ವಿಜಯಪುರ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ವಿಜಯಪುರ ರೀಜನ್ ವತಿಯಿಂದ ನಗರದ ಆನಂದನಗರದಲ್ಲಿರುವ ಭಾವಸಾರ ಕ್ಷತ್ರೀಯ ಮಂಗಲ ಕಾರ್ಯಾಲಯದಲ್ಲಿ ಬೃಹತ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜೋನಲ್ ಬಿಸಿನೆಸ್ ಹೆಡ್ ಚೆನ್ನನಗೌಡ ಎಚ್. ಮಾತನಾಡಿ, ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ವಿದ್ಯಾರ್ಥಿವೇತನ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
1974ರಲ್ಲಿ ಆರಂಭಗೊಂಡ ಸಂಸ್ಥೆ, 1979ರಲ್ಲಿ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಆಗಿ ಕಾರ್ಯನಿರ್ವಹಿಸಿ, ಇದೀಗ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಗಿ ದೇಶದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಸಂಸ್ಥಾಪಕ ಪದ್ಮಭೂಷಣ ಆರ್. ತ್ಯಾಗರಾಜನ್ ಅವರ ದೂರದೃಷ್ಟಿಯಂತೆ ಚಾಲಕರು ಹಾಗೂ ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯಕ್ಕೆ ಸಂಸ್ಥೆ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಲಾರಿ ಹಾಗೂ ಟ್ರಕ್ ಚಾಲಕರು, ಕ್ಲೀನರ್‌ಗಳು ತಮ್ಮ ವೃತ್ತಿಯ ನಿಮಿತ್ತ ಸದಾ ಊರೂರು ಸಂಚರಿಸುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅವರ ವಿದ್ಯಾಭ್ಯಾಸ ಮುಂದುವರಿಸಲು ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಆಶಯದಿಂದ ದೇಶಾದ್ಯಂತ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ವಿದ್ಯಾರ್ಥಿವೇತನ ನೀಡುತ್ತಿದೆ ಎಂದರು.
8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಹಾಗೂ ಪಿಯುಸಿ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,500 ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕನಿಷ್ಠ ಶೇ.60 ಅಂಕ ಗಳಿಸುವ ಅರ್ಹ ವಿದ್ಯಾರ್ಥಿಗಳಿಗೆ ಈ ನೆರವನ್ನು ನಿರಂತರವಾಗಿ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಶ್ರೀರಾಮ್ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನದ ಜತೆಗೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಿವುಡ ಮಕ್ಕಳ ಶಾಲೆ ನಡೆಸುವುದು, ವೃದ್ಧಾಶ್ರಮಗಳ ನಿರ್ವಹಣೆ, ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಅಂಧ ಮಕ್ಕಳಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆ ನಡೆಸುತ್ತಿದೆ ಎಂದು ತಿಳಿಸಿದರು.
ಮಸೂತಿಯ ಜಗದೀಶ್ವರ ಹಿರೇಮಠದ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಹಿರಿಯ ವೈದ್ಯ ಡಾ. ಎಲ್.ಎಚ್. ಬಿದರಿ ಮಾತನಾಡಿ, ಶ್ರೀರಾಮ್ ಫೈನಾನ್ಸ್ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು, ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಆರ್ಥಿಕ ನೆರವು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೊರೆತಿರುವ ಉತ್ತಮ ಅವಕಾಶವಾಗಿದ್ದು, ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಹೊಸೂರ, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ವಿ.ಡಿ.ಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಸದಸ್ಯೆ ರಶ್ಮಿ ಬಿ. ಕೋರಿ, ಲಾರಿ ಅಸೋಸಿಯೇಶನ್ ಅಧ್ಯಕ್ಷ ಆಸೀಫ್ ಎಲ್. ಬಗಲಿ (ಪಟ್ಟೇಲ), ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಚ್.ಆರ್. ಚಿಂಚಲಿ ಭಾಗವಹಿಸಿದ್ದರು.
ವಿಜಯಪುರ ರೀಜನಲ್ ಬಿಸಿನೆಸ್ ಹೆಡ್ ಉಮೇಶ ಬಿರಾದಾರ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿದ ಎಲ್ಲ ಅತಿಥಿ-ಗಣ್ಯರನ್ನು, ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಸ್ವಾಗತಿಸಿ ಸತ್ಕರಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment