕು", ಹಾಗೂ " ಏಕತಾರಿ" ಕಥಾ ಸಂಕಲನಗಳ ಮೂಲಕ ಗ್ರಾಮೀಣ ಪರಿಸರ, ಅಲ್ಲಿನ ಸಂಘರ್ಷ, ಶೋಷಣೆ, ಶ್ರೀಮಂತಿಕೆಯ ಅಮಲು, ಹೆಣ್ಣೆ ಮಕ್ಕಳ ಅಸಹಾಯಕತೆ, ಜಗಳ ಈರ್ಷೆ, ಹಾದರ, ಮಹಿಳೆಯರ ದಿಟ್ಟತನ, ಪ್ರೀತಿ- ಪ್ರಣಯ- ಸಂಬಂಧ ಗಳ ಕುರಿತಾಗಿ ಗಾಢವಾಗಿ ಪರಿಣಾಮ ಬೀರುವ ಹಾಗೆ ಕಾವ್ಯಾತ್ಮಕ ಭಾಷೆಯಲ್ಲಿ ರೂಪಿತಗೊಂಡ ಕಥೆಗಳು ಕನ್ನಡದ ಕಥನ ಲೋಕವನ್ನು ಇನ್ನಷ್ಟು ವಿಸ್ತರಿಸಿ ಮನುಷ್ಯ ಸಂಬಂಧಗಳನ್ನು ಹಾಗೂ ಸಮುದಾಯದ ಧಾರಣ ಶಕ್ತಿಯ ಮೇಲಿರುವ ವಿಶ್ವಾಸ ಮತ್ತು ನಂಬಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ ಹೀಗಾಗಿ ಕಟ್ಟಿ ಅವರ ಕಥೆಗಳನ್ನು ಓದಲು ಓದುಗ ಹಾಗೂ ವಿಮರ್ಶಕ ಒಟ್ಟಿಗೆ ಕಾತುರತೆಯಿಂದ ಕಾಯುವರು.
ಸಾಹಿತ್ಯ ಮತ್ತು ಸಾಂಸ್ಕೃತಿಕಯ ಕುರಿತಾಗಿ ತೀವ್ರ ತುಡಿತ ಹೊಂದಿರುವ ಕಟ್ಟಿ ಅವರು "ಸಾರಣೆ", " ಕುಯಿಲು", " ಶಬ್ದ ಸೋಪಾನ", " ಒಕ್ಕಣೆ", ವಿಮರ್ಶಾ ಕೃತಿಗಳ ಮೂಲಕವೂ ತಮ್ಮ ಓದಿನ ಹರವನ್ನು ಬಿಚ್ಚಿಟ್ಟು, ಕಾವ್ಯ, ಕಥೆಗಳು ಹಾಗೂ ಸೃಜನಶೀಲ ಆಶೆಯದ ಬರಹದ ಒಳ ಸುಳಿವುಗಳ ಮರ್ಮ ಹೇಗಿರಬೇಕೆಂಬುದರ ಕುರಿತಾಗಿ ಚರ್ಚಿಸಿ ಕನ್ನಡ ವಿಮರ್ಶೆಗೆ ಹೊಸತಾದ ದಾರಿಯೊಂದನ್ನು ರೂಪಿಸಿಕೊಟ್ಟಿರುವರು.
" ಚೆನ್ನುಡಿ" - ಮುನ್ನುಡಿ ಬೆನ್ನುಡಿ ಅಭಿಪ್ರಾಯಗಳ ಸಂಕಲನ, " ಕಸವರಮೆಂಬುದು" - ವೈಚಾರಿಕ ಲೇಖನಗಳ ಸಂಕಲನ, " ಬಬಲೇಶ್ವರ ಶಾಂತವೀರ ಪಟ್ಟಾಧ್ಯಕ್ಷರು", " ಇಟಗಿ ಶ್ರೀ ಭೀಮಾಂಬಿಕೆ" - ಜೀವನ ಚರಿತ್ರೆಗಳು, " ನೆನಹು ಮಂದಾರ" - ವ್ಯಕ್ತಿಗಳ ಕಿರು ಜೀವನ ಚರಿತ್ರೆಗಳು ಈ ಕೃತಿಗಳ ಮೂಲಕ ಡಾ. ಚನ್ನಪ್ಪ ಕಟ್ಟಿ ಕನ್ನಡದ ಸಾಂಸ್ಕೃತಿಕ ಲೋಕದ ಕಾಳಜಿಯನ್ನು ಎತ್ತಿ ತೋರಿಸಿದ್ದಾರೆ
ಕಾವ್ಯ, ಕಥೆ ಹಾಗೂ ವಿಮರ್ಶಾಯಲ್ಲಿ ದಾಪುಗಾಲು ಇಡುತ್ತಲೇ ಡಾ. ಕಟ್ಟಿ ಅವರು ಸಂಶೋಧನಾ ಕ್ಷೇತ್ರಕ್ಕೂ ತಮ್ಮ " ಅಮೋಘಸಿದ್ದ ಪರಂಪರೆ " ಸಂಶೋಧನಾ ಕೃತಿಯ ಮೂಲಕ ಹೊಸ ಬೆಳಕನ್ನು ತಂದು ಚೆಲ್ಲಿರುವರು, ಸಂಶೋಧಕರಿಗೆ ಮಾದರಿಯಾದ ಈ ಮಹಾಪ್ರಬಂಧ ಅಕ್ಷರ ಇತಿಹಾಸದ ಹೊರಗಿರುವ ಸಿದ್ದರ, ಸಂತರ, ಅನುಭಾವಿಗಳ ಹಾಗೂ ಆರೂಢರ ಪರಂಪರೆಗಳ ಅಧ್ಯಯನಕ್ಕೆ ಮಾರ್ಗಿ ಆಗಿದೆ
" ಅಮೋಘಸಿದ್ದ ಜನಪದ ಮಹಾಕಾವ್ಯ", " ಕುರುಬ ಮಹಿಳೆ", " ಕುರುಬ ಸಮುದಾಯದ: ವಿದೇಶಿ ವಿದ್ವಾಂಸರ ಅಧ್ಯಯನಗಳು", " ಸೀತಾಳ ಬಿಂದಿಗೆ " ಈ ಕೃತಿಗಳು ಡಾ. ಚನ್ನಪ್ಪ ಕಟ್ಟಿ ಅವರು ಹಾಲುಮತ ಸಂಬಂಧಿ ಕೃತಿಗಳು, ಸಾಹಿತ್ಯ ಸಮ್ಮೇಳನದ, ಸಂಘ ಸಂಸ್ಥೆಗಳ ಸ್ಮರಣಯ ಗ್ರಂಥಗಳನ್ನು ಹಾಗೂ ನಾಡಿನ ಹತ್ತಾರು ಹಿರಿಯ ಲೇಖಕರ ಅಭಿನಂದನಾ ಗ್ರಂಥಗಳಿಗೂ ಕೂಡಾ ಸಂಪಾದಕರಾಗಿ ಅಮೂಲ್ಯವಾದ ಕೃತಿಗಳನ್ನು ಈ ನಾಡಿಗೆ ನೀಡಿರುವುದು ಸ್ಮರಣೀಯವಾಗಿದೆ.
ಸೃಜನಶೀಲತೆಯನ್ನು ಕಾಪಿಟ್ಟುಕೊಂಡ ಡಾ. ಚನ್ನಪ್ಪ ಕಟ್ಟಿ ಅವರಿಗೆ ಹೊಸತೇನಾದರೂ ನೀಡಬೇಕೆಂಬ ಹಂಬಲ ಯಾವತ್ತೂ ಅವರಲ್ಲಿ ಜಂಗಮತ್ವವನ್ನು ಪಡೆದುಕೊಂಡದೆ ಇದಕ್ಕೆ ಸಾಕ್ಷಿ ಎಂಬಂತೆ ಅವರ ಅನುವಾದ ಕೃತಿಗಳಾದ " ಸ್ಕಾರ್ಲೆಟ್ ಪ್ಲೇಗ ( ಕಾದಂಬರಿ), " ಯುದ್ಧ ಕಾಲದ ಹುಡುಗಿಯರು" ( ಕಥಾ ಸಂಕಲನ), " ಮೃತ್ಯು ಮುಟ್ಟದ ಮುನ್ನ "( ಸಾವ ಧೇನಿಸುವ ಕವಿತೆಗಳು), " ಕುವರಿಯಾದೊಡೆ ಕುಂದೇನು?" ( ಏಳು ಏಕಾಂಕ ನಾಟಕಗಳು) ಕೃತಿಗಳು ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುವಲ್ಲಿ ಸಫಲತೆಯನ್ನು ಸಾಧಿಸಿವೆ.
