ವಿಜಯಪುರ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ತೀವ್ರ ಬರಪರಿಸ್ಥಿತಿ ನಿರ್ಮಾಣವಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣವೇ ‘ಬರಪೀಡಿತ ತಾಲೂಕುಗಳು’ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಂಡಿಗೇರಿ ಅವರ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ರೈತ ಮುಖಂಡರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು ಧರಣಿಗೆ ಬೆಂಬಲ ಸೂಚಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಯಾವುದೇ ವಿಳಂಬವಿಲ್ಲದೆ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
13 ತಾಲೂಕುಗಳಿಗೂ ಬರಪೀಡಿತ ಸ್ಥಾನಮಾನ: ಮಳೆ ಕೊರತೆ ಹಾಗೂ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣ ಅಧಿಕೃತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಬೆಳೆ ಪರಿಹಾರ ಬಿಡುಗಡೆ: ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಬೆಳೆ ಪರಿಹಾರಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಲಭ್ಯವಾಗುವಂತೆ ತಾಲೂಕುವಾರು ಮೇವಿನ ಬ್ಯಾಂಕ್‌ಗಳನ್ನು ತೆರೆಯಬೇಕು. ಸಾಲ ವಸೂಲಾತಿ ತಡೆ: ಬರಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ವಸೂಲಾತಿಯನ್ನು ತಕ್ಷಣ ತಡೆಹಿಡಿದು, ಸಾಲ ಮರುಪಾವತಿಗೆ ಸೂಕ್ತ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಬಿ.ಜಿ. ಪಾಟೀಲ, ಮುಖಂಡರಾದ ಸೋಮವಾರ ಪಾಟೀಲ, ಪಂಚಪ್ಪ ಕಲಬುರ್ಗಿ, ಖಾದ್ರಿ ಇನಾಂದಾರ್, ರಾಜು ಹಿಪ್ಪರಗಿ, ಅಪ್ಸರಾ ಬೇಗಂ ಚಪ್ಪರಬಂದ, ಮಾದೇವಿ ಪಾಟೀಲ, ಶಾಂತಾ ಲಮಾಣಿ, ಪ್ರಕಾಶ ಹಿರೇಕುರುಬರ, ಗುರುನಗೌಡ ಪಾಟೀಲ, ಭಾಗಾಯತ್ ರಾಜು ಹಿರೇಮಠ, ಶಂಕರ್ ಹಾಲಹಳ್ಳಿ, ಮಲ್ಲು ತೊರವಿ, ಮುತ್ತು ಜಂಗಮಶೆಟ್ಟಿ, ಶರಣಗೌಡ ಪಾಟೀಲ, ಬಸವರಾಜ ಹೊನವಾಡ, ಪ್ರಶಾಂತ್ ಕಿನಗಿ ಹಾಗೂ ಪೀರ್ ಗಚ್ಚಿನಮಲ್, ಎಂ ಎನ್ ಪಾಟೀಲ್, ಹುಸೇನ್ ಬಾಗಾಯತ್, ರೇವಣಸಿದ್ಧ ಕುಮಟೆ, ಶಿವಾಜಿ ಸಿಂಗಾಡಿ, ಸೇರಿದಂತೆ ಜೆಡಿಎಸ್ ಪಕ್ಷದ ಜಿಲ್ಲಾ ಮಟ್ಟದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:
Post a Comment