ರಾಜಧಾನಿಯಿಂದ ಐದುನೂರಾದ ಮೂವತ್ತು ಹಾಗೂ ಸಾಂಸ್ಕೃತಿಕ ನಗರಿ ಧಾರವಾಡದಿಂದ ಎರಡು ನೂರದಾ ಐವತ್ತು ಕಿಲೋಮೀಟರ್ ದೂರದಲ್ಲಿರುವ ಸಿಂದಗಿ ಪಟ್ಟಣದಲ್ಲಿ ಠಿಕಾಣಿ ಹೂಡಿದ ಚನ್ನಪ್ಪ ಕಟ್ಟಿ ಅವರು ಡಾ. ಎಂ ಎಂ ಪಡಶೆಟ್ಟಿ ಹಾಗೂ ನಾಗೇಶ್ ರಾಂಪೂರ ಅವರೊಂದಿಗೆ ಸೇರಿಕೊಂಡು ಸಿಂದಗಿಯ ಸಾಂಸ್ಕೃತಿಕ ಚಹರೆಯನ್ನು ಬದಲಿಸಿ, ನೆಲೆ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಎಪ್ಪತ್ತಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿ ಕಿರಿಯ ಲೇಖಕರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿ ಕೊಡುವಲ್ಲಿ ಸಫಲರಾಗಿದ್ದಾರೆ, ಬೋಧನೆ, ಬರವಣಿಗೆ ಮತ್ತು ಆಡಳಿತ ವನ್ನು ತಮ್ಮ ಪ್ರಾಮಾಣಿಕ ನಡೆಯ ಮೂಲಕ ನ್ಯಾಯ ಒದಗಿದ ಕಟ್ಟಿ ಅವರದು ಬಹುಮುಖ ವ್ಯಕ್ತಿತ್ವ , ಯಾವಾಗಲೂ ಗೋಜು ಮತ್ತು ಗದ್ದಲಗಳ ಆಚೆ ನಿಂತು ತಮ್ಮ ನಿತಾಂತ ಸಂಯಮದಿಂದ ಪ್ರತಿಯೊಂದನ್ನು ಅವಲೋಕಿಸಿ ನಿರ್ಣಯಿಸುವ ಇವರ ನಡೆ ನಿಧಾನವಾದರೂ ಪ್ರಧಾನವಾಗಿದೆ.
ಡಾ. ಚನ್ನಪ್ಪ ಕಟ್ಟಿ ಅವರು ಇದುವರೆಗೂ ಸುಮಾರು ನಾಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಎಲ್ಲಾ ಕೃತಿಗಳು ಕನ್ನಡ ನಾಡಿಗೆ ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಟ್ಟಿವೆ, ಡಾ. ಕಟ್ಟಿ ಅವರು ತಮ್ಮ ಕಾವ್ಯ ಭಾಷೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಧ್ವನಿಯೊಂದನ್ನು ತಂದು ಸೇರಿಸಿದ್ದಾರೆ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಚನ್ನಪ್ಪ ಕಟ್ಟಿ ಅವರ ಸಾಹಿತ್ಯದ ಈ ಸುದೀರ್ಘ ಪಯಣದ ಹಾದಿಯಲ್ಲಿ ಕಟ್ಟಿ ಅವರನ್ನು - ಜಯತೀರ್ಥ ರಾಜಪುರೋಹಿತ ದತ್ತಿನಿಧಿ ಸಣ್ಣ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ, ಸಂಕ್ರಮಣ ಕಾವ್ಯ ಪ್ರಶಸ್ತಿ, ಎಚ್ ಎಂ ಟಿ ಕಥಾ ಪ್ರಶಸ್ತಿ, ಮಲ್ಲೇಪುರಂ ಜಿ. ವೆಂಕಟೇಶ ಸಾಂಸ್ಕೃತಿಕ ಪ್ರತಿಷ್ಠಾನದ ಬಿ. ಶ್ಯಾಮಸುಂದರ ಪ್ರಶಸ್ತಿ, ರತ್ನಾಕರವರ್ಣಿ - ಮುದ್ದಣ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಬೆಟದೂರು ಅಮರಮ್ಮ ಚೆನ್ನಬಸಪ್ಪ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಪುಸ್ತಕ ಬಹುಮಾನ, ಡಾ. ಬಸವರಾಜ ಕಟ್ಟಿಮನಿ ಕಥಾ ಪ್ರಶಸ್ತಿ, ಸ್ವಾಭಿಮಾನಿ ಕನ್ನಡ ಬಳಗ ಪುಸ್ತಕ ಬಹುಮಾನ, ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, " ಊರ್ಧರೇತ" ಕಿರು ಚಲನಚಿತ್ರದ ಕಥೆಗೆ ಉತ್ತರ ಕರ್ನಾಟಕ ಇಂಟರ್ ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ 2022 ಟೆಲೆ ಫಿಲ್ಮ್ ಬೆಸ್ಟ್ ಸ್ಟೋರಿ ಅವಾರ್ಡ್ ಗಳು ಹುಡುಕಿಕೊಂಡು ಬಂದಿವೆ.
ಸಿಂದಗಿ ನೆಲೆ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿ , ವಿಜಯಪುರದ ಕಲಬುರಗಿ ಫೌಂಡೇಶನ್ ದ ಸದಸ್ಯ, ಹಲಸಂಗಿ ಪ್ರತಿಷ್ಠಾನದ ಸದಸ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕನ್ನಡ ಭಾಷೆಯನ್ನು ನವೀನವಾಗಿ ಕಟ್ಟುವಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿರುವರು ಎಲ್ಲಕ್ಕೂ ಮಣಿಮುಕುಟದಂತೆ ಸದ್ಯ ಕರ್ನಾಟಕದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೆಂಗಳೂರು ವಲಯದಲ್ಲಿ ಉತ್ತರ ಕರ್ನಾಟಕದ ಸಿಂದಗಿಯ ಸೊಗಡನ್ನು ತಮ್ಮ ಬರಹ ಮಾತು ಮತ್ತು ಆಡಳಿತದ ಮೂಲಕ ಸಾದರ ಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಒಟ್ಟಾರೆ ಡಾ. ಚನ್ನಪ್ಪ ಕಟ್ಟಿ ಅವರ ಬದುಕು, ಬರಹ ಮತ್ತು ಆಡಳಿತದ ಹರಿವು ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಸಮೃದ್ಧಗೊಳಿಸಿವೆ, ಇವರ ಚಿಂತನೆ ಮತ್ತು ವಿಚಾರಗಳು, ಕಾರ್ಯವೈಖರಿ ಹೊಸ ಬರಹಗಾರರಿಗೆ ಹೊಸ ವಿವೇಕವನ್ನು ತುಂಬುವ ಈ ಸಂದರ್ಭದಲ್ಲಿಯೇ ಅವರಿಗೀಗ ಎಪ್ಪತ್ತು ವರ್ಷ ಈ ಸಂದರ್ಭದಲ್ಲಿ ಅವರ ಶಿಷ್ಯ ಬಳಗ ಮತ್ತು ಅಭಿಮಾನಿಗಳು ಸೇರಿ ಸಿಂದಗಿಯಲ್ಲಿ ಇದೇ ಮೇ 1 ನೇ ತಾರೀಖಿನಂದು "ನೆಲೆ" ಎನ್ನುವ ಅಭಿನಂದನಾ ಗ್ರಂಥ ಅರ್ಪಿಸುವ ಮೂಲಕ ಅವರ ಎಪ್ಪತ್ತನೇಯ ವರ್ಷದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
- ಮನು ಪತ್ತಾರ, ಕಲಕೇರಿ
ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.









.jpg)